Friday, August 29, 2008

ನಮ್ಮಪ್ಪ ತೋಟ ಮಾರ್‌ತಾರಂತೆ

ಮೊನ್ನೆ ತಾನೇ ಮನೆಗೆ ಹೋಗಿದ್ದೆ. ಬಸ್ಸಿಂದ ಸಂಕದ ಬಳಿ ಇಳಿದಿದ್ದೇ ಜೋರು ಮಳೆ . ಲಗ್ಗೇಜು, ಬಟ್ಟೆ, ನಾನು ಎಲ್ಲ ಒದ್ದೆ ಮುದ್ದೆ. ಹಾಗೇ ಮನೆಯತ್ತ ಕಾಲು ಹಾಕಿದೆ. ಅದು ಗುಡ್ಡದ ದಾರಿ. ಮಳೆ ಬಂತೆಂದರೆ, ಭೂಮಿಯೊಳಗೆ ಒರತೆಯೆದ್ದು, ನೆಲ ಒದ್ದೆಯಾಗಿರುತ್ತದೆ. ಅಷ್ಟೇ ಅಲ್ಲ, ಅದರ ಮೇಲೆ ಕಾಲಿಟ್ಟರೆ, ಕಾಲು ಹೂತುಹೋಗುತ್ತದೆ. ಮತ್ತೆ ಕಷ್ಟದಿಂದ ಕಾಲನ್ನು ಹೊರತೆಗೆದರೆ, ಚಪ್ಪಲಿ ಮಾಯ..ಅದ್ಯಾವುದೋ ಮಾಯದಲ್ಲಿ ಅದು ನೆಲದೊಳಕ್ಕೇ ಇಳಿದಿರುತ್ತದೆ. ದಿನವಿಡೀ ಮಣ್ಣೊಳಗೆ ಕೈ ಹಾಕಿದರೂ ಚಪ್ಪಲಿ ಸಿಗುವುದಿಲ್ಲ. ಶಾಲೆಗೆ ಹೋಗುತ್ತಿದ್ದಾಗ, ನಮ್ಮ ಅದೆಷ್ಟೋ ಚಪ್ಪಲಿಗಳು ಇಲ್ಲಿ ಕಳೆದುಹೋಗಿದ್ದವು. ಅದಕ್ಕೇ ಮಳೆಗಾಲ ಮುಗಿಯುವವರೆಗೆ ಅಪ್ಪ ಚಪ್ಪಲಿ ತೆಗೆದುಕೊಡುತ್ತಿರಲಿಲ್ಲ.

ಹೀಗೆ ಗಟ್ಟಿನೆಲದ ಮೇಲೇ ಕಾಲಿಡುತ್ತಾ, ಕಲ್ಲಿಂದ ಕಲ್ಲಿಗೆ ಹಾರುತ್ತಾ ಮುಂದೆ ಹೋದರೆ ಅಲ್ಲಿ ತೋಡೊಂದು (ಹಳ್ಳ) ಕೆಂಪು ನೀರಿಂದ ತುಂಬಿ ಹರಿಯುತ್ತಿತ್ತು. ಅಲ್ಲಿಯವರೆಗೆ ಹೇಗೋ ಸರ್ಕಸ್‌ ಮಾಡಿ ಚಪ್ಪಲಿ ಒದ್ದೆಯಾಗದಂತೆ ನಡೆದದ್ದೇ ಬಂತು. ಸರಿ, ಆದದ್ದಾಗಲಿ, ಅಂತ ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡು ತೋಡುದಾಟಿದೆ.


ಮುಂದೆ ಕಾಡುದಾರಿ.ಹಿಂದೆ, ಅಲ್ಲಿ ದಟ್ಟ ಕಾಡಿತ್ತು. ಈಗ ಅದು ರಬ್ಬರ್‌ಕಾಡಾಗಿ ಬದಲಾಗಿದೆ. ದೂರದ ಕೇರಳದಿಂದ ಬಂದ ಕೊಚ್ಚಿ ಕ್ರಿಶ್ಚಿಯನ್ನರು ಇಲ್ಲಿ ಖಾಲಿ ಜಾಗವನ್ನು ಕೊಂಡು ಅಲ್ಲಿ ರಬ್ಬರ್‌ ಹಾಕುವ ದಂಧೆ ಮಾಡುತ್ತಿದ್ದಾರೆ. ಇದು ಸತತ ಹತ್ತು ಹದಿನೈದು ವರ್ಷಗಳಿಂದ ನಮ್ಮೂರಲ್ಲಿ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ದುಪ್ಪಟ್ಟು ಹಣಕೊಟ್ಟು ಆಸ್ತಿ ಖರೀದಿಸುವ ಕಾರಣ ಊರವರಾರೂ ಈ ಬಗ್ಗೆ ಚಕಾರವೆತ್ತಯವುದಿಲ್ಲ. ನಮ್ಮೂರಲ್ಲಿ ನಿಧಾನವಾಗಿ ಭತ್ತದ ಗದ್ದೆಗಳು ಮಾಯವಾಗುತ್ತಿವೆ. ಅಲ್ಲೆಲ್ಲ ಅಡಿಕೆ ಗಿಡಗಳು ತಲೆಯೆತ್ತಿವೆ. ಕಾಡಿದ್ದ ಜಾಗವನ್ನೆಲ್ಲ ರಬ್ಬರ್‌ ಆಕ್ರಮಿಸಿದೆ.



ಹಾಗೇ ಮುಂದೆನಡೆದೆ..ಅಲ್ಲಿ ಮತ್ತೊಂದು ತೋಡು. ಅವನು ಮೊದಲ ಬಾರಿ ನನ್ನ ಮನೆಗೆ ಬಂದಾಗ ಈ ಹಳ್ಳ ನೋಡಿ, ‘ಏಳು ಸಮುದ್ರ ದಾಟಿ ರಾಜಕುಮಾರಿಯನ್ನು ನೋಡಲು ಬಂದ ಹಾಗಾಯಿತು’ ಅಂದಿದ್ದ.

ಗೇಟಿನ ಹತ್ತಿರ ಬಂದಾಗ ಡಿಂಗ (ನಾಯಿ) ಆ ಮಳೆಯಲ್ಲೂ ಓಡಿ ಬಂದ. ಅಷ್ಟೆತ್ತರ ಹಾರಿ ಕುಣಿದು ನನ್ನ ವೇಲ್‌ ಎಳೆದುಕೊಂಡೇ ಹೋದ. ಈ ಡಿಂಗ ಪುಟಾಣಿ ಮರಿಯಾಗಿ ಮನೆಗೆ ಬಂದಿದ್ದ. ಆಗ ಅವನಿಗೆ ಬೊಗಳುವ ಹುರುಪು, ಅದೇ ಉತ್ಸಾಹದಲ್ಲಿ ಪಕ್ಕದ ಮನೆ ನಾಯಿಗೂ ಬೊಗಳಲು ಹೋಗಿ ಅದರ ಕೈಯಲ್ಲಿ ಕಚ್ಚಿಸಿಕೊಂಡಿದ್ದ. ಕಾಲು ಮುರಿದೇ ಹೋಯಿತು ಅಂದು ಕೊಂಡಿದ್ದೆವು. ಆದರೆ, ನಿಧಾನಕ್ಕೆ ಚೇತರಿಸಿಕೊಂಡ ಡಿಂಗ ತಿಂಗಳು ಕಳೆಯುವುದರೊಳಗೆ ಜಿಗಿ ಜಿಗಿದು ಓಡತೊಡಗಿದ್ದ. ಈಗ ಮುದುಕನಾಗುತ್ತಾ ಬಂದಿದ್ದಾನೆ, ಹಿಂದಿನ ಉತ್ಸಾಹ ಈಗ ಉಳಿದಿಲ್ಲ. ಆದ್ರೆ ಬಟ್ಟೆ ಎಳೆಯುವ ಕೆಟ್ಟ ಬುದ್ಧಿ ಮಾತ್ರ ಬಿಟ್ಟಿಲ್ಲ.



ಮನೆಯೊಳಗೆ ಕಾಲಿಟ್ಟರೆ ಅಡಿಕೆಯ ಮಕ್ಕು(ಧೂಳು)..ಅಮ್ಮ ಪತ್ರೊಡೆಗೆ ಅಕ್ಕಿ ಅರೆಯುತ್ತಿದ್ದಳು. ಅಮ್ಮನ ಮುಖ ನೋಡಿದ್ದೇ ಒಮ್ಮೆ ರಿಫ್ರೆಶ್‌ ಆದ ಅನುಭವ. ಆದರೂ ಮನೆಗೆ ಬಂದಾಗ ಹಲವು ಬಗೆಯ ನೋವುಗಳು ಒಮ್ಮೆಗೆ ಉದ್ಭವಿಸಿ ಬಿಡುತ್ತವೆ. ಬೇರೇನಕ್ಕೂ ಅಲ್ಲ, ಅಲ್ಲಿ ನೋವು ಇಲ್ಲಿ ನೋವು ಅಂದರೆ ಅಮ್ಮನ ಕಾಳಜಿಯೂ ಜಾಸ್ತಿಯಾಗುತ್ತದೆ. ಅವಳ ಕಣ್ಣಲ್ಲಿ ವಿಚಿತ್ರ ಪ್ರೀತಿ ಇಣುಕುತ್ತದೆ. ಒಂದು ಬಗೆಯ ತುಡಿತ ಮನಸ್ಸನ್ನಾವರಿಸುತ್ತದೆ. ಕಾಲಿಗೆ ತಲೆಗೆ ಎಣ್ಣೆ ತಿಕ್ಕಿ, ಬೇಗ ಗುಣ ಆಗತ್ತೆ, ಅಂದಾಗ ನನಗೆ ಕಳ್ಳ ಖುಷಿ.
‘ ಇಲ್ಲಿಗೆ ಬಂದ ಕೂಡ್ಲೆ ಎಲ್ಲ ನೋವೂ ಶುರುವಾಗಿ ಬಿಡತ್ತೆ ಅವಳಿಗೆ ’ ತಮ್ಮನ ಮೂದಲಿಕೆ.



ಅಪ್ಪ ಡೈರಿಗೆ ಹೋದವರು ಇನ್ನೂ ಬಂದಿರಲಿಲ್ಲ. ಅವರು ಬಂದಾಗ ಗಂಟೆ ಒಂಭತ್ತು. ಹಿಂದಿನ ಸೆಕ್ರೆಟರಿ ಡೈರಿಯ ಹಣ ತಿಂದ ಕಾರಣ, ಡೈರಿ ಲೆಕ್ಕ ಅಪ್ಪನ ತಲೆಗೆ ಬಿದ್ದಿತ್ತು. ಮುಗಿಯದ ತೋಟದ ಕೆಲಸದ ನಡುವೆಯೂ ದಾಕ್ಷಿಣ್ಯಕ್ಕೆ ಅಪ್ಪ ಈ ಕೆಲಸ ಒಪ್ಪಿದ್ದರು. ಮನೆಗೆ ಬಂದವರೇ ಸ್ನಾನ ಪೂಜೆ ಮುಗಿಸಿ ಮತ್ತೆ ಲೆಕ್ಕದಲ್ಲಿ ಮುಳುಗಿದ್ದರು. ರಾತ್ರಿ ತುಂಬ ಹೊತ್ತಿನವರೆಗೆ ಲೆಕ್ಕ ಮುಂದುವರಿದಿತ್ತು. ಅದರ ನಡು ನಡುವೆ ನನ್ನೊಡನೆ ಮಾತು. ಒಮ್ಮೆ,‘ ನಾನು ಈ ಜಾಗ ಮಾರ್‍ತೀನಿ’ ಅಂದರು. ಈ ಮಾತನ್ನು ಅವರು ಆವಾಗವಾಗ ಹೇಳುತ್ತಿದ್ದ ಕಾರಣ ನಾನು, ‘ ಹ್ಞುಂ’ ಅಂದು ಸುಮ್ಮನಾದೆ.

ಆದರೆ, ಅಪ್ಪ ನಿರ್ಧರಿಸಿದಂತಿತ್ತು.

‘ ಕಾರ್ಕಳದಲ್ಲಿ ಎಲ್ಲಾದರೂ ಹಿತ್ತಲು ಮನೆ ಇದೆಯಾ ಅಂತ ವಿಚಾರಿಸ್ತಾ ಇದೀನಿ. ಈ ಜಾಗ ಸೇಲಾದ ಕೂಡ್ಲೇ, ಪೇಟೆಯಲ್ಲಿ ಸಣ್ಣ ಮನೆ ಮಾಡಿ, ಜಾಗ ಮಾರಿದ ಹಣದಿಂದ ಬರುವ ಬಡ್ಡಿಯಲ್ಲಿ ಜೀವನ ಮಾಡೋದು. ’ ಅಂದರು.



ನಮ್ಮದು ಮುನ್ನೂರ ಅರುವತ್ತೈದು ದಿನಗಳೂ ಸಮೃದ್ಧ ನೀರಿರುವ, ಕಾಡು ಪ್ರಾಣಿಗಳ ಕಾಟ ಬಿಟ್ಟರೆ ಅಷ್ಟೇನೂ ತೊಂದರೆ ಇಲ್ಲದ ಜಾಗ. ಆದರೆ ಇಲ್ಲಿ ಗ್ರಾಮಕ್ಕೊಂದರಂತೆ ಗೇರು ಬೀಜ (ಗೋಡಂಬಿ) ಕಾರ್ಖಾನೆಗಳು ಎದ್ದಿರುವ ಕಾರಣ ಕೂಲಿಯವರೆಲ್ಲ ಆ ಕೆಲಸಕ್ಕೇ ಹೋಗುತ್ತಿದ್ದಾರೆ. ಅಲ್ಲಿ ಕೂಲಿಯವರಿಗೆ ಅಪ್ಪ ಕೊಡುವಷ್ಟು ಸಂಬಳ ಸಿಗದಿದ್ದರೂ ಅದು ಶ್ರಮ ಬೇಡುವ ಕೆಲಸವಲ್ಲ. ಕೂತು ಗೇರು ಬೀಜದ ಸಿಪ್ಪೆ ತೆಗೆಯುವ ಕೆಲಸ. ಹಾಗಾಗಿ ಇಷ್ಟ ಪಟ್ಟು ಹೋಗುತ್ತಿದ್ದರು. ಇಲ್ಲವಾದರೆ ಅವರು ಕೆಲಸಕ್ಕೆ ಹೋಗುತ್ತಿದ್ದದ್ದು ರಬ್ಬರ್‍ ತೋಟ ಮಾಡುವ ಕೊಚ್ಚಿ ಕ್ರಿಶ್ಷಿಯನ್ನರ ಮನೆಗೆ. ಯಾಕೆಂದರೆ ಅವರು ಮಾಂಸ, ಹೆಂಡ ಕೊಡ್ತಾರೆ. ನಮ್ಮಪ್ಪ ಬ್ರಾಹ್ಮಣರಾದ ಕಾರಣ ಅದೆಲ್ಲ ಕೊಡಿಸುವುದು ಹೇಗೆ?

ಆದರೂ ಆಗಾಗ ಯಶೋಧಾ ಕೆಲಸಕ್ಕೆ ಬರುತ್ತಿರುತ್ತಾಳೆ. ಗಂಡಾಳಿಗಿಂತ ಏನೂ ಕಡಿಮೆಯಿಲ್ಲದಂತೆ ದುಡಿಯುತ್ತಿದ್ದರೂ ಅವಳಿಗೆ ಮಾತ್ರ ಕಡಿಮೆ ಸಂಬಳ. ಅವಳಿಗಿಂತ ಎಷ್ಟೋ ಕಡಿಮೆ ಕೆಲಸ ಮಾಡುವ ಗಂಡಾಳಿಗೂ ಅವಳಿಗಿಂತ ಹೆಚ್ಚು ಕೂಲಿ. ಅದು ಅವಳ ಗಮನ ಬರುತ್ತಿರಲಿಲ್ಲ ಅಂತಲ್ಲ, ಆದರೂ ಏನೂ ಮಾತಾಡದೇ ಸುಮ್ಮನಾಗುತ್ತಿದ್ದಳು.



ಯಶೋದಾ ಮತ್ತು ಅಪ್ಪ ಸೇರಿಕೊಂಡು ಇಡೀ ತೋಟಕ್ಕೆ ಮದ್ದು ಬಿಡುತ್ತಾರೆ. ಹತ್ತಿರತ್ತಿರ ಹತ್ತೆಕರೆ ತೋಟಕ್ಕೆ ಮದ್ದು ಬಿಟ್ಟು ಮುಗಿಸುವಾಗ ಅಪ್ಪ ಹಿಂಡಿ ಹಿಪ್ಪೆಯಾದಂತಾಗುತ್ತಾರೆ. ಇನ್ನು ಅಡಿಕೆ ಕೊಯಿಲಿನ ಸಮಯ ಬಂತೆಂದರೆ ಆ ಕೆಲಸವನ್ನೂ ಅಪ್ಪ, ಯಶೋಧಾ ಸೇರಿಕೊಂಡೇ ಮಾಡುತ್ತಾರೆ.



ಅಪ್ಪನ ಪ್ರಾಯವೀಗ ಐವತ್ತೈದರ ಹತ್ತಿರ. ಕೃಷಿಯ ಬಗೆಗೆ ಅವರಿಗೆ ಮೊದಲಿದ್ದ ಆಸಕ್ತಿ ಕುಂದಿ ಹೋಗಿದೆ. ಮನಸ್ಸು ವಿಶ್ರಾಂತಿ ಬಯಸುತ್ತಿದೆ. ಸಹಾಯ ಮಾಡೋಣವೆಂದರೆ ನಾನು ಬೆಂಗಳೂರಿನಲ್ಲಿದ್ದೇನೆ. ಕೆಲಸ ಬಿಟ್ಟು ಬರುತ್ತೇನೆಂದರೆ ಅಪ್ಪ ಕೇಳುವುದಿಲ್ಲ, ‘ ನೀನು ಇಲ್ಲಿ ಬಂದರೂ ಮಾಡುವುದು ಇಷ್ಟೇ ಇದೆ. ಸುಮ್ಮನೆ ಏನೆಲ್ಲ ತಲೆಗೆ ಹಚ್ಚಿಕೊಳ್ಳಬೇಡ. ನಾವು ಹೇಗೋ ಸುಧಾರಿಸ್ತೇವೆ’ ಅಂತಾರೆ. ತಮ್ಮ ಇನ್ನೂ ಚಿಕ್ಕವನು, ಈಗಷ್ಟೇ ಹತ್ತನೇ ಕ್ಲಾಸು ಮುಗಿಸಿ ಕಾಲೇಜು ಸೇರಿಕೊಂಡಿದ್ದಾನೆ.



ಅಪ್ಪನತ್ರ ಅಷ್ಟು ಒಳ್ಳೆ ಜಾಗ ಮಾರಬೇಡ ಅಂತ ಅನ್ನೋಣ ಅನಿಸುತ್ತದೆ. ಆದರೆ, ಅದು ಹೇಗೆ?ಜಗುಲಿಯ ಕಟ್ಟೆಯೇರಿದರೆ ಕಾಣುವ ಪಶ್ಷಿಮ ಘಟ್ಟದ ಸಾಲು, ತೋಟದ ಪಕ್ಕ ಸಶಬ್ಧವಾಗಿ ಹರಿವ ಸ್ವರ್ಣೆ, ನಮ್ಮ ಬಾಲ್ಯಕ್ಕೆ ಬೆಳವಣಿಗೆಗೆ ಸಾಕ್ಷಿಯಾಗಿ ನಿಲ್ಲುವ ತೋಟ, ಎತ್ತರ ಮಹಡಿಯ ಪುಟ್ಟಮನೆ ಚಿತ್ರ ಕಣ್ಣೆದುರು ಬರುತ್ತದೆ. ಜಾಗ ಮಾರಿದರೆ ಇದೆಲ್ಲ ಬಾಲ್ಯದಂತೆ ಒಂದು ನೆನಪು ಮಾತ್ರ.

ಬೆಂಗಳೂರಿನ ಎ.ಸಿ ರೂಮಿನಲ್ಲಿ ಕೂತು ಇದೆಲ್ಲ ಬರೆಯುವ ಹೊತ್ತಿಗೆ ಅಪ್ಪ ದನದ ಕೊಟ್ಟಿಗೆ ಪಕ್ಕದ ಕೋಣೆಯಲ್ಲಿ ಕೂತು ಅಡಿಕೆ ಸುಲಿಯುತ್ತಿರುತ್ತಾರೆ. ಅಡಿಕೆ ಸಿಪ್ಪೆಯ ಮೇಲೆ ಸುತ್ತಿಕೋಂಡು ಮಲಗಿ ಬೆಚ್ಚನೆಯೊಳಗೆ ಸೇರಿ ಹೋಗಿರುತ್ತಾನೆ ಡಿಂಗ.

Friday, August 22, 2008

ಇಳೆಯ ಕನವರಿಕೆ

ಉಲ್ಲಾಸ, ಉತ್ಸಾಹ, ಒಳಗಿಂದೊಳಗೇ ಉಕ್ಕುವ ಖುಷಿ
ಹಾಗೆ ತಣ್ಣಗೆ ಆವರಿಸಿ, ಹೂ ಮುತ್ತನಿತ್ತು ಅವಧರಿಸಿ
ಒಳಗೊಳಗೆ ಗುಡುಗು, ಮಿಂಚು, ಒತ್ತರಿಸಿ ಬರುವ ಉನ್ಮಾದ

ಹಾಗೇ ಒರಗಿದ್ದು, ಮೇಲೆರಗಿಯೇ ಬಿಡಬೇಕೆ?
ಅಲ್ಲೂ ಬಿರುಸು ಚಲನೆ, ಗಂಟಲಲ್ಲಿ ಪಸೆಯಾರಿದ ಅನುಭವ...
ಹೆಚ್ಚಿದ ಆವೇಗ, ಕೊನೆಗೂ ಶರಣು ಶರಣು
ಅದೋ, ದೋ ಎಂದು ಸುರಿದೇ ಬಿಟ್ಟಿತು ವರ್ಷಧಾರೆ


ತುಸು ಬಳಲಿಕೆ, ಸಂತೃಪ್ತ ಮನಸ್ಸು
ಒಳಗೊಳಗೇ ಹೊಸ ಚೈತನ್ಯದ ಹರಿವು
ಮೌನ, ತಲ್ಲೀನ ಇಳೆ, ಭೋರ್ಗರೆದ ಮಳೆಗೆ ಬಾಗಿದ ಮನ

ಹಾಗೇ ನಸು ಮಂಪರು, ಆವರಿಸಿದ ನಿದ್ರೆ
ಅಲುಗಾಟ ಹೊರಳಾಟ ಇಲ್ಲ
ಯೋಗನಿದ್ರೆಯಂತೆ ಧ್ಯಾನಸ್ಥ
ಹಾ, ನಸು ಕದಲಿಕೆ, ತುಟಿಯಂಚಿನಲ್ಲಿ ನಸು ನಗು

ತೊರೆಯ ಮೇಲೆ ಇಳಿಬಿಟ್ಟ ಕಾಲ್ಗಳನ್ನು
ಹಾಗೇ ಮೇಲೆಳೆದುಕೊಂಡೆ.
ಸದ್ದಿಲ್ಲದೆ ಎದ್ದೆ, ಹಾಗೆ ಸರಿದೆ
ಸ್ವಲ್ಪ ದೂರ, ಹಿಂತಿರುಗಿ ನೋಡಿದೆ
ಸದ್ಯ ಎಚ್ಚರವಾಗಲಿಲ್ಲ...

Saturday, August 9, 2008

ಶೀತಲ ಭಾವಗಳ ಜಯಕಾಂತನ್‌


ಆ ವಿಶಾಲವಾದ ಜನಸಂದಣಿ ಇಲ್ಲದ ಪ್ರದೇಶದಲ್ಲಿ ಆ ಹುಡುಗಿ ಏಕಾಕಿಯಾಗಿ ನಿಂತಿದ್ದಳು. ಅವಳ ಜತೆಗೆ ಆ ವೃದ್ಧ ಪಶುವೂ ನಿಂತಿತ್ತು. ದೂರದಲ್ಲಿ ಎದುರುಗಡೆ ಕಾಲೇಜಿನ ಹೊರಾಂಗಣದಲ್ಲಿ ಆಗೀಗ ಯಾರಾದರೊಬ್ಬರು ನಡೆದಾಡುವುದು ಮಾತ್ರ ಕಾಣಿಸುತ್ತಿತ್ತು. ಥಟ್ಟನೆ ತೆರೆಯಿಳಿದಂತೆ ಕತ್ತಲು ಕವಿಯಿತು. ಅದರ ಹಿಂದೆಯೇ ಬಿರುಗಾಳಿ ಬೀಸಿ ಅಲ್ಲಿನ ಮರ ಗಿಡಗಳ ಎಲೆಗಳ ಮೇಲಿಂದ ನೀರು ಹನಿಗಳು ಪಟಪಟನೆ ಉದುರಿದವು. ಅವಳು ಮರಕ್ಕೆ ಒರಗಿ ನಿಂತಳು. ಸ್ವಲ್ಪ ನಿಂತಿದ್ದ ಆ ಮಳೆ ಇದ್ದಕ್ಕಿದ್ದಂತೆ ಹೆಚ್ಚಿತು. ಅಡ್ಡವಾಗಿ ದಾರಿಯಾಚೆ ಇದ್ದ ಕಾಲೇಜಿನೊಳಕ್ಕೆ ಪುನಃ ಹೋಗಲೆಂದು ಅವಳು ರಸ್ತೆಯ ಎರಡೂ ಕಡೆ ನೋಡಿದಳು. ದೊಡ್ಡ ಕಾರೊಂದು ದಾರಿಗಡ್ಡವಾಗಿ ಬಂದು ಅವಳ ಮುಂದೆ ಥಟ್ಟನೆ ನಿಂತಿತು. ಅದು ನಿಂತ ವೇಗಕ್ಕೆ ಸುಂದರವಾಗಿ ಅಲುಗಾಡಿತು.

....ಇದು ಜಯಕಾಂತನ್‌ ಕತೆಯೊಂದರ ತುಣುಕು. ಬೆಂಗಳೂರಿನ ಎಚ್ಚರದ ರಾತ್ರಿಯೊಂದರಲ್ಲಿ ಜಯಕಾಂತನ್‌ ಕಥೆಗಳ ಗುಂಗಿನಲ್ಲಿದ್ದೆ. ಅಲ್ಲಿ ಪದೇ ಪದೇ ಬಂದು ಹೋಗುವ ಅಮಾಯಕ ಗುಣ ಮತ್ತೆ ಮತ್ತೆ ನೆನಪಾಗುತ್ತಿತ್ತು. ಅದು ಜಯಕಾಂತನ್‌ ಅವರ ಅಗ್ನಿ ಪ್ರವೇಶ ಅನ್ನುವ ಸಣ್ಣ ಕಥೆ.

ಆಕೆ ಆಗಷ್ಟೇ ಹರೆಯಕ್ಕೆ ಕಾಲಿಟ್ಟ, ಬುದ್ಧಿಯಿಲ್ಲೂ ಬಲಿಯದ ಪುಟ್ಟ ಹುಡುಗಿ. ಕಾಲೇಜಿಗೆ ಆಗಷ್ಟೇ ಸೇರಿಕೊಂಡಿರಬೇಕು. ಅಂಜಿಕೆ, ಅಳುಕು ಅದನ್ನು ತೋರಿಸುತ್ತಿತ್ತು. ಆಗ ಜೋರಾಗಿ ಹೊಡೆದ ಮಳೆಗೆ ಮತ್ತುಷ್ಟು ಆತಂಕ ಪಡುತ್ತಾಳೆ. ಅಷ್ಟೊತ್ತಿಗೆ ಸುಂದರ ಕಾರು ಅವಳ ಪಕ್ಕ ನಿಲ್ಲುತ್ತದೆ. ಮುಂದಿನವು ಕನಸಿನಂತೆ ಚಲಿಸಿಹೋಗುವ ಕ್ಷಣಗಳು. ಕ್ಷಣದ ಸಂಕೋಚ, ದಾಕ್ಷಿಣ್ಯಕ್ಕೆ ಸಿಕ್ಕಿ ಆಕೆ ಕಾರು ಹತ್ತಿ ಬಿಡುತ್ತಾಳೆ. ಪುಟ್ಟ ಪುಟ್ಟದಕ್ಕೂ ಅಚ್ಚರಿ ಪಡುತ್ತಾ, ಆ ಸುಂದರ ಶ್ರೀಮಂತ ಹುಡುಗನ ನಗೆಗೆ ಒಳಗೊಳಗೇ ಸುಖಿಸುತ್ತಾ, ಕಾರಿನೊಳಗಿನ ಜಗತ್ತಿಗೆ ಬೆರಗಾಗುತ್ತಾಳೆ.
ಹೀಗೆ ಸಣ್ಣ ಸಣ್ಣ ಘಟನೆಗಳನ್ನೂ ಸೂಕ್ಷ್ಮವಾಗಿ ನೂಲುತ್ತಾರೆ ಜಯಕಾಂತನ್. ಅವರ ಜತೆಗೆ ಪುಟ್ಟ ಹುಡುಗಿಯ ಮನಸ್ಸನ್ನೂ ಅದೇ ಅಮಾಯಕತೆಯಿಂದ ವಿವರಿಸುತ್ತಾರೆ. ಕಣ್ಣೆದುರಿನ ಜಗತ್ತಿನಿಂದ ಬೇರೆಯಾಗಿ ನಿಲ್ಲುತ್ತಾ, ನಮ್ಮ ಮನಸ್ಸನ್ನೂ ಅದಕ್ಕೊಪ್ಪಿಸುತ್ತಾ ಹೋಗುತ್ತದೆ ಈ ಕಥೆ.

ಜಯಕಾಂತನ್‌ ತಮಿಳಿನ ಜ್ಞಾನಪೀಠ ಪುರಸ್ಕೃತ ಸಾಹಿತಿ. ಅವರದು ಹೋರಾಟದ ಹಾದಿ. ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಸ್ವಭಾವ. ‘ ಓರ್ವ ಲೇಖಕನೆಂಬ ಆಧಾರದಿಂದ ನನ್ನ ಹಕ್ಕುಗಳನ್ನು ಮುಂದಿಟ್ಟುಕೊಂಡು ಹೋರಾಡಲು ನನಗೆ ನಾಚಿಕೆ ಎನಿಸುತ್ತದೆ. ಯಾಕೆಂದರೆ, ಈ ಅಧಿಕಾರ ಅಂತರಾತ್ಮದಲ್ಲಿ ತಪ್ಪು ಎಸಗಿದ ಭಾವವನ್ನುಂಟು ಮಾಡುತ್ತದೆ.’ ಅನ್ನುವ ಅವರ ಮಾತುಗಳು ನೇರತನವನ್ನು ತೋರಿಸುತ್ತವೆ.
ಅದಿರಲಿ, ಅವರ ‘ ಹೊಸ ಚಪ್ಪಲಿ ಕಚ್ಚುತ್ತದೆ’ ಅನ್ನುವ ಕಥೆ ಮೇಲೆ ಹೇಳಿದ ಕತೆಗಿಂತ ಭಿನ್ನ. ವಿಭಿನ್ನ ಯೋಚನಾ ಲಹರಿ, ಹೊಸ ಹೊಸ ಹೊಳಹುಗಳು ಇಲ್ಲಿ ಬಹಳಾ ತಟ್ಟುತ್ತವೆ.

‘ ಹೋದವಾರ ಹೊಸ ಚಪ್ಪಲಿ ಕೊಂಡುಕೊಂಡೆ. ಕಚ್ಚಿದೇರಿ...ಹೊಲಿಯುವಾಗ ಬೆರಳುಗಳು ಆಡುವುದರಿಂದ ಬೇಗ ವಾಸಿಯಾಗುವುದಿಲ್ಲ’ ಅಂತ ಹೇಳುತ್ತಿದ್ದವಳು, ತಲೆಎತ್ತಿ ಅವನ ಮುಖ ನೋಡಿ ನಕ್ಕಳು. ‘ ನೋಡಿದಿರೇನ್ರಿ, ಚಪ್ಪಲಿ ಕೂಡ, ಹೊಸದಾಗಿದ್ದರೆ ಕಚ್ಚುತ್ತೇರಿ. ಅದಕ್ಕಾಗಿ ಹಳೆಯ ಚಪ್ಪಲಿಗಳನ್ನು ಯಾರಾದ್ರೂ ಕೊಂಡುಕೊಳ್ಳುತ್ತಾರೇನ್ರಿ...?’ ಅವಳು ನಗುತ್ತಾ ಹೇಳಿದಳು. ಅವನು ಅವಳ ಕರಗಳನ್ನು ಹಿಡಿದುಕೊಂಡು ಅತ್ತುಬಿಟ್ಟ.
ಇಂತಹ ಹಲವು ಚಿಂತನೆಗಳು ಇಲ್ಲಿ ಕಾಣಸಿಗುತ್ತವೆ.
ಹೀಗೆ ಆ ರಾತ್ರಿ ಓದಿದ ಕಥೆಗಳು ಕೆಲವೊಮ್ಮೆ ಅಚಾನಕ್‌ ಆಗಿ ನೆನಪಾಗುತ್ತವೆ. ತುಸು ಯೋಚಿಸಿ ನಕ್ಕು ಸುಮ್ಮನಾಗುತ್ತೇನೆ.

Sunday, August 3, 2008

ನನ್ನಮ್ಮ ನನ್ನಮ್ಮ ಆಗುವ ಮೊದಲು

ಆಗ ಅವಳು ಕಾಲೇಜಿಗೆ ಹೋಗ್ತಾ ಇದ್ಳು. ವಿಟ್ಲದ ಕಾರಿಂಜ ಹತ್ತಿರದ ಅವಳ ಅಜ್ಜನ ಮನೆಯಿಂದ...ಅವಳಿಗೆ ಆಟ ಅಂದರೆ ಯಕ್ಷಗಾನದ ಹುಚ್ಚು ವಿಪರೀತ. ಅದಕ್ಕಾಗಿ ಅವತ್ತು ಅಜ್ಜನಮನೆಯಲ್ಲಿ ಜಗಳ ಮಾಡಿ ಪುತ್ತೂರಿಗೆ ಹೊರಟಿದ್ದಳು. ಅಲ್ಲೇ ಅವಳ ಗೆಳತಿಯ ಮನೆಯಿದ್ದ ಕಾರಣ ಇನ್ನೂ ಅನುಕೂಲವಾಗಿತ್ತು.ಅದು ಸಾಲಿಗ್ರಾಮ ಮೇಳದ ಕಾಡ ಮಲ್ಲಿಗೆ ಪ್ರಸಂಗ, ಕಾಳಿಂಗರಾಯರೇ ಭಾಗವತರು. ಆ ಕಾಲದ ಘಟಾನುಘಟಿಗಳೆಲ್ಲ ದೊಡ್ಡ ದೊಡ್ಡ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಬಣ್ಣದ ವೇಷದ ಖದರೇ ಬೇರೆ.ಅವಳು ರಾತ್ರಿಯಿಡೀ ಕಣ್ಣ್ ಮಿಟುಕಿಸದಂತೆ ಯಕ್ಷಗಾನ ನೋಡಿದಳು. ಬೆಳಗ್ಗೆ ಗೆಳತಿ ಮನೆ ಕಡೆ ಹೊರಟಳು.ಅಲ್ಲಿಗೆ ತಲುಪುದರೊಳಗಾಗಿ ಅವಳ ಸೋದರ ಮಾವ ಅಲ್ಲಿ ಕಾಯ್ತಾ ಇದ್ರು.ಅವಸರವಸರದಲ್ಲಿ ಅವರಿಗೆ ಶಾಪ ಹಾಕುತ್ತಾ ಕಾರು ಹತ್ತಿದಳು. ಕಾರು ಅಜ್ಜನ ಮನೆ ಕಡೆ ಹೋಗದೇ ಅವಳ ಮನೆ ದಾರಿ ಹಿಡಿಯಿತು.
ಅವಳಿಗೆ ಕಸಿವಿಸಿ..ನಿನ್ನೆ ತಾನೇ ಜಗಳ ಮಾಡಿ ಮಾವನ ಹತ್ತಿರ ಕೋಪ ಮಾಡಿಕೊಂಡ ಕಾರಣ ಈಗ ಮಾವನಲ್ಲಿ, ಯಾಕೆ ಮನೆ ಕಡೆ ಕರ್‍ಕೊಂಡು ಹೋಗ್ತಾ ಇದ್ದೀರಾ? ಅಂತ ಕೇಳಲೂ ಮುಜುಗರ. ಹಸಿವು ಬೇರೆ. ಮಾವ ನಿನ್ನೆ ಜಗಳದ ಬಗ್ಗೆ ಅಪ್ಪನ ಹತ್ರ ಚಾಡಿ ಹೇಳವುದಕ್ಕೆ ಪ್ಲಾನ್‌ ಮಾಡ್ತಿದ್ದಾನಾ? ಅಂತ ಸಂಶಯ, ಒಳಗೊಳಗೇ ಭಯ.
ಈ ಟೆನ್ಶನ್‌ನಲ್ಲಿ ಸುಮ್ಮನೆ ಕೂರುವುದೂ ಕಷ್ಟವಾಗಿ ಮಿಸುಕಾಡುತ್ತಿದ್ದಳು. ಮಾವ ಮೌನವಾಗಿದ್ದ.
ಕುಡ್ತಮೊಗೇರು ಬರುವ ಹೊತ್ತಿಗೆ ಕಾರಿನ ಟಯರ್‌ ಪಂಕ್ಚರ್‍. ಅಲ್ಲೆಲ್ಲೂ ಗ್ಯಾರೇಜಿಲ್ಲ. ಮಾವನತ್ರ ಎಕ್ಟ್ರಾ ಟಯರೂ ಇಲ್ಲ... ಕೊನೆಗೆ ಇದು ಇವತ್ತು ರಿಪೇರಿ ಆಗುವುದಿಲ್ಲ ಅಂದು ಕೊಂಡು ಕಾರನ್ನು ಪಕ್ಕಕ್ಕೆ ಹಾಕಿಯಾಯಿತು. ಅವಸರವಸರವಾಗಿ ನಡೆದುಕೊಂಡೇ ಹೋಗೋಣ, ಬೇಗ ನಡಿ ಅಂದ ಮಾವ. ಇವಳಿಗಿನ್ನೂ ಸಂಶಯ, ರಾತ್ರಿ ನಿದ್ದೆ ಕೆಟ್ಟದ್ದಕ್ಕೆ ಹೊಟ್ಟೆಯಲ್ಲಿ ಸಂಕಟ. ಅವಳು ಒಳಗೇ ಕೋಪದಿಂದ ಕುದಿಯುತ್ತಿದ್ದಳು...ಸಿಟ್ಟಿನಲ್ಲೇ ಮಾವನ ಜತೆಗೆ ಹೆಜ್ಜೆ ಹಾಕತೊಡಗಿದಳು.
ಕುಡ್ತಮೊಗೇರಿನಿಂದ ಅಜ್ಜನ ಮನೆಗೆ ೫ ಮೈಲಿ ದೂರ...ನಡೆಯುವಾಗ ಕಾಲು ಜೋಮು ಹಿಡಿದಂತಾಗುತ್ತಿತ್ತು. ತಲೆ ಸಿಡಿತ ಬೇರೆ ಸುರುವಾಗಿತ್ತು. ಪೂವಕ್ಕು ಮನೆಯ ಹತ್ತಿರ ಬರುವಾಗ ತಲೆತಿರುಗಿ ಬಿದ್ದೇ ಬಿಟ್ಟಳು. ಮಾವನಿಗೆ ಏನು ಮಾಡುವುದೆಂದೇ ತಿಳಿಯಲಿಲ್ಲ...ಆಗ ಅವನಿಗಿನ್ನೂ ಇಪ್ಪತೈದರ ಪ್ರಾಯ.ಮದುವೆ ಆಗಿರಲಿಲ್ಲ. ದೇವರ ದಯೆದಿಂದ ಅದೇ ಸಮಯಕ್ಕೆ ಪೂವಕ್ಕು ಆ ದಾರಿಯಾಗಿ ಬರುತ್ತಿದ್ದಳು...ಮೂರ್ಛೆ ಹೋಗಿರುವ ಅವಳನ್ನೂ, ಬೆಪ್ಪನಂತೆ ನಿಂತಿರುವ ಮಾವನನ್ನೂ ಕಂಡು ವಿಷಯ ಏನೆಂದು ಕೇಳಿದಳು? ಮಾವ ಪೆದ್ದು ಪೆದ್ದಾಗಿ ಎಲ್ಲವನ್ನೂ ಹೇಳಿದ.
ಅವಳಿಗೆ ಕಾಫಿಯನ್ನೂ ಕುಡಿಸದೇ ಹಾಗೇ ಕರೆದುಕೊಂಡು ಬಂದ ಮಾವನಿಗೆ ಅವಳಿಂದ ಸರಿಯಾಗಿಯೇ ಪೂಜೆಯಾಯಿತು. ನಂತರ ಪೂವಕ್ಕು ಮನೆಯಿಂದ ನೀರು ತಂದು ಅವಳ ಮುಖಕ್ಕೆ ನೀರು ಹಾಕಿದಾಗ ಆಕೆಗೆ ಜ್ಞಾನ ಬಂದಂತಾಯಿತು. ಬೇಡ ಬೇಡವೆಂದರೂ ಕೇಳದೇ ತಿಂಡಿ, ಕಣ್ಣ ಚಾ ( ಹಾಲಿಲ್ಲದ ಚಹ) ಕುಡಿಸಿದ ಮೇಲೆ ಆಕೆ ಸ್ವಲ್ಪ ಸುಧಾರಿಸಿದಳು. ಮಾವನಿಗೆ ಬುದ್ಧಿ ಹೇಳಿ ಅವಳನ್ನು ಮಾವನೊಂದಿಗೆ ಕಳುಹಿಸಿದಳು ಪೂವಕ್ಕು.
ಅಂತೂ ಇಂತೂ ಮನೆಗೆ ಬಂದಾಗ ಅವಳು ಮನೆಗೆ ಬಂದು ಮುಟ್ಟಿದಾಗ ಮುಖ ನೊಡುವುದಕ್ಕೇ ಆಗುತ್ತಿರಲಿಲ್ಲ. ಆದರೇನು ಮಾಡುವುದು ಅವಳು ಸ್ವಲ್ಪ ರೆಸ್ಟ್‌ ತೆಗೆದುಕೊಳ್ಳುವ ಹೊತ್ತಿಗೇ ಅವಳಮ್ಮ ಅವಳನ್ನು ಬಚ್ಚಲಿಗೆ ಕರೆದೊಯ್ದು, ತಲೆ ತಿಕ್ಕಿ , ಬೇಗ ಬೇಗ ಸ್ನಾನ ಮುಗಿಸಲು ಹೇಳಿದಳು..ಇವಳಿಗೆ ಇನ್ನೂ ಗೊಂದಲ..ಇವರೆಲ್ಲ ಯಾಕೆ ಹೀಗೆ ಮಾಡುತ್ತಾರೆ?, ಎಲ್ಲ ಒಗಟಿನಂತಿತ್ತು. ಸ್ನಾನ ಮುಗಿಸಿ ಬಂದವಳಿಗೆ, ಅಪ್ಪ ಅಮ್ಮ ಯಾರದೋ ದಾರಿ ನೋಡುತ್ತಿದ್ದದ್ದನ್ನು ಕಂಡು ಮತ್ತಷ್ಟು ಗೋಜಲು..ಇದೆಲ್ಲ ಎಂತಮ್ಮಾ? ಅಂತ ಕೇಳಿದರೆ, ಏನೂ ಇಲ್ಲ, ನೀನು ಹೆದರಬೇಡ, ಎಂತದ್ದೂ ಆಗುವುದಿಲ್ಲ ಅನ್ನುವ ಉತ್ತರ. ಮನೆಯಲ್ಲಿ ಹಾಕುವ ಉದ್ದ ಲಂಗ ಹಾಕಿ ಬಂದಾಗ, ‘ಸೀರೆ ಸುತ್ತು ಕೂಸೇ ...’ ಅವಳಪ್ಪ ಹೇಳಿದ್ರು...ಕಕ್ಕಾ ಬಿಕ್ಕಿಯಾಗಿ ಏನರಿಯದೇ ಮಿಕಿ ಮಿಕಿ ನೋಡಿದ್ಲು...ಅಪ್ಪ ಕಣ್ಣು ದೊಡ್ಡ ಮಾಡಿ ನೊಡಿದಾಗ, ವಿಧಿಯಿಲ್ಲದೇ ಹಳೇ ಸೀರೆಯುಟ್ಟು ಬಂದಳು.
ಸ್ವಲ್ಪ ಹೊತ್ತಿನಲ್ಲೇ ಮನೆಗೆ ಅಪರಿಚಿತರ ಆಗಮನ. ಇದ್ಯಾರಪ್ಪ ನಂಗೆ ಗೊತ್ತಿಲ್ಲದ ನೆಂಟರು? ಅಂತ ಅವಳು, ಹಾಗೇ ನೋಡುತ್ತಿದ್ದಾಗ ಅಮ್ಮ ಅವಸರದಲ್ಲಿ ಬಂದು ಹೋಗಿ ಕಾಫಿ ಕೊಟ್ಟು ಬಾ ಅಂತ ಪ್ಲೇಟಿನ ಮೇಲೆ ಕಾಫಿ ಲೋಟವಿಟ್ಟು ಕಳುಹಿಸಿದಳು. ಆಮೇಲೆ ಏನಾಯಿತು ಅಂತ ಹೇಳಲಿಕ್ಕೆ ಅವಳಿಗೆ ನಾಚಿಕೆ. ಅಷ್ಟೊತ್ತಿಗೆ ಅವಳಮ್ಮ ನಗುತ್ತಾ ಹೇಳಿದಳು, ‘ಆಮೇಲೆ 2 ವರ್ಷ ಆಗುವ ಮೊದಲೇ ನೀನು ಹುಟ್ಟಿದೆ...

ಹನಿ ಹನಿ ಕಹಾನಿ

ನಮ್ಮ ಮನೆಯ ಮೇಲಿನ ಗುಡ್ಡೆಯ ಪುಟ್ಟ ದಿಣ್ಣೆ ಹತ್ತಿ ಕೂತಿದ್ದೆವು. ಈಗಷ್ಟೇ ಹನಿದರೂ ನೀಲಿ ಮೋಡಕ್ಕೆ ದಣಿವಿಲ್ಲ. ಆತ ಮೆಲ್ಲ ಗುನುಗುತ್ತಿದ್ದ. ಯಾವುದೋ ಘಜಲ್ ಸಾಲುಗಳು...ನಮ್ಮ ಎದುರಿಗಿದ್ದದ್ದು ಮೊದಲು ದಟ್ಟ ಕಾಡಾಗಿದ್ದ ಈಗ ರಬ್ಬರ್‌ ತೋಟವಾಗಿರುವ ಎತ್ತರ ತಗ್ಗಿನ ಭೂಮಿ. ಆಗ ಸಂಜೆ ಆರರ ಹೊತ್ತು, ಮಳೆಯ ಕಾರಣ ಇನ್ನೂ ಕತ್ತಲಾದಂತೆ ಕಾಣುತ್ತಿತ್ತು. ‘ ಈಗ ಜೋರು ಮಳೆ ಬಂದ್ರೆ ಕಷ್ಟ ಅಲ್ವಾ? ’ ನಾನಂದೆ. ಹೂಂ..ಅಂದ. ಗುನುಗುತ್ತಿದ್ದ ಘಜಲ್‌, ಒಮ್ಮೆ ನಿಂತು ಮತ್ತೆ ಸಣ್ಣ ಶಿಳ್ಳೆಯೊಂದಿಗೆ ಮುಂದುವರಿಯಿತು. ‘ ನಾವು ಇಂತದ್ದೇ ಜಾಗ ನೋಡಿ ಇಲ್ಲೇ ಮೂಡಬಿದ್ರೆ ಹತ್ರ ಒಂದು ಜಾಗ ಮಾಡಿದ್ರೆ ಹೇಗೆ? ’ ಮತ್ತೆ ಘಜಲ್‌ಗೆ ಅರ್ಧವಿರಾಮ. ಅವ ಉತ್ತರಿಸಲಿಲ್ಲ. ಗುನುಗು ಮುಂದುವರಿಯಿತು. ಒಂಥರಾ ಮುಖ ಮಾಡಿ ಹೇಳಿದ,‘ ಈಗೀಗ ಬರವಣಿಗೆ ಯಾಕೋ ಕೈ ಹಿಡೀತಾ ಇಲ್ಲ’. ಮತ್ತೆ ಹಾಡು ಮುಂದುವರಿಯಲಿಲ್ಲ. ‘ ಹೌದು, ರಸವೇ ಇಲ್ಲದೆ ಒಣಗಿದ ಹಾಗಿರುತ್ತದೆ’ ನಾನಂದೆ. ಆತ ಮತ್ತೆ ಮೌನವಾದ. ಆಯ್, ತಲೆ ಮೇಲೆ ದಪ್ಪ ಹನಿ ಬಿತ್ತು. ದೂರದಲ್ಲಿ ನವಿಲಿನ ಕೇಕೆ, ‘ಇಲ್ಲೇ ಎಲ್ಲೋ ನವಿಲಿರ್‍ಬೇಕು, ಬಾ ಮರದಡಿಗೆ ನಿಂತರೆ ಕಾಣಬಹುದು. ನವಿಲು ಕುಣಿಯುವುದು ಭಾರೀ ಚಂದ. ನಾನಿದುವರೆಗೆ ನೋಡಿಲ್ಲ’ ಅಂದ . ನಾನು ಹಿಂಬಾಲಿಸಿದೆ. ಮರದಡಿ ನಿಂತೆವು. ಅಷ್ಟರಲ್ಲಿ ಬರಾ..ಅಂತ ಸುರಿದ ಮಳೆಗೆ ನಾನು ಪೂರಾ ಒದ್ದೆ. ಅವನತ್ತ ನೋಡಿದೆ, ಅವ ಕಾಡ ಕಡೆಗೇ ನೋಡುತ್ತಿದ್ದ. ಮೈಯಿಂದ ನೀರಿಳಿಯುತ್ತಿತ್ತು. ಆ ರಾತ್ರಿ ಯಾಕೋ ಅವ ಮೌನವಾಗಿದ್ದ.....