Saturday, August 9, 2008

ಶೀತಲ ಭಾವಗಳ ಜಯಕಾಂತನ್‌


ಆ ವಿಶಾಲವಾದ ಜನಸಂದಣಿ ಇಲ್ಲದ ಪ್ರದೇಶದಲ್ಲಿ ಆ ಹುಡುಗಿ ಏಕಾಕಿಯಾಗಿ ನಿಂತಿದ್ದಳು. ಅವಳ ಜತೆಗೆ ಆ ವೃದ್ಧ ಪಶುವೂ ನಿಂತಿತ್ತು. ದೂರದಲ್ಲಿ ಎದುರುಗಡೆ ಕಾಲೇಜಿನ ಹೊರಾಂಗಣದಲ್ಲಿ ಆಗೀಗ ಯಾರಾದರೊಬ್ಬರು ನಡೆದಾಡುವುದು ಮಾತ್ರ ಕಾಣಿಸುತ್ತಿತ್ತು. ಥಟ್ಟನೆ ತೆರೆಯಿಳಿದಂತೆ ಕತ್ತಲು ಕವಿಯಿತು. ಅದರ ಹಿಂದೆಯೇ ಬಿರುಗಾಳಿ ಬೀಸಿ ಅಲ್ಲಿನ ಮರ ಗಿಡಗಳ ಎಲೆಗಳ ಮೇಲಿಂದ ನೀರು ಹನಿಗಳು ಪಟಪಟನೆ ಉದುರಿದವು. ಅವಳು ಮರಕ್ಕೆ ಒರಗಿ ನಿಂತಳು. ಸ್ವಲ್ಪ ನಿಂತಿದ್ದ ಆ ಮಳೆ ಇದ್ದಕ್ಕಿದ್ದಂತೆ ಹೆಚ್ಚಿತು. ಅಡ್ಡವಾಗಿ ದಾರಿಯಾಚೆ ಇದ್ದ ಕಾಲೇಜಿನೊಳಕ್ಕೆ ಪುನಃ ಹೋಗಲೆಂದು ಅವಳು ರಸ್ತೆಯ ಎರಡೂ ಕಡೆ ನೋಡಿದಳು. ದೊಡ್ಡ ಕಾರೊಂದು ದಾರಿಗಡ್ಡವಾಗಿ ಬಂದು ಅವಳ ಮುಂದೆ ಥಟ್ಟನೆ ನಿಂತಿತು. ಅದು ನಿಂತ ವೇಗಕ್ಕೆ ಸುಂದರವಾಗಿ ಅಲುಗಾಡಿತು.

....ಇದು ಜಯಕಾಂತನ್‌ ಕತೆಯೊಂದರ ತುಣುಕು. ಬೆಂಗಳೂರಿನ ಎಚ್ಚರದ ರಾತ್ರಿಯೊಂದರಲ್ಲಿ ಜಯಕಾಂತನ್‌ ಕಥೆಗಳ ಗುಂಗಿನಲ್ಲಿದ್ದೆ. ಅಲ್ಲಿ ಪದೇ ಪದೇ ಬಂದು ಹೋಗುವ ಅಮಾಯಕ ಗುಣ ಮತ್ತೆ ಮತ್ತೆ ನೆನಪಾಗುತ್ತಿತ್ತು. ಅದು ಜಯಕಾಂತನ್‌ ಅವರ ಅಗ್ನಿ ಪ್ರವೇಶ ಅನ್ನುವ ಸಣ್ಣ ಕಥೆ.

ಆಕೆ ಆಗಷ್ಟೇ ಹರೆಯಕ್ಕೆ ಕಾಲಿಟ್ಟ, ಬುದ್ಧಿಯಿಲ್ಲೂ ಬಲಿಯದ ಪುಟ್ಟ ಹುಡುಗಿ. ಕಾಲೇಜಿಗೆ ಆಗಷ್ಟೇ ಸೇರಿಕೊಂಡಿರಬೇಕು. ಅಂಜಿಕೆ, ಅಳುಕು ಅದನ್ನು ತೋರಿಸುತ್ತಿತ್ತು. ಆಗ ಜೋರಾಗಿ ಹೊಡೆದ ಮಳೆಗೆ ಮತ್ತುಷ್ಟು ಆತಂಕ ಪಡುತ್ತಾಳೆ. ಅಷ್ಟೊತ್ತಿಗೆ ಸುಂದರ ಕಾರು ಅವಳ ಪಕ್ಕ ನಿಲ್ಲುತ್ತದೆ. ಮುಂದಿನವು ಕನಸಿನಂತೆ ಚಲಿಸಿಹೋಗುವ ಕ್ಷಣಗಳು. ಕ್ಷಣದ ಸಂಕೋಚ, ದಾಕ್ಷಿಣ್ಯಕ್ಕೆ ಸಿಕ್ಕಿ ಆಕೆ ಕಾರು ಹತ್ತಿ ಬಿಡುತ್ತಾಳೆ. ಪುಟ್ಟ ಪುಟ್ಟದಕ್ಕೂ ಅಚ್ಚರಿ ಪಡುತ್ತಾ, ಆ ಸುಂದರ ಶ್ರೀಮಂತ ಹುಡುಗನ ನಗೆಗೆ ಒಳಗೊಳಗೇ ಸುಖಿಸುತ್ತಾ, ಕಾರಿನೊಳಗಿನ ಜಗತ್ತಿಗೆ ಬೆರಗಾಗುತ್ತಾಳೆ.
ಹೀಗೆ ಸಣ್ಣ ಸಣ್ಣ ಘಟನೆಗಳನ್ನೂ ಸೂಕ್ಷ್ಮವಾಗಿ ನೂಲುತ್ತಾರೆ ಜಯಕಾಂತನ್. ಅವರ ಜತೆಗೆ ಪುಟ್ಟ ಹುಡುಗಿಯ ಮನಸ್ಸನ್ನೂ ಅದೇ ಅಮಾಯಕತೆಯಿಂದ ವಿವರಿಸುತ್ತಾರೆ. ಕಣ್ಣೆದುರಿನ ಜಗತ್ತಿನಿಂದ ಬೇರೆಯಾಗಿ ನಿಲ್ಲುತ್ತಾ, ನಮ್ಮ ಮನಸ್ಸನ್ನೂ ಅದಕ್ಕೊಪ್ಪಿಸುತ್ತಾ ಹೋಗುತ್ತದೆ ಈ ಕಥೆ.

ಜಯಕಾಂತನ್‌ ತಮಿಳಿನ ಜ್ಞಾನಪೀಠ ಪುರಸ್ಕೃತ ಸಾಹಿತಿ. ಅವರದು ಹೋರಾಟದ ಹಾದಿ. ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಸ್ವಭಾವ. ‘ ಓರ್ವ ಲೇಖಕನೆಂಬ ಆಧಾರದಿಂದ ನನ್ನ ಹಕ್ಕುಗಳನ್ನು ಮುಂದಿಟ್ಟುಕೊಂಡು ಹೋರಾಡಲು ನನಗೆ ನಾಚಿಕೆ ಎನಿಸುತ್ತದೆ. ಯಾಕೆಂದರೆ, ಈ ಅಧಿಕಾರ ಅಂತರಾತ್ಮದಲ್ಲಿ ತಪ್ಪು ಎಸಗಿದ ಭಾವವನ್ನುಂಟು ಮಾಡುತ್ತದೆ.’ ಅನ್ನುವ ಅವರ ಮಾತುಗಳು ನೇರತನವನ್ನು ತೋರಿಸುತ್ತವೆ.
ಅದಿರಲಿ, ಅವರ ‘ ಹೊಸ ಚಪ್ಪಲಿ ಕಚ್ಚುತ್ತದೆ’ ಅನ್ನುವ ಕಥೆ ಮೇಲೆ ಹೇಳಿದ ಕತೆಗಿಂತ ಭಿನ್ನ. ವಿಭಿನ್ನ ಯೋಚನಾ ಲಹರಿ, ಹೊಸ ಹೊಸ ಹೊಳಹುಗಳು ಇಲ್ಲಿ ಬಹಳಾ ತಟ್ಟುತ್ತವೆ.

‘ ಹೋದವಾರ ಹೊಸ ಚಪ್ಪಲಿ ಕೊಂಡುಕೊಂಡೆ. ಕಚ್ಚಿದೇರಿ...ಹೊಲಿಯುವಾಗ ಬೆರಳುಗಳು ಆಡುವುದರಿಂದ ಬೇಗ ವಾಸಿಯಾಗುವುದಿಲ್ಲ’ ಅಂತ ಹೇಳುತ್ತಿದ್ದವಳು, ತಲೆಎತ್ತಿ ಅವನ ಮುಖ ನೋಡಿ ನಕ್ಕಳು. ‘ ನೋಡಿದಿರೇನ್ರಿ, ಚಪ್ಪಲಿ ಕೂಡ, ಹೊಸದಾಗಿದ್ದರೆ ಕಚ್ಚುತ್ತೇರಿ. ಅದಕ್ಕಾಗಿ ಹಳೆಯ ಚಪ್ಪಲಿಗಳನ್ನು ಯಾರಾದ್ರೂ ಕೊಂಡುಕೊಳ್ಳುತ್ತಾರೇನ್ರಿ...?’ ಅವಳು ನಗುತ್ತಾ ಹೇಳಿದಳು. ಅವನು ಅವಳ ಕರಗಳನ್ನು ಹಿಡಿದುಕೊಂಡು ಅತ್ತುಬಿಟ್ಟ.
ಇಂತಹ ಹಲವು ಚಿಂತನೆಗಳು ಇಲ್ಲಿ ಕಾಣಸಿಗುತ್ತವೆ.
ಹೀಗೆ ಆ ರಾತ್ರಿ ಓದಿದ ಕಥೆಗಳು ಕೆಲವೊಮ್ಮೆ ಅಚಾನಕ್‌ ಆಗಿ ನೆನಪಾಗುತ್ತವೆ. ತುಸು ಯೋಚಿಸಿ ನಕ್ಕು ಸುಮ್ಮನಾಗುತ್ತೇನೆ.

No comments: