Tuesday, November 25, 2008
ನನ್ನ ಪ್ರೀತಿಯ ಕಂಗನಾ...
ಕತ್ತಲೆಯ ಪರದೆ ಸರಿದಾಗ ಕಣ್ ಕೋರೈಸುವ ಬೆಳಕು. ಅಲ್ಲೊಬ್ಬ ಸುಂದರಿ ಪ್ರತ್ಯಕ್ಷ. ನೀಳ ಕಾಯವನ್ನು ಬಳುಕಿಸುತ್ತಾ, ತುಂಬು ಗುಂಗುರು ಕೂದಲೊಳಗೇ ಮಾದಕ ಮುಖ ತೋರಿಸುತ್ತಾ ಮುಂದೆ ಬಂದು ಮಿಂಚು ನೋಟ ಬೀರಿ ಬೀರುತ್ತಾಳೆ. ಅಹ್, ಅದೆಂಥಾ ಚೂಪು, ನೇರ ದೃಷ್ಟಿ. ಕಂಗನಾ ರಾನಾವತ್ ಎಂಬ ಹುಚ್ಚು ಹುಡುಗಿ ಆ ಕ್ಷಣ ನಮ್ಮೊಳಗೆ ತುಂಬಿ ಹೋಗುತ್ತಾಳೆ. ‘ಫ್ಯಾಶನ್ ’ ಸಿನಿಮಾದಲ್ಲಿ ಫ್ಯಾಶನ್ ಪ್ರಪಂಚದ ಅಷ್ಟೂ ಅಧ್ವಾನಗಳನ್ನು ಮೈತುಂಬಿಕೊಂಡಂತೆ ಬರುವ ಪಾತ್ರ ಕಂಗನಾದು. ಚಿತ್ರದಲ್ಲಿ ಆಕೆ ಸೊನಾಲಿ. ಫ್ಯಾಶನ್ ಜಗತ್ತಿನ ದುರಂತಗಳಿಗೆ, ನೋವುಗಳಿಗೆ ಮುಖವಾಣಿಯಾಗುತ್ತಾ ಹೋಗುವ ಪಾತ್ರ ಆಕೆಯದು.
ಈ ಚಿತ್ರದ ನಾಯಕಿ ಮೇಘನಾ ಫ್ಯಾಶನ್ ಲೋಕಕ್ಕೆ ಹೆಜ್ಜೆ ಇಡುವ ಹೊತ್ತಿಗೆ, ಸೋನಾಲಿ(ಕಂಗನಾ) ಪ್ರತಿಷ್ಠಿತ ಬ್ರಾಂಡ್ನ ರೂಪದರ್ಶಿ. ಆ ಹೊತ್ತಿಗೆ ಈಕೆ ಬಲು ಎತ್ತರಕ್ಕೇರಿದ ಫ್ಯಾಶನ್ ಲೋಕದ ಅಧಿನಾಯಕಿಯಂತೆ ಅಹಂಕಾರದಿಂದ ಕನಲಿ ಮೈಮರೆಯುತ್ತಾಳೆ ಸೊನಾಲಿ. ಸದಾ ಡ್ರಕ್ಸ್ನಿಂದ ಅಮಲೇರಿದ ಕಣ್ಣುಗಳಲ್ಲಿ ಜಗತ್ತನ್ನು ನೋಡುತ್ತಾಳೆ.
ಇದಕ್ಕೂ ಮೊದಲಿನ ಒಂದು ದೃಶ್ಯ ಫ್ಯಾಶನ್ ಜಗತ್ತಿನ ಅಂತರಾಳಕ್ಕೆ ಕನ್ನಡಿ ಹಿಡಿಯುತ್ತದೆ. ಅದು ಮುಂಬಯಿನ ಪ್ರತಿಷ್ಟಿತ ಪಾರ್ಟಿ. ಅಲ್ಲಿ ಒಂದು ಕಡೆ ಪಾನ ಪಾರ್ಟಿ ರಂಗೇರುತ್ತಿದ್ದರೆ, ಇನ್ನೊಂದೆಡೆ ಮಾನಿನಿಯರ ಕೇಕೆಯೂ ಮುಗಿಲುಮುಟ್ಟುತ್ತದೆ. ದೊಡ್ಡ ಕಡಾಯಿಯಲ್ಲಿ ಕೊಳೆತ ದ್ರಾಕ್ಷಿ ತುಳಿ ತುಳಿಯುತ್ತಾ ಮಕ್ಕಳಾಟದಂತೆ ಅದರಲ್ಲಿ ಖುಷಿ ಪಡುತ್ತಿರುತ್ತಾರೆ ಈ ಮಂದಿ... ಮೂಲೆಯಲ್ಲಿ ಶೋಕಿಗೆಂದು ಕೈಯಲ್ಲಿ ವೈನ್ ತುಂಬಿದ ಗ್ಲಾಸ್ ಹಿಡಿದ ಹಿರಿಯ ಮಹಿಳೆಯೊಬ್ಬಳು ಅರ್ಥಗರ್ಭಿತವಾಗಿ ಅತ್ತ ನೋಡುತ್ತಾಳೆ. ಅದು
ಫ್ಯಾಶನ್ ಪ್ರಪಂಚವನ್ನು ಸಾಕ್ಷೀಕರಿಸುವ ಮಾರ್ಮಿಕ ದೃಶ್ಯ. ಆ ಜಗತ್ತಿನ ಮಂದಿಗೆ ತಾಜಾ ದ್ರಾಕ್ಷಿ ಬೇಡ. ಆದರೆ ದ್ರಾಕ್ಷಿಯನ್ನು ಕೊಳೆಸಿ ತುಳಿದು ವೈನ್ನ ರೂಪದಲ್ಲಿ ಜರಡಿಗೆ ಹಾಕಿದರೆ ಅದನ್ನು ಚಪ್ಪರಿಸಲು ಅದೆಷ್ಟು ಮಂದಿ...
ಇದನ್ನು ಸತ್ಯರೂಪದಲ್ಲಿ ಸಂಕೇತಿಸುವುದೇ ಸೊನಾಲಿ. ಜಗತ್ತೇ ತನ್ನ ಕೈಯಬುಗರಿ ಎಂದುಕೊಂಡಿದ್ದ ಸೊನಾಲಿಗೆ ಈ ಭ್ರಮೆ ಅರಿವಿಗೆ ಬರುವುದು ಕೆಲಸದಿಂದ ಹೊರತಳ್ಳಲ್ಪಟ್ಟಾಗಲೇ. ಅದುವರೆಗೆ ಕೋರೈಸುವ ಫ್ಯಾಶನ್ ಜಗತ್ತಿನ ಕತ್ತಲಮೂಲೆಯಲ್ಲಿ ಅವಿತಿದ್ದ ವಾಸ್ತವ ಇದ್ದಕ್ಕಿದ್ದ ಹಾಗೆ ಕಣ್ಮುಂದೆ ಬಂದಾಗ ಆಕೆ ತತ್ತರಿಸಿ ಹೋಗುತ್ತಾಳೆ. ಅವಳ ಸ್ಥಾನಕ್ಕೆ ಆ ಕಂಪೆನಿಯ ಮುಖವಾಣಿಯಾಗಿ ಬರುವವಳು ನಾಯಕಿ ಮೇಘನಾ ಮಾಥುರ್. ಮುಂದೆ ಈ ಸೊನಾಲಿ ದುರಂತ ನಾಯಕಿ ಅಥವಾ ಫ್ಯಾಶನ್ ಲೋಕದ ಕಮರಿದ ಹೂವು.
ಫ್ಯಾಶನ್ ಲೋಕದ ಹಲವು ದುರಂತಗಳಿಗೆ ಆಕೆ ಸಾಕ್ಷಿಯಾಗುತ್ತಾಳೆ. ಕೆಲ ವರ್ಷಗಳ ಹಿಂದೆ ಫ್ಯಾಶನ್ ಶೋವೊಂದರಲ್ಲಿ ಇದ್ದಕ್ಕಿದ್ದ ಹಾಗೆ ಬಟ್ಟೆ ಕಳಚಿಬಿದ್ದ ರೂಪದರ್ಶಿಯನ್ನು ಈಕೆ ಚಿತ್ರದಲ್ಲಿ ಪ್ರತಿನಿಧಿಸುತ್ತಾಳೆ. ಸುತ್ತಿ ಬರುವ ಅವಮಾನಗಳಲ್ಲಿ ದೊಡ್ಡ ಅಲೆ ಇದು. ಈ ಅಲೆ ಆಕೆಯನ್ನು ಕೊಚ್ಚಿಕೊಂಡೇ ಹೋಗುತ್ತದೆ. ಪ್ರವಾಹದ ವಿರುದ್ಧ ಈಜಲಾಗದ ಆಕೆ ಸರ್ವಸ್ವವನ್ನೂ ಕಳೆದುಕೊಂಡು ಹುಚ್ಚಿಯಾಗಿ ಬೀದಿಗೆ ಬೀಳುತ್ತಾಳೆ.
ಆಗ ಇತ್ತೀಚೆಗೆ ಮಾದಕ ವ್ಯಸನಿ ರೂಪದರ್ಶಿಯೊಬ್ಬಳು ಹುಚ್ಚಿಯಾಗಿ ಬೀದಿಯಲ್ಲಿ ಅಲೆದಾಡುತ್ತಿದ್ದ ಸುದ್ದಿಯಲ್ಲಿ ಕಥೆ ಕೇಂದ್ರೀಕೃತವಾಗುತ್ತದೆ. ಘಟನೆ, ಘಟನೆಗಳ ಮೂಲಕ ವಾಸ್ತವಕ್ಕೆ ಹತ್ತಿರವಾಗಿ, ಮನಸ್ಸಿನಾಳದಲ್ಲಿ ಊರಿ ಬಿಡುತ್ತದೆ ಈ ದೃಶ್ಯ.
ಬಹುಶಃ ಈಕೆಯ ಹಣೆಯಲ್ಲಿ ದುರಂತವೇ ಬರೆದಿರಬೇಕು. ಇದರ ನಡುವೆ ಈಕೆ ಕಳೆದುಕೊಂಡದ್ದನ್ನು ತಾನು ಮೈದುಂಬಿಕೊಳ್ಳುತ್ತಾ, ಕೊನೆಗೆ ಈಕೆಯಂತೇ ಹತಾಶೆಯ ಪ್ರಪಾತಕ್ಕೆ ಬೀಳುತ್ತಾಳೆ ಈ ಚಿತ್ರದ ನಾಯಕಿ ಮೇಘನಾ. ಆದರೆ ಒಂದು ಹಂತದಲ್ಲಿ ನಾಯಕಿ ಎಚ್ಚೆತ್ತ ಕಾರಣ ಪರಿಣಾಮ ಸ್ವಲ್ಪ ಹಗುರಾಗುತ್ತದೆ. ಬಳಿಕ ನಾಯಕಿ ತನ್ನ ಪಾಪಪ್ರಜ್ಞೆಯ ಪ್ರತಿರೂಪದಂತಿರುವ ಬಲು ಎಚ್ಚರಿಕೆಯಿಂದ ಕಾಯುತ್ತಾಳೆ.ಆದರೆ, ಹೇಳಿ ಕೇಳಿ ದುರ್ಭರ ಅಂತ್ಯ ಮೊದಲೇ ನಿರ್ಧರಿತವಾದ ಕಾರಣ ಅದಕ್ಕೆ ಪ್ರತಿಯಾಡದೇ ಶರಣಾಗಿ ಬಿಡುತ್ತಾಳೆ ಸೊನಾಲಿ.
ಮಧು ಭಂಡಾಕರ್ ಎಂಬ ಪ್ರತಿಭಾವಂತ ನಿರ್ದೇಶಕನ ಕೈಯಲ್ಲಿ ಅಕ್ಷರಶಃ ಸೊನಾಲಿಯೇ ಆಗಿಬಿಡುತ್ತಾಳೆ ಕಂಗನಾ. ಆ ಕೆಚ್ಚು, ವ್ಯಂಗ್ಯ, ಮಾದಕತೆ, ಕೊನೆಗೆ ದೈನ್ಯ...ಇದರ ಜತೆಗೆ ಪಾತ್ರವನ್ನು ಆವಾಹಿಸಿಕೊಂಡು ರೂಪದರ್ಶಿಗಳ ಮೂರ್ತರೂಪವೇ ಆಗಿಬಿಡುತ್ತಾಳೆ ಕಂಗನಾ. ಗುಂಗುರು ಕೂದಲಿನಡಿ ಮಿನುಗುವ ಆಕೆಯ ಬೆಕ್ಕಿನ ಕಣ್ಣು ಫ್ಯಾಶನ್ ಜಗತ್ತಿನ ನಗ್ನಸತ್ಯವನ್ನು ಸಾರಿ ಸಾರಿ ಹೇಳುವಂತಿದೆ.
Subscribe to:
Post Comments (Atom)
9 comments:
very good selection. she is brilliant.
ಅವಳ ಕಣ್ಣುಗಳ ನಶೆಯೇ ಅವಳ ಚೆಲುವನ್ನೂ ದುರಂತವನ್ನೂ ಹೇಳುವಂತಿದೆ...
-
Goooooooood!!!!
-ಚಿತ್ರಾ
Yesterday only i watched that movie... `Fashion' is worth to watch. Madur Bandarkhar has put his best effort to expose the true facet of the world of `FASHION'... Good write up... ;)
ನಿಮ್ಮ ಈ ವಿಶ್ಲೇಷಣೆ ಓದಿ ಫ್ಯಾಶನ್ ಸಿನೆಮಾ ನೋಡಬೇಕೆನ್ನಿಸಿದೆ.ಬರಹದ ಶೈಲಿ ಚೆನ್ನ
Nice review....
ನಿಮ್ಮ ಈ ವಿಶ್ಲೇಷಣೆ ಓದಿ ಫ್ಯಾಶನ್ ಸಿನೆಮಾ ನೋಡಬೇಕೆನ್ನಿಸುತ್ತಿದೆ,ನಿರೂಪಣಾ ಶೈಲಿ ತುಂಬಾ ಚನ್ನಾಗಿದೆ
ಮಾದಕತೆ ಅನ್ನೋದು ಅದನ್ನೇ..ಬಣ್ಣದ ಬದುಕು ಬಹಳ ಕಾಲ ಉಳಿಯಲ್ಲ.ವಾಸ್ತವ ಅರಿಯುವ ಹೊತ್ತಿಗೆ ಬದುಕಿಗೆ ವಿಚಿತ್ರ ತಿರುವು ಬಂದಿರುತ್ತೆ.ಏನ್ಮಾಡೋದು ಗೆಳತಿ ಬದುಕೇ ಹಾಗೇ..ಅದ್ಕೆ ನಾನ್ ಹೇಳೋದು ಬದುಕು ಬಂದ ಹಾಗೆ ಸ್ವೀಕರಿಸ್ಬೇಕು.. ಸರೀನಾ..
ಫ್ಯಾಶನ್ ಸಿನಿಮಾ ಚೆನ್ನಾಗಿದೆ .. ನೀವು ತುಂಬ ಚೆನ್ನಾಗಿ ಸಿನಿಮಾದ ಬಗ್ಗೆ ವಿಮರ್ಶೆ ಮಾಡಿದ್ದಿರ .
ಚಿತ್ರದಲ್ಲಿ ಬರಿ ಗ್ಲಾಮರ್ ಜಗತ್ತಿನ ದುರಂತ ಅನ್ನಿಸದೇ .. ಯಶಸ್ಸಿನ ಬೆನ್ನು ಬಿದ್ದವರ ನೋವು ತಾಕಲಾಟ ಎನ್ನಬಹುದು
ಜನಪ್ರಿಯತೆಯ ತುತ್ತತುದಿಯಲ್ಲಿ ಕಾಣಸಿಗಬಹುದಾದ ಕಿತ್ತುತಿನ್ನುವ ಏಕಾಂತ,ಔದ್ಯೋಗಿಕ-ವೈಯಕ್ತಿಕ ಸಂಬಂಧಗಳ ತಾಕಲಾಟ,ಯಶಸ್ಸಿನ ಮೆಟ್ಟಿಲು ಏರುವಾಗ ಕಾಣಸಿಗುವ ಅವೇ ಮುಖಗಳನ್ನು ಇಳಿಯುವಾಗಲೂ ಎದುರುಗೊಳ್ಳಬೇಕಾದ ವೈರುಧ್ಯ..ಚಿತ್ರ ತುಂಬ ಕಾಡುತ್ತದೆ
very good
Post a Comment