Friday, December 26, 2008

ನನ್ನ ತಮ್ಮ ಈಗ ಅಳುವುದಿಲ್ಲ

ನಮ್ಮ ತೋಟದ ಕೆಳಗೆ ಸ್ವರ್ಣಾ ನದಿ ಹರಿಯುತ್ತದೆ. ಇತ್ತೀಚೆಗೆ ತಮ್ಮ ಸಮಯ ಸಿಕ್ಕಾಗಲೆಲ್ಲ ನದಿಯಲ್ಲಿ ಈಜಾಡುತ್ತಿರುತ್ತಾನೆ. ಅವನಿಗೀಗ ಹದಿನೇಳು ವರ್ಷ. ಅವನ ಗೆಳೆಯರಾರೋ ಹೊಳೆಯಲಿ ಈಜಿದ್ರೆ ಉದ್ದ ಆಗ್ತಿ ಅಂತ ಹೇಳಿದ ಕಾರಣ, ಈಜಿನ ಹುಚ್ಚು ಹತ್ತಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ ಅದರಿಂದ ಅಂವ ದಿನದಿಂದ ದಿನಕ್ಕೆ ಉದ್ದವಾಗುತ್ತಾ ಹೋಗಿದ್ದಾನಂತೆ. ( ಹಾಗಂತ ಅವನೇ ಹೇಳಿದ್ದು)


ನನ್ನ ತಮ್ಮ ತೀರಾ ಸಾಧಾರಣ ಹುಡುಗ. ಚಿಕ್ಕವನಿದ್ದಾಗ ತುಂಬ ಚಂದ ಇದಾನೆ ಅಂತ ಎಲ್ಲರ ಮುದ್ದಿನ ಮೂಟೆಯಾಗಿದ್ದ . ಸ್ವಲ್ಪ ದೊಡ್ಡವನಾದ ಮೇಲೆ ಇದೆಲ್ಲ ನಿಧಾನಕ್ಕೆ ಕರಗತೊಡಗಿತು. ಕಲಿಯುವುದರಲ್ಲಿ ಜಾಣ ಅಲ್ಲ. ಅವನಿಗಿಂತ ಮೊದಲು ಕಲಿತ ನಾನು ಸ್ವಲ್ಪ ಕ್ರಿಯೇಟಿವ್‌ ಆಗಿದ್ದ ಕಾರಣ, ಈ ಪುಟ್ಟು ಹುಡುಗ ಶಾಲೆಯಲ್ಲೂ ಟೀಚರ್ಸ್‌ ಮೂದಲಿಕೆಗೆ ತುತ್ತಾಗಿದ್ದ.
ಇಷ್ಟರಲ್ಲಾಗಲೇ ತಮ್ಮನ ಸ್ವರ ಒಡೆಯಲಾರಂಭಿಸಿತು. ಹರೆಯ ಹತ್ತಿರ ಬಂತು. ಸಿಕ್ಕಾಬಟ್ಟೆ ತಮಿಳು ಸಿನಿಮಾ ನೋಡುವ ಹುಚ್ಚು. ಅದರೆ ಜತೆಗೆ ತಾನು ಅವರ ಹಾಗಿಲ್ಲ ಅನ್ನುವ ಕೊರಗು. ಸಿನಿಮಾ ಹುಚ್ಚು ತಲೆಗೇರಿದಂತೆ ಡಿಪ್ರೆಶ್ಶನ್‌ ಕೂಡ ಏರತೊಡಗಿತು. ಸಂಪೂರ್ಣ ಅಸ್ವಸ್ಥ ಮನಃಸ್ಥಿತಿ. ಅಷ್ಟರಲ್ಲಾಗಲೇ ಎಸ್‌.ಎಸ್‌.ಎಲ್‌.ಸಿ. ಪಾಸಾಗಿತ್ತು. ಮುಂದೇನು ಅನ್ನುವ ಭೂತಾಕಾರದ ಪ್ರಶ್ನೆ. ಅಪ್ಪನಿಗೆ ಯಾರೋ ಮೆಕಾನಿಕಲ್‌ ಡಿಪ್ಲೋಮೊ ಮಾಡಿದ್ರೆ ಒಳ್ಳೆ ಸ್ಕೋಪ್‌ ಇದೆ ಅಂದ್ರಂತೆ. ಇವನಿಗೂ ಏನು ಮಾಡಬೇಕು ಅಂತ ಗೊತ್ತಾಗ್ಲಿಲ್ಲ. ಐವತ್ತು ಸಾವಿರ ಫೀಸ್‌ ಕಟ್ಟಿ ಕಾಲೇಜು ಸೇರಿಕೊಂಡ.




ಇವ ಅಷ್ಟರವರೆಗೆ ಓದಿದ್ದು ಕನ್ನಡ ಮೀಡಿಯಂನಲ್ಲಿ. ಅವನ ಕ್ಲಾಸಿನಲ್ಲಿರುವವರೆಲ್ಲ ಇಂಗ್ಲೀಶ್‌ ಮೀಡಿಯಂನಿಂದ ಬಂದವರು. ಜತೆಗೆ ಇವ ಹೋಗಿದ್ದು ಎಸ್‌.ಎಸ್‌.ಎಲ್‌.ಸಿ. ನಂತರ. ಆದರೆ ಕ್ಲಾಸಿನಲ್ಲಿರುವವರೆಲ್ಲ ಪಿಯೂಸಿ ಓದಿ ಬಂದವರು. ಅದರಲ್ಲೂ ತೀರಾ ಸಾಧಾರಣ ಬುದ್ಧಿಮತ್ತೆ ಹುಡುಗ. ಓದು ಹೇಗೆ ತಾನೇ ತಲೆಗೆ ಹತ್ತಬೇಕು? ಅರ್ಥಮಾಡಿಕೊಳ್ಳುವ ಮನಸ್ಸೂ ಇವನಿಗಿರಲಿಲ್ಲ.



ಮತ್ತೇನಾಗಲಿಲ್ಲ. ಡಿಪ್ಲೊಮಾ ಫಸ್ಟ್‌ ಸೆಮ್‌ನಲ್ಲಿ ೭ ಸಬ್ಜೆಕ್ಟ್‌ ಫೇಲ್‌ ಆದ. ಮನೇಲೇ ಕೂತ. ಕಂಪ್ಯೂಟರ್‌ ಕ್ಲಾಸಿಗೆ ಹೋಗ್ಲಿಕ್ಕೂಮನಸ್ಸಿಲ್ಲ, ಯಾಕೇಂದ್ರೆ ಇವನಿಗೆ ಇಂಗ್ಲಿಷ್‌ ಬರಲ್ಲ, ಅಲ್ಲಿ ಯಾರಾದ್ರೂ ಇಂಗ್ಲೀಶ್‌ ಮಾತಾಡಿ ಇನ್‌ಸಲ್ಟ್‌ ಮಾಡಿದ್ರೆ ಅಂತ....ಒಟ್ಟಾರೆ ಮೈ ಪರಚಿಕೊಳ್ಳೋ ಸ್ಥಿತಿ ಅಂತಾರಲ್ಲ ಹಾಗೆ. ಅಷ್ಟರಲ್ಲಾಗಲೇ ನನಗೆ ರಾಜಧಾನಿಯಲ್ಲಿ ಟಿ.ವಿ.ಚಾನೆಲ್‌ ನಲ್ಲಿ ಕೆಲಸ ಸಿಕ್ಕಿತ್ತು. ನಾನು ಬೆಂಗಳೂರಿನಲ್ಲಿದ್ದೆ.

ಸ್ವಲ್ಪವಾದ್ರೂ ಮನಸ್ಸು ಬಿಚ್ಚಿ ನನ್ನ ಹತ್ರ ಮಾತ್ರ ಮಾತನಾಡುತ್ತಿದ್ದ ತಮ್ಮ. ಆದ್ರೆ ನಂಗೆ ಮಾತಾಡ್ಲಿಕ್ಕೆ ಟೈಮೆಲ್ಲಿ? ನ್ಯೂಸ್‌, ಪ್ರೋಗ್ರಾಂ ಅಂತ ಕೆಲಸ ಹೊತ್ತು ಹೈರಾಣಾಗಿದ್ದೆ . ಈ ಪುಣ್ಯಾತ್ಮ ಕಾಲ್‌ ಮಾಡುವಾಗಲೆಲ್ಲ, ‘ಬಿಸಿ ಇದ್ದೆ, ಆಮೇಲೆ ಮಾಡು’ ಎಂಬ ಒಂದು ಲೈನ್‌ ಆನ್ಸರ್‌.


ಆದ್ರೆ ಆ ದಿನ ಫೋನ್‌ ಮಾಡಿದ ತಮ್ಮ ಸ್ವರ ಎಂದಿನಂತಿರಲಿಲ್ಲ. ಕುಸಿದು ಹೋದಂತಾಗಿತ್ತು. ಆಮೇಲೆ ಮಾಡು ಅಂತ ಹೇಳಲು ಹೋದವಳು ತಡೆದು, ಏನಾಯ್ತೋ ಅಂದೆ. ನಾನು ಸಾಯ್ತೀನಿ ಕಣೇ. ನಂಗೆ ಬದುಕಕ್ಕಾಗಲ್ಲ ಅನ್ನುವಷ್ಟರಲ್ಲಿ ಅಳು ಬಂದು ಬಿಡ್ತು. ನಾನು ಮತ್ತೇನೂ ಮಾತನಾಡಲಿಲ್ಲ. ನಾಳೆಯೇ ರಾತ್ರಿ ಹೊರಟು ನೀನಿಲ್ಲಿಗೆ ಬಾ. ಆಮೇಲೆ ನೋಡಿಕೊಳ್ಳೋಣ ಅಂದೆ.


ತಮ್ಮ ಆತ್ಮಹತ್ಯಾ ಪ್ರಯತ್ನವನ್ನು ಮುಂದೆ ಹಾಕಿ ಬಲು ಕಷ್ಟದಿಂದ ಬರಲೊಪ್ಪಿದ. ಬರಲಿಕ್ಕೇನೋ ಹೇಳಿಯಾಯಿತು. ಆದ್ರೆ ಬಂದ ಮೇಲೆ ಏನು ಮಾಡುವುದು. ಅದುವರೆಗೆ ಪುರುಸೊತ್ತಿಲ್ಲದ ಕೆಲಸದ ನಡುವೆ ಮರೆತೇ ಹೋದಂತಿದ್ದ ಗೆಳೆಯರನ್ನೆಲ್ಲ ಸಂಪರ್ಕಿಸಿದೆ. ನನ್ನ ಗೆಳತಿ ಹಿಂದೆ ಒಬ್ಬ ಸೈಕಾಲಜಿಸ್ಟ್‌ ಬಗ್ಗೆ ಹೇಳಿದ್ದಳು. ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ.
ಬಲು ಕಷ್ಟದಲ್ಲಿ ಮಾತಿಗೆ ಸಿಕ್ಕ ಅವರು ತಮ್ಮನ ಮದುವೆಯ ತರಾತುರಿಯಲ್ಲಿದ್ದರು. ಒಬ್ಬನೇ ತಮ್ಮನ ಮದುವೆ ತಯಾರಿ ಬಿಟ್ಟು ನನ್ನ ತಮ್ಮನನ್ನು ರಿಪೇರಿ ಮಾಡ್ಲಿಕ್ಕೆ ಒಪ್ಪಿಕೊಂಡರು.

ಮರುದಿನ ಮುಂಜಾನೆ ಮನೆಗೆ ಬಂದಾಗ ತಮ್ಮನ ಕಣ್ಣ ಕೆಳಗೆ ಕಪ್ಪು ಕಲೆ. ಮುಖ ತಗ್ಗಿತ್ತು. ರೂಮೊಳಗೆ ಬಂದು ಕೂತ. ಮನಸ್ಸಿಲ್ಲದ ಮನಸ್ಸಿಂದ ತಿಂಡಿ ತಿಂದ, ಸ್ನಾನ ಮಾಡಿ ಬೆನ್ನು ಒರೆಸದೇ ಬಂದ.


ಮರುದಿನ ಅವನನ್ನು ಆ ಸೈಕಾಲಜಿಸ್ಟ್‌ ಬಳಿ ಕರೆದೊಯ್ದೆ. ಆಗಷ್ಟೇ ಮಿಂದು, ಒದ್ದೆ ಕೂದಲನ್ನು ಬೆನ್ನ ಮೇಲೆ ಹರಡಿದ ಮೂವತೈದರ ಚೆಲುವಾದ ಹೆಣ್ಮಗಳೊಬ್ಬಳು ನಮ್ಮನ್ನು ಮನೆಯೊಳಗೆ ಕರೆದೊಯ್ದರು. ಮನೆ ಮಹಡಿಯ ಮೇಲೆ ಕೂರಿಸಿ ತಿಂಡಿ ಬಗ್ಗೆ ವಿಚಾರಿಸಿ ಎಷ್ಟೇ ಹೇಳಿದರೂ ಕೇಳದೇ ತಿಂಡಿ ಕೊಟ್ಟು ಮಾತಿಗೆ ಕೂತರು. ನಮಗೆ ಆಶ್ಚರ್ಯ. ಸೈಕಾಲಜಿಸ್ಟ್‌ ಟಫ್‌ ಪರ್ಸನಾಲಿಟಿ ನಿರೀಕ್ಷಿಸಿದ್ದ ನಮಗೆ ಗೊಂದಲ, ತಬ್ಬಿಬ್ಬು.

ನನ್ನನ್ನು ಕೆಳಗೆ ಕೂರಲು ಹೇಳಿ, ತಮ್ಮನ ಜತೆಗೆ ಮಾತಿಗೆ ಹಚ್ಚಿದರು. ನಾನು ತಳ ಅಂತಸ್ತಿನ ರೂಮಿನಲ್ಲಿ ಕೂತು ಅರ್ಧ ಓದಿದ್ದ ದಾದಾಗಿರಿಯ ದಿನಗಳತ್ತ ಕಣ್ಣು ಹಾಯಿಸಿದೆ. ಏನೂ ತಲೆಗೆ ಹೋಗುತ್ತಿರಲಿಲ್ಲ. ಮೇಲಿನ ಮಾತುಗಳೂ ಕೇಳುತ್ತಿಲ್ಲ. ಸುಮ್ಮನೆ ಅಲ್ಲಿ ಇಲ್ಲಿ ಅಡ್ಡಾಡುತ್ತಾ ಮತ್ತೆ ಪುಸ್ತಕ ಹಿಡಿದೆ. ಹತ್ತು ಪುಟ ಓದಿ ಮುಗಿದಿರಬಹುದು.

ಮೇಲಿಂದ ಜೋರಾಗಿ ನಗುವ ಸದ್ದು. ತಡೆದು ಕಿವಿಕೊಟ್ಟೆ, ತಮ್ಮನದೇ ದನಿ. ಅವನನ್ನು ಆತ್ಮಹತ್ಯೆಯಿಂದ ಹೊರಗೆಳೆದು, ಸಮಾಧಾನಿಸಬೇಕು ಎಂದಷ್ಟೇ ಬಯಸ್ಸಿದ್ದ ನನಗೆ ಅವನ ಜೋರಾದ ನಗು ಕೇಳಿ ಆಶ್ಚರ್ಯ. ಒಳಗೊಳಗೇ ಸಮಾಧಾನ, ಮಂಕು ಬಡಿದಂತಾಗಿದ್ದ ಮನಸ್ಸು ತಹಬಂಧಿಗೆ ಬಂದಿತ್ತು. ಅಷ್ಟರಲ್ಲಾಗಲೇ ತಮ್ಮನ ಸ್ವರ ಏರಿತ್ತು, ಜೋರು ಜೋರಾಗಿ ಏನನ್ನೋ ವಿವರಿಸುತ್ತಿದ್ದ. ಅದೇನೆಂದು ಸ್ಪಷ್ಟವಾಗುತ್ತಿರಲಿಲ್ಲ.

ಸಧ್ಯ! ಅಂದುಕೊಂಡು ಓದನ್ನು ಮುಂದುವರಿಸಿದೆ. ಯಾಕೋ ಬೋರೆನಿಸತೊಡಗಿತು.
ಮೇಲಿಂದ ಅಸ್ಪಷ್ಟ ಮಾತು ಮುಂದುವರಿದಿತ್ತು. ಹೊರಬಂದು ರಸ್ತೆಯಲ್ಲೇ ಎರಡು ಸುತ್ತು ಹಾಕಿಬಂದೆ. ಇವರ ಮಾತು ನಿಂತಿರಲಿಲ್ಲ. ಅವರು ಮಾತಿಗೆ ತೊಡಗಿ ಆಗಲೇ ಮೂರು ಗಂಟೆಯಷ್ಟು ಹೊತ್ತಾಗಿತ್ತು.

ಅಲ್ಲೇ ಮಂಚಕ್ಕೊರಗಿದ್ದೆ. ತಮ್ಮ ಬಂದು ಎಚ್ಚರಿಸಿದಾಗಲೇ ಗೊತ್ತಾಗಿದ್ದು, ನಂಗೆ ನಿದ್ದೆ ಬಂದಿದೆ ಅಂತ. ನಗು ನಗುತ್ತಾ ಬಂದ ತಮ್ಮ, ಮೇಲೆ ಬಾ, ಅಕ್ಕ ಕರೀತಾರೆ ಅಂತಂದ. ಅವರಾಗಲೇ ಅವನಿಗೆ ಅಕ್ಕ ಆಗಿದ್ದರು, ಜತೆಗೆ ಬೆಸ್ಟ್‌ ಫ್ರೆಂಡೂ. ಆ ಕ್ಷಣಕ್ಕೆ ನಂಗೆ ಏನು ಹೇಳಬೇಕೋ ತಿಳಿಯಲಿಲ್ಲ. ತಮ್ಮನನ್ನು ಕರೆದುಕೊಂಡು ಹೊರಬಂದೆ. ಗೇಟಿನವರೆಗೆ ಬಂದು ಬಿಟ್ಟು ಹೋದರು.

ಅದೇ ದಿನ ರಾತ್ರಿ ಅವರಿಗೆ ಫೋನ್‌ ಮಾಡಿದಾಗ, ತಮ್ಮನ ಸಮಸ್ಯೆಯನ್ನು ವಿವರಿಸಿದರು. ತಮ್ಮನಿಗಾಗಿದ್ದು ಪ್ರೀತಿಯ ಕೊರತೆ. ಟೀಚರ್ಸ್‌ ಅವನನ್ನು ಎಷ್ಟು ಹಿಂಸಿಸಿದ್ದರೆಂದರೆ ಅವನಿಗೆ ಜೀವನವೇ ಬೇಡವಾಗುವಷ್ಟು. ಜತೆಗೆ ಮನೆಯಲ್ಲೂ ಇದೇ ಕಾರಣಕ್ಕೆ ಕಿರಿಕಿರಿ ಸುರುವಾದಾಗ ಅವನಿಗೆ ಓದಿನ ಮೇಲೇ ದ್ವೇಷ ಬಂದಿತ್ತು. ಜಗತ್ತೆಲ್ಲ ಅವನ ಶತ್ರುಗಳೇ ತುಂಬಿದಂತಾಗಿದ್ದರು. ಪ್ರತಿಭಟಿಸಲು ಬೇಕಾದ ಧೈರ್ಯವಿರಲಿಲ್ಲ. ಒಳಗೇ ನೋವು ತುಂಬಿ ಹೊರಬರಲಾಗದೇ ಅದರೊಂದಿಗೆ ಗಿಲ್ಟ್‌ ಸಹ ಸೇರಿ ಬದುಕೇ ಅಸಹನೀಯವಾಗತೊಡಗಿತ್ತು. ಆಗ ಅವನಿಗೆ ಕನಸು ಕಾಣುವ, ಭ್ರಮೆಯಲ್ಲೇ ಬದುಕುವ ಸ್ಥಿತಿ ಇಷ್ಟವಾಗತೊಡಗಿತು. ಈ ಸ್ಥಿತಿಗೆ ಎಷ್ಟರ ಮಟ್ಟಿಗೆ ಅಂಟಿಕೊಂಡ ಅಂದ್ರೆ, ಅದರಿಂದ ಹೊರಬರುವುದೂ ಸಮಸ್ಯೆಯಾಯಿತು. ಈ ಅಕ್ಕನ ಬಳಿ ತನ್ನ ನೋವನ್ನೆಲ್ಲ ಹೇಳಿ ಹಗುರಾದ ಮೇಲೆ ಅವನಿಗೂ ನಿರಾಳವೆನಿಸಿತು. ಜತೆಗೆ ಅವರ ಪ್ರೀತಿಯ ಮಾತು ಮತ್ತಷ್ಟು ಚೈತನ್ಯ ಮೂಡಿಸಿತು.

ಈಗ ಬದಲಾಗಿದಾನೆ, ತಾರೇ ಜಮೀನ್ ಪರ್‍ ನಲ್ಲಿ ಇಶಾನ್ಗೆ ಸಿಕ್ಕ ಅಮೀರ್‌ಖಾನ್‌ ಥರಾ ನನ್ನ ತಮ್ಮನಿಗೆ ಒಬ್ಬ ಹೊಸ ಅಕ್ಕ ಸಿಕ್ಕಿದ್ದಾರೆ. ಈ ಅಕ್ಕನಿಗಿಂತಲೂ ಹೆಚ್ಚು ಆ ಅಕ್ಕನನ್ನು ಕಂಡ್ರೇ ಅವನಿಗಿಷ್ಟ ಅಂದಾಗ ಸ್ವಲ್ಪ ಅಸೂಯೆಯಾಗುತ್ತದೆ. ಆದ್ರೂ ಮೊದಲು ಮೂಲೆಯಲ್ಲಿ ಕೂತು ಅಳುತ್ತಾ ರೇಗುತ್ತಾ ಇದ್ದ ತಮ್ಮನಿಗೆ ಈಗ ಹೊಳೆಯಲ್ಲಿ ಈಜೋದ್ರಿಂದ ಉದ್ದ ಆಗ್ತೀನಿ ಅನ್ನೋ ಕಾನ್ಫಿಡೆನ್ಸ್ ಬಂದಿದೆ. ಕಂಪ್ಯೂಟರ್‌ ಕ್ಲಾಸಿಗೆ ಸೇರ್‍ಕೊಂಡಿದಾನೆ. ಉಳಿದ ಟೈಂನಲ್ಲಿ ಅಪ್ಪನಿಗೆ ತೋಟದಲ್ಲಿ ಹೆಲ್ಪ್‌ ಮಾಡುತ್ತಾನೆ. ಆಗಾಗ ಹೊಸ ಅಕ್ಕನನ್ನು ಕಾಣಲು ಬೆಂಗಳೂರಿಗೆ ಬರುತ್ತಿರುತ್ತಾನೆ. ಈಗ ಅಂವ ಫೋನ್‌ ಮಾಡಿದ್ರೆ, ಅದೆಂಥಾ ತಲೆ ಹೋಗೋ ಕೆಲ್ಸ ಇದ್ರೂ ಬಿಟ್ಟು ಫೋನೆತ್ತುತ್ತೇನೆ. ಆದರೆ ಜೀವನೋತ್ಸಾಹ ತುಂಬ ಬೇಕಾದ ಶಿಕ್ಷಕರು ಜೀವ ತೆಗೆಯುವ ಸ್ಥಿತಿಗೆ ನೂಕಿದ್ದನ್ನು ಇನ್ನೂ ಜೀರ್ಣಿಸಲಾಗಿಲ್ಲ.

( ಇದನ್ನು ಬರಹ ರೂಪಕ್ಕಿಳಿಸಲು ತುಂಬ ಹೆಣಗಿದ್ದೇನೆ. ಒಂದೂವರೆ ತಿಂಗಳ ಹಿಂದೆ ಆರಂಭಿಸಿದ ಬರಹ ಇದು. ಬರವಣಿಗೆ ಅರ್ಧಕ್ಕೆ ಬರುವಾಗ ಇದು ಸರಿಯಾಗಿಲ್ಲ ಅಂತ ಅನಿಸಲು ಸುರು. ಆದ್ರೆ ಮುಗ್ಧ ಮಕ್ಕಳ ಮನಸ್ಸಿಗೆ ನೋವು ಮಾಡುವ ಶಿಕ್ಷಕರು ನಮ್ಮಲ್ಲಿ ಹೆಚ್ಚಾಗುತ್ತಿದ್ದಾರೆ, ಕಪಿಲಕ್ಕನಂತವರು ಕಡಿಮೆಯಾಗುತ್ತಿದ್ದಾರೆ ಅನ್ನುವುದು ಮಾತ್ರ ಸತ್ಯ ಅಂದುಕೊಂಡಿದ್ದೇನೆ, ಹೀಗಾಗದಿರಲಿ ಎಂಬ ತುಡಿತ ಇದ್ದೇ ಇದೆ.)