Wednesday, August 10, 2011
ಕರ್ಣ
ಕರ್ಣ...ಈಗ ನೋಡಿದರೆ ಅವನು ಗೆಳೆಯನಂತಿದ್ದ ಅನಿಸುತ್ತದೆ. ನನಗಿಂತ ನಾಕೈದು ವರ್ಷ ದೊಡ್ಡವನಿರಬಹುದು. ಅಜ್ಜನ ಮನೆಗೆ ಕೆಲಸಕ್ಕೆ ಬರುತ್ತಿದ್ದ ಸಂಕಮ್ಮನ ಅಕ್ಕನ ಮಗ. ಬರಿಗಾಲು, ಲಾಡಿಹಾಕಿದ ಗಟ್ಟಿ ಚಡ್ಡಿ, ನೀರುಕಲೆಯಿದ್ದರೂ ಸ್ವಚ್ಛವಾಗಿದ್ದ ಬಟ್ಟೆ, ಉರುಟುರುಟು ಮುಖ...ಆ ಮುಖ ಈಗ ಸ್ಪಷ್ಟವಾಗುವುದಿಲ್ಲ.
ಅವನಿಗೆ `ಕರ್ಣ' ಅನ್ನುವ ಆ ಚೆಂದದ ಹೆಸರನ್ನು ಯಾರಿಟ್ಟರೋ. ಸ್ವಭಾವದಲ್ಲೂ ಸ್ವಲ್ಪ ಮಹಾಭಾರತದ ಕರ್ಣನನ್ನೇ ಹೋಲುತ್ತಿದ್ದ. ಅಷ್ಟು ಸಣ್ಣ ಹುಡುಗ ಕೆಲಸದಲ್ಲೂ ಚೂಟಿ. ಆ ಮಾರಾಯ ಸುಮ್ಮನಿದ್ದದ್ದು ನಾನು ನೋಡಿಲ್ಲ. ಏನೂ ಕೆಲಸವಿಲ್ಲದಿದ್ದರೆ ಉಗುರು ಕಚ್ಚುವ ಅಭ್ಯಾಸ. ಕಚ್ಚಿ ಕಚ್ಚಿ ಅವನ ಉಗುರು ಉದ್ದವೇ ಬರುತ್ತಿರಲಿಲ್ಲ. ಅಜ್ಜನ ಮನೆಯ ಎದುರಿಗಿದ್ದ ಪೇರಳೆ ಮರ ಅವನ ಪ್ರೀತಿಯ ಸ್ಥಳ. ದಿನಕ್ಕೊಮ್ಮೆಯಾದರೂ ಆ ಮರ ಹತ್ತದಿದ್ದರೆ ಅವನಿಗೆ ನಿದ್ದೆ ಬರುತ್ತಿರಲಿಲ್ಲ. ಎಷ್ಟು ತುದಿಯಲ್ಲಿ ಪೇರಳೆ ಹಣ್ಣು ಬಿಟ್ಟಿದ್ದರೂ ಕ್ಯಾರೇ ಇಲ್ಲ. ಸಪೂರದ ಗೆಲ್ಲಿನ ಮೇಲೆ ನಿಂತು ಪೇರಳೆಗೆ ಕೈಚಾಚುವಾಗ, ಬಿದ್ದೇಬಿಡುತ್ತಾನೆ ಅನಿಸುತ್ತಿತ್ತು. ಆದರೆ ಅವ ಅಷ್ಟೇ ಚಾಲಾಕಿನಿಂದ ಪೇರಳೆ ಕೊಯ್ದು ಕಿಸೆಗೆ ಹಾಕುತ್ತಿದ್ದ. ಕರ್ಣನನ್ಯಾರಾದರೂ ಹುಡುಕುತ್ತಿದ್ದರೆ, `ಪೇರಳೆ ಮರದಲ್ಲಿರಬಹುದು' ಎಂಬ ಉತ್ತರ ಮೊದಲು ಬರುತ್ತಿತ್ತು.
ಒಮ್ಮೆ ಹೀಗಾಯ್ತು. ಕರ್ಣ ಆಗಷ್ಟೇ ಹಂಡೆಗೆಲ್ಲ ನೀರು ತುಂಬಿಸಿ, ಎಂದಿನಂತೆ ಪೇರಳೆ ಮರದ ಗೆಲ್ಲೊಂದರಲ್ಲಿ ಕೂತು ಪೇರಳೆ ಅಗಿಯುತ್ತಿದ್ದ. ಮೂಲೆಮನೆ ಇಸುಬು ತೋಟದ ಕೆಲಸ ಮುಗಿಸಿ ಪೇರಳೆ ಮರದಡಿಯಿಂದಾಗಿ ಮನೆಗೆ ಹೋಗುತ್ತಿದ್ದ. ಏನಕ್ಕೋ ಒಮ್ಮೆ ಮೇಲೆ ನೋಡಿ ಕರ್ಣನತ್ತ ನೋಡಿ ನಕ್ಕು, ಪಕ್ಕ ನೋಡಿದವನು, `ಹಾವು ಹಾವು ..' ಅಂತ ಜೋರಾಗಿ ಬೊಬ್ಬೆಹೊಡೆದ. ಕರ್ಣ ಅತ್ತ ನೋಡುತ್ತಾನೆ. ದಪ್ಪದ ಕಪ್ಪು ಹಾವೊಂದು ಪಕ್ಕದ ಗೆಲ್ಲಿಗೇ ಸುತ್ತಿಕೊಂಡಿದೆ. ಆ ಕ್ಷಣ ಹೆದರಿ ಏನು ಮಾಡುವುದೆಂದು ಗೊತ್ತಾಗದೇ ಕೈಕಾಲು ನಡುಗತೊಡಗಿತು. ಕಣ್ಣುಕತ್ತಲೆ ಬಂದಂತಾಗಿ ಕೆಳಗೆ ಬಿದ್ದೇಬಿಟ್ಟ. ಪುಣ್ಯಕ್ಕೆ ಕಾಲು ಗಂಟು ತರಚಿದ್ದು ಬಿಟ್ಟರೆ ದೊಡ್ಡಪೆಟ್ಟೇನೂ ಆಗಲಿಲ್ಲ.
ಇನ್ನಾದರೂ ಆ ಮರ ಹತ್ತಬೇಡ ಮಾರಾಯ ಅಂತ ಅಜ್ಜ ಬುದ್ದಿ ಹೇಳಿದ್ದೇ ಬಂತು. ಕಾಲು ಸರಿಯಾಗುವ ಮೊದಲೇ ಮತ್ತೆ ಮರ ಹತ್ತಿದ್ದ. `ಅವನು ಹುಟ್ಟಾ ಮಂಗ' ಅಂತ ಅಜ್ಜ ಗೊಣಗುತ್ತಿದ್ದರು.
ಕರ್ಣನ ಅಮ್ಮನ ಹೆಸರು ಕಮಲ ಅಂತ. ನಾನವಳನ್ನು ನೋಡಿದ ನೆನಪಿಲ್ಲ. ಅವಳು ಕರ್ಣನನ್ನು ನೋಡಲು ಬರುತ್ತಿದ್ದದ್ದು ಕಡಿಮೆ. ಅವಳಿದ್ದದ್ದು ಕನ್ಯಾನದಲ್ಲಿ. ಅಜ್ಜನ ಮನೆ ಮೇಲಿದ್ದ ಪದವನ್ನು ದಾಟಿದರೆ ಸಿಗುವುದು ಕಳೆಂಜಿಮಲೆ ಕಾಡು. ಒಂದು ಕಾಲಕ್ಕೆ ಹೆಬ್ಬುಲಿಯಿದ್ದ ಕಾಡದು. ಈಗ ಬೋಳುಗುಡ್ಡ. ಫಾರೆಸ್ಟಿವರು ನೆಟ್ಟ ಒಂದಿಷ್ಟು ಗಾಳಿಗಿಡ, ಅಕೇಶಿಯಾ ಗಿಡಗಳನ್ನು ಬಿಟ್ಟರೆ,ಒಂದಿಷ್ಟು ಸಣ್ಣಪುಟ್ಟ ಮರಗಳಿವೆಯಷ್ಟೇ. ಕಳಂಜಿಮಲೆ ಕಾಡನ್ನು ಹತ್ತಿ ಇಳಿದರೆ ಆ ಬದಿಗಿರುವುದು ಕನ್ಯಾನ. ಸಣ್ಣ ಊರು. ಕರ್ಣ ತಿಂಗಳಿಗೊಮ್ಮೆ ಅಲ್ಲಿಗೆ ಹೋಗಿ ಬರುತ್ತಿದ್ದ. ಒಮ್ಮೊಮ್ಮೆ ಪೆಪ್ಪರಮೆಂಟು ತಂದುಕೊಡುತ್ತಿದ್ದ. ಇಲ್ಲವಾದರೆ ನೆಲ್ಲಿಕಾಯಿ. ಪೆಪ್ಪರಮೆಂಟನ್ನು ಚಪ್ಪರಿಸಿ ತಿನ್ನುತ್ತಿದ್ದ ನನಗೆ ನೆಲ್ಲಿಕಾಯಿ ಅಷ್ಟಕ್ಕಷ್ಟೇ. ಕರ್ಣ ಕೊಟ್ಟ ನೆಲ್ಲಿಕಾಯನ್ನು ಅಮ್ಮ, ಚಿಕ್ಕಮ್ಮ ಇಷ್ಟಪಟ್ಟು ತಿನ್ನುತ್ತಿದ್ದರು.
ಇಲ್ಲಿ ಕರ್ಣ ಇದ್ದದ್ದು ಸಂಕಮ್ಮನ ಮನೆಯಲ್ಲಿ. ತಗ್ಗಿನಲ್ಲಿದ್ದ ಅಜ್ಜನ ಮನೆಯಿಂದ ಮೇಲೆ ಹತ್ತಿ ಬ್ಯಾರಿಗಳ ಗದ್ದೆ ದಾಟಿದರೆ ಸಿಗುವ ಮೊದಲ ಮನೆ ಮಮ್ಮದೆ ಬ್ಯಾರಿಯದ್ದು. ಎರಡನೇ ಮನೆ ಸಂಕಮ್ಮಂದು. ಮಣ್ಣಿನ ಮನೆ. ಸೆಗಣಿ ಬಳಿದು ಚೆನ್ನಾಗಿ ಗುಡಿಸಿದ್ದ ಅಂಗಳದಲ್ಲಿ ಅಲ್ಲಲ್ಲಿ ಕೋಳಿ ಹಿಕ್ಕೆ. ಚಪ್ಪಲಿ ಇಲ್ಲದೆ ಹೋದರೆ ಅಂಟಿನಂತೆ ಕಾಲಿಗಂಟಿಕೊಳ್ಳುತ್ತಿತ್ತು. ಪಕ್ಕಕ್ಕೆ ತೆಂಗಿನ ಸಸಿ. ಆಗಾಗ ಹೂಬಿಡುತ್ತಿದ್ದ ಅರಸಿನ ಬಣ್ಣದ ಅಬ್ಬಲ್ಲಿಗೆ ಗಿಡ, ಮದರಂಗಿ ಗಿಡ. ಒಂದೆರಡು ಬಾರಿ ಕರ್ಣ ಅದರ ಎಲೆಕೊಯಿದು ಕೊಟ್ಟಿದ್ದ.
ನಮಗೆಲ್ಲ ಆಗ ಮದರಂಗಿ ಹಾಕಿಕೊಳ್ಳುವ ಹುಚ್ಚು. ಹಳ್ಳಿಯಾದ ಕಾರಣಕ್ಕೋ ಏನೋ, ಆಗೆಲ್ಲ ಮೆಹಂದಿ ಕೋನ್ಗಳ ಬಳಕೆ ನಮಗೆ ತಿಳಿದಿರಲಿಲ್ಲ. ಮದುರಂಗಿ ಗಿಡದ ಎಲೆ ಕೊಯ್ದು, ಅದಕ್ಕೆ ಟೀ ಡಿಕಾಕ್ಷನ್, ಕೆಂಪಿರುವೆ ಮತ್ತೂ ಏನೇನೆಲ್ಲ ಹಾಕಿ ಕಲ್ಲಿನಲ್ಲಿ ಅರೆಯುತ್ತಿದ್ದರು. ನಾವೆಲ್ಲ ಅರೆಯುವಷ್ಟು ದೊಡ್ಡವರಲ್ಲದ ಕಾರಣ ನಮಗೆ ಶಾಲೆಯಲ್ಲಿ ಬೇರೆ ಮಕ್ಕಳ ಕೈ ನೋಡಿ ಆಸೆ ಬಿಡುವುದಷ್ಟೇ ಆಗಿತ್ತು. ಆದರೂ ಕರ್ಣ ಕೊಟ್ಟ ಮದುರಂಗಿ ಎಲೆಯನ್ನು ಕೊಟ್ಟಿಗೆಯ ಹಿಂದಿದ್ದ ಕಲ್ಲಿನಲ್ಲಿ ಜಜ್ಜಿ ಕೈಗೆ ಹಾಕಿಕೊಳ್ಳುತ್ತಿದ್ದೆ. ಹೌದೋ ಅಲ್ಲವೋ ಎಂಬಂತೆ ನಸು ಹಳದಿ ರಂಗು ಬರುತ್ತಿತ್ತು. ಅಜ್ಜನ ಮನೆಯೊಳಗೆ ಅದಕ್ಕೆ ಪ್ರವೇಶ ಇರಲಿಲ್ಲ. ಮದರಂಗಿಯನ್ನು ಅಜ್ಜ, ಅಜ್ಜಿ ಎಲ್ಲ ಅಸ್ಪ್ರಶ್ಯವಾಗಿ ಕಾಣುತ್ತಿದ್ದರು.
ರಂಜಾನ್ ಹಬ್ಬದ ದಿನ ಮದರಂಗಿ ಕೊಯಿದು ಕೊಡಲು ಜುಬ್ಬಿ, ಯಾಸ್ಮಿನ್ ಕರ್ಣನಿಗೆ ದುಂಬಾಲು ಬೀಳುತ್ತಿದ್ದರು. ಜೋರು ಮಳೆಬಂದು ನಿಂತಾಗ ತುಸು ಎತ್ತರಕ್ಕೆ ವಿಶಾಲವಾಗಿ ಹಬ್ಬಿದ ಮದುರಂಗಿ ಗಿಡದಡಿ ನಾವು ಒಂದಿಷ್ಟು ಮಕ್ಕಳು ಓಡಿ ಹೋಗಿ ನಿಂತುಬಿಡುತ್ತಿದ್ದೆವು. ಆಗಾಗ ಬೀಸುವ ಗಾಳಿಗೆ ಎಲೆಗಳಿಂದ ನೀರು ಮೈಮೇಲೆ ಬಿದ್ದಾಗ ಕಚಗುಳಿಯಿಟ್ಟಂತೆ ನಗುತ್ತಿದ್ದೆವು. ಈ ಗಿಡದ ಪಕ್ಕದಲ್ಲೇ ಕೊಟ್ಟಿಗೆ. ಅಲ್ಲಿ ಬಟ್ಟಿ ಮುಚ್ಚಿದಲ್ಲಿಂದಲೇ ಕ್ಕೊಕ್ಕೋ ಎನ್ನುತ್ತಿದ್ದ ಕೋಳಿ.
ಇನ್ನು ಮಣ್ಣಿನ ಮನೆಯೊಳಗೆ ಹೋದರೆ ಎದುರಲ್ಲೇ ಅಡಿಕೆ ಮರದ ತಟ್ಟಿಯ ಮೇಲೆ ಹರಡಿದ್ದ ಕೊರಗಜ್ಜನ ಕೋಮಣ (ಲಂಗೋಟಿ). ಕೊರಗಜ್ಜ ಕರ್ಣನ ಅಜ್ಜ. ಅಜ್ಜನ ಮನೆಯಲ್ಲಿ ಭೂತದ ಕೋಲ ನಡೆಯುವಾಗ ಅವನಿಗೆ ಮೈಮೇಲೆ ದರ್ಶನ ಬರುತ್ತಿತ್ತು. ಕೋಮಣದ ಪಕ್ಕದಲ್ಲೇ ಕರ್ಣನ ಹರಿದ ಬಟ್ಟೆಗಳು. ನೆಲದಲ್ಲಿ ಬೀಡಿಎಲೆ ತಟ್ಟೆ. ಸಂಕಮ್ಮ ಬಿಡುವಿದ್ದಾಗಲೆಲ್ಲ ಸ್ಟೀಲಿನ ಉಗುರನ್ನು ಬಿಸಿ ಮಾಡಿ ಉಗುರಿಗೆ ಅಂಟಿಸಿ, ರಪ ರಪನೆ ಬೀಡಿ ಕಟ್ಟುತ್ತಿದ್ದಳು.
ಮಣ್ಣಿನ ಮನೆಯಾದ ಕಾರಣ ಕರ್ಣನ ಮನೆಯೊಳಗೆ ಕಾಲಿಟ್ಟರೆ ತಂಪು ತಂಪು. ಒಳಗಿಂದ ಕಮಟು ಪರಿಮಳ. ನಾನು ಅವರ ಮನೆಗೆ ಹೋದಾಗ ಸಂಕಮ್ಮ ಅಲ್ಲಿದ್ದರೆ ಸಾಂತಾಣಿ ಕೊಡುತ್ತಿದ್ದಳು. ಆ ಗಟ್ಟಿ ಬೇಳೆಯನ್ನು ಅಗಿಯಲು ಪ್ರಯತ್ನಿಸಿ ಆಗದೇ ಕೊನೆಗೆ ಚಾಕೊಲೇಟ್ನಂತೆ ಚೀಪುತ್ತಿದ್ದೆ. ಉಪ್ಪು ಸೇರಿಸಿದ್ದ ಕಾರಣ ಒಳ್ಳೆ ರುಚಿ ಇರುತ್ತಿತ್ತು. ಆಮೇಲೆ ಕರ್ಣನ ಜತೆ ಚೆನ್ನಮಣೆ ಆಡುತ್ತಿದ್ದೆ.
ಕರ್ಣ ಶಾಲೆಗೆ ಹೋದದ್ದು ನನಗೆ ನೆನಪಿಲ್ಲ. ಆದರೆ ನನಗೆ ಸರಿಯಾಗಿ ಬರೆಯಲು ಕಲಿಸಿದ ಅಮ್ಮನ ನಂತರದ ಗುರು ಅವನೇ. ನಾನು `ಇ' ಉಲ್ಟಾ ಬರೆಯುತ್ತಿದ್ದೆ. ಅಮ್ಮ ಎಷ್ಟು ಸಲ ಹೇಳಿಕೊಟ್ಟರೂ ಸರಿಯಾಗುತ್ತಿರಲಿಲ್ಲ. ಕೈಗಂಟಿನ ಮೇಲೆ ಹೊಡೆದರೂ ನನ್ನ `ಇ' ಉಲ್ಟವೇ. ಅದ್ಹೇಗೋ ಕರ್ಣ ಅದನ್ನು ಸರಿ ಮಾಡಿಬಿಟ್ಟ. ನಂಗೆ ಕಾಪಿ ಬರೆಯಲು ಹೇಳಿಕೊಟ್ಟದ್ದೂ ಸಹ. ಅಜ್ಜನ ಮನೆಯ ಹೊರಜಗುಲಿಯಲ್ಲಿ ಕುಳಿತು ಕಾಪಿ ಬರೆಸುತ್ತಿದ್ದ. ಕೆಲವೊಮ್ಮೆ ಅವನೇ ಬರೆದುಕೊಡುತ್ತಿದ್ದ. ಆಮೇಲೆ ನಾನು ಕಾಪಿ ಬರೆದುಕೊಡು ಅಂತ ಆಗಾಗ ಅವನಲ್ಲಿ ಗೋಗರೆಯುತ್ತಿದ್ದೆ. ಕದ್ದುಮುಚ್ಚಿ ಬರೆದುಕೊಡುತ್ತಿದ್ದ. ಒಂದು ಸಲ ಅಮ್ಮನಿಗೆ ಗೊತ್ತಾಗಿ ಅವರು ಬೈದ ಮೇಲಿಂದ ಏನು ಮಾಡಿದರೂ ಬರೆದುಕೊಡಲಿಲ್ಲ.
...`ನೋಡು, ಆ ಪದವಿನ ಈ ತುದಿಯಲ್ಲಿ ಗುಳಿಗ ಭೂತ ಉಂಟು. ನಡು ರಾತ್ರಿ ಗುಳಿಗನ ಸಂಚಾರ. ಆ ಹೊತ್ತಲ್ಲಿ ಅಲ್ಲಿಯಾಗಿ ಬಂದರೆ ಗುಳಿಗನ ಸೂಟೆ ಕಾಣ್ತದಂತೆ.' ಒಂದು ಸಂಜೆ ಹೊರಜಗುಲಿಯಲ್ಲಿ ಕೂತು ಕರ್ಣ ಗುಳಿಗನ ಕತೆ ಹೇಳುತ್ತಿದ್ದ.
`ಆ ಭೂತ ಯಾರಿಗೂ ಹೆದರುವುದಿಲ್ಲ. ಮೊನ್ನೆ ರಾತ್ರಿ ಅಜ್ಜ ಕುಡ್ತಮೊಗೇರಿಂದ ಬರುವಾಗ ಲೇಟಾಗಿತ್ತು. ಕೈಯಲ್ಲಿ ಟಾಚರ್್ ಕೂಡಾ ಇರ್ಲಿಲ್ಲ. ಪದವಿನ ಹತ್ತಿರ ಬರುವಾಗ ಗುಡ್ಡದ ಕಡೆಯಿಂದ ಕೆಂಪು ಲೈಟಿನ ಹಾಗೆ ಎಂತದೋ ಕಂಡಿತಂತೆ. ಯಾವುದೋ ಜೀಪು ಆಗಿರಬಹುದು ಅಂತ ಅಜ್ಜ ಸುಮ್ಮನೇ ಹೋದರಂತೆ. ಯಾಕೋ ಡೌಟು ಬಂದು ಸ್ವಲ್ಪ ಮುಂದೆ ಹೋಗಿ ನೋಡಿದರೆ ಯಾರೋ ಎರಡೂ ಕೈಯಲ್ಲಿ ಕೆಂಪು ಲೈಟು ತಿರುಗಿಸಿದ್ದು ಕಂಡಿತಂತೆ. ಆಗ ಅಜ್ಜನಿಗೆ ಫಕ್ಕ ಇದು ಗುಳಿಗ ಸೂಟೆ ಬೀಸುವುದು ಅಂತ ಗೊತ್ತಾಯ್ತಂತೆ.'
`ಮತ್ತೆಂತಾಯ್ತು? ' ಕುತೂಹಲ ಬೆರೆತ ನನಗೆ ಆಗಲೇ ಗಡಗಡ ಶುರುವಾಗಿತ್ತು.
`ಮತ್ತೆಂತಾಗುವುದು ನನ್ನಜ್ಜ ಎದ್ದುಬಿದ್ದು ಓಡಿ ಬಂದರಂತೆ. ಮತ್ತೆರಡು ದಿನ ಅಜ್ಜನಿಗೆ ಜೋರು ಜ್ವರ. ಅಜ್ಜಿ ಹರಕೆ ಕಟ್ಟಿಕೊಂಡ ಮೇಲೇ ಜ್ವರ ನಿಂತದ್ದು.' ಅಂದು ನಿಲ್ಲಿಸಿದ.
`ಏ ಕರ್ಣ ಈ ಭೂತ ಜೋರಾ, ಪಾಪವಾ?'
`ಭೂತ ಪಾಪ ಇರುವುದುಂಟಾ? ಜೋರು ಅಂದರೆ ಜೋರು. ನೀನೆಲ್ಲಾದರೂ ಸೂಟೆ ನೋಡಿದರೆ, ಚಡ್ಡಿಯಲ್ಲೇ ಮೂತ್ರ, ಹೆ ಹೆ!'
`ಭೂತ ನಮ್ಗೆನಾದ್ರೂ ಮಾಡ್ತದಾ ಕರ್ಣ?'
...ಅಷ್ಟರಲ್ಲಿ ಅಜ್ಜ ಕರ್ಣನನ್ನು ಕರೆದದ್ದು ಕೇಳಿಸಿತು. ಒಂದೇ ಓಟದಲ್ಲಿ ಅಂಗಳದ ತುದಿಗೆ ಹೋಗಿ ವೀಳ್ಯದೆಲೆ ಕೊಯ್ಯತೊಡಗಿದ.
ಆದಿನ ರಾತ್ರಿ ಟಾಯ್ಲೆಟ್ಟಿಂದ ಅಡಿಗೆ ಮನೆಯವರೆಗೂ ಅಮ್ಮನ ಜತೆಗೇ ಓಡಾಡುತ್ತಿದ್ದೆ. ನಿದ್ದೆಯಲ್ಲೂ ಕಿರಿಚುತ್ತಿದ್ದೆನಂತೆ. ಆಮೇಲೆ ನಾನೆಷ್ಟು ಸಲ ಗುಳಿಗನ ಕಥೆ ಕೇಳಿದರೂ ಕರ್ಣ ಏನೇನೋ ಹೇಳಿ ವಿಷಯ ಹಾರಿಸುತ್ತಿದ್ದ. `ಮಗುವಿಗೆ ಏನೆಲ್ಲ ಹೇಳಿ ಹೆದರಿಸ್ತೀಯಾ' ಅಂತ ಅಜ್ಜ ಅವನನ್ನು ಕರೆದು ಬಯ್ದಿದ್ದರಂತೆ. ನನಗೆ ಆಮೇಲೆ ಸಂಕಮ್ಮ ಹೇಳಿದಾಗಲೇ ಈ ವಿಷಯ ಗೊತ್ತಾದದ್ದು.
ನಾವು ಕೆವರ್ಾಶೆಗೆ ಮೊದಲ ಬಾರಿ ಹೋದಾಗ ಅಲ್ಲಿಗೂ ಕರ್ಣ ಬಂದಿದ್ದ. ಒಂದೆರಡು ದಿನ ಇದ್ದು ಹೋಗಿದ್ದ. ನಾನಾಗ ನಾಲ್ಕನೇ ಕ್ಲಾಸ್. ಅಲ್ಲಿ ನಾವಿಬ್ಬರೂ ಹೊಳೆಗೆ ಈಜಾಡಲು ಹೋದರೆ ಅಮ್ಮ ಬಂದು ಬೈದ ಮೇಲೇ ಮನೆಗೆ ವಾಪಾಸಾಗುತ್ತಿದ್ದದ್ದು. ಕರ್ಣ ಈಜುತ್ತಿದ್ದ. ನಾನೂ ಅವನ ಹಾಗೇ ಈಜಲು ಪ್ರಯತ್ನಿಸಿ ಉಸಿರುಗಟ್ಟಿ ನೀರು ಕುಡಿದಿದ್ದೆ.
...ಈಗ ಕರ್ಣ ಎಲ್ಲಿದ್ದಾನೆ ಹೇಗಿದ್ದಾನೆ ಗೊತ್ತಿಲ್ಲ. ತುಂಬ ವರ್ಷದ ಹಿಂದೆಯೇ ಸಂಕಮ್ಮ ಮತ್ತು ಕರ್ಣ ಕನ್ಯಾನ ಹತ್ತಿರ ಎಲ್ಲೋ ಸಂಬಂಧಿಕರ ಮನೆಗೆ ಹೋಗಿದ್ದರು. ಮತ್ತೆ ವಾಪಾಸು ಬರಲಿಲ್ಲ. ಆಮೇಲೆ ಅವರ ಸುದ್ದಿಯೂ ಇರಲಿಲ್ಲ.
ಮೊನ್ನೆ ಮಳೆ ನೋಡಬೇಕೆಂದು ಅಜ್ಜನ ಮನೆಗೆ ಹೋಗಿದ್ದೆ. ಕಾರ್ಕಳದಿಂದಲೇ ಮಳೆ, ಮಳೆ..ಬಸ್ಸಿನಲ್ಲಿ ಸಿಕ್ಕಾಬಟ್ಟೆ ರಶ್ಶು. ವಿಟ್ಲದಲ್ಲಿ ಶಾಲೆ ಮಕ್ಕಳ ಗೌಜಿ. ಅವರ ಒದ್ದೆ ಯುನಿಫಾಮರ್್, ಚಂಡಿ ಕೊಡೆ ಮೈಮೇಲೆಲ್ಲ ಬಿದ್ದು ಕಿರಿಕಿರಿಯಾಗ್ತಿತ್ತು. ವಿಟ್ಲದಿಂದ ಸ್ವಲ್ಪ ಮುಂದೆ ಹಳ್ಳಿ ಹೆಣ್ಣುಮಗಳು ಪುಟಾಣಿ ಹುಡುಗಿಯೊಂದಿಗೆ ಬಸ್ಸು ಹತ್ತಿದಳು. ಆ ರಶ್ಶಿನಲ್ಲಿ ಬ್ರೇಕ್ ಹಾಕಿದಾಗ ಪುಟ್ಟ ಹುಡುಗಿ ಕೆಳಗೆ ಬೀಳದ್ದು ಪುಣ್ಯ.
ನನಗೆ ಸೀಟು ಸಿಕ್ಕಿದ ಕಾರಣ ಹುಡುಗಿಯನ್ನು ಪಕ್ಕಕ್ಕೆ ಕರೆದು ಹತ್ತಿರ ಕೂರಿಸಿಕೊಂಡೆ. ಯಾಕೋ ಪರಿಚಿತ ಮುಖ ಅನಿಸತೊಡಗಿತು. ನಾನು ನಕ್ಕಾಗ ಅದೂ ನಕ್ಕಿತು. ಏನು ಹೆಸರು ಅಂತ ಕೇಳಿದೆ. `ಪ್ರಿಯಾ' ಅಂದಿತು. ನನ್ನ ಹೆಸರೇ ಇಟ್ಟುಕೊಂಡಿದೆಯಲ್ಲಾ ಹುಡುಗಿ ಅಂದುಕೊಂಡೆ. ಪಕ್ಕ ನಿಂತಿದ್ದ ಅದರಮ್ಮನ ಹತ್ತಿರ `ಯಾವೂರು?' ಅಂತ ಕೇಳಿದೆ. `ಕನ್ಯಾನ' ಅಂದಳು. ಅದ್ಯಾಕೋ, ಇದ್ದಕ್ಕಿದ್ದ ಹಾಗೆ, `ಅಲ್ಲಿ ಕರ್ಣ ಅಂತ ಯಾರಾದರೂ ಗೊತ್ತಾ' ಅಂತ ಕೇಳಿದೆ. ಅವಳು ನಕ್ಕು `ಇವಳಪ್ಪನ ಹೆಸರೂ ಅದೇ' ಅಂದಳು !
Tuesday, August 2, 2011
ಮತ್ತೆ ಬರೆಯುತ್ತೇನೆ
ಒಂದು ಅರೆ ಮಂಪರಿನ ನಿದ್ದೆ. ಈಗ ಏಳಬೇಕೆನಿಸಿದೆ. ಮಲಗಿಕೊಂಡೇ ಕಣ್ಬಿಟ್ಟು ನೋಡುತ್ತಿದ್ದೇನೆ. ಅಯೋಮಯ ಜಗತ್ತು.
ಮೈಕೊಡವಿಕೊಂಡು ಏಳುವುದಷ್ಟೇ ನನ್ನ ಮುಂದಿರುವ ಗುರಿ.
.........ಮತ್ತೆ ಹೂ ಪೋಣಿಸಲು ಶುರುವಿಟ್ಟಿದ್ದೇನೆ.
ಮೈಕೊಡವಿಕೊಂಡು ಏಳುವುದಷ್ಟೇ ನನ್ನ ಮುಂದಿರುವ ಗುರಿ.
.........ಮತ್ತೆ ಹೂ ಪೋಣಿಸಲು ಶುರುವಿಟ್ಟಿದ್ದೇನೆ.
Subscribe to:
Posts (Atom)