Thursday, June 25, 2009
ಅಪ್ಪನ ಕೈ ಹಿಡಿದು..
‘ಈ ಕಾಡು ಯಾರದ್ದು?’
ಸರ್ಕಾರದ್ದು.
ಸರ್ಕಾರ ಅಂದ್ರೆ ಯಾರಪ್ಪ? ಅವ್ರು ತುಂಬಾ ಶ್ರೀಮಂತರಾ?
ಸರ್ಕಾರ ಅಂದ್ರೆ ಜನ ಅಲ್ಲ ಪುಟ್ಟಾ, ನಾವೆಲ್ಲ ಸೇರಿ ಸರ್ಕಾರ ಮಾಡುವುದು.
ಹೌದಾ? ಅದು ಹೇಗಿರ್‍ತದೆ? ತುಂಬಾ ದೊಡ್ಡದಾ?
ಊಹೂಂ, ಅದು ವಸ್ತು ಅಲ್ಲ, ಅದನ್ನು ನಿಂಗೆ ಹೇಗೆ ಹೇಳೂದಪ್ಪಾ, ನಾವೆಲ್ಲ ಸೇರಿ ಮಾಡಿದ ಒಂದು ವ್ಯವಸ್ಥೆ!
ಹಂಗಂದ್ರೆ?
ನೀನು ದೊಡ್ಡವಳಾದ ಮೇಲೆ ಅರ್ಥ ಆಗ್ತದೆ.
ನಾನು ಯಾವಾಗ ದೊಡ್ಡವಳಾಗುವುದು?
ಇನ್ನೊಂದು ಏಳೆಂಟು ವರ್ಷ ಆದ್ಮೇಲೆ.
ಆಗ ನೀನೆಷ್ಟು ದೊಡ್ಡ ಆಗಿರ್‍ತೀಯಾ ಅಪ್ಪಾ?
ನಾನಿನ್ನು ದೊಡ್ಡ ಆಗುವುದಿಲ್ಲ. ಮುದುಕ ಆಗುವುದು..ಹ ಹ್ಹ..ಹ್ಹಾ..
ಅಜ್ಜನ ಮನೆ ದಾಟಿದ ಕೂಡ್ಲೇ ಶುರುವಾಗುತ್ತಿದ್ದ ನನ್ನ ಪ್ರಶ್ನೆಗಳು ಮನೆ ಬಂದರೂ ಮುಗಿಯುತ್ತಿರಲಿಲ್ಲ.
....ನಾನು ಆಗ ಅಜ್ಜನ ಮನೆಯಲ್ಲಿ ಶಾಲೆಗೆ ಹೋಗ್ತಿದ್ದೆ. ಪ್ರತೀ ಶನಿವಾರ ಅಪ್ಪ ಬಂದು ನಮ್ಮ ಮನೆಗೆ ಕರಕೊಂಡು ಹೋಗ್ತಿದ್ರು. ಮಧ್ಯಾಹ್ನ ಶಾಲೆ ಬಿಟ್ಟು ಓಡುತ್ತಾ ಬರುವಾಗ ಅಜ್ಜನ ಮನೆಯಲ್ಲಿ ಅಪ್ಪ ಕಾಯುತ್ತಾ ಕೂತಿರುತ್ತಿದ್ದರು. ನಾನು ಕೈ ಕಾಲೂ ತೊಳೆಯದೇ ಅತ್ತೆ ಕೈಯಲ್ಲಿ ಬೈಸಿಕೊಳ್ಳುತ್ತಾ ಊಟ ಮಾಡಿ ಅಪ್ಪನ ಕೈ ಹಿಡಿದು ಮನೆಗೆ ಹೊರಡುತ್ತಿದ್ದೆ.
ಅಜ್ಜನ ಮನೆಯ ಹಿಂದಿನ ಕೊಟ್ಟಿಗೆಯನ್ನು ದಾಟಿ ಐತಪ್ಪನ ಮನೆ ಪಕ್ಕದ ಓಣಿ ಹತ್ತಿ, ನಡೆಯುತ್ತಿದ್ದೆವು. ಆಗೆಲ್ಲ, ತಿರು ತಿರುಗಿ ಮೂರು ಉಪ್ಪರಿಗೆಯ ದೊಡ್ಡ ಬೂತ ಬಂಗಲೆ ಹಾಗಿದ್ದ ಅಜ್ಜನ ಮನೆಯನ್ನು ನೋಡುತ್ತಾ ಹೋಗ್ತಾ ಇದ್ದೆ.
ಆ ಓಣಿ ದಾಟಿ ಸಾಗಿದ್ರೆ ಮುಂದೆ ದೊಡ್ಡ ಪದವು (ಕಾಡಿನ ಮಧ್ಯದ ಬಯಲು ಭೂಮಿ), ಅದನ್ನು ದಾಟಿದ ಕೂಡ್ಲೆ ಕಳಂಜಿಮಲೆ ಸಿಗುತ್ತಿತ್ತು. ಅಲ್ಲೆಲ್ಲ ಆಗ್ಲೇ ಕಾಡು ಕಡಿದು ಅದ್ರ ಬದಲಿಗೆ ಗಾಳಿ ಗಿಡಗಳನ್ನ ನೆಡುತ್ತಿದ್ದರು. ಅದು ಸರ್ಕಾರಿ ಭೂಮಿ. ನಂಗೆ ಆಗ ಪ್ರತಿಯೊಂದರ ಬಗೆಗೂ ಕುತೂಹಲ... ಪದೇ ಪದೇ ಪ್ರಶ್ನೆ ಕೇಳುತ್ತಿದ್ದೆ.
ಅಪ್ಪ ನನ್ನ ಬಾಲಿಶ ಪ್ರಶ್ನೆಗಳನ್ನ ಕೇಳಿ ಬೈಯುತ್ತಿರಲಿಲ್ಲ. ಕಾಡು ದಾರಿಯಲ್ಲಿ ನಡೆದೂ ನಡೆದೂ ಸುಸ್ತಾದಾಗ ಎತ್ತಿಕೊಂಡು ಹೋಗ್ತಿದ್ರು. ಅಲ್ಲಲ್ಲಿ ಹರಿಯುವ ನೀರ ಝರಿಯ ಹತ್ತಿರ ಕರೆದುಕೊಂಡು ಹೋಗಿ ನೀರು ಕುಡಿಸ್ತಿದ್ರು. ಮೂರು ಗಂಟೆಗೆ ಅಜ್ಜನ ಮನೆಯಿಂದ ಹೊರಟ್ರೆ ನಾಲ್ಕು ಗಂಟೆಗೆ ಕನ್ಯಾನ ಬಸ್ ಸ್ಟಾಂಡ್‌ನಲ್ಲಿರ್‍ತಿದ್ದೆವು.
ನಾಲ್ಕೂ ಹತ್ತಕ್ಕೆ ಬಾಯಾರು (ಕಾಸರಗೋಡು ಸಮೀಪದ ಪಟ್ಟಣ) ಮಾರ್ಗವಾಗಿ ಹೋಗುವ ಗವರ್ಮೆಂಟ್ ಬಸ್ ಹತ್ತುತ್ತಿದ್ದೆವು. ಬಸ್‌ಗೆ ಹತ್ತಿದ ಕೂಡ್ಲೇ ಅದೇನಾಗುತ್ತೋ, ಕಲಿತ ಮಗ್ಗಿ, ಪದ್ಯವನ್ನು ಜೋರಾಗಿ ಹೇಳ್ತಾ ಹೋಗ್ತಿದ್ದೆ. ಆಗ ಬಸ್‌ನಲ್ಲಿರುವವರೆಲ್ಲ ಹಿಂತಿರುಗಿ ನೋಡಿದಾಗ ಅಪ್ಪನಿಗೆ ಮುಜುಗರ. ನನ್ನ ಉತ್ಸಾಹ ಮತ್ತಷ್ಟು ಹೆಚ್ಚಾಗ್ತಾ ಇತ್ತು. ಕೊನೆಗೆ ಜಾಣೆ ಅಂತ ಬಸ್‌ನಲ್ಲಿದ್ದ ಒಂದಿಬ್ಬರು ಪ್ರಯಾಣಿಕರು ಬೆನ್ನು ತಟ್ಟಿದ್ರೆ ಭಾರೀ ಖುಷಿ.
ನಾವು ಕಾಯರ್‌ಕಟ್ಟೆಯಲ್ಲಿ ಇಳಿದಾಗ ಕತ್ತಲು ಜಾಸ್ತಿಯಾಗುತ್ತಿತ್ತು. ಮಾರಪ್ಪ, ಗ್ಯಾಸ್‌ಲೈಟ್ ಬೆಳಕಿನಲ್ಲಿ ಬಟ್ಟೆ ಹೊಲಿಯುತ್ತಾ ಅಪ್ಪನಿಗೆ ಅಡ್ಡ ಸಲಾಂ ಹಾಕುತ್ತಿದ್ದ. ಗೂಡಂಗಡಿಗಳಲ್ಲಿ ನೇಂದ್ರ ಬಾಳೆಹಣ್ಣು, ಬೋಟಿ ಪ್ಯಾಕೆಟ್ ನೇತಾಡ್ತಾ ಇರ್‍ತಿತ್ತು. ಬಳೀ ಮುಂಡುಟ್ಟು, ತಲೆಗೂ ಅದೇ ಬಣ್ಣದ ಮುಂಡಾಸು ಕಟ್ಟಿ ಆಗಾಗ ಮುಂಡನ್ನ ಎತ್ತಿ ಹಿಡಿಯುತ್ತಾ ನಡೆಯುವ ಮುಸ್ಲಿಮ ಗಂಡಸರು ನೇರ ಬಾಳೇ ಹಣ್ಣಿಗೇ ಕೈ ಹಾಕಿ ನಾಜೂಕಿಂದ ಸಿಪ್ಪೆ ಜಾರಿಸಿ ತಿನ್ನುತ್ತಿದ್ದರೆ ನಂಗೂ ಆಸೆ. ಅಪ್ಪನತ್ರ ಹೇಳಿದ್ರೆ, ಮನೆಯಲ್ಲಿದೆ, ಅಲ್ಲೇ ತಿನ್ನುವೆಯಂತೆ ಅಂತಿದ್ರು. ಆದ್ರೆ ಮನೆಯಲ್ಲಿ ಎಷ್ಟು ಬಾಳೆ ಹಣ್ಣು ತಿಂದ್ರೂ ನಂಗೆ ಅಂಗಡೀ ಬದಿ ನೇತಾಡ್ತಾ ಇರೋ ಆ ಬಾಳೇ ಹಣ್ಣಿನಷ್ಟು ರುಚಿ ಅನ್ನಿಸ್ತಿರಲಿಲ್ಲ. ಕೆಲ ಕ್ಷಣ ಮೌನವಾಗಿ ಅಪ್ಪನನ್ನ ಹಿಂಬಾಲಿಸುತ್ತಿದ್ದೆ. ಕಾಯರ್ ಕಟ್ಟೆ ಪೇಟೆ ದಾಟಿದ್ರೆ, ಕಾಯರ್‌ಕಟ್ಟೆ ಪದವು. ನಮ್ಮ ಮನೆಗೆ ಅದನ್ನಿಳಿದು ಹೋಗಬೇಕು. ಕತ್ತಲಲ್ಲಿ ಅಪ್ಪನ ಕೈ ಹಿಡಿದು ಜಾರೆ ಕಲ್ಲಿನಲ್ಲಿ ಜಾರುತ್ತಾ ನಡೆಯುತ್ತಿದ್ದೆ.
ಐದಾರು ಫರ್ಲಾಗ್ ಇಳಿಯುತ್ತಾ ಜಾರುತ್ತಾ ಹೋದಾಗ ನಮ್ಮ ಗೇರುಗುಡ್ಡೆ ಸಿಗುತ್ತಿತ್ತು. ಆ ಗುಡ್ಡೆ ಕೆಳಗೇ ನಮ್ಮ ಮನೆ.
ಗುಡ್ಡೆ ದಾರಿಯಲ್ಲಿ ಬರುತ್ತಿರುವಾಗ ದೂರದ ಟವರ್‌ನಲ್ಲಿ ಮಿಣಿ ಮಿಣಿ ಕೆಂಪು ಲೈಟ್ ಕಾಣ್ತಾ ಇತ್ತು. ಅದು ಕಾಸರಗೋಡಿನ ರೇಡಿಯೋ ಸ್ಟೇಶನ್ ಅಂತ ಅಪ್ಪ ಹಿಂದೆಯೇ ಹೇಳಿದ್ರು. ಆ ಟವರ್‌ನಿಂದ ದನಿಯನ್ನ ಸ್ವರವನ್ನ ಗಾಳಿಯಲ್ಲಿ ತೇಲಿ ಬಿಟ್ಟರೆ ಅದು ನಮ್ಮ ರೇಡಿಯೋದೊಳಗೆ ಸೇರಿಕೊಂಡು ನಮಗೆ ಕೇಳ್ತಿತ್ತು. ಅದನ್ನು ಹತ್ತಿರದಿಂದ ಕಂಡೇ ಬರಬೇಕು ಅನ್ನುವ ಹುಚ್ಚು ಕುತೂಹಲ. ಅದನ್ನ ತಡೆದುಕೊಂಡು ಅಪ್ಪನ ಕೈ ಹಿಡಿದು ನಡೆಯುತ್ತಿದ್ದೆ.
ಇನ್ನೇನು ಸ್ವಲ್ಪ ಮುಂದೆ ಕಲ್ಲಿನ ಮೆಟ್ಟಿಲು ಅದನ್ನು ಇಳಿದು ಹೋದ್ರೆ ಮನೆ. ನಾನು ಅಪ್ಪ ಮನೆಯೊಳಗೆ ಹೊಕ್ಕರೆ ಅಲ್ಲಿ ಮೌನ. ನಾನು ಜೋರಾಗಿ ಅಮ್ಮಾ ಅಂತ ಕರೆದ್ರೆ, ಶೂ...ಮಾತಾಡ್ಬೇಡ ಅಂತ ಸನ್ನೆ ಮಾಡ್ತಾ ಅಮ್ಮ ಬರ್‍ತಿದ್ಲು. ತಮ್ಮ ಮಲಗಿದಾನೆ ಅಂತ ಕಿವಿಯಲ್ಲಿ ಗುಟ್ಟಾಗಿ ಹೇಳಿ ಒಳಗೆ ಕರೆದುಕೊಂಡು ಹೋಗ್ತಿದ್ಲು.
ನನಗೀಗ ಇಪ್ಪತ್ತನಾಲ್ಕು ವರ್ಷ. ಈ ಚಿತ್ರ ನಂಗೆ ಐದಾರು ವರ್ಷ ಆಗಿದ್ದಾಗಿನದು. ಅಂದು ಅಪ್ಪ ಹೇಳಿದ ಹಾಗೆ ನಾನೀಗ ದೊಡ್ಡವಳಾಗಿದ್ದೇನೆ. ಅಪ್ಪ ಮಧ್ಯವಯಸ್ಸಿಗೆ ಬಂದಿದ್ದಾರೆ. ಅಪ್ಪ ನನ್ನನ್ನೀಗ ಪುಟ್ಟಾ ಅಂತ ಅಷ್ಟು ಪ್ರೀತಿಯಿಂದ ಕರೆಯಲ್ಲ. ಹಿಂದಿನಂತೆ ಸಿಕ್ಕಾಬಟ್ಟೆ ಪ್ರಶ್ನೆ ಕೇಳಿ ಅಪ್ಪನ ತಲೆ ತಿನ್ನೋದಿಲ್ಲ. ಹಿಂದಿನ ಅಪ್ಪಂಗೂ ಇಂದಿನ ಅಪ್ಪಂಗೂ ತುಂಬಾ ಡಿಫರೆನ್ಸ್ ಇದೆ ಅಂತ ಆಗಾಗ ಅನ್ಸತ್ತೆ. ಅಫ್‌ಕೋರ್ಸ್ ನಾನೂ ಅಂದಿನಂತಿಲ್ಲ.
ಆದ್ರೆ ಆಗಾಗ, ಹಾಗೇ ಅಪ್ಪನ ಕೈ ಹಿಡಿದು ಕಳಂಜಿಮಲೆ ಕಾಡು ಹಾದಿಯಲ್ಲಿ ನಡೆಯಬೇಕನಿಸತ್ತೆ. ಆಗ ನಾನು ದೊಡ್ಡೋಳಾಗೋ ಕನಸು...
...ಈಗ ಮತ್ತೆ...
Monday, March 9, 2009
ಮುದ್ದು ಬರೆದ ಮಳೆ ಸಾಲುಗಳ ನೆನಪು
ಯಾಕೋ ಆಗಸ ಬಿಕ್ಕುತಿದೆ
ಹುಣ್ಣಿಮೆ ಕಡಲೂ ಉಕ್ಕುತಿದೆ
ರೆಕ್ಕೆ ನೆನೆದ ಚಿತ್ತದ ಹಕ್ಕಿಯು
ಕನಸು ಕಾಳುಗಳ ಹೆಕ್ಕುತಿದೆ
-----****--------
ಗಾಳಿಯೂ ಆಡದ
ಬಿರುಮಳೆ ಧಾರೆಗೆ
ಕಲ್ಲೂ ಕರಗಿದೆ
ಮಾತೂ ಆಡದ ಪ್ರೀತಿಗೆ
ಮುನಿಸು ಎಲ್ಲೋ ಕರಗಿದೆ
----*****------
ತೊಟ ತೊಟ ತೊಟ್ಟಿಕ್ಕುತ ಡೈರಿಯ
ಪುಟ ಪುಟ ಒದ್ದೆಯಾಗಿಸಿ
ಬರೆದದ್ದ ಅಳಿಸಿ
ಬೀಗಿದವು ಮಳೆಹನಿಗಳು
ಹನಿಗಳ ಸ್ಪರ್ಶಕೆ ನೆಂದ
ಹಳೆ ನೆನಪ ಬೀಜಗಳು
ಚಿಗುರಿದವು!
----*****------
ಹೇಳು ಮಳೆಯೇ
ಸುರಿದು
ಷೋಡಶಿಯೊಬ್ಬಳ
ನೆನೆಸದಿದ್ದರೆ
ನೀ ಸುರಿದೇನು ಫಲ?
-----*****------
ಹಸಿರುಟ್ಟ ಪುಟ್ಟಬಿತ್ತಕ್ಕೆ
ಮಳೆಹನಿ ಸೇಕ
ಅಲ್ಲಯವರೆಗೂ ಶೋಕ
ನಂತರ ಮರಗಳೆಲ್ಲ ಅಶೋಕ
Thursday, February 12, 2009
ಸಾಹಿತ್ಯ ಜಾತ್ರಾ ವಿಶೇಷ !
ಚಿತ್ರದುರ್ಗದ ಸಾಹಿತ್ಯ ಸಮ್ಮೇಳನಕ್ಕೆ ಹೋಗಿ, ದೊಡ್ಡ ನಿಟ್ಟುಸಿರಿನೊಂದಿಗೆ ವಾಪಾಸು ಬಂದಿದ್ದೇನೆ. ಹೋಗುವಾಗ ಇದ್ದ ಉತ್ಸಾಹ ಬರುವಾಗ ಠುಸ್! ಒಂದು ಬಾರಿ ಸಮ್ಮೇಳನಕ್ಕೆ ಹೋದವಳು, ಸಮ್ಮೇಳನ ಮುಂದೂಡಿಕೆಯಾಗಿ ವಾಪಾಸು ಬರುವಾಗಲೇ ಅಂದುಕೊಂಡಿದ್ದೆ, ಯಾಕೋ ಎಡವಟ್ಟಾಗುತ್ತಿದೆ. ಅದು ಕೊನೆಯ ತನಕವೂ ಬೇತಾಳನ ಹಾಗೆ ಹಿಂಬಾಲಿಸುತ್ತಲೇ ಇತ್ತು.
ಮತ್ತೆ ಸಮ್ಮೇಳನ ಆರಂಭವಾದಾಗ, ಸೈಡ್ ಲೈಟ್ಸ್ ಅಂತ ಚಿತ್ರದುರ್ಗದ ವಿಶೇಷತೆಗಳನ್ನು ಸ್ಟೋರಿ ಮಾಡಬೇಕು ಅನ್ನುವ ಅಪ್ಪಣೆಯಾದ ಕಾರಣ, ಒಂದು ದಿನದ ಹಿಂದೆಯೇ ನಮ್ಮ ಸವಾರಿ ಚಿತ್ರದುರ್ಗದತ್ತ ದೌಡಾಯಿಸಿತ್ತು. ಅರ್ಧದಲ್ಲೇ ಗಾಡಿ ಕೆಟ್ಟು, ಲೈಟು ರಿಪೇರಿಯಾಗಿ ಚಿತ್ರದುರ್ಗ ತಲುಪಿದಾಗ ರಾತ್ರಿ ಎರಡು. ಹೋಗಿದ್ದೇನೋ ಹೋಗಾಯಿತು, ಮಲಗೋದೆಲ್ಲಿ? ಕೊನೆಗೂ ಮುರುಘಾ ಮಠದ ಕಡೆ ನಡೆದಾಗ, ಬಂದವರೆಲ್ಲ ಹುಡುಗರು ಅಂತ ಭಾವಿಸಿ ಒಂದು ಹಾಲ್‌ನಲ್ಲೇ ಒಂದಿಷ್ಟು ಹಾಸಿಗೆ ಹಾಕಿ ಮಲಗುವ ವ್ಯವಸ್ಥೆ ಮಾಡಿ ಮಠದೊಳಗೆಲ್ಲೋ ಹೋಗಿಬಿಟ್ಟರು.
ಆ ರಾತ್ರಿಯಲ್ಲಿ ಬೇರೆ ಯಾರನ್ನು ಕೇಳೋದು? ಕೊನೆಗೆ ನಮ್ಮ ಚಿತ್ರದುರ್ಗದ ರಿಪೋರ್ಟರ್ ಯಾರದೋ ಮನೆಯವರನ್ನು ಕಾಡಿ ಬೇಡಿ ಉಳಿದರ್ಧ ರಾತ್ರಿ ಕಳೆಯಲು ವ್ಯವಸ್ಥೆ ಮಾಡಿದರು. ಇನ್ನೇನು ನಿದ್ದೆ ಹತ್ತಿತು ಅನ್ನುವಷ್ಟರಲ್ಲಿ ಬೆಳಗೂ ಆಗಿತ್ತು. ಕಣ್ತೆರೆಯುವ ಮೊದಲೇ ಮೊಬೈಲ್ ಹೊಡೆದುಕೊಳ್ಳತೊಡಗಿತು. ಆಫೀಸ್‌ನಿಂದ ಫೋನ್. ಕೆರೆಮನೆ ಶಂಭು ಹೆಗಡೆ ತೀರ್‍ಕೊಂಡ್ರಂತೆ, ಅವರಿಗೆ ನೃತ್ಯ ಹೇಳಿಕೊಟ್ಟ ಮಾಯಾರಾವ್ ಮನೆ ಎಡ್ರೆಸ್ ಕೊಡಿ ಅಂತ ಆರ್ಡ್‌ರ್. ಕೊಡಲಿಕ್ಕೆ ನಂಗೆ ಗೊತ್ತಿದ್ರೆ ತಾನೇ? ಕೇಳಿ ಹೇಳ್ತೇನೆ ಅಂದೆ. ಕೂಡಲೇ ಕೆರೆಮನೆ ಶಂಭು ಹೆಗಡೆ ಫೈಲ್ ವಿಜುವಲ್ ಎಲ್ಲಿದೆ? ಅಂತ ಪ್ರಶ್ನೆ. ಅದಕ್ಕೂ ಸಮಜಾಯಿಶಿ ನೀಡಿಯಾಯಿತು. ಅಷ್ಟರಲ್ಲಿ ಮೊಬೈಲ್ ನೆಟ್‌ವರ್ಕ್ ಕಟ್ ಆಯ್ತು. ಟೆರೇಸ್ ಮೇಲಾದ್ರೂ ಸಿಗತ್ತಾ ಅಂತ ಹೋದ್ರೆ, ಅಲ್ಲಿ ಕಂಡ ದೃಶ್ಯ ವರ್ಣನಾತೀತ. ನಾನು ಅಲ್ಲಿ ಇಲ್ಲಿ ಓದಿಕೊಂಡಿದ್ದ ದೃಶ್ಯ ಕಣ್ಣು ಮುಂದೆಯೇ ಕಾಣಸಿಕ್ಕಿತ್ತು. ವಿಶಾಲವಾದ ಬಯಲಿನಲ್ಲಿ ಬಿಂದಿಗೆ ಹಿಡಿದ ಮಂದಿ ಅಲ್ಲಲ್ಲಿ ಕೂತು, ಅದ್ಯಾವುದೋ ಸುಖದ ಅಮಲಿನಲ್ಲಿ ಅರೆಗಣ್ಣಾಗಿದ್ದರು. ನಮಗೆ ತೀರಾ ಅಪರಿಚಿತವಾಗಿರುವ ಈ ಸನ್ನಿವೇಶವನ್ನು ಕಂಡು ಒಳಗೊಳಗೇ ನಗುತ್ತಾ ಮತ್ತೆ ಕೆಳಗೆ ಬಂದೆ.
ಆ ದಿನವಿಡೀ ಕೋಟೆ, ಚಂದವಳ್ಳಿ ತೋಟ ಶೂಟ್ ಮಾಡೋದ್ರಲ್ಲೇ ಕಳೆದು ಹೋಯಿತು. ಕೆಲ ರಾದ್ಧಾಂತಗಳು, ನಾಳಿನ ಕವರೇಜ್ ಪ್ಲಾನ್, ಅದು ಇದು ಅಂತ ಮಾತು ಮುಗಿಯೋ ಹೊತ್ತಿಗೆ ಗಂಟೆ ೧೨. ಹೊಟ್ಟೆಯೇನೋ ನಾಚಿಕೆ ಬಿಟ್ಟು ಚುರುಗುಟ್ಟುತ್ತಿತ್ತು. ಆದರೆ, ಅಷ್ಟೊತ್ತಿಗೆ, ಊಟಾನಾದ್ರೂ ಎಲ್ಲಿ ಸಿಗಬೇಕು? ದಾರಿಯಲ್ಲಿ ಯಾವುದೋ ಬಾರ್ ಆಂಡ್ ರೆಸ್ಟ್‌ರೆಂಟ್ ತೆರೆದಿತ್ತು. ನಮ್ಮ ಗ್ರೂಪ್ ಅಲ್ಲಿಗೆ ನುಗ್ಗಿದಾಗ ನಾನೂ ಹಿಂಬಾಲಿಸಿದೆ. ಊಟ ಮುಗಿಸಿ ನನಗೆ ಅಂತ ಬುಕ್ ಆಗಿರೋ ರೂಮ್‌ಗೆ ಬಂದ್ರೆ, ಆ ರೂಮನ್ನು ಆಗಲೇ ಆಕ್ರಮಿಸಿಕೊಂಡಾಗಿತ್ತು. ಜಪ್ಪಯ್ಯ ಅಂದ್ರೂ ಆ ಪುಣ್ಯಾತ್ಮ ರೂಂ ಬಿಟ್ಟು ಕೊಡ್ಲಿಲ್ಲ. ಬೇರೆ ಸ್ತ್ರೀ ಸಹೋದ್ಯೋಗಿಯೊಬ್ಬರಾದರೂ ಇದ್ದರೆ ಅವರೊಂದಿಗೆ ರೂಮು ಹಂಚಿಕೊಳ್ಳಬಹುದಿತ್ತು. ಆದರೆ, ದೇವರ ದಯದಿಂದ ಸ್ತ್ರೀ ಜೀವ ಅಂತ ಇದ್ದದ್ದು ನಾನು ಮಾತ್ರ. ಆ ಹೊತ್ತು ಮಧ್ಯ ರಾತ್ರಿ ೧.೩೦ ಗಂಟೆ. ಕೊನೆಗೆ ಹೊಟೇಲ್‌ನವರಿಗೇ ಕರುಣೆ ಉಕ್ಕಿ ಆ ರಾತ್ರಿಯ ಮಟ್ಟಿಗೆ ಒಂದು ಖಾಲಿ ರೂಂ ಸಿಕ್ಕಿತು. ಹೋಗಿ ಬಿದ್ದುಕೊಂಡೆ.
ಮತ್ತೆ ಬೆಳಗಿನ ದರ್ಶನ ಮಾಡಿಸಿದ್ದು ಅದೇ ಜಂಗಮ ದೂರವಾಣಿ. ‘ಪ್ರಿಯಾ, ಲೈನ್ ಹೋಲ್ಡ್ ಮಾಡಿದ್ದೀನಿ. ಈಗ ಫೋನೋ ಇದೆ. ರೆಡಿಯಾಗಿರು’ ಅಂದಿತು ಅತ್ತಲಿನ ದನಿ. ನಾನು ಬಾಯಿ ತೆರೆಯುವುದರೊಳಗೆ ಫೋನ್ ಹೋಲ್ಡ್ ಆಗಿತ್ತು. ಏಳು ಗಂಟೆಯ ನ್ಯೂಸ್ ಬುಲೆಟಿನ್ ಆರಂಭವಾಗಿತ್ತು. ಕೆಲವೇ ಕ್ಷಣಗಳಲ್ಲಿ ಲೈವ್‌ಗೆ ಫೋನ್ ಕನೆಕ್ಟ್ ಆಯಿತು. ನಾನು ಗಂಟಲು ಸರಿ ಮಾಡಿಕೊಳ್ಳಬೇಕೆಂದುಕೊಳ್ಳುವಾಗಲೇ ಅತ್ತಲಿಂದ ವಾರ್ತಾವಾಚಕಿ ಪ್ರಶ್ನೆ ಕೇಳಿಯಾಗಿತ್ತು, ಉಗುಳು ನುಂಗಿ, ಅದೇನೋ ಒದರಿ ಸುಮ್ಮನಾದೆ.
ಬಡ ಬಡನೆ ಹೊರಟು ನಿಂತಾಗ ಸಮ್ಮೇಳನದವರೇ ಆಯೋಜಿಸಿದ್ದ ಬಸ್ ಕಾಯುತ್ತಿತ್ತು. ಹತ್ತಿ ಕೂತೆ. ಬಸ್ ಹೊರಟಾಗ ಮತ್ತೆ ಫೋನೋ ಕನೆಕ್ಟ್. ‘ಸಮ್ಮೇಳನಕ್ಕೆ ಈಗಾಗಲೇ ಜನರ ಆಗಮನವಾಗಿದೆಯಾ? ತಿಂಡಿ ವ್ಯವಸ್ಥೆ ಹೇಗಿದೆ? ಸಾಹಿತಿಗಳ್ಯಾರಾದ್ರೂ ಮಾತಿಗೆ ಸಿಕ್ರಾ?’ ಅಂತ ಆಂಕರ್ ಕೇಳಿದಾಗ, ‘ದೂರದೂರಗಳ ಜನ ಈಗಾಗಲೇ ಆಗಮಿಸಿದ್ದಾರೆ. ಎಲ್ಲರಿಗೂ ತಿಂಡಿವ್ಯವಸ್ಥೆ ಇದೆ. ಕೆಲ ಸಾಹಿತಿಗಳು ಆಗಲೇ ಬಂದಿದ್ದಾರೆ’ ಅಂತಂದು ಸುಮ್ಮನಾದೆ. ಆದರೆ ಸಮ್ಮೇಳನ ನಡೆಯುವ ಕಡೆ ಹೋಗಿ ನೋಡಿದ್ರೆ, ಅಲ್ಲಿ ತಿಂಡಿ ಖಾಲಿಯಾಗಿತ್ತು, ಜನ ಸಿಟ್ಟಿಗೆದ್ದದ್ದರು. ಮತ್ತೊಂದೆಡೆ ಕಿಟ್‌ಗಾಗಿ ಹೋರಾಟ ನಡೆಯುತ್ತಿತ್ತು. ತಪ್ಪಿಯೂ ಒಬ್ಬ ಸಾಹಿತಿಯೂ ಸಮ್ಮೇಳನದತ್ತ ಮುಖಮಾಡಿರಲಿಲ್ಲ. ಮೈ ಪರಚಿಕೊಳ್ಳುವಂತಾಯಿತು. ಅಷ್ಟರಲ್ಲಿ ಮತ್ತೆ ಆಫೀಸ್‌ನಿಂದ ಫೋನ್. ಏನ್ರೀ ಅಲ್ಲೇನೋ ಗಟಾಲೆ ನಡೀತಿದೆಯಂತೆ, ನೀವ್ ಏನ್ರೀ ಮಾಡ್ತಿದ್ದೀರಾ? ಅಂತ ಆವಾಜ್. ಅವರನ್ನು ಕನ್ವಿನ್ಸ್ ಮಾಡುವಷ್ಟರಲ್ಲಿ ಸಾಕೋ ಸಾಕು. ಸಾಹಿತ್ಯ ಸಮ್ಮೇಳನ ಆರಂಭವಾಗುತ್ತಿರುವಂತೆ ಅಧ್ಯಕ್ಷರಿಗಿಂತ ಹೆಚ್ಚಿನ ಟೆನ್ಶನ್ ನಮಗೆ. ನಮಗೆ ಸಿಗದ ವಿಶ್ಯವಲ್ ಬೇರೆ ಚಾನೆಲ್‌ಗೆ ಸಿಕ್ಕಿಬಿಟ್ರೆ , ಅಂತ ಕ್ಷಣ ಕ್ಷಣಕ್ಕೂ ಕಾಡುವ ಆತಂಕ.
ಇನ್ನು ಲೈವ್ ಚಾಟ್(ನೇರ ಪ್ರಸಾರದಲ್ಲಿ ಮಾಹಿತಿ, ಸಂದರ್ಶನ...ಹೀಗೆ ನೇರ ಮುಖಾಮುಖಿ) ಕೊಡುವ ಸಂಭ್ರಮವೇ ಬೇರೆ. ಯಾರೋ ಗಣ್ಯ ವ್ಯಕ್ತಿಗಳನ್ನು ನಿಲ್ಲಿಸಿಕೊಂಡು ಅವರ ಜತೆ ಲೈವ್‌ನಲ್ಲಿ ಸಂದರ್ಶನ ನಡೆಸುತ್ತಿರುವಾಗಲೇ ನೆಟ್‌ವರ್ಕ್ ಪ್ರಾಬ್ಲಂನಿಂದ ಲೈನ್ ಕಟ್ ಆಗಿರತ್ತೆ. ಆ ವ್ಯಕ್ತಿ ಇನ್ನೂ ನೇರ ವಿಷಯಕ್ಕೇ ಬಂದಿರುವುದಿಲ್ಲ. ಆದ್ರೆ ಲೈನ್ ಕಟ್ ಆಗಿರುವುದು ಆತನ ಗಮನಕ್ಕೆ ಬಂದಿರುವುದಿಲ್ಲ. ಆ ಪುಣ್ಯಾತ್ಮರು ಹೇಳುತ್ತಲೇ ಇರುತ್ತಾರೆ. ನಾವೂ ಏನೂ ನಡೆದಿಲ್ಲ ಎಂಬಂತೆ ಅವರ ಭಾಷಣ ಕೇಳಿದಂತೆ ನಟಿಸುತ್ತಾ, ಅವರೇ ಮಾತು ಕೊನೆಗೊಳಿಸುವ ತನಕ ಕಾದು, ಅವರಿಗೊಂದು ಸಲಾಮು ಹೊಡೆದು,
ಓವರ್ ಟು ಸ್ಟುಡಿಯೋ ಅನ್ನುವ ಹೊತ್ತಿಗೆ ಬೆವರಿಳಿದಿರುತ್ತದೆ.
ಉಳಿದ ಹೊತ್ತಲ್ಲಿ ಗೋಷ್ಟಿಗಳನ್ನು ನೋಡಿಕೊಳ್ಳಬೇಕು, ನ್ಯೂಸ್, ಸ್ಟೋರಿ ಎಲ್ಲ ಕೊಡುತ್ತಾ ಅರೆಜೀವವಾಗುತ್ತದೆ, ಸ್ಥಿತಿ. ಇದೆಲ್ಲಕ್ಕಿಂತ ಉತ್ಸಾಹ ಕುಂದಿಸುವುದು ಸುಡು ಸುಡು ಬಿಸಿಲು. ಗಂಟಲಿಗೆ ತೊಟ್ಟು ನೀರು ಎರೆದುಕೊಳ್ಳೋಣ ಅಂದ್ರೆ, ಜೀವ ಹೋದ್ರೂ ಅಲ್ಲಿ ನೀರು ಸಿಗಲ್ಲ. ಮೇಲೆ ಸ್ಟಾಲ್‌ಗಳಿರುವ ಕಡೆಗೆ ಹೋಗಿ ದುಡ್ಡು ಕೊಟ್ಟು ನೀರು ಕೊಳ್ಳಬೇಕು. ಬೇರೇನಕ್ಕೋ ಅವಸರಕ್ಕಿಟ್ಟಿತೆಂದರೆ ದೇವರೇ ಗತಿ, ಯಾಕೆಂದರೆ, ಅಲ್ಲಿ ಟಾಯ್ಲೆಟ್ಟೂ ಇಲ್ಲ. ರೂಮಿಗಾದ್ರೂ ಹೋಗಿ ತೀರಿಸಿಕೊಳ್ಳೋಣ ಅಂದ್ರೆ, ಅದಕ್ಕೂ ಗತಿಯಿಲ್ಲ, ರಾತ್ರಿಯಾದರೆ ಲಗ್ಗೇಜು ಹಿಡಿದು ರೂಮಿಂದ ರೂಮಿಗೆ ಅಲೆತ.
ಅಹ್..ಇದು ಹೇಳಿ ಮುಗಿಯಲಿಕ್ಕಿಲ್ಲ ಬಿಡಿ, ನಾನು ರಿಪೋರ್ಟಟಿಂಗ್‌ಗೆ ಹೊರ ಜಿಲ್ಲೆಗಳಿಗೆ ಹೋಗೋದು ಇದೇ ಮೊದಲೇನಲ್ಲ, ಆದರೆ, ಈ ಅನುಭವ ಹೊಸತು. ಅನುಭವ ನಮ್ಮನ್ನು ಗಟ್ಟಿಗೊಳಿಸುತ್ತದಂತೆ, ಆದ್ರೆ, ಅಲ್ಲಿಗೆ ಹೋಗಿ ಬಂದ ನಾನಿನ್ನೂ ಚೇತರಿಸಿಕೊಂಡೇ ಇಲ್ಲ.

Subscribe to:
Posts (Atom)