Tuesday, November 4, 2008

ಒಂದು ಪುಟ್ಟು ಪ್ರೀತಿ

ನನಗಾಗ ತಾನೇ ಹನ್ನೆರಡು ತುಂಬಿ ಹದಿಮೂರು ಹಿಡಿದಿತ್ತು. ಮನಸ್ಸು ಮಾಯಾಜಿಂಕೆಯ ಬೆನ್ನು ಹತ್ತಿತ್ತು. ಮನೆಯಲ್ಲಿ ಅಷ್ಟು ಮುಕ್ತವಲ್ಲದ ವಾತಾವರಣ. ನನ್ನ ಕನವರಿಕೆಗಳನ್ನ ಯಾರ ಬಳಿ ತೋಡಿಕೊಳ್ಳುವುದು? ನನ್ನೊಳಗೇ ಅದುಮಿಹಿಡಿದಿದ್ದೆ. ನಾನು ಶಾಲೆಗೆ ಹೋಗುತ್ತಿದ್ದ ವಿಷ್ಣುಮೂರ್ತಿ ಬಸ್ಸಿನ ಕ್ಲೀನರ್‌, ಅವನ ಹೆಸರು ಸಾದಿಕ್‌ ಅಂತ. ಅರೆಗಡ್ಡ ಬಿಟ್ಟ ಬಿಳಿಯ ಚಂದದ ಹುಡುಗ. ಕ್ಲೀನರ್‌ ಕೆಲಸ ಮಾಡುತ್ತಲೇ ಬಸ್‌ ಡ್ರೈವಿಂಗ್‌‌‌‌ನ್ನೂ ಕಲಿಯುತ್ತಿದ್ದ.

ಬೆಳಗ್ಗೆ ಎಂಟೂ ಕಾಲಕ್ಕೆ ವಿಷ್ಣುಮೂರ್ತಿ ಬಸ್ ನಮ್ಮ ಸ್ಟಾಪ್ ಬಿಡುತ್ತಿತ್ತು. ಎಂಟು ಗಂಟೆಗೆ ಮನೆಬಿಟ್ಟು ಅರ್ಧಮೈಲು ನಡೆದು ಭರ್ತಿ ಎಂಟೂ ಕಾಲಕ್ಕೆ ಬಸ್ ಇನ್ನೇನು ಹೊರಡುತ್ತದೆ ಅನ್ನುವಾಗ, ಓಡಿಹೋಗಿ ಬಸ್‌ ಹತ್ತುತ್ತಿದ್ದೆ. ಸಾದಿಕ್‌ ಬಾಗಿಲ ಬದಿ ನಿಂತಿರುತ್ತಿದ್ದ. ನಾನು ಹತ್ತಿದ ಕೂಡಲೇ ಕಿವಿ ಹರಿದುಹೋಗುವಂತೆ ವಿಷಲ್ ಹೊಡೆಯುತ್ತಿದ್ದ. ಡ್ರೈವರ್‌ ಅವನ ಖಾಸಾ ಅಣ್ಣನೇ. ನಾನು ಹತ್ತಿ ಕೂತ ಮೇಲೆ ನನ್ನ ಸ್ಥಿತಿ ನೋಡಿ ನಗುತ್ತಾ ಬಸ್‌ ಓಡಿಸುತ್ತಿದ್ದ. ಬಾಗಿಲ ಬಳಿ ಅವನನ್ನು ದಾಟಿ ಬರುವಾಗ ಅದೇಕೋ ಒಂಥರಾ ಅನಿಸುತ್ತಿತ್ತು. ಮತ್ತೆ ಕಿಟಕಿ ಹತ್ತಿರ ಕೂತು ಆಗಾಗ ಅವನ ಮುಖ ನೋಡುತ್ತಿದ್ದೆ. ಆ ಪುಣ್ಯಾತ್ಮ ಬಾಗಿಲ ಬಳಿ ನಿಂತು ಬಸ್ಸಿನ ಗಾಳಿಗೆ ಮುಖವೊಡ್ಡಿ ಚೊಂಪೆ ಕೂದಲನ್ನು ಹಾರಿಸುತ್ತಾ ಸ್ಟೈಲ್ ಹೊಡೆಯುತ್ತಿದ್ದ. ಆತ ನನ್ನತ್ತ ನೋಡುತ್ತಿಲ್ಲ, ಅನ್ನುವುದು ತಿಳಿದು ಒಳಗೊಳಗೇ ಬೇಜಾರಾಗಿ, ‘ನಾನೆಷ್ಟು ಪಾಪ’ ಅಂತ ನನ್ನ ಬಗೆಗೇ ಮರುಕಪಡುತ್ತಿದ್ದೆ.

ನಾನೊಬ್ಬಳು ಅಂತಲ್ಲ, ನಮ್ಮ ಬಸ್ಸಿನಲ್ಲಿ ಹೋಗುವ ಎಲ್ಲಾ ಹುಡುಗಿಯರೂ ಅವನನ್ನು ಇಷ್ಟಪಡುತ್ತಿದ್ದರು. ಒಳಗೇ ಮುಚ್ಚಿಡಲಿಕ್ಕಾಗದೇ ಆಗಾಗ ಅದು ಹೊರ ಬರುತ್ತಿತ್ತು.

ಆಮೇಲೆ ಒಂದು ದಿನ ಅವನು ಈ ಬಸ್ಸಿನ ಕ್ಲೀನರ್‍ ಕೆಲಸ ಬಿಟ್ಟ. ಅದು ನನಗೆ ಗೊತ್ತಾದದ್ದು ತಡವಾಗಿ. ಅಲ್ಲಿಯವರೆಗೆ ನಾನು ಬಸ್ ಅಷ್ಟು ದೂರದಲ್ಲಿರುವಾಗಲೇ ಬಾಗಿಲ ಹತ್ತಿರ ಅವನನ್ನು ಹುಡುಕುತ್ತಿದ್ದೆ. ಆಮೇಲೆ ಗೊತ್ತಾಯಿತು ಅವನು ವಿಶಾಲ್‌ ಬಸ್ಸಿನಲ್ಲಿ ಡ್ರೈವರ್‌ ಆಗಿ ಸೇರಿಕೊಂಡ ವಿಷಯ.

ನಾನು ಕೆಲವೊಮ್ಮೆ ಸಂಜೆ ಸ್ಕೂಲ್ ಮುಗಿಸಿ ಬರುವಾಗ ಅವನ ಬಸ್ಸು ಬರುತ್ತಿತ್ತು. ಆಗಲೂ ಕದ್ದು ಕದ್ದು ಅವನನ್ನ ನೋಡುತ್ತಿದ್ದೆ. ಅವರು ಎಂದಿನಂತೆ ಚೊಂಪೆ ಕೂದಲು ಹಾರಿಸುತ್ತಾ ಫೋಸು ಕೊಡುತ್ತಿದ್ದ.
ಈಗ ಡ್ರೈವರ್‌ ಆದ ಕಾರಣ ಅವನ ಮುಖದಲ್ಲಿ ಒಂಥರಾ ಗತ್ತೂ ಕಾಣುತ್ತಿತ್ತು.

ಮುಂದೆ ಕಾಲೇಜು ಸೇರಿದ ಮೇಲೆ ನಾನು ಹಾಸ್ಟೆಲ್ ಸೇರಿದ ಕಾರಣ ನಿಧಾನಕ್ಕೆ ಅವನ ನೆನಪು ಮರೆಯಾಯಿತು.

ಬಹುಶಃ ಅದಾದ ಮೇಲೆ ಅವನು ನನಗೆ ಸಿಕ್ಕಿದ್ದು ತಿಂಗಳ ಹಿಂದೆ ಊರಿಗೆ ಹೋದಾಗ. ನೀನಾಸಂ ಶಿಬಿರದಿಂದ ಅರ್ಧಕ್ಕೇ ಹೊರನಡೆದವಳು ಸೀದಾ ಹೋದದ್ದು ಮನೆಗೆ. ಆಗ ಕಾರ್ಕಳದಲ್ಲಿ ವಿಶಾಲ್ ಬಸ್‌ ನಿಂತಿತ್ತು. ನಾನು ಅತ್ತ ನೋಡುತ್ತಾ ನಿಂತಾಗ ಬಾಯಿತುಂಬಾ ಪಾನ್‌ ತುಂಬಿಕೊಂಬಿಕೊಂಡು ಘಂ ಅನ್ನುವ ವಾಸನೆಯೊಂದಿಗೆ ಬಂದು ಜೋರಾಗಿ ಬಾಗಿಲೆಳೆದು ಬಸ್ ಸ್ಟಾರ್ಟ್‌ ಮಾಡಿದ.

ಆ ಬಸ್‌ ಕೆರ್ವಾಶೆಗೆ ಹೊರಟಿದ್ದರೂ ನಾನು ಆ ಬಸ್ಸಿಗೆ ಹತ್ತಲಿಲ್ಲ. ಬೇರೊಂದು ಬಸ್ಸಿಗೆ ಕಾಯುತ್ತಾ ಕುಳಿತೆ. ಬಸ್‌ ಹೋದ ಮೇಲೆ, ಛೇ!ಅದೇ ಬಸ್‌ ಹಿಡಿಯಬೇಕಿತ್ತು ಅಂತನಿಸಿತು. ಸ್ವಲ್ಪ ಹೊತ್ತಾದ ಮೇಲೆ ಮತ್ತೊಂದು ಬಸ್‌ ಬಂತು. ಹತ್ತಿದೆ. ಸ್ವಲ್ಪ ದೂರ ಹೋಗಿರಬೇಕಷ್ಟೇ ನಮ್ಮ ಬಸ್‌ ಅವನಿದ್ದ ಬಸ್‌ನ್ನು ಓವರ್‌ಟೇಕ್ ಮಾಡಿ ಹೋಯಿತು. ನಾನತ್ತ ತಿರುಗಿದೆ. ಆತ ಗಾಳಿಗೆ ಮುಖವೊಡ್ಡಿ ಚೊಂಪೆಗೂದಲು ಹಾರಿಸುತ್ತಾ ನನ್ನತ್ತ ಕಣ್ ಮಿಟುಕಿಸಿದ!

32 comments:

ಹರೀಶ ಮಾಂಬಾಡಿ said...

ಎಂಥ ನೆನಪು....!

ಸಂದೀಪ್ ಕಾಮತ್ said...

ಮಂಗಳೂರಿನ ಬಸ್ಸುಗಳದ್ದೇ ಒಂದು ಸವಿ ನೆನಪುಗಳು!

ಹಳ್ಳಿಕನ್ನಡ said...

excellent.

jomon varghese said...

ಚೆಂದದ ಬರಹ. ಚೆಂದದ ಪ್ರೀತಿ.

Jagali bhaagavata said...

ನಂಗೆ ಸಾದಿಕ್ ಪರಿಚಯ ಇದೆ. ಏನಾದ್ರೂ ತಿಳಿಸ್ಬೇಕಾ ಅವ್ನಿಗೆ? :-)

ರಾಜೇಶ್ ನಾಯ್ಕ said...

ಆಹ್, ಎಷ್ಟು ಚಂದದ ನೆನಪು!

ಸಂದೀಪ್ ಕಾಮತ್ said...

ಸಾದಿಕ್ ಗೆ ಈಗ ಮದುವೆ ಆಗಿ ಮಕ್ಕಳಿರುತ್ತೆ sure!!

ರಾಧಿಕಾ ವಿಟ್ಲ said...

ಆಹಾ... ಪ್ರಿಯೇ..
.. ಸೈಕಾಲಜಿ ಕ್ಲಾಸಿನ ಇಂಥ ಪುಟ್ಟು ಪ್ರೀತಿಗಳು ಇನ್ನೂ ಚೆನ್ನಾಗಿದ್ದವು ಅಲ್ವೇ.. ಈಗ ಏನಿದ್ರೂ ಕೆಲಸ.. ಕೆಲಸ..
ಮುದ್ದಾಗಿದೆ ಬರಹ!

- ರಾಧಿಕಾ

Sushrutha Dodderi said...

ಎಷ್ಟ್ ಚನಾಗ್ ಬರ್ದಿದೀರ, ಇಷ್ಟೇ ಚಿಕ್ಕ ಜಾಗದಲ್ಲಿ... ಸಖತ್ ಇಷ್ಟ ಆಯ್ತು.

dinesh said...

ತುಂಬಾ ನವಿರು ಭಾವನೆಗಳು... ಸಣ್ಣ ಬರಹದಲ್ಲಿ ..ದೊಡ್ಡ ಖುಷಿಯನ್ನು ತುಂಬಾ ಸುಂದರವಾಗಿ ಹಿಡಿದಿಟ್ಟಿದ್ದರಿ. ಸೂಪರ್್ .....

ಪ್ರಿಯಾ ಕೆರ್ವಾಶೆ said...

ಮಾಂಬಾಡಿ,
ಇಂತಹ ಪುಟ್ಟ ನೆನಪುಗಳೇ ನಮ್ಮನ್ನ ಒಮ್ಮೆ ಗಕ್ಕನೆ ತಿರುಗಿಸಿಬಿಡುತ್ತವಲ್ಲ?

ಸಂದೀಪ್‌,
ಈಗ್ಲೂ ಇಲ್ಲಿಯ ಸರ್ಕಾರಿ ಬಸ್‌ನಲ್ಲಿ ಕೂತು ಅದು ಆಮೆಯ ಹಾಗೆ ಕುಂಟುತ್ತಾ ಹೋಗುವಾಗ, ನಮ್ಮ ಕುಡ್ಲ ಕಾರ್ಕಳ ಎಕ್ಸ್‌ಪ್ರಸ್‌ ಬಸ್‌ ನೆನಪಾಗ್ತದೆ. ಎರಡೂ ಕಡೆಯೂ ಎಕ್ಸ್‌ಟ್ರಿಮಿಟಿಯೇ. ಆದ್ರೂ ನಮ್ಮ ಬಸ್‌ಗಳ ರೀತಿಯೇ ಬೇರೆ ಬಿಡಿ.

ಹಳ್ಳಿ ಕನ್ನಡ,
ಥಾಂಕ್ ಯೂ. ಆ ಕಡೆ ಹೋಗಲು ಪ್ರಯತ್ನಿಸುತ್ತೇನೆ.

ಜೋಮನ್‌ ,
ನಿಜಕ್ಕೂ ಹೌದಾ? ಈ ಪಾಮರಳು ಆಭಾರಿ.

ಪ್ರಿಯಾ ಕೆರ್ವಾಶೆ said...

ಭಾಗವತರೇ,
ಬ್ಲಾಗ್‌ನಲ್ಲಿ ಅಮೆರಿಕದ ಎಡ್ರೆಸ್‌ ಹಾಕಿದೀರ.ಈ ಪುಣ್ಯಾತ್ಮ ಅಲ್ಲಿ ಸಿಗಲಿಕ್ಕಿಲ್ಲ ಬಿಡಿ, ಎಲ್ಲಾದ್ರೂ ಸಿಕ್ಕಿದ್ರೆ ಸ್ಟೈಲ್ ಹೊಡೆಯೋದು ಸ್ವಲ್ಪ ಕಡಿಮೆ ಮಾಡ್ಲಿಕ್ಕೆ ಹೇಳಿ.

ರಾಜೇಶ್‌,
ಈ ಐಟಿ ಸಿಟಿಯಲ್ಲಿ ನಮ್ಮನ್ನು ಜೀವಂತವಾಗಿಡೋದು ಇಂತಹ ನೆನಪು, ಕನಸುಗಳೇ. ಥಾಂಕ್ಯೂ..

ಸಂದೀಪ್‌,
ಅವನನ್ನ ನೋಡಿದ್ರೆ ಹಾಗೆ ಅನ್‌ಸಲ್ಲ.

ರಾಧಿಕಾ,
ಸೈಕಾಲಜಿ ಕ್ಲಾಸಿನ ಕಿಟಿಕಿ ಬದಿ ಬೆಂಚಿನ ಕರಾಮತ್ತು ನಮಗೆ ಮಾತ್ರ ಗೊತ್ತು ಬಿಡು! ಕರೀಂ ಸಾರ್‌ ಬಹಳಾ ನೆನಪಾಗ್ತಾರೆ.

ಪ್ರಿಯಾ ಕೆರ್ವಾಶೆ said...

ಸುಶ್ರುತ,
ನಿಮ್‌ ಚೆಂದದ ಮನಸ್ಸಿಗೆ ಹಾಗೆ ಅನ್ನಿಸಿರಬಹುದು. ನಿಮ್ಮ ದೀಪಾವಳಿ ಬರಹ ತುಂಬ ಇಷ್ಟ ಆಯ್ತು.

ದಿನೇಶ್‌,
ನನ್ನ ಬರಹ ಇಷ್ಟ ಆದ್ರೆ ಅದಕ್ಕಿಂತ ಖುಷಿ ಬೇಕೇನ್ರಿ? ಆದ್ರೂ ನೀವು ಹೇಳಿದಷ್ಟು ಚೆನ್ನಾಗಿ ಬರೆಯಲು ಪ್ರಯತ್ನಿಸ್ತೀನಿ.

www.kumararaitha.com said...

ಇದು ಕಥೆ ಅಂದರೆ ಕಥೆ;ನೆನಪು ಅಂದರೆ ನೆನಪು.ಬರಹ ಚೆಂದ

ಚಂದ್ರಕಾಂತ ಎಸ್ said...

ನಮಸ್ತೆ ಪ್ರಿಯಾ
ಇದು ನಿಮ್ಮ ಬ್ಲಾಗ್ ಲೋಕಕ್ಕೆ ನನ್ನ ಮೊದಲ ಪ್ರವೇಶ. ನಿಮ್ಮ ಸರಳ ಶೈಲಿ ಬಹಳ ಇಷ್ಟವಾಯಿತು.

ಗಿರೀಶ್ ರಾವ್, ಎಚ್ (ಜೋಗಿ) said...

ಲವ್ಲೀ...
ಎಂಥಾ ಕ್ಲೀನರ್.
ನಿಮ್ಮ ಬರಹ ಕೂಡ.
-ಜೋಗಿ

chetana said...

ಚಿಕ್ಕ, ಚೊಕ್ಕ, ಸುಂದರ ಬರಹ. ತುಂಬಾ ನವಿರಾಗಿದೆ. ಇಷ್ಟವಾಯ್ತು.

- ಚೇತನಾ ತೀರ್ಥಹಳ್ಳಿ

Jagali bhaagavata said...

ಅಮೆರಿಕದ ವಿಳಾಸ ಇದ್ದ ಕೂಡ್ಲೇ ಎಂತ ಆಯ್ತು? ಊರಿಗೆ ಹೋದಾಗ ಸಾದಿಕ್ ಸಿಗ್ತಾನೆ :-) ಆಯ್ತು, ನೀವು ಹೇಳಿದ್ದು, ಚೊಂಪೆ ಕೂದ್ಲು ಹಾರಿಸೋದು ಬಿಡ್ಬೇಕಂತೆ ಅಂತ ಹೇಳ್ತೀನಿ, ಬಿಡಿ:-)

Harisha - ಹರೀಶ said...

ಇನ್ನೂ ಮರೆತಿಲ್ವಾ :-P

ರಾಧಾಕೃಷ್ಣ ಆನೆಗುಂಡಿ. said...

ಭಾಗವತರಿಗೆ ಸಿಕ್ಕಿಲ್ಲವಾದರೂ ನನಗೆ ಸಿಕ್ಕೆ ಸಿಗುತ್ತಾನೆ.

ಚಂದದ ಬರಹ ನಿಮ್ಮ ನೆನಪು ನನ್ನ ಹಳೆಯ ಕನಸುಗಳನ್ನು ಕೆದಕಿತಲ್ವ..........

Jagali bhaagavata said...

ಮತ್ತೆ, ನೀವು ಹೀಗೆಲ್ಲ ಬರೆದ್ರೆ ನಿಮ್ಮ ಕೆನ್ನೆ ಚಿವುಟುವವರಿಗೆ ಬೇಜಾರಗಲ್ವ? :-)

ಸಂದೀಪ್ ಕಾಮತ್ said...

ನೀವು ’ಕಲಾಕ್ಷೇತ್ರ’ ನಡೆಸಿ ಕೊಡ್ತೀರಾ ಅಲ್ವಾ? ಮೊನ್ನೆ ನೋಡಿದೆ ಗುಡ್...

ಆಲಾಪಿನಿ said...

ಜೋಗಿಯವರು ಲವ್ಲಿ ಅಂದ್ಮೇಲೆ ಲವ್ಲಿನೇ ಬಿಡು...!!!

ಮೌನಿ said...

ನೋಡಲಿಕ್ಕೂ ಲವ್ಲಿ, ಲವ್ಲಿ.
ಓದಲಿಕ್ಕೂ ಲವ್ಲಿ, ಲವ್ಲಿ.
ಮುದ್ದು ಮುದ್ದಾಗಿತ್ತು ನಿಮ್ಮ ಪುಟ್ಟ ಪ್ರೀತಿ ಪ್ರಿಯಾ..

ಪ್ರಿಯಾ ಕೆರ್ವಾಶೆ said...

ಕುಮಾರ ರೈತ,
ಹೇಗಿದೆ ಬಳ್ಳಾರಿ? ನನ್ನ ಬರಹ ಮೆಚ್ಚಿಕೊಂಡದ್ದಕ್ಕೆ ಥಾಂಕ್ಸ್‌.

ಚಂದ್ರಕಾಂತ್‌,
ಅಕ್ಷರ ಹೂವಿಗೆ ಸ್ವಾಗತ, ಸರಳತೆ ಅಂದ್ರೆ ನಂಗೂ ಇಷ್ಟ.

ಜೋಗಿ ಸಾರ್‌,
ಹೌದು,ಎಷ್ಟು ಚಂದ ಇದಾನೆ ಗೊತ್ತಾ? ಈಗ ಅವನ ಡ್ರೈವಿಂಗ್‌ ನೋಡ್ಬೇಕು ನೀವು. ಆ ರೋಡ್‌ನಲ್ಲೂ ಎಕ್ಸ್‌ಪ್ರೆಸ್‌ ರೈಲಿನ ಹಾಗೆ ಬಸ್‌ ಬಿಡ್ತಾನೆ.

ಚೇತನಾ,
ನಿಮ್ಮ ಪ್ರೀತಿಯ ಪ್ರತಿಕ್ರಿಯೆ ನಂಗೂ ಇಷ್ಟ ಆಯ್ತು. ನಿಮ್ಮ ಬರಹನೂ.

ಜಗುಲಿ ಭಾಗವತರೇ,
ನೀವೇನಕ್ಕೆ ಒಗ್ಗರಣೆ ಸೇರಿಸುವುದು? ಅವನು ಚೊಂಪೆ ಕೂದಲು ಹಾರಿಸೋದು ನಂಗಿಷ್ಟ. ಆದರೆ ನೋಡಿಯೂ ನೋಡದ ಹಾಗೆ ಮಾಡುತ್ತಾ ಸ್ಟೈಲ್‌ ಹೊಡೆಯೋದು ಕಂಡು ಕೋಪ ಬರತ್ತೆ.
ಕೆನ್ನೆ ಚಿವುಟೋ ಹುಡುಗ ಸಿಟ್ಟಾಗಿದ್ದಾನೋ ಇಲ್ವೋ ಗೊತ್ತಿಲ್ಲ. ಆದ್ರೆ, ನೀವು ಹೀಗೆ ಕಮೆಂಟ್‌ ಮಾಡಿದ ಮೇಲೆ ಖಂಡಿತಾ ಬೇಜಾರು ಮಾಡ್ಕೋತಾನೆ. ನಿಮ್ಗೂ ಅದೇ ತಾನೇ ಬೇಕಾಗಿರೋದು?

ಪ್ರಿಯಾ ಕೆರ್ವಾಶೆ said...

ಹರೀಶ್‌,
ಖಂಡಿತಾ ಮರೆತಿಲ್ಲ. ಮರೆಯೋದೂ ಇಲ್ಲ.

ರಾಧಾಕೃಷ್ಣ,
ಅಂವ ಸಿಕ್ಕಿದ್ರೆ ನನ್ನ ಹೆಸರು ಮಾತ್ರ ಹೇಳಬೇಡಿ, ನಮಗಿನ್ನೂ ರಾಜಿ ಆಗಿಲ್ಲ.
ಮತ್ತೆ ನಿಮ್ಮ ಹಳೆಯ ನೆನಪನ್ನ ನಮ್ಮ ಮುಂದೂ ಹರವಿಕೊಳ್ಳರಲ್ಲಾ..

ಸಂದೀಪ್‌,
ನಿಮ್ಗೆ ಅದೆಲ್ಲ ಹೇಗೆ ಗೊತ್ತಾಯ್ತು? ಎನಿವೇ ಥಾಂಕ್ಸ್‌.

ಶ್ರೀದೇವಿ,
ನಿನ್‌ ಕಮೆಂಟೂ ಲವ್ಲೀನೇ ಬಿಡು.

ಪ್ರಶಾಂತ್‌,
ನೋಡಲಿಕ್ಕೂ ಲವ್ಲೀ ಅಂದ್ರೆ? ಆ ಪುಣಾತ್ಮ ನಿಮಗೆಲ್ಲಾದ್ರೂ ಸಿಕ್ಕಿದ್ನಾ? ಬರವಣಿಗೆ ಇಷ್ಟವಾದ್ರೆ ಮತ್ತೇನು ಬೇಕು?

Jagali bhaagavata said...

ಓಹ್ಹೋ ಹಾಗಾ? ಆಯ್ತು. ಅದನ್ನೇ ಹೇಳೋಣ ಅವ್ನಿಗೆ ಬಿಡಿ :-)
ಮತ್ತೆ, ಯಾರಾದ್ರೂ ಬೇಜಾರಾಗ್ಲಿ ಅಂತ ಬರಿತಾರ? ಛೇ ಛೇ...ಅಮಾಯಕ ಭಾಗ್ವತ್ರ ಮೇಲೆ ಎಂಥ ಮಿಥ್ಯಾರೋಪ :-(

Anonymous said...

ಚನಾಗಿದೆ ಕಣ್ರೀ! ನಂಗೂ ಏನೇನೋ ನೆನ್ಪಾಯ್ತು!:)

ರೇಶ್ಮಾ ಎನ್ said...

ತುಂಬಾ ತುಂಬಾ ಚೆನ್ನಾಗಿದೆ ಪ್ರಿಯಾ...

ರಾಧಾಕೃಷ್ಣ ಆನೆಗುಂಡಿ. said...

ಹಳೆಯ ನೆನಪೆಲ್ಲ ಮೂಟೆ ಕಟ್ಟಿದ್ದೆ. ಈಗ ಬಿಡಿಸಲು ತಯಾರಾಗುತ್ತೇನೆ...........

ರವಿರಾಜ್ ಆರ್.ಗಲಗಲಿ said...

madem blog nodiddakka dhanyavada, nimma salaheyante cinema bagge spl agi baritene, nimma salahe, suchane sada erali

Ranjith Poojary Kervashe said...

hi priya,
my name is ranjith m poojary.
what a writting tallent yar excellent.good keep it up,iam also your classmate,any way all stories are very good,

ranjith m poojary from kervashe