Thursday, June 25, 2009

ಅಪ್ಪನ ಕೈ ಹಿಡಿದು..


‘ಈ ಕಾಡು ಯಾರದ್ದು?’

ಸರ್ಕಾರದ್ದು.

ಸರ್ಕಾರ ಅಂದ್ರೆ ಯಾರಪ್ಪ? ಅವ್ರು ತುಂಬಾ ಶ್ರೀಮಂತರಾ?

ಸರ್ಕಾರ ಅಂದ್ರೆ ಜನ ಅಲ್ಲ ಪುಟ್ಟಾ, ನಾವೆಲ್ಲ ಸೇರಿ ಸರ್ಕಾರ ಮಾಡುವುದು.

ಹೌದಾ? ಅದು ಹೇಗಿರ್‍ತದೆ? ತುಂಬಾ ದೊಡ್ಡದಾ?

ಊಹೂಂ, ಅದು ವಸ್ತು ಅಲ್ಲ, ಅದನ್ನು ನಿಂಗೆ ಹೇಗೆ ಹೇಳೂದಪ್ಪಾ, ನಾವೆಲ್ಲ ಸೇರಿ ಮಾಡಿದ ಒಂದು ವ್ಯವಸ್ಥೆ!
ಹಂಗಂದ್ರೆ?

ನೀನು ದೊಡ್ಡವಳಾದ ಮೇಲೆ ಅರ್ಥ ಆಗ್ತದೆ.

ನಾನು ಯಾವಾಗ ದೊಡ್ಡವಳಾಗುವುದು?

ಇನ್ನೊಂದು ಏಳೆಂಟು ವರ್ಷ ಆದ್ಮೇಲೆ.

ಆಗ ನೀನೆಷ್ಟು ದೊಡ್ಡ ಆಗಿರ್‍ತೀಯಾ ಅಪ್ಪಾ?

ನಾನಿನ್ನು ದೊಡ್ಡ ಆಗುವುದಿಲ್ಲ. ಮುದುಕ ಆಗುವುದು..ಹ ಹ್ಹ..ಹ್ಹಾ..

ಅಜ್ಜನ ಮನೆ ದಾಟಿದ ಕೂಡ್ಲೇ ಶುರುವಾಗುತ್ತಿದ್ದ ನನ್ನ ಪ್ರಶ್ನೆಗಳು ಮನೆ ಬಂದರೂ ಮುಗಿಯುತ್ತಿರಲಿಲ್ಲ.

....ನಾನು ಆಗ ಅಜ್ಜನ ಮನೆಯಲ್ಲಿ ಶಾಲೆಗೆ ಹೋಗ್ತಿದ್ದೆ. ಪ್ರತೀ ಶನಿವಾರ ಅಪ್ಪ ಬಂದು ನಮ್ಮ ಮನೆಗೆ ಕರಕೊಂಡು ಹೋಗ್ತಿದ್ರು. ಮಧ್ಯಾಹ್ನ ಶಾಲೆ ಬಿಟ್ಟು ಓಡುತ್ತಾ ಬರುವಾಗ ಅಜ್ಜನ ಮನೆಯಲ್ಲಿ ಅಪ್ಪ ಕಾಯುತ್ತಾ ಕೂತಿರುತ್ತಿದ್ದರು. ನಾನು ಕೈ ಕಾಲೂ ತೊಳೆಯದೇ ಅತ್ತೆ ಕೈಯಲ್ಲಿ ಬೈಸಿಕೊಳ್ಳುತ್ತಾ ಊಟ ಮಾಡಿ ಅಪ್ಪನ ಕೈ ಹಿಡಿದು ಮನೆಗೆ ಹೊರಡುತ್ತಿದ್ದೆ.

ಅಜ್ಜನ ಮನೆಯ ಹಿಂದಿನ ಕೊಟ್ಟಿಗೆಯನ್ನು ದಾಟಿ ಐತಪ್ಪನ ಮನೆ ಪಕ್ಕದ ಓಣಿ ಹತ್ತಿ, ನಡೆಯುತ್ತಿದ್ದೆವು. ಆಗೆಲ್ಲ, ತಿರು ತಿರುಗಿ ಮೂರು ಉಪ್ಪರಿಗೆಯ ದೊಡ್ಡ ಬೂತ ಬಂಗಲೆ ಹಾಗಿದ್ದ ಅಜ್ಜನ ಮನೆಯನ್ನು ನೋಡುತ್ತಾ ಹೋಗ್ತಾ ಇದ್ದೆ.

ಆ ಓಣಿ ದಾಟಿ ಸಾಗಿದ್ರೆ ಮುಂದೆ ದೊಡ್ಡ ಪದವು (ಕಾಡಿನ ಮಧ್ಯದ ಬಯಲು ಭೂಮಿ), ಅದನ್ನು ದಾಟಿದ ಕೂಡ್ಲೆ ಕಳಂಜಿಮಲೆ ಸಿಗುತ್ತಿತ್ತು. ಅಲ್ಲೆಲ್ಲ ಆಗ್ಲೇ ಕಾಡು ಕಡಿದು ಅದ್ರ ಬದಲಿಗೆ ಗಾಳಿ ಗಿಡಗಳನ್ನ ನೆಡುತ್ತಿದ್ದರು. ಅದು ಸರ್ಕಾರಿ ಭೂಮಿ. ನಂಗೆ ಆಗ ಪ್ರತಿಯೊಂದರ ಬಗೆಗೂ ಕುತೂಹಲ... ಪದೇ ಪದೇ ಪ್ರಶ್ನೆ ಕೇಳುತ್ತಿದ್ದೆ.

ಅಪ್ಪ ನನ್ನ ಬಾಲಿಶ ಪ್ರಶ್ನೆಗಳನ್ನ ಕೇಳಿ ಬೈಯುತ್ತಿರಲಿಲ್ಲ. ಕಾಡು ದಾರಿಯಲ್ಲಿ ನಡೆದೂ ನಡೆದೂ ಸುಸ್ತಾದಾಗ ಎತ್ತಿಕೊಂಡು ಹೋಗ್ತಿದ್ರು. ಅಲ್ಲಲ್ಲಿ ಹರಿಯುವ ನೀರ ಝರಿಯ ಹತ್ತಿರ ಕರೆದುಕೊಂಡು ಹೋಗಿ ನೀರು ಕುಡಿಸ್ತಿದ್ರು. ಮೂರು ಗಂಟೆಗೆ ಅಜ್ಜನ ಮನೆಯಿಂದ ಹೊರಟ್ರೆ ನಾಲ್ಕು ಗಂಟೆಗೆ ಕನ್ಯಾನ ಬಸ್ ಸ್ಟಾಂಡ್‌ನಲ್ಲಿರ್‍ತಿದ್ದೆವು.

ನಾಲ್ಕೂ ಹತ್ತಕ್ಕೆ ಬಾಯಾರು (ಕಾಸರಗೋಡು ಸಮೀಪದ ಪಟ್ಟಣ) ಮಾರ್ಗವಾಗಿ ಹೋಗುವ ಗವರ್ಮೆಂಟ್ ಬಸ್ ಹತ್ತುತ್ತಿದ್ದೆವು. ಬಸ್‌ಗೆ ಹತ್ತಿದ ಕೂಡ್ಲೇ ಅದೇನಾಗುತ್ತೋ, ಕಲಿತ ಮಗ್ಗಿ, ಪದ್ಯವನ್ನು ಜೋರಾಗಿ ಹೇಳ್ತಾ ಹೋಗ್ತಿದ್ದೆ. ಆಗ ಬಸ್‌ನಲ್ಲಿರುವವರೆಲ್ಲ ಹಿಂತಿರುಗಿ ನೋಡಿದಾಗ ಅಪ್ಪನಿಗೆ ಮುಜುಗರ. ನನ್ನ ಉತ್ಸಾಹ ಮತ್ತಷ್ಟು ಹೆಚ್ಚಾಗ್ತಾ ಇತ್ತು. ಕೊನೆಗೆ ಜಾಣೆ ಅಂತ ಬಸ್‌ನಲ್ಲಿದ್ದ ಒಂದಿಬ್ಬರು ಪ್ರಯಾಣಿಕರು ಬೆನ್ನು ತಟ್ಟಿದ್ರೆ ಭಾರೀ ಖುಷಿ.

ನಾವು ಕಾಯರ್‌ಕಟ್ಟೆಯಲ್ಲಿ ಇಳಿದಾಗ ಕತ್ತಲು ಜಾಸ್ತಿಯಾಗುತ್ತಿತ್ತು. ಮಾರಪ್ಪ, ಗ್ಯಾಸ್‌ಲೈಟ್ ಬೆಳಕಿನಲ್ಲಿ ಬಟ್ಟೆ ಹೊಲಿಯುತ್ತಾ ಅಪ್ಪನಿಗೆ ಅಡ್ಡ ಸಲಾಂ ಹಾಕುತ್ತಿದ್ದ. ಗೂಡಂಗಡಿಗಳಲ್ಲಿ ನೇಂದ್ರ ಬಾಳೆಹಣ್ಣು, ಬೋಟಿ ಪ್ಯಾಕೆಟ್ ನೇತಾಡ್ತಾ ಇರ್‍ತಿತ್ತು. ಬಳೀ ಮುಂಡುಟ್ಟು, ತಲೆಗೂ ಅದೇ ಬಣ್ಣದ ಮುಂಡಾಸು ಕಟ್ಟಿ ಆಗಾಗ ಮುಂಡನ್ನ ಎತ್ತಿ ಹಿಡಿಯುತ್ತಾ ನಡೆಯುವ ಮುಸ್ಲಿಮ ಗಂಡಸರು ನೇರ ಬಾಳೇ ಹಣ್ಣಿಗೇ ಕೈ ಹಾಕಿ ನಾಜೂಕಿಂದ ಸಿಪ್ಪೆ ಜಾರಿಸಿ ತಿನ್ನುತ್ತಿದ್ದರೆ ನಂಗೂ ಆಸೆ. ಅಪ್ಪನತ್ರ ಹೇಳಿದ್ರೆ, ಮನೆಯಲ್ಲಿದೆ, ಅಲ್ಲೇ ತಿನ್ನುವೆಯಂತೆ ಅಂತಿದ್ರು. ಆದ್ರೆ ಮನೆಯಲ್ಲಿ ಎಷ್ಟು ಬಾಳೆ ಹಣ್ಣು ತಿಂದ್ರೂ ನಂಗೆ ಅಂಗಡೀ ಬದಿ ನೇತಾಡ್ತಾ ಇರೋ ಆ ಬಾಳೇ ಹಣ್ಣಿನಷ್ಟು ರುಚಿ ಅನ್ನಿಸ್ತಿರಲಿಲ್ಲ. ಕೆಲ ಕ್ಷಣ ಮೌನವಾಗಿ ಅಪ್ಪನನ್ನ ಹಿಂಬಾಲಿಸುತ್ತಿದ್ದೆ. ಕಾಯರ್ ಕಟ್ಟೆ ಪೇಟೆ ದಾಟಿದ್ರೆ, ಕಾಯರ್‌ಕಟ್ಟೆ ಪದವು. ನಮ್ಮ ಮನೆಗೆ ಅದನ್ನಿಳಿದು ಹೋಗಬೇಕು. ಕತ್ತಲಲ್ಲಿ ಅಪ್ಪನ ಕೈ ಹಿಡಿದು ಜಾರೆ ಕಲ್ಲಿನಲ್ಲಿ ಜಾರುತ್ತಾ ನಡೆಯುತ್ತಿದ್ದೆ.

ಐದಾರು ಫರ್ಲಾಗ್ ಇಳಿಯುತ್ತಾ ಜಾರುತ್ತಾ ಹೋದಾಗ ನಮ್ಮ ಗೇರುಗುಡ್ಡೆ ಸಿಗುತ್ತಿತ್ತು. ಆ ಗುಡ್ಡೆ ಕೆಳಗೇ ನಮ್ಮ ಮನೆ.

ಗುಡ್ಡೆ ದಾರಿಯಲ್ಲಿ ಬರುತ್ತಿರುವಾಗ ದೂರದ ಟವರ್‌ನಲ್ಲಿ ಮಿಣಿ ಮಿಣಿ ಕೆಂಪು ಲೈಟ್ ಕಾಣ್ತಾ ಇತ್ತು. ಅದು ಕಾಸರಗೋಡಿನ ರೇಡಿಯೋ ಸ್ಟೇಶನ್ ಅಂತ ಅಪ್ಪ ಹಿಂದೆಯೇ ಹೇಳಿದ್ರು. ಆ ಟವರ್‌ನಿಂದ ದನಿಯನ್ನ ಸ್ವರವನ್ನ ಗಾಳಿಯಲ್ಲಿ ತೇಲಿ ಬಿಟ್ಟರೆ ಅದು ನಮ್ಮ ರೇಡಿಯೋದೊಳಗೆ ಸೇರಿಕೊಂಡು ನಮಗೆ ಕೇಳ್ತಿತ್ತು. ಅದನ್ನು ಹತ್ತಿರದಿಂದ ಕಂಡೇ ಬರಬೇಕು ಅನ್ನುವ ಹುಚ್ಚು ಕುತೂಹಲ. ಅದನ್ನ ತಡೆದುಕೊಂಡು ಅಪ್ಪನ ಕೈ ಹಿಡಿದು ನಡೆಯುತ್ತಿದ್ದೆ.

ಇನ್ನೇನು ಸ್ವಲ್ಪ ಮುಂದೆ ಕಲ್ಲಿನ ಮೆಟ್ಟಿಲು ಅದನ್ನು ಇಳಿದು ಹೋದ್ರೆ ಮನೆ. ನಾನು ಅಪ್ಪ ಮನೆಯೊಳಗೆ ಹೊಕ್ಕರೆ ಅಲ್ಲಿ ಮೌನ. ನಾನು ಜೋರಾಗಿ ಅಮ್ಮಾ ಅಂತ ಕರೆದ್ರೆ, ಶೂ...ಮಾತಾಡ್ಬೇಡ ಅಂತ ಸನ್ನೆ ಮಾಡ್ತಾ ಅಮ್ಮ ಬರ್‍ತಿದ್ಲು. ತಮ್ಮ ಮಲಗಿದಾನೆ ಅಂತ ಕಿವಿಯಲ್ಲಿ ಗುಟ್ಟಾಗಿ ಹೇಳಿ ಒಳಗೆ ಕರೆದುಕೊಂಡು ಹೋಗ್ತಿದ್ಲು.

ನನಗೀಗ ಇಪ್ಪತ್ತನಾಲ್ಕು ವರ್ಷ. ಈ ಚಿತ್ರ ನಂಗೆ ಐದಾರು ವರ್ಷ ಆಗಿದ್ದಾಗಿನದು. ಅಂದು ಅಪ್ಪ ಹೇಳಿದ ಹಾಗೆ ನಾನೀಗ ದೊಡ್ಡವಳಾಗಿದ್ದೇನೆ. ಅಪ್ಪ ಮಧ್ಯವಯಸ್ಸಿಗೆ ಬಂದಿದ್ದಾರೆ. ಅಪ್ಪ ನನ್ನನ್ನೀಗ ಪುಟ್ಟಾ ಅಂತ ಅಷ್ಟು ಪ್ರೀತಿಯಿಂದ ಕರೆಯಲ್ಲ. ಹಿಂದಿನಂತೆ ಸಿಕ್ಕಾಬಟ್ಟೆ ಪ್ರಶ್ನೆ ಕೇಳಿ ಅಪ್ಪನ ತಲೆ ತಿನ್ನೋದಿಲ್ಲ. ಹಿಂದಿನ ಅಪ್ಪಂಗೂ ಇಂದಿನ ಅಪ್ಪಂಗೂ ತುಂಬಾ ಡಿಫರೆನ್ಸ್ ಇದೆ ಅಂತ ಆಗಾಗ ಅನ್ಸತ್ತೆ. ಅಫ್‌ಕೋರ್ಸ್ ನಾನೂ ಅಂದಿನಂತಿಲ್ಲ.

ಆದ್ರೆ ಆಗಾಗ, ಹಾಗೇ ಅಪ್ಪನ ಕೈ ಹಿಡಿದು ಕಳಂಜಿಮಲೆ ಕಾಡು ಹಾದಿಯಲ್ಲಿ ನಡೆಯಬೇಕನಿಸತ್ತೆ. ಆಗ ನಾನು ದೊಡ್ಡೋಳಾಗೋ ಕನಸು...

...ಈಗ ಮತ್ತೆ...