Tuesday, October 14, 2008

ಮಂಜಿನ ಹಾದಿಯ ಬೆತ್ತಲ ಜೀವ

ಬೆಳಗ್ಗಿನ ಆರು ಗಂಟೆಯ ಸಮಯ. ಮಲೆನಾಡು ಇನ್ನೂ ಕತ್ತಲಲ್ಲಿತ್ತು. ಹಾಸಿಗೆ ಬಿಟ್ಟೇಳಲಾಗದ ಹಸಿ ಚಳಿ. ಅಕ್ಕ ಪಕ್ಕದ ಬೆಡ್ಡಿನ ಮೇಲಿದ್ದವರು ಕನಸಿನ ಹೊದಿಕೆಯನ್ನಿನ್ನೂ ಸರಿಸಿರಲಿಲ್ಲ. ಆದರೆ ಆಗಲೇ ಹಂಡೆಯಲ್ಲಿ ಬಿಸಿ ನೀರು ಕಾಯುತ್ತಿತ್ತು. ನೀರು ಮುಖಕ್ಕೆ ಬಿದ್ದಾಗ ಅದೊಂಥರಾ ಸುಖ. ಆದರೂ ಬಿಡದ ಚಳಿಯ ಮೋಹ. ಸ್ವೆಟರನ್ನೂ ಹಾಕದೇ ಎದ್ದು ಹೊರನಡೆದೆ. ಆಗಲೇ ನಾಟಕ ಕಲಾವಿದರು ಎದ್ದು ಬೆಳಗ್ಗಿನ ರಿಹರ್ಸಲ್‌ನಲ್ಲಿ ಬೆವರಿಳಿಸುತ್ತಿದ್ದರು. ಉಳಿದಂತೆ ನೀನಾಸಂ ತಣ್ಣಗಿತ್ತು.

ಆಗಲೇ ನಸು ಬೆಳಕು. ಅಡಿಗೆ ಮನೆಯಿಂದ ಹೊರಟ ಘಮಟು ಹೊಗೆ ಮಂಜಿನೊಂದಿಗೆ ಸೇರಿ ವಿಶಿಷ್ಟ ಘಮ ಗಾಳಿಯಲ್ಲಿ ಬೆರೆತಿತ್ತು. ದಟ್ಟ ಹಬ್ಬಿದ ಮಂಜಿನಲ್ಲಿ ನಡೆದು ಹೋಗುವಾಗ ಮನಸ್ಸಿಗೆ ಸುಮ್ಮ ಸುಮ್ಮನೇ ಸಂಭ್ರಮ. ನೀನಾಸಂ ದಾಟಿ ಹೊರಬಂದು ಬೀದಿಗಿಳಿದೆ. ಟಷ್ಟರಲ್ಲಿ ನೈಟಿ ಹಾಕಿಕೊಂಡು ತಲೆಗಿಡೀ ಮಫ್ಲರ್‍ ಸುತ್ತಿಕೊಂಡು ವೈದೇಹಿ ಪ್ರತ್ಯಕ್ಷ. ವಿಪರೀತ ಮಂಜಿದೆಯಲ್ವಾ ಅಂತ ಅಮ್ಮನಂತಾ ನಗೆ ನಕ್ಕು ಮುಂದೆ ನಡೆದರು, ನಾನು ಹೂಂ ಅನ್ನಲಿಲ್ಲ. ಸುಮ್ಮನೇ ನಕ್ಕೆ. ಆಮೇಲೆ ನಾನ್ಯಾಕೆ ಹಾಗೆ ಮಾಡಿದೆ ಅಂತ ನನಗೇ ಬೈಕೊಂಡೆ.

ಹಿಮ ಅಂದ್ರೆ ಅದೆಂಥಾ ಹಿಮ, ನಮ್ಮೆದುರು ಏನು ಬರುತ್ತಿದೆ ಅಂತಾನೇ ಗೊತ್ತಾಗುತ್ತಿರಲಿಲ್ಲ. ಮಾರ್ಗದ ಮಧ್ಯೆ ಗೂಳಿಯಂತೆ ಹೋಗುತ್ತಿದ್ದ ನನಗೆ ಪಕ್ಕದಲ್ಲೇ ಸೈಕಲ್ಲೊಂದು ಮೈಗೆ ತಾಗುವಂತೆ ಹಾದುಹೋದಾಗ ಗಾಭರಿ. ಕ್ಷಣದಲ್ಲಿ ಒಂಥರಾ ಹುಚ್ಚು ಹುರುಪು, ಮಂಜಿಂದ ನೆನೆದ ಬಲೆಯೊಂದು ಮುಖಕ್ಕೆ ಅಂಟಿಕೊಂಡಿತು. ಅದನ್ನು ತೆಗೆಯುತ್ತಾ ಮುಂದೆ ನಡೆದೆ. ಅಲ್ಲೊಬ್ಬ ಹೆಣ್ಣು ಮಗಳು ಹುಲ್ಲಿನ ಹೊರೆಯನ್ನು ಸೈಕಲ್‌ ಹಿಂದೆ ಕಟ್ಟಿ ಸೈಕಲ್ ತುಳಿಯುತ್ತಾ ಬರುತ್ತಿದ್ದಳು. ನಿಜಕ್ಕೂ ಹೆಗ್ಗೋಡು ಸುಧಾರಿಸಿದೆ ಅಂದುಕೊಂಡೆ. ಯಾಕೆಂದರೆ ನಮ್ಮ ಊರಲ್ಲಿ ನಮ್ಮ ಪ್ರಾಯದ ಹುಡುಗಿಯರೂ ಸೈಕಲ್ ತುಳಿಯಲು ಹಿಂಜರಿಯುತ್ತಾರೆ. ಆದರೆ ಇಲ್ಲಿ ನಮ್ಮ ಅಮ್ಮನಷ್ಟು ಪ್ರಾಯದ ಹೆಂಗಸು ಸೈಕಲ್‌ನ್ನು ಲೀಲಾಜಾಲವಾಗಿ ತುಳಿಯುತ್ತಾ ಹೋಗುವುದನ್ನು ನೋಡಿ ಒಳಗೊಳಗೇ ಖುಷಿ.

ಡೇಲಿಯಾ, ಗುಲಾಬಿ, ಬಣ್ಣಬಣ್ಣದ ದಾಸವಾಳಗಳ ಅಂಗಳಗಳು ಕಾಣಸಿಕ್ಕವು. ಮನೆಗಳಲ್ಲಿ ಬೆಳಗಿನ ತಿಂಡಿ ತಯಾರಾಗುತ್ತಿತ್ತು. ಆಗಷ್ಟೇ ಎದ್ದ ಎಳೇ ಮಗುವೊಂದು ಮುಸು ಮುಸು ಅಳುತ್ತಾ ಅಮ್ಮನಿಂದ ಬಯಿಸಿಕೊಳ್ಳುತ್ತಿತ್ತು. ‘ ಈ ಬಾರಿ ನೀನಾಸಂಗೆ ಜನ ಕಡಿಮೆ ಅಂತೆ’ , ಹಾಲು ಕ್ಯಾನ್‌ ಕಟ್ಟಿಕೊಂಡು ಸೈಕಲ್ ಹೊಡೆಯುತ್ತಿದ್ದ ಮೂರ್‌ ನಾಲು ಜನ ತಮ್ಮ ಪಾಡಿಗೆ ಮಾತಾಡಿಕೊಳ್ಳುತ್ತಾ ಹೋಗುತ್ತಿದ್ದರು. ಅವರನ್ನು ನನ್ನನ್ನು ನೋಡಿಯೇ ಹೀಗೆ ಹೇಳಿದ್ದಿರಬಹುದಾ ಅಂದುಕೊಂಡೆ.

ನನ್ನೆದುರು ಎರಡು ದಾರಿ. ಒಂದು ಭೀಮನ ಕೋಣೆಗೆ ಹೋಗುತ್ತಿತ್ತು. ಇನ್ನೊಂದು ಕಾಡು ಹಾದಿ. ಆದದ್ದಾಗಲಿ, ಅಂತ ಕಾಡು ಹಾದಿಯಲ್ಲೇ ಹೆಜ್ಜೆ ಹಾಕಿದೆ. ಬೆಳಕು ಗಾಢವಾಗುತ್ತಿರುವಂತೇ ಮಂಜು ನಿಧಾನಕ್ಕೆ ಕರಗುತ್ತಿತ್ತು. ಮೂಗಿನಲ್ಲಿ ನಸು ನವೆ, ದೂರದಲ್ಲಿ ಮನೆಯೊಂದರಿಂದ ಹೊಗೆ ಹೋಗುತ್ತಿತ್ತು. ಆಮೇಲೆ ಅಂತಹಾ ಮನೆ ಕಾಣಲೂ ಇಲ್ಲ. ತಣ್ಣನೆಯ ಹವೆಯಲ್ಲಿ ತಲೆಗೊಂದು ಶಾಲೂ ಹಾಕದೇ ಬಂದಿದ್ದೆ. ಕಾಡಿನೊಳಗೆ ಇಳಿದಿದ್ದೇ ಚಳಿ ಚಳಿ ಸುರು. ಹಕ್ಕಿಗಳ ಅದೇನೋ ತಮಗೆ ತಾವೇ ಗುಟ್ಟು ಹೇಳಿಕೊಳ್ಳುವಂತೆ ಪಿಸಿ ಪಿಸಿ ಮಾತನಾಡುತ್ತಿದ್ದವು. ಬೆಳಗಿಂದ ಸಂಜೆಯವರೆಗೆ ಮಾತಾಡಿದ್ರೂ ನಿಮ್ದು ಮಾತಾಡಿ ಮುಗಿಯುವುದಿಲ್ಲವಲ್ಲ ಮಾರಾಯ್ರೆ ಅಂತ ಹೇಳಬೇಕು ಅನಿಸಿತು. ಯೋಗ್ಯತೆ ಇಲ್ಲದವರು ಜಾಸ್ತಿ ಮಾತಾಡಬಾರದು ಅಂದುಕೊಂಡು ಸುಮ್ಮನಾದೆ. ಮಂಗಗಳು ಗುಂಪು ಅಲ್ಲೇ ಓಡಾಡುತ್ತಿತ್ತು. ದೊಡ್ಡ ಮಂಗನ ಹೊಟ್ಟೆಯನ್ನು ಗಟ್ಟಿ ಹಿಡಿದ ಪುಟ್ಟು ಮಂಗನ ಮರಿ ಪಿಳಿ ಪಿಳಿ ಕಣ್ಣು ಬಿಡುತ್ತಿತ್ತು. ಅದನ್ನು ನೋಡಿ ಮುದ್ದುಕ್ಕಿತು. ಅದೇನೆನೆಸಿತೋ ಆ ಅಮ್ಮ ಮಂಗ ನನ್ನತ್ತಲೇ ನೋಡುತ್ತಾ ಗುರ್‍..ಅನ್ನುತ್ತಾ ಕೊಂಬೆಯಿಂದ ಕೆಳಗಿಳಿಯತೊಡಗಿತು. ಒಳಗೊಳಗೇ ಹೆದರಿಕೆಯಾಗಿ ಅಲ್ಲಿಂದ ಮೆಲ್ಲನೆ ಜಾರಿಕೊಂಡು ಹಿಂತಿರುಗಿ ನಡೆದೆ.

ಸ್ವಲ್ಪ ಮುಂದೆ ಬಂದಿರಬೇಕು. ಹಾದಿಯ ಮತ್ತೊಂದು ಬದಿಯ ಕಾಡಿನತ್ತ ತಿರುಗಿ ನೋಡಿದೆ. ಮರಗಳ ಮರೆಯಲ್ಲಿ ಯಾವುದೋ ಆಕೃತಿ ತುಸು ಅಲುಗಾಡಿದಂತೆ ಕಂಡಿತು. ಕುತೂಹಲದಿಂದ ಅತ್ತ ನಡೆದೆ. ಮರೆಯಾಗಿದ್ದ ಮರವ ಹತ್ತಿರ ಹೋಗಿ ಇಣುಕಿದಾಗ, ಆ ಕ್ಷಣ ಬಾಯಿಯ ಪಸೆಯಾರಿತ್ತು!

ವ್ಯಕ್ತಿಯೊಬ್ಬ ಬೆತ್ತಲಾಗಿ ಅಲುಗಾಡದಂತೆ ನಿಂತಿದ್ದ. ಎತ್ತಲೋ ದೃಷ್ಟಿ ನಟ್ಟಿತ್ತು. ಕಳೆದುಹೋದವನಂತೆ ಕಾಣುತ್ತಿದ್ದ. ಕಡು ಕಪ್ಪು ಬಣ್ಣದ ಎತ್ತರದ ಧಡೂತಿ ದೇಹ, ರೋಮವೇ ಮೈಯಾದಂತಾ ದೇಹ. ಒಂದು ಬದಿಯಷ್ಟೇ ಕಾಣುತ್ತಿದ್ದ ಕಾರಣ ಆತನ ಮುಖಭಾವ ಸ್ಪಷ್ಟವಾಗುತ್ತಿರಲಿಲ್ಲ. ಮೈ ಮೇಲೆ ಒಂದು ತುಣುಕೂ ಬಟ್ಟೆಯಿಲ್ಲದೆ ನಿಂತದ್ದ. ಆ ಚಳಿಯೂ ಅವನಿಗೆ ಸಹಜವೇ ಆದಂತಿತ್ತು. ಅವನೂ ತೀರಾ ಸಹಜವಾಗಿ ಮಾಮೂಲಿನಂತಿದ್ದ.

ಆತ ಪ್ರಕೃತಿಯ ಭಾಗವೇ ಆಗಿ ಹೋಗಿದ್ದ. ನಿಸರ್ಗದ ನಗ್ನತೆಯೊಳಗೆ ಸೇರಿ ಹೋಗಿದ್ದ. ಹೌದು, ಇಲ್ಲಿ ಎಲ್ಲವೂ ಬೆತ್ತಲು. ಸರ್ವವೂ ಸರಳ, ಸಹಜ. ನಾನೊಬ್ಬಳು ಇಲ್ಲಿಯವಳಲ್ಲ ಅನಿಸತೊಡಗಿತು. ಮೌನವಾಗಿ ತಿರುಗಿ ನಡೆದು ರೂಮು ಸೇರಿಕೊಂಡೆ. ಯಾಕೋ ಎಲ್ಲಾ ಅಪರಿಚಿತ ಅನಿಸತೊಡಗಿತು. ಮನೆ ಪದೇ ಪದೇ ನೆನಪಾಯಿತು. ಮರುದಿನ ಬೆಳಗ್ಗೆಯೇ ಊರಿಗೆ ಹೊರಟು ನಿಂತೆ.

8 comments:

ಆಲಾಪಿನಿ said...

ಪಕ್ಕದ ರೂಂನಲ್ಲೇ ಇದ್ದ ನನ್ನನ್ನ ಬಿಟ್ಟು ಒಬ್ಬಳೇ ಹೋಗ್ತಿದ್ದೆಯಲ್ಲ ಅದಕ್ಕೇ ನಿನಗೆ ಹಂಗಾಗಿದ್ದು. ಹಂಗೇ ಆಗ್ಲಿ ನಿಂಗೆ.
ಅವತ್ತು ಬೆಳಗ್ಗೆ ಎಂಟೂವರೆಗೆ ಹರೀಶ್ ಬಂದು, ಪ್ರಿಯಾ ಎಲ್ಲಿ? ಅಂತ ಕೇಳಿದಾಗ್ಲೇ ಗೊತ್ತಾಯ್ತು, ಹೇಳದೇ ಕೇಳದೆ ಹೋಗಿದೆ ಈ ಹುಡುಗಿ ಅಂತ. ಪರ್‍ವಾಗಿಲ್ಲ. ನೀ ಹಾಗೆ ಒಬ್ಳೇ ಹೋಗಿದ್ದಕ್ಕೇ ಇದೆಲ್ಲ ಬರೆಯೋಕೆ ಸಾಧ್ಯ ಆಯ್ತು. ಇಲ್ಲಾಂದ್ರೆ ಅವ ನಿನ್ ಕೆನ್ನೆ ಚಿವುಟ್ತಾ ನಿಂಗೆ ಗೋಳು ಹುಯ್ಕೊಳ್ತಿದ್ದ ಅಲ್ವಾ?

ಬೇಜಾರ್‍ ಮಾಡ್ಕೊಬೇಡ್ವೇ... ಈ ನೆಪದಲ್ಲಾದ್ರೂ ಅಮ್ಮನ ಬೆಚ್ಚನೆ ಮಡಿಲು ಸಿಕ್ಕಿತಲ್ಲ. ಅದಕ್ಕೆ ಖುಷಿಪಡು.

ಮತ್ತೆ... ಆಮೇಲೆ ಏನಾಯ್ತು ಅಂತ ಹೇಳೇ.. ಚೆನ್ನಾಗಿದೆ ಓದೋದಿಕ್ಕೆ.

Unknown said...

ನೀನಾಸಂ ಇಲ್ಲಿ ನಿಮಿತ್ತ ಮಾತ್ರವೇ ? ನೀನಾಸಂ ಕಾರ್‍ಯಕ್ರಮವನ್ನು ಹೊರತುಪಡಿಸಿದರೆ, ಈ ಬರಹ ತನ್ನಷ್ಟಕ್ಕೆ ತಾನೇ ಚೆನ್ನಾಗಿದೆ, ಸೂಕ್ಷ್ಮವಾಗಿದೆ. ಆ ಬೆತ್ತಲು ಮನುಷ್ಯ ಅಲ್ಲಿನ ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬ ಆಗಿರಲಿಕ್ಕಿಲ್ಲ ತಾನೆ !
- ಡುಮ್ಮ

Unknown said...

ಚಿಚಿಚಿ, ನೀವು ಅಲ್ಲೆಲ್ಲ ಯಾಕೆ ತಿರುಗಾಡೋಕೆ ಹೋದಿರಿ ?
- ಮಾನಸಿ ಭಟ್

ಮನೋರಮಾ.ಬಿ.ಎನ್ said...

chennagide...ellli bareyode martu bityeno anta idde...parwagilla.. jeevantike ulisikonde baraha...

-ಹಾಲ said...

ಲೇಖನ ಓದಕ್ಕೆ ಆಗ್ತಿಲ್ಲ.....ಪ್ಲೀಸ್ ಇನ್ನೊಮ್ಮೆ ಅಪ್‌ಡೇಟ್ ಮಾಡಿ.... ನನ್ನೂರು ಶಿವಮೊಗ್ಗ.... ನೀನಾಸಂ ಇಷ್ಟ... ನೀವು ನೀನಾಸಂ ಬಗ್ಗೆ ಬರೆದಿರೋ ಹಾಗಿದೆ... ಅದಕ್ಕಾಗಿ ಇಷ್ಟು ಕುತೂಹಲ....

suragi \ ushakattemane said...

ಆಕಸ್ಮ್ಕವಾಗಿ ನಿಮ್ಮ ಬ್ಲಾಗಿಗೆ ಬಂದೆ.ಬರವಣಿಗೆ ಆಪ್ತವಾಗಿದೆ.’ನಮ್ಮಪ್ಪ ತೋಟ ಮಾರ್ತಾರಂತೆ’ಎಂಬ ಬರಹದ ಬಗ್ಗೆ ಪ್ರತಿಕ್ರಿಯಿಸಬೇಕೆಂದು ಅನ್ನಿಸಿತು.
ಹಲವಾರು ಕನಸುಗಳನ್ನಿಟ್ಟುಕೊಂಡು ಮಲೆನಾಡಿನ ಸೆರಗಿನಂಚಿನಲ್ಲಿ,ನದಿ ದಡದಲ್ಲಿ ನಾನೊಂದು ಜಮೀನು ಖರೀದಿಸಿದ್ದೇನೆ. ಕೃಷಿಯಲ್ಲಿ ನಾನು ಸೋಲಲಾರೆ. ಒಂದು ವೇಳೆ ಸೋತರೆ,ಹೋಂ ಸ್ಟೇ ಮಾಡಿ ಗೆಲ್ಲುತ್ತೇನೆ.
ಪ್ರಿಯಾ, ನಮ್ಮ ಹಿರಿಯರು ಭೂಮಿಯನ್ನು ಮಾರಾಟ ಮಾಡುತ್ತಿದ್ದಾರೆಂದರೆ ಅವರಲ್ಲಿ ನಾವು ಭರವಸೆಯನ್ನು ತುಂಬುತ್ತಿಲ್ಲವೇಂದೇ ಅರ್ಥ.
ಒಮ್ಮೆ ಮಾರಾಟ ಮಾಡಿದರೆ ಮತ್ತೆ ಅಂಥ ಭೂಮಿಯನ್ನು ನಾವು ಪಡೆಯಲಾರೆವು.
ನನ್ನ ಹೋಂ ಸ್ಟೇ ಕನಸಿನ ಬಗ್ಗೆ ನನ್ನ ಬ್ಲಾಗಿನಲ್ಲಿ ಸಧ್ಯದಲ್ಲೇ ಬರೆಯುವವಳಿದ್ದೇನೆ.

Harisha - ಹರೀಶ said...

ಪ್ರಿಯಾ, ಇದು ನಿಜ ಘಟನೆಯೋ ಕಥೆಯೋ ಮೊದಲು ಹೇಳಿಬಿಡಿ.. ನೀವು ಹೇಳಿರುವ ದಾರಿ, ಪರಿಸರ ಎಲ್ಲ ನೈಜ... ಲೇಖನವೂ ಸಹ ವ್ಯತ್ಯಾಸ ಗುರುತಿಸಲಾಗದಷ್ಟು ಚೆನ್ನಾಗಿದೆ.

lokesh mosale said...

priya
yestu chandaagi baredidira....!nanaguuuuuu baya vaago reethi baredidira......
lokesh mosale