Tuesday, November 25, 2008

ನನ್ನ ಪ್ರೀತಿಯ ಕಂಗನಾ...ಕತ್ತಲೆಯ ಪರದೆ ಸರಿದಾಗ ಕಣ್‌ ಕೋರೈಸುವ ಬೆಳಕು. ಅಲ್ಲೊಬ್ಬ ಸುಂದರಿ ಪ್ರತ್ಯಕ್ಷ. ನೀಳ ಕಾಯವನ್ನು ಬಳುಕಿಸುತ್ತಾ, ತುಂಬು ಗುಂಗುರು ಕೂದಲೊಳಗೇ ಮಾದಕ ಮುಖ ತೋರಿಸುತ್ತಾ ಮುಂದೆ ಬಂದು ಮಿಂಚು ನೋಟ ಬೀರಿ ಬೀರುತ್ತಾಳೆ. ಅಹ್‌, ಅದೆಂಥಾ ಚೂಪು, ನೇರ ದೃಷ್ಟಿ. ಕಂಗನಾ ರಾನಾವತ್ ಎಂಬ ಹುಚ್ಚು ಹುಡುಗಿ ಆ ಕ್ಷಣ ನಮ್ಮೊಳಗೆ ತುಂಬಿ ಹೋಗುತ್ತಾಳೆ. ‘ಫ್ಯಾಶನ್‌ ’ ಸಿನಿಮಾದಲ್ಲಿ ಫ್ಯಾಶನ್‌ ಪ್ರಪಂಚದ ಅಷ್ಟೂ ಅಧ್ವಾನಗಳನ್ನು ಮೈತುಂಬಿಕೊಂಡಂತೆ ಬರುವ ಪಾತ್ರ ಕಂಗನಾದು. ಚಿತ್ರದಲ್ಲಿ ಆಕೆ ಸೊನಾಲಿ. ಫ್ಯಾಶನ್‌ ಜಗತ್ತಿನ ದುರಂತಗಳಿಗೆ, ನೋವುಗಳಿಗೆ ಮುಖವಾಣಿಯಾಗುತ್ತಾ ಹೋಗುವ ಪಾತ್ರ ಆಕೆಯದು.

ಈ ಚಿತ್ರದ ನಾಯಕಿ ಮೇಘನಾ ಫ್ಯಾಶನ್‌ ಲೋಕಕ್ಕೆ ಹೆಜ್ಜೆ ಇಡುವ ಹೊತ್ತಿಗೆ, ಸೋನಾಲಿ(ಕಂಗನಾ) ಪ್ರತಿಷ್ಠಿತ ಬ್ರಾಂಡ್‌ನ ರೂಪದರ್ಶಿ. ಆ ಹೊತ್ತಿಗೆ ಈಕೆ ಬಲು ಎತ್ತರಕ್ಕೇರಿದ ಫ್ಯಾಶನ್‌ ಲೋಕದ ಅಧಿನಾಯಕಿಯಂತೆ ಅಹಂಕಾರದಿಂದ ಕನಲಿ ಮೈಮರೆಯುತ್ತಾಳೆ ಸೊನಾಲಿ. ಸದಾ ಡ್ರಕ್ಸ್‌ನಿಂದ ಅಮಲೇರಿದ ಕಣ್ಣುಗಳಲ್ಲಿ ಜಗತ್ತನ್ನು ನೋಡುತ್ತಾಳೆ.

ಇದಕ್ಕೂ ಮೊದಲಿನ ಒಂದು ದೃಶ್ಯ ಫ್ಯಾಶನ್‌ ಜಗತ್ತಿನ ಅಂತರಾಳಕ್ಕೆ ಕನ್ನಡಿ ಹಿಡಿಯುತ್ತದೆ. ಅದು ಮುಂಬಯಿನ ಪ್ರತಿಷ್ಟಿತ ಪಾರ್ಟಿ. ಅಲ್ಲಿ ಒಂದು ಕಡೆ ಪಾನ ಪಾರ್ಟಿ ರಂಗೇರುತ್ತಿದ್ದರೆ, ಇನ್ನೊಂದೆಡೆ ಮಾನಿನಿಯರ ಕೇಕೆಯೂ ಮುಗಿಲುಮುಟ್ಟುತ್ತದೆ. ದೊಡ್ಡ ಕಡಾಯಿಯಲ್ಲಿ ಕೊಳೆತ ದ್ರಾಕ್ಷಿ ತುಳಿ ತುಳಿಯುತ್ತಾ ಮಕ್ಕಳಾಟದಂತೆ ಅದರಲ್ಲಿ ಖುಷಿ ಪಡುತ್ತಿರುತ್ತಾರೆ ಈ ಮಂದಿ... ಮೂಲೆಯಲ್ಲಿ ಶೋಕಿಗೆಂದು ಕೈಯಲ್ಲಿ ವೈನ್‌ ತುಂಬಿದ ಗ್ಲಾಸ್‌ ಹಿಡಿದ ಹಿರಿಯ ಮಹಿಳೆಯೊಬ್ಬಳು ಅರ್ಥಗರ್ಭಿತವಾಗಿ ಅತ್ತ ನೋಡುತ್ತಾಳೆ. ಅದು
ಫ್ಯಾಶನ್ ಪ್ರಪಂಚವನ್ನು ಸಾಕ್ಷೀಕರಿಸುವ ಮಾರ್ಮಿಕ ದೃಶ್ಯ. ಆ ಜಗತ್ತಿನ ಮಂದಿಗೆ ತಾಜಾ ದ್ರಾಕ್ಷಿ ಬೇಡ. ಆದರೆ ದ್ರಾಕ್ಷಿಯನ್ನು ಕೊಳೆಸಿ ತುಳಿದು ವೈನ್‌ನ ರೂಪದಲ್ಲಿ ಜರಡಿಗೆ ಹಾಕಿದರೆ ಅದನ್ನು ಚಪ್ಪರಿಸಲು ಅದೆಷ್ಟು ಮಂದಿ...

ಇದನ್ನು ಸತ್ಯರೂಪದಲ್ಲಿ ಸಂಕೇತಿಸುವುದೇ ಸೊನಾಲಿ. ಜಗತ್ತೇ ತನ್ನ ಕೈಯಬುಗರಿ ಎಂದುಕೊಂಡಿದ್ದ ಸೊನಾಲಿಗೆ ಈ ಭ್ರಮೆ ಅರಿವಿಗೆ ಬರುವುದು ಕೆಲಸದಿಂದ ಹೊರತಳ್ಳಲ್ಪಟ್ಟಾಗಲೇ. ಅದುವರೆಗೆ ಕೋರೈಸುವ ಫ್ಯಾಶನ್‌ ಜಗತ್ತಿನ ಕತ್ತಲಮೂಲೆಯಲ್ಲಿ ಅವಿತಿದ್ದ ವಾಸ್ತವ ಇದ್ದಕ್ಕಿದ್ದ ಹಾಗೆ ಕಣ್ಮುಂದೆ ಬಂದಾಗ ಆಕೆ ತತ್ತರಿಸಿ ಹೋಗುತ್ತಾಳೆ. ಅವಳ ಸ್ಥಾನಕ್ಕೆ ಆ ಕಂಪೆನಿಯ ಮುಖವಾಣಿಯಾಗಿ ಬರುವವಳು ನಾಯಕಿ ಮೇಘನಾ ಮಾಥುರ್‌. ಮುಂದೆ ಈ ಸೊನಾಲಿ ದುರಂತ ನಾಯಕಿ ಅಥವಾ ಫ್ಯಾಶನ್‌ ಲೋಕದ ಕಮರಿದ ಹೂವು.

ಫ್ಯಾಶನ್‌ ಲೋಕದ ಹಲವು ದುರಂತಗಳಿಗೆ ಆಕೆ ಸಾಕ್ಷಿಯಾಗುತ್ತಾಳೆ. ಕೆಲ ವರ್ಷಗಳ ಹಿಂದೆ ಫ್ಯಾಶನ್‌ ಶೋವೊಂದರಲ್ಲಿ ಇದ್ದಕ್ಕಿದ್ದ ಹಾಗೆ ಬಟ್ಟೆ ಕಳಚಿಬಿದ್ದ ರೂಪದರ್ಶಿಯನ್ನು ಈಕೆ ಚಿತ್ರದಲ್ಲಿ ಪ್ರತಿನಿಧಿಸುತ್ತಾಳೆ. ಸುತ್ತಿ ಬರುವ ಅವಮಾನಗಳಲ್ಲಿ ದೊಡ್ಡ ಅಲೆ ಇದು. ಈ ಅಲೆ ಆಕೆಯನ್ನು ಕೊಚ್ಚಿಕೊಂಡೇ ಹೋಗುತ್ತದೆ. ಪ್ರವಾಹದ ವಿರುದ್ಧ ಈಜಲಾಗದ ಆಕೆ ಸರ್ವಸ್ವವನ್ನೂ ಕಳೆದುಕೊಂಡು ಹುಚ್ಚಿಯಾಗಿ ಬೀದಿಗೆ ಬೀಳುತ್ತಾಳೆ.
ಆಗ ಇತ್ತೀಚೆಗೆ ಮಾದಕ ವ್ಯಸನಿ ರೂಪದರ್ಶಿಯೊಬ್ಬಳು ಹುಚ್ಚಿಯಾಗಿ ಬೀದಿಯಲ್ಲಿ ಅಲೆದಾಡುತ್ತಿದ್ದ ಸುದ್ದಿಯಲ್ಲಿ ಕಥೆ ಕೇಂದ್ರೀಕೃತವಾಗುತ್ತದೆ. ಘಟನೆ, ಘಟನೆಗಳ ಮೂಲಕ ವಾಸ್ತವಕ್ಕೆ ಹತ್ತಿರವಾಗಿ, ಮನಸ್ಸಿನಾಳದಲ್ಲಿ ಊರಿ ಬಿಡುತ್ತದೆ ಈ ದೃಶ್ಯ.

ಬಹುಶಃ ಈಕೆಯ ಹಣೆಯಲ್ಲಿ ದುರಂತವೇ ಬರೆದಿರಬೇಕು. ಇದರ ನಡುವೆ ಈಕೆ ಕಳೆದುಕೊಂಡದ್ದನ್ನು ತಾನು ಮೈದುಂಬಿಕೊಳ್ಳುತ್ತಾ, ಕೊನೆಗೆ ಈಕೆಯಂತೇ ಹತಾಶೆಯ ಪ್ರಪಾತಕ್ಕೆ ಬೀಳುತ್ತಾಳೆ ಈ ಚಿತ್ರದ ನಾಯಕಿ ಮೇಘನಾ. ಆದರೆ ಒಂದು ಹಂತದಲ್ಲಿ ನಾಯಕಿ ಎಚ್ಚೆತ್ತ ಕಾರಣ ಪರಿಣಾಮ ಸ್ವಲ್ಪ ಹಗುರಾಗುತ್ತದೆ. ಬಳಿಕ ನಾಯಕಿ ತನ್ನ ಪಾಪಪ್ರಜ್ಞೆಯ ಪ್ರತಿರೂಪದಂತಿರುವ ಬಲು ಎಚ್ಚರಿಕೆಯಿಂದ ಕಾಯುತ್ತಾಳೆ.ಆದರೆ, ಹೇಳಿ ಕೇಳಿ ದುರ್ಭರ ಅಂತ್ಯ ಮೊದಲೇ ನಿರ್ಧರಿತವಾದ ಕಾರಣ ಅದಕ್ಕೆ ಪ್ರತಿಯಾಡದೇ ಶರಣಾಗಿ ಬಿಡುತ್ತಾಳೆ ಸೊನಾಲಿ.

ಮಧು ಭಂಡಾಕರ್‌ ಎಂಬ ಪ್ರತಿಭಾವಂತ ನಿರ್ದೇಶಕನ ಕೈಯಲ್ಲಿ ಅಕ್ಷರಶಃ ಸೊನಾಲಿಯೇ ಆಗಿಬಿಡುತ್ತಾಳೆ ಕಂಗನಾ. ಆ ಕೆಚ್ಚು, ವ್ಯಂಗ್ಯ, ಮಾದಕತೆ, ಕೊನೆಗೆ ದೈನ್ಯ...ಇದರ ಜತೆಗೆ ಪಾತ್ರವನ್ನು ಆವಾಹಿಸಿಕೊಂಡು ರೂಪದರ್ಶಿಗಳ ಮೂರ್ತರೂಪವೇ ಆಗಿಬಿಡುತ್ತಾಳೆ ಕಂಗನಾ. ಗುಂಗುರು ಕೂದಲಿನಡಿ ಮಿನುಗುವ ಆಕೆಯ ಬೆಕ್ಕಿನ ಕಣ್ಣು ಫ್ಯಾಶನ್‌ ಜಗತ್ತಿನ ನಗ್ನಸತ್ಯವನ್ನು ಸಾರಿ ಸಾರಿ ಹೇಳುವಂತಿದೆ.

Tuesday, November 4, 2008

ಒಂದು ಪುಟ್ಟು ಪ್ರೀತಿ

ನನಗಾಗ ತಾನೇ ಹನ್ನೆರಡು ತುಂಬಿ ಹದಿಮೂರು ಹಿಡಿದಿತ್ತು. ಮನಸ್ಸು ಮಾಯಾಜಿಂಕೆಯ ಬೆನ್ನು ಹತ್ತಿತ್ತು. ಮನೆಯಲ್ಲಿ ಅಷ್ಟು ಮುಕ್ತವಲ್ಲದ ವಾತಾವರಣ. ನನ್ನ ಕನವರಿಕೆಗಳನ್ನ ಯಾರ ಬಳಿ ತೋಡಿಕೊಳ್ಳುವುದು? ನನ್ನೊಳಗೇ ಅದುಮಿಹಿಡಿದಿದ್ದೆ. ನಾನು ಶಾಲೆಗೆ ಹೋಗುತ್ತಿದ್ದ ವಿಷ್ಣುಮೂರ್ತಿ ಬಸ್ಸಿನ ಕ್ಲೀನರ್‌, ಅವನ ಹೆಸರು ಸಾದಿಕ್‌ ಅಂತ. ಅರೆಗಡ್ಡ ಬಿಟ್ಟ ಬಿಳಿಯ ಚಂದದ ಹುಡುಗ. ಕ್ಲೀನರ್‌ ಕೆಲಸ ಮಾಡುತ್ತಲೇ ಬಸ್‌ ಡ್ರೈವಿಂಗ್‌‌‌‌ನ್ನೂ ಕಲಿಯುತ್ತಿದ್ದ.

ಬೆಳಗ್ಗೆ ಎಂಟೂ ಕಾಲಕ್ಕೆ ವಿಷ್ಣುಮೂರ್ತಿ ಬಸ್ ನಮ್ಮ ಸ್ಟಾಪ್ ಬಿಡುತ್ತಿತ್ತು. ಎಂಟು ಗಂಟೆಗೆ ಮನೆಬಿಟ್ಟು ಅರ್ಧಮೈಲು ನಡೆದು ಭರ್ತಿ ಎಂಟೂ ಕಾಲಕ್ಕೆ ಬಸ್ ಇನ್ನೇನು ಹೊರಡುತ್ತದೆ ಅನ್ನುವಾಗ, ಓಡಿಹೋಗಿ ಬಸ್‌ ಹತ್ತುತ್ತಿದ್ದೆ. ಸಾದಿಕ್‌ ಬಾಗಿಲ ಬದಿ ನಿಂತಿರುತ್ತಿದ್ದ. ನಾನು ಹತ್ತಿದ ಕೂಡಲೇ ಕಿವಿ ಹರಿದುಹೋಗುವಂತೆ ವಿಷಲ್ ಹೊಡೆಯುತ್ತಿದ್ದ. ಡ್ರೈವರ್‌ ಅವನ ಖಾಸಾ ಅಣ್ಣನೇ. ನಾನು ಹತ್ತಿ ಕೂತ ಮೇಲೆ ನನ್ನ ಸ್ಥಿತಿ ನೋಡಿ ನಗುತ್ತಾ ಬಸ್‌ ಓಡಿಸುತ್ತಿದ್ದ. ಬಾಗಿಲ ಬಳಿ ಅವನನ್ನು ದಾಟಿ ಬರುವಾಗ ಅದೇಕೋ ಒಂಥರಾ ಅನಿಸುತ್ತಿತ್ತು. ಮತ್ತೆ ಕಿಟಕಿ ಹತ್ತಿರ ಕೂತು ಆಗಾಗ ಅವನ ಮುಖ ನೋಡುತ್ತಿದ್ದೆ. ಆ ಪುಣ್ಯಾತ್ಮ ಬಾಗಿಲ ಬಳಿ ನಿಂತು ಬಸ್ಸಿನ ಗಾಳಿಗೆ ಮುಖವೊಡ್ಡಿ ಚೊಂಪೆ ಕೂದಲನ್ನು ಹಾರಿಸುತ್ತಾ ಸ್ಟೈಲ್ ಹೊಡೆಯುತ್ತಿದ್ದ. ಆತ ನನ್ನತ್ತ ನೋಡುತ್ತಿಲ್ಲ, ಅನ್ನುವುದು ತಿಳಿದು ಒಳಗೊಳಗೇ ಬೇಜಾರಾಗಿ, ‘ನಾನೆಷ್ಟು ಪಾಪ’ ಅಂತ ನನ್ನ ಬಗೆಗೇ ಮರುಕಪಡುತ್ತಿದ್ದೆ.

ನಾನೊಬ್ಬಳು ಅಂತಲ್ಲ, ನಮ್ಮ ಬಸ್ಸಿನಲ್ಲಿ ಹೋಗುವ ಎಲ್ಲಾ ಹುಡುಗಿಯರೂ ಅವನನ್ನು ಇಷ್ಟಪಡುತ್ತಿದ್ದರು. ಒಳಗೇ ಮುಚ್ಚಿಡಲಿಕ್ಕಾಗದೇ ಆಗಾಗ ಅದು ಹೊರ ಬರುತ್ತಿತ್ತು.

ಆಮೇಲೆ ಒಂದು ದಿನ ಅವನು ಈ ಬಸ್ಸಿನ ಕ್ಲೀನರ್‍ ಕೆಲಸ ಬಿಟ್ಟ. ಅದು ನನಗೆ ಗೊತ್ತಾದದ್ದು ತಡವಾಗಿ. ಅಲ್ಲಿಯವರೆಗೆ ನಾನು ಬಸ್ ಅಷ್ಟು ದೂರದಲ್ಲಿರುವಾಗಲೇ ಬಾಗಿಲ ಹತ್ತಿರ ಅವನನ್ನು ಹುಡುಕುತ್ತಿದ್ದೆ. ಆಮೇಲೆ ಗೊತ್ತಾಯಿತು ಅವನು ವಿಶಾಲ್‌ ಬಸ್ಸಿನಲ್ಲಿ ಡ್ರೈವರ್‌ ಆಗಿ ಸೇರಿಕೊಂಡ ವಿಷಯ.

ನಾನು ಕೆಲವೊಮ್ಮೆ ಸಂಜೆ ಸ್ಕೂಲ್ ಮುಗಿಸಿ ಬರುವಾಗ ಅವನ ಬಸ್ಸು ಬರುತ್ತಿತ್ತು. ಆಗಲೂ ಕದ್ದು ಕದ್ದು ಅವನನ್ನ ನೋಡುತ್ತಿದ್ದೆ. ಅವರು ಎಂದಿನಂತೆ ಚೊಂಪೆ ಕೂದಲು ಹಾರಿಸುತ್ತಾ ಫೋಸು ಕೊಡುತ್ತಿದ್ದ.
ಈಗ ಡ್ರೈವರ್‌ ಆದ ಕಾರಣ ಅವನ ಮುಖದಲ್ಲಿ ಒಂಥರಾ ಗತ್ತೂ ಕಾಣುತ್ತಿತ್ತು.

ಮುಂದೆ ಕಾಲೇಜು ಸೇರಿದ ಮೇಲೆ ನಾನು ಹಾಸ್ಟೆಲ್ ಸೇರಿದ ಕಾರಣ ನಿಧಾನಕ್ಕೆ ಅವನ ನೆನಪು ಮರೆಯಾಯಿತು.

ಬಹುಶಃ ಅದಾದ ಮೇಲೆ ಅವನು ನನಗೆ ಸಿಕ್ಕಿದ್ದು ತಿಂಗಳ ಹಿಂದೆ ಊರಿಗೆ ಹೋದಾಗ. ನೀನಾಸಂ ಶಿಬಿರದಿಂದ ಅರ್ಧಕ್ಕೇ ಹೊರನಡೆದವಳು ಸೀದಾ ಹೋದದ್ದು ಮನೆಗೆ. ಆಗ ಕಾರ್ಕಳದಲ್ಲಿ ವಿಶಾಲ್ ಬಸ್‌ ನಿಂತಿತ್ತು. ನಾನು ಅತ್ತ ನೋಡುತ್ತಾ ನಿಂತಾಗ ಬಾಯಿತುಂಬಾ ಪಾನ್‌ ತುಂಬಿಕೊಂಬಿಕೊಂಡು ಘಂ ಅನ್ನುವ ವಾಸನೆಯೊಂದಿಗೆ ಬಂದು ಜೋರಾಗಿ ಬಾಗಿಲೆಳೆದು ಬಸ್ ಸ್ಟಾರ್ಟ್‌ ಮಾಡಿದ.

ಆ ಬಸ್‌ ಕೆರ್ವಾಶೆಗೆ ಹೊರಟಿದ್ದರೂ ನಾನು ಆ ಬಸ್ಸಿಗೆ ಹತ್ತಲಿಲ್ಲ. ಬೇರೊಂದು ಬಸ್ಸಿಗೆ ಕಾಯುತ್ತಾ ಕುಳಿತೆ. ಬಸ್‌ ಹೋದ ಮೇಲೆ, ಛೇ!ಅದೇ ಬಸ್‌ ಹಿಡಿಯಬೇಕಿತ್ತು ಅಂತನಿಸಿತು. ಸ್ವಲ್ಪ ಹೊತ್ತಾದ ಮೇಲೆ ಮತ್ತೊಂದು ಬಸ್‌ ಬಂತು. ಹತ್ತಿದೆ. ಸ್ವಲ್ಪ ದೂರ ಹೋಗಿರಬೇಕಷ್ಟೇ ನಮ್ಮ ಬಸ್‌ ಅವನಿದ್ದ ಬಸ್‌ನ್ನು ಓವರ್‌ಟೇಕ್ ಮಾಡಿ ಹೋಯಿತು. ನಾನತ್ತ ತಿರುಗಿದೆ. ಆತ ಗಾಳಿಗೆ ಮುಖವೊಡ್ಡಿ ಚೊಂಪೆಗೂದಲು ಹಾರಿಸುತ್ತಾ ನನ್ನತ್ತ ಕಣ್ ಮಿಟುಕಿಸಿದ!