Monday, March 9, 2009

ಮುದ್ದು ಬರೆದ ಮಳೆ ಸಾಲುಗಳ ನೆನಪು


ಯಾಕೋ ಆಗಸ ಬಿಕ್ಕುತಿದೆ


ಹುಣ್ಣಿಮೆ ಕಡಲೂ ಉಕ್ಕುತಿದೆ


ರೆಕ್ಕೆ ನೆನೆದ ಚಿತ್ತದ ಹಕ್ಕಿಯು


ಕನಸು ಕಾಳುಗಳ ಹೆಕ್ಕುತಿದೆ




-----****--------




ಗಾಳಿಯೂ ಆಡದ


ಬಿರುಮಳೆ ಧಾರೆಗೆ


ಕಲ್ಲೂ ಕರಗಿದೆ


ಮಾತೂ ಆಡದ ಪ್ರೀತಿಗೆ


ಮುನಿಸು ಎಲ್ಲೋ ಕರಗಿದೆ




----*****------



ತೊಟ ತೊಟ ತೊಟ್ಟಿಕ್ಕುತ ಡೈರಿಯ


ಪುಟ ಪುಟ ಒದ್ದೆಯಾಗಿಸಿ


ಬರೆದದ್ದ ಅಳಿಸಿ


ಬೀಗಿದವು ಮಳೆಹನಿಗಳು


ಹನಿಗಳ ಸ್ಪರ್ಶಕೆ ನೆಂದ


ಹಳೆ ನೆನಪ ಬೀಜಗಳು


ಚಿಗುರಿದವು!


----*****------


ಹೇಳು ಮಳೆಯೇ


ಸುರಿದು


ಷೋಡಶಿಯೊಬ್ಬಳ


ನೆನೆಸದಿದ್ದರೆ


ನೀ ಸುರಿದೇನು ಫಲ?


-----*****------



ಹಸಿರುಟ್ಟ ಪುಟ್ಟಬಿತ್ತಕ್ಕೆ


ಮಳೆಹನಿ ಸೇಕ


ಅಲ್ಲಯವರೆಗೂ ಶೋಕ


ನಂತರ ಮರಗಳೆಲ್ಲ ಅಶೋಕ






Thursday, February 12, 2009

ಸಾಹಿತ್ಯ ಜಾತ್ರಾ ವಿಶೇಷ !

ಚಿತ್ರದುರ್ಗದ ಸಾಹಿತ್ಯ ಸಮ್ಮೇಳನಕ್ಕೆ ಹೋಗಿ, ದೊಡ್ಡ ನಿಟ್ಟುಸಿರಿನೊಂದಿಗೆ ವಾಪಾಸು ಬಂದಿದ್ದೇನೆ. ಹೋಗುವಾಗ ಇದ್ದ ಉತ್ಸಾಹ ಬರುವಾಗ ಠುಸ್‌! ಒಂದು ಬಾರಿ ಸಮ್ಮೇಳನಕ್ಕೆ ಹೋದವಳು, ಸಮ್ಮೇಳನ ಮುಂದೂಡಿಕೆಯಾಗಿ ವಾಪಾಸು ಬರುವಾಗಲೇ ಅಂದುಕೊಂಡಿದ್ದೆ, ಯಾಕೋ ಎಡವಟ್ಟಾಗುತ್ತಿದೆ. ಅದು ಕೊನೆಯ ತನಕವೂ ಬೇತಾಳನ ಹಾಗೆ ಹಿಂಬಾಲಿಸುತ್ತಲೇ ಇತ್ತು.


ಮತ್ತೆ ಸಮ್ಮೇಳನ ಆರಂಭವಾದಾಗ, ಸೈಡ್‌ ಲೈಟ್ಸ್‌ ಅಂತ ಚಿತ್ರದುರ್ಗದ ವಿಶೇಷತೆಗಳನ್ನು ಸ್ಟೋರಿ ಮಾಡಬೇಕು ಅನ್ನುವ ಅಪ್ಪಣೆಯಾದ ಕಾರಣ, ಒಂದು ದಿನದ ಹಿಂದೆಯೇ ನಮ್ಮ ಸವಾರಿ ಚಿತ್ರದುರ್ಗದತ್ತ ದೌಡಾಯಿಸಿತ್ತು. ಅರ್ಧದಲ್ಲೇ ಗಾಡಿ ಕೆಟ್ಟು, ಲೈಟು ರಿಪೇರಿಯಾಗಿ ಚಿತ್ರದುರ್ಗ ತಲುಪಿದಾಗ ರಾತ್ರಿ ಎರಡು. ಹೋಗಿದ್ದೇನೋ ಹೋಗಾಯಿತು, ಮಲಗೋದೆಲ್ಲಿ? ಕೊನೆಗೂ ಮುರುಘಾ ಮಠದ ಕಡೆ ನಡೆದಾಗ, ಬಂದವರೆಲ್ಲ ಹುಡುಗರು ಅಂತ ಭಾವಿಸಿ ಒಂದು ಹಾಲ್‌ನಲ್ಲೇ ಒಂದಿಷ್ಟು ಹಾಸಿಗೆ ಹಾಕಿ ಮಲಗುವ ವ್ಯವಸ್ಥೆ ಮಾಡಿ ಮಠದೊಳಗೆಲ್ಲೋ ಹೋಗಿಬಿಟ್ಟರು.


ಆ ರಾತ್ರಿಯಲ್ಲಿ ಬೇರೆ ಯಾರನ್ನು ಕೇಳೋದು? ಕೊನೆಗೆ ನಮ್ಮ ಚಿತ್ರದುರ್ಗದ ರಿಪೋರ್ಟರ್‌ ಯಾರದೋ ಮನೆಯವರನ್ನು ಕಾಡಿ ಬೇಡಿ ಉಳಿದರ್ಧ ರಾತ್ರಿ ಕಳೆಯಲು ವ್ಯವಸ್ಥೆ ಮಾಡಿದರು. ಇನ್ನೇನು ನಿದ್ದೆ ಹತ್ತಿತು ಅನ್ನುವಷ್ಟರಲ್ಲಿ ಬೆಳಗೂ ಆಗಿತ್ತು. ಕಣ್ತೆರೆಯುವ ಮೊದಲೇ ಮೊಬೈಲ್‌ ಹೊಡೆದುಕೊಳ್ಳತೊಡಗಿತು. ಆಫೀಸ್‌ನಿಂದ ಫೋನ್‌. ಕೆರೆಮನೆ ಶಂಭು ಹೆಗಡೆ ತೀರ್‍ಕೊಂಡ್ರಂತೆ, ಅವರಿಗೆ ನೃತ್ಯ ಹೇಳಿಕೊಟ್ಟ ಮಾಯಾರಾವ್‌ ಮನೆ ಎಡ್ರೆಸ್‌ ಕೊಡಿ ಅಂತ ಆರ್ಡ್‌‌ರ್‍. ಕೊಡಲಿಕ್ಕೆ ನಂಗೆ ಗೊತ್ತಿದ್ರೆ ತಾನೇ? ಕೇಳಿ ಹೇಳ್ತೇನೆ ಅಂದೆ. ಕೂಡಲೇ ಕೆರೆಮನೆ ಶಂಭು ಹೆಗಡೆ ಫೈಲ್‌ ವಿಜುವಲ್‌ ಎಲ್ಲಿದೆ? ಅಂತ ಪ್ರಶ್ನೆ. ಅದಕ್ಕೂ ಸಮಜಾಯಿಶಿ ನೀಡಿಯಾಯಿತು. ಅಷ್ಟರಲ್ಲಿ ಮೊಬೈಲ್‌ ನೆಟ್‌ವರ್ಕ್ ಕಟ್‌ ಆಯ್ತು. ಟೆರೇಸ್‌ ಮೇಲಾದ್ರೂ ಸಿಗತ್ತಾ ಅಂತ ಹೋದ್ರೆ, ಅಲ್ಲಿ ಕಂಡ ದೃಶ್ಯ ವರ್ಣನಾತೀತ. ನಾನು ಅಲ್ಲಿ ಇಲ್ಲಿ ಓದಿಕೊಂಡಿದ್ದ ದೃಶ್ಯ ಕಣ್ಣು ಮುಂದೆಯೇ ಕಾಣಸಿಕ್ಕಿತ್ತು. ವಿಶಾಲವಾದ ಬಯಲಿನಲ್ಲಿ ಬಿಂದಿಗೆ ಹಿಡಿದ ಮಂದಿ ಅಲ್ಲಲ್ಲಿ ಕೂತು, ಅದ್ಯಾವುದೋ ಸುಖದ ಅಮಲಿನಲ್ಲಿ ಅರೆಗಣ್ಣಾಗಿದ್ದರು. ನಮಗೆ ತೀರಾ ಅಪರಿಚಿತವಾಗಿರುವ ಈ ಸನ್ನಿವೇಶವನ್ನು ಕಂಡು ಒಳಗೊಳಗೇ ನಗುತ್ತಾ ಮತ್ತೆ ಕೆಳಗೆ ಬಂದೆ.



ಆ ದಿನವಿಡೀ ಕೋಟೆ, ಚಂದವಳ್ಳಿ ತೋಟ ಶೂಟ್‌ ಮಾಡೋದ್ರಲ್ಲೇ ಕಳೆದು ಹೋಯಿತು. ಕೆಲ ರಾದ್ಧಾಂತಗಳು, ನಾಳಿನ ಕವರೇಜ್‌ ಪ್ಲಾನ್‌, ಅದು ಇದು ಅಂತ ಮಾತು ಮುಗಿಯೋ ಹೊತ್ತಿಗೆ ಗಂಟೆ ೧೨. ಹೊಟ್ಟೆಯೇನೋ ನಾಚಿಕೆ ಬಿಟ್ಟು ಚುರುಗುಟ್ಟುತ್ತಿತ್ತು. ಆದರೆ, ಅಷ್ಟೊತ್ತಿಗೆ, ಊಟಾನಾದ್ರೂ ಎಲ್ಲಿ ಸಿಗಬೇಕು? ದಾರಿಯಲ್ಲಿ ಯಾವುದೋ ಬಾರ್‌ ಆಂಡ್‌ ರೆಸ್ಟ್‌ರೆಂಟ್‌ ತೆರೆದಿತ್ತು. ನಮ್ಮ ಗ್ರೂಪ್‌ ಅಲ್ಲಿಗೆ ನುಗ್ಗಿದಾಗ ನಾನೂ ಹಿಂಬಾಲಿಸಿದೆ. ಊಟ ಮುಗಿಸಿ ನನಗೆ ಅಂತ ಬುಕ್‌ ಆಗಿರೋ ರೂಮ್‌ಗೆ ಬಂದ್ರೆ, ಆ ರೂಮನ್ನು ಆಗಲೇ ಆಕ್ರಮಿಸಿಕೊಂಡಾಗಿತ್ತು. ಜಪ್ಪಯ್ಯ ಅಂದ್ರೂ ಆ ಪುಣ್ಯಾತ್ಮ ರೂಂ ಬಿಟ್ಟು ಕೊಡ್ಲಿಲ್ಲ. ಬೇರೆ ಸ್ತ್ರೀ ಸಹೋದ್ಯೋಗಿಯೊಬ್ಬರಾದರೂ ಇದ್ದರೆ ಅವರೊಂದಿಗೆ ರೂಮು ಹಂಚಿಕೊಳ್ಳಬಹುದಿತ್ತು. ಆದರೆ, ದೇವರ ದಯದಿಂದ ಸ್ತ್ರೀ ಜೀವ ಅಂತ ಇದ್ದದ್ದು ನಾನು ಮಾತ್ರ. ಆ ಹೊತ್ತು ಮಧ್ಯ ರಾತ್ರಿ ೧.೩೦ ಗಂಟೆ. ಕೊನೆಗೆ ಹೊಟೇಲ್‌ನವರಿಗೇ ಕರುಣೆ ಉಕ್ಕಿ ಆ ರಾತ್ರಿಯ ಮಟ್ಟಿಗೆ ಒಂದು ಖಾಲಿ ರೂಂ ಸಿಕ್ಕಿತು. ಹೋಗಿ ಬಿದ್ದುಕೊಂಡೆ.


ಮತ್ತೆ ಬೆಳಗಿನ ದರ್ಶನ ಮಾಡಿಸಿದ್ದು ಅದೇ ಜಂಗಮ ದೂರವಾಣಿ. ‘ಪ್ರಿಯಾ, ಲೈನ್‌ ಹೋಲ್ಡ್‌ ಮಾಡಿದ್ದೀನಿ. ಈಗ ಫೋನೋ ಇದೆ. ರೆಡಿಯಾಗಿರು’ ಅಂದಿತು ಅತ್ತಲಿನ ದನಿ. ನಾನು ಬಾಯಿ ತೆರೆಯುವುದರೊಳಗೆ ಫೋನ್‌ ಹೋಲ್ಡ್‌ ಆಗಿತ್ತು. ಏಳು ಗಂಟೆಯ ನ್ಯೂಸ್‌ ಬುಲೆಟಿನ್‌ ಆರಂಭವಾಗಿತ್ತು. ಕೆಲವೇ ಕ್ಷಣಗಳಲ್ಲಿ ಲೈವ್‌ಗೆ ಫೋನ್‌ ಕನೆಕ್ಟ್‌ ಆಯಿತು. ನಾನು ಗಂಟಲು ಸರಿ ಮಾಡಿಕೊಳ್ಳಬೇಕೆಂದುಕೊಳ್ಳುವಾಗಲೇ ಅತ್ತಲಿಂದ ವಾರ್ತಾವಾಚಕಿ ಪ್ರಶ್ನೆ ಕೇಳಿಯಾಗಿತ್ತು, ಉಗುಳು ನುಂಗಿ, ಅದೇನೋ ಒದರಿ ಸುಮ್ಮನಾದೆ.


ಬಡ ಬಡನೆ ಹೊರಟು ನಿಂತಾಗ ಸಮ್ಮೇಳನದವರೇ ಆಯೋಜಿಸಿದ್ದ ಬಸ್‌ ಕಾಯುತ್ತಿತ್ತು. ಹತ್ತಿ ಕೂತೆ. ಬಸ್‌ ಹೊರಟಾಗ ಮತ್ತೆ ಫೋನೋ ಕನೆಕ್ಟ್. ‘ಸಮ್ಮೇಳನಕ್ಕೆ ಈಗಾಗಲೇ ಜನರ ಆಗಮನವಾಗಿದೆಯಾ? ತಿಂಡಿ ವ್ಯವಸ್ಥೆ ಹೇಗಿದೆ? ಸಾಹಿತಿಗಳ್ಯಾರಾದ್ರೂ ಮಾತಿಗೆ ಸಿಕ್ರಾ?’ ಅಂತ ಆಂಕರ್‌ ಕೇಳಿದಾಗ, ‘ದೂರದೂರಗಳ ಜನ ಈಗಾಗಲೇ ಆಗಮಿಸಿದ್ದಾರೆ. ಎಲ್ಲರಿಗೂ ತಿಂಡಿವ್ಯವಸ್ಥೆ ಇದೆ. ಕೆಲ ಸಾಹಿತಿಗಳು ಆಗಲೇ ಬಂದಿದ್ದಾರೆ’ ಅಂತಂದು ಸುಮ್ಮನಾದೆ. ಆದರೆ ಸಮ್ಮೇಳನ ನಡೆಯುವ ಕಡೆ ಹೋಗಿ ನೋಡಿದ್ರೆ, ಅಲ್ಲಿ ತಿಂಡಿ ಖಾಲಿಯಾಗಿತ್ತು, ಜನ ಸಿಟ್ಟಿಗೆದ್ದದ್ದರು. ಮತ್ತೊಂದೆಡೆ ಕಿಟ್‌ಗಾಗಿ ಹೋರಾಟ ನಡೆಯುತ್ತಿತ್ತು. ತಪ್ಪಿಯೂ ಒಬ್ಬ ಸಾಹಿತಿಯೂ ಸಮ್ಮೇಳನದತ್ತ ಮುಖಮಾಡಿರಲಿಲ್ಲ. ಮೈ ಪರಚಿಕೊಳ್ಳುವಂತಾಯಿತು. ಅಷ್ಟರಲ್ಲಿ ಮತ್ತೆ ಆಫೀಸ್‌ನಿಂದ ಫೋನ್. ಏನ್ರೀ ಅಲ್ಲೇನೋ ಗಟಾಲೆ ನಡೀತಿದೆಯಂತೆ, ನೀವ್‌ ಏನ್ರೀ ಮಾಡ್ತಿದ್ದೀರಾ? ಅಂತ ಆವಾಜ್‌. ಅವರನ್ನು ಕನ್ವಿನ್ಸ್‌ ಮಾಡುವಷ್ಟರಲ್ಲಿ ಸಾಕೋ ಸಾಕು. ಸಾಹಿತ್ಯ ಸಮ್ಮೇಳನ ಆರಂಭವಾಗುತ್ತಿರುವಂತೆ ಅಧ್ಯಕ್ಷರಿಗಿಂತ ಹೆಚ್ಚಿನ ಟೆನ್ಶನ್‌ ನಮಗೆ. ನಮಗೆ ಸಿಗದ ವಿಶ್ಯವಲ್‌ ಬೇರೆ ಚಾನೆಲ್‌ಗೆ ಸಿಕ್ಕಿಬಿಟ್ರೆ , ಅಂತ ಕ್ಷಣ ಕ್ಷಣಕ್ಕೂ ಕಾಡುವ ಆತಂಕ.


ಇನ್ನು ಲೈವ್‌ ಚಾಟ್‌(ನೇರ ಪ್ರಸಾರದಲ್ಲಿ ಮಾಹಿತಿ, ಸಂದರ್ಶನ...ಹೀಗೆ ನೇರ ಮುಖಾಮುಖಿ) ಕೊಡುವ ಸಂಭ್ರಮವೇ ಬೇರೆ. ಯಾರೋ ಗಣ್ಯ ವ್ಯಕ್ತಿಗಳನ್ನು ನಿಲ್ಲಿಸಿಕೊಂಡು ಅವರ ಜತೆ ಲೈವ್‌ನಲ್ಲಿ ಸಂದರ್ಶನ ನಡೆಸುತ್ತಿರುವಾಗಲೇ ನೆಟ್‌ವರ್ಕ್‌ ಪ್ರಾಬ್ಲಂನಿಂದ ಲೈನ್‌ ಕಟ್‌ ಆಗಿರತ್ತೆ. ಆ ವ್ಯಕ್ತಿ ಇನ್ನೂ ನೇರ ವಿಷಯಕ್ಕೇ ಬಂದಿರುವುದಿಲ್ಲ. ಆದ್ರೆ ಲೈನ್‌ ಕಟ್‌ ಆಗಿರುವುದು ಆತನ ಗಮನಕ್ಕೆ ಬಂದಿರುವುದಿಲ್ಲ. ಆ ಪುಣ್ಯಾತ್ಮರು ಹೇಳುತ್ತಲೇ ಇರುತ್ತಾರೆ. ನಾವೂ ಏನೂ ನಡೆದಿಲ್ಲ ಎಂಬಂತೆ ಅವರ ಭಾಷಣ ಕೇಳಿದಂತೆ ನಟಿಸುತ್ತಾ, ಅವರೇ ಮಾತು ಕೊನೆಗೊಳಿಸುವ ತನಕ ಕಾದು, ಅವರಿಗೊಂದು ಸಲಾಮು ಹೊಡೆದು,
ಓವರ್‌ ಟು ಸ್ಟುಡಿಯೋ ಅನ್ನುವ ಹೊತ್ತಿಗೆ ಬೆವರಿಳಿದಿರುತ್ತದೆ.


ಉಳಿದ ಹೊತ್ತಲ್ಲಿ ಗೋಷ್ಟಿಗಳನ್ನು ನೋಡಿಕೊಳ್ಳಬೇಕು, ನ್ಯೂಸ್‌, ಸ್ಟೋರಿ ಎಲ್ಲ ಕೊಡುತ್ತಾ ಅರೆಜೀವವಾಗುತ್ತದೆ, ಸ್ಥಿತಿ. ಇದೆಲ್ಲಕ್ಕಿಂತ ಉತ್ಸಾಹ ಕುಂದಿಸುವುದು ಸುಡು ಸುಡು ಬಿಸಿಲು. ಗಂಟಲಿಗೆ ತೊಟ್ಟು ನೀರು ಎರೆದುಕೊಳ್ಳೋಣ ಅಂದ್ರೆ, ಜೀವ ಹೋದ್ರೂ ಅಲ್ಲಿ ನೀರು ಸಿಗಲ್ಲ. ಮೇಲೆ ಸ್ಟಾಲ್‌ಗಳಿರುವ ಕಡೆಗೆ ಹೋಗಿ ದುಡ್ಡು ಕೊಟ್ಟು ನೀರು ಕೊಳ್ಳಬೇಕು. ಬೇರೇನಕ್ಕೋ ಅವಸರಕ್ಕಿಟ್ಟಿತೆಂದರೆ ದೇವರೇ ಗತಿ, ಯಾಕೆಂದರೆ, ಅಲ್ಲಿ ಟಾಯ್ಲೆಟ್ಟೂ ಇಲ್ಲ. ರೂಮಿಗಾದ್ರೂ ಹೋಗಿ ತೀರಿಸಿಕೊಳ್ಳೋಣ ಅಂದ್ರೆ, ಅದಕ್ಕೂ ಗತಿಯಿಲ್ಲ, ರಾತ್ರಿಯಾದರೆ ಲಗ್ಗೇಜು ಹಿಡಿದು ರೂಮಿಂದ ರೂಮಿಗೆ ಅಲೆತ.


ಅಹ್‌..ಇದು ಹೇಳಿ ಮುಗಿಯಲಿಕ್ಕಿಲ್ಲ ಬಿಡಿ, ನಾನು ರಿಪೋರ್ಟಟಿಂಗ್‌ಗೆ ಹೊರ ಜಿಲ್ಲೆಗಳಿಗೆ ಹೋಗೋದು ಇದೇ ಮೊದಲೇನಲ್ಲ, ಆದರೆ, ಈ ಅನುಭವ ಹೊಸತು. ಅನುಭವ ನಮ್ಮನ್ನು ಗಟ್ಟಿಗೊಳಿಸುತ್ತದಂತೆ, ಆದ್ರೆ, ಅಲ್ಲಿಗೆ ಹೋಗಿ ಬಂದ ನಾನಿನ್ನೂ ಚೇತರಿಸಿಕೊಂಡೇ ಇಲ್ಲ.

Friday, December 26, 2008

ನನ್ನ ತಮ್ಮ ಈಗ ಅಳುವುದಿಲ್ಲ

ನಮ್ಮ ತೋಟದ ಕೆಳಗೆ ಸ್ವರ್ಣಾ ನದಿ ಹರಿಯುತ್ತದೆ. ಇತ್ತೀಚೆಗೆ ತಮ್ಮ ಸಮಯ ಸಿಕ್ಕಾಗಲೆಲ್ಲ ನದಿಯಲ್ಲಿ ಈಜಾಡುತ್ತಿರುತ್ತಾನೆ. ಅವನಿಗೀಗ ಹದಿನೇಳು ವರ್ಷ. ಅವನ ಗೆಳೆಯರಾರೋ ಹೊಳೆಯಲಿ ಈಜಿದ್ರೆ ಉದ್ದ ಆಗ್ತಿ ಅಂತ ಹೇಳಿದ ಕಾರಣ, ಈಜಿನ ಹುಚ್ಚು ಹತ್ತಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ ಅದರಿಂದ ಅಂವ ದಿನದಿಂದ ದಿನಕ್ಕೆ ಉದ್ದವಾಗುತ್ತಾ ಹೋಗಿದ್ದಾನಂತೆ. ( ಹಾಗಂತ ಅವನೇ ಹೇಳಿದ್ದು)


ನನ್ನ ತಮ್ಮ ತೀರಾ ಸಾಧಾರಣ ಹುಡುಗ. ಚಿಕ್ಕವನಿದ್ದಾಗ ತುಂಬ ಚಂದ ಇದಾನೆ ಅಂತ ಎಲ್ಲರ ಮುದ್ದಿನ ಮೂಟೆಯಾಗಿದ್ದ . ಸ್ವಲ್ಪ ದೊಡ್ಡವನಾದ ಮೇಲೆ ಇದೆಲ್ಲ ನಿಧಾನಕ್ಕೆ ಕರಗತೊಡಗಿತು. ಕಲಿಯುವುದರಲ್ಲಿ ಜಾಣ ಅಲ್ಲ. ಅವನಿಗಿಂತ ಮೊದಲು ಕಲಿತ ನಾನು ಸ್ವಲ್ಪ ಕ್ರಿಯೇಟಿವ್‌ ಆಗಿದ್ದ ಕಾರಣ, ಈ ಪುಟ್ಟು ಹುಡುಗ ಶಾಲೆಯಲ್ಲೂ ಟೀಚರ್ಸ್‌ ಮೂದಲಿಕೆಗೆ ತುತ್ತಾಗಿದ್ದ.
ಇಷ್ಟರಲ್ಲಾಗಲೇ ತಮ್ಮನ ಸ್ವರ ಒಡೆಯಲಾರಂಭಿಸಿತು. ಹರೆಯ ಹತ್ತಿರ ಬಂತು. ಸಿಕ್ಕಾಬಟ್ಟೆ ತಮಿಳು ಸಿನಿಮಾ ನೋಡುವ ಹುಚ್ಚು. ಅದರೆ ಜತೆಗೆ ತಾನು ಅವರ ಹಾಗಿಲ್ಲ ಅನ್ನುವ ಕೊರಗು. ಸಿನಿಮಾ ಹುಚ್ಚು ತಲೆಗೇರಿದಂತೆ ಡಿಪ್ರೆಶ್ಶನ್‌ ಕೂಡ ಏರತೊಡಗಿತು. ಸಂಪೂರ್ಣ ಅಸ್ವಸ್ಥ ಮನಃಸ್ಥಿತಿ. ಅಷ್ಟರಲ್ಲಾಗಲೇ ಎಸ್‌.ಎಸ್‌.ಎಲ್‌.ಸಿ. ಪಾಸಾಗಿತ್ತು. ಮುಂದೇನು ಅನ್ನುವ ಭೂತಾಕಾರದ ಪ್ರಶ್ನೆ. ಅಪ್ಪನಿಗೆ ಯಾರೋ ಮೆಕಾನಿಕಲ್‌ ಡಿಪ್ಲೋಮೊ ಮಾಡಿದ್ರೆ ಒಳ್ಳೆ ಸ್ಕೋಪ್‌ ಇದೆ ಅಂದ್ರಂತೆ. ಇವನಿಗೂ ಏನು ಮಾಡಬೇಕು ಅಂತ ಗೊತ್ತಾಗ್ಲಿಲ್ಲ. ಐವತ್ತು ಸಾವಿರ ಫೀಸ್‌ ಕಟ್ಟಿ ಕಾಲೇಜು ಸೇರಿಕೊಂಡ.




ಇವ ಅಷ್ಟರವರೆಗೆ ಓದಿದ್ದು ಕನ್ನಡ ಮೀಡಿಯಂನಲ್ಲಿ. ಅವನ ಕ್ಲಾಸಿನಲ್ಲಿರುವವರೆಲ್ಲ ಇಂಗ್ಲೀಶ್‌ ಮೀಡಿಯಂನಿಂದ ಬಂದವರು. ಜತೆಗೆ ಇವ ಹೋಗಿದ್ದು ಎಸ್‌.ಎಸ್‌.ಎಲ್‌.ಸಿ. ನಂತರ. ಆದರೆ ಕ್ಲಾಸಿನಲ್ಲಿರುವವರೆಲ್ಲ ಪಿಯೂಸಿ ಓದಿ ಬಂದವರು. ಅದರಲ್ಲೂ ತೀರಾ ಸಾಧಾರಣ ಬುದ್ಧಿಮತ್ತೆ ಹುಡುಗ. ಓದು ಹೇಗೆ ತಾನೇ ತಲೆಗೆ ಹತ್ತಬೇಕು? ಅರ್ಥಮಾಡಿಕೊಳ್ಳುವ ಮನಸ್ಸೂ ಇವನಿಗಿರಲಿಲ್ಲ.



ಮತ್ತೇನಾಗಲಿಲ್ಲ. ಡಿಪ್ಲೊಮಾ ಫಸ್ಟ್‌ ಸೆಮ್‌ನಲ್ಲಿ ೭ ಸಬ್ಜೆಕ್ಟ್‌ ಫೇಲ್‌ ಆದ. ಮನೇಲೇ ಕೂತ. ಕಂಪ್ಯೂಟರ್‌ ಕ್ಲಾಸಿಗೆ ಹೋಗ್ಲಿಕ್ಕೂಮನಸ್ಸಿಲ್ಲ, ಯಾಕೇಂದ್ರೆ ಇವನಿಗೆ ಇಂಗ್ಲಿಷ್‌ ಬರಲ್ಲ, ಅಲ್ಲಿ ಯಾರಾದ್ರೂ ಇಂಗ್ಲೀಶ್‌ ಮಾತಾಡಿ ಇನ್‌ಸಲ್ಟ್‌ ಮಾಡಿದ್ರೆ ಅಂತ....ಒಟ್ಟಾರೆ ಮೈ ಪರಚಿಕೊಳ್ಳೋ ಸ್ಥಿತಿ ಅಂತಾರಲ್ಲ ಹಾಗೆ. ಅಷ್ಟರಲ್ಲಾಗಲೇ ನನಗೆ ರಾಜಧಾನಿಯಲ್ಲಿ ಟಿ.ವಿ.ಚಾನೆಲ್‌ ನಲ್ಲಿ ಕೆಲಸ ಸಿಕ್ಕಿತ್ತು. ನಾನು ಬೆಂಗಳೂರಿನಲ್ಲಿದ್ದೆ.

ಸ್ವಲ್ಪವಾದ್ರೂ ಮನಸ್ಸು ಬಿಚ್ಚಿ ನನ್ನ ಹತ್ರ ಮಾತ್ರ ಮಾತನಾಡುತ್ತಿದ್ದ ತಮ್ಮ. ಆದ್ರೆ ನಂಗೆ ಮಾತಾಡ್ಲಿಕ್ಕೆ ಟೈಮೆಲ್ಲಿ? ನ್ಯೂಸ್‌, ಪ್ರೋಗ್ರಾಂ ಅಂತ ಕೆಲಸ ಹೊತ್ತು ಹೈರಾಣಾಗಿದ್ದೆ . ಈ ಪುಣ್ಯಾತ್ಮ ಕಾಲ್‌ ಮಾಡುವಾಗಲೆಲ್ಲ, ‘ಬಿಸಿ ಇದ್ದೆ, ಆಮೇಲೆ ಮಾಡು’ ಎಂಬ ಒಂದು ಲೈನ್‌ ಆನ್ಸರ್‌.


ಆದ್ರೆ ಆ ದಿನ ಫೋನ್‌ ಮಾಡಿದ ತಮ್ಮ ಸ್ವರ ಎಂದಿನಂತಿರಲಿಲ್ಲ. ಕುಸಿದು ಹೋದಂತಾಗಿತ್ತು. ಆಮೇಲೆ ಮಾಡು ಅಂತ ಹೇಳಲು ಹೋದವಳು ತಡೆದು, ಏನಾಯ್ತೋ ಅಂದೆ. ನಾನು ಸಾಯ್ತೀನಿ ಕಣೇ. ನಂಗೆ ಬದುಕಕ್ಕಾಗಲ್ಲ ಅನ್ನುವಷ್ಟರಲ್ಲಿ ಅಳು ಬಂದು ಬಿಡ್ತು. ನಾನು ಮತ್ತೇನೂ ಮಾತನಾಡಲಿಲ್ಲ. ನಾಳೆಯೇ ರಾತ್ರಿ ಹೊರಟು ನೀನಿಲ್ಲಿಗೆ ಬಾ. ಆಮೇಲೆ ನೋಡಿಕೊಳ್ಳೋಣ ಅಂದೆ.


ತಮ್ಮ ಆತ್ಮಹತ್ಯಾ ಪ್ರಯತ್ನವನ್ನು ಮುಂದೆ ಹಾಕಿ ಬಲು ಕಷ್ಟದಿಂದ ಬರಲೊಪ್ಪಿದ. ಬರಲಿಕ್ಕೇನೋ ಹೇಳಿಯಾಯಿತು. ಆದ್ರೆ ಬಂದ ಮೇಲೆ ಏನು ಮಾಡುವುದು. ಅದುವರೆಗೆ ಪುರುಸೊತ್ತಿಲ್ಲದ ಕೆಲಸದ ನಡುವೆ ಮರೆತೇ ಹೋದಂತಿದ್ದ ಗೆಳೆಯರನ್ನೆಲ್ಲ ಸಂಪರ್ಕಿಸಿದೆ. ನನ್ನ ಗೆಳತಿ ಹಿಂದೆ ಒಬ್ಬ ಸೈಕಾಲಜಿಸ್ಟ್‌ ಬಗ್ಗೆ ಹೇಳಿದ್ದಳು. ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ.
ಬಲು ಕಷ್ಟದಲ್ಲಿ ಮಾತಿಗೆ ಸಿಕ್ಕ ಅವರು ತಮ್ಮನ ಮದುವೆಯ ತರಾತುರಿಯಲ್ಲಿದ್ದರು. ಒಬ್ಬನೇ ತಮ್ಮನ ಮದುವೆ ತಯಾರಿ ಬಿಟ್ಟು ನನ್ನ ತಮ್ಮನನ್ನು ರಿಪೇರಿ ಮಾಡ್ಲಿಕ್ಕೆ ಒಪ್ಪಿಕೊಂಡರು.

ಮರುದಿನ ಮುಂಜಾನೆ ಮನೆಗೆ ಬಂದಾಗ ತಮ್ಮನ ಕಣ್ಣ ಕೆಳಗೆ ಕಪ್ಪು ಕಲೆ. ಮುಖ ತಗ್ಗಿತ್ತು. ರೂಮೊಳಗೆ ಬಂದು ಕೂತ. ಮನಸ್ಸಿಲ್ಲದ ಮನಸ್ಸಿಂದ ತಿಂಡಿ ತಿಂದ, ಸ್ನಾನ ಮಾಡಿ ಬೆನ್ನು ಒರೆಸದೇ ಬಂದ.


ಮರುದಿನ ಅವನನ್ನು ಆ ಸೈಕಾಲಜಿಸ್ಟ್‌ ಬಳಿ ಕರೆದೊಯ್ದೆ. ಆಗಷ್ಟೇ ಮಿಂದು, ಒದ್ದೆ ಕೂದಲನ್ನು ಬೆನ್ನ ಮೇಲೆ ಹರಡಿದ ಮೂವತೈದರ ಚೆಲುವಾದ ಹೆಣ್ಮಗಳೊಬ್ಬಳು ನಮ್ಮನ್ನು ಮನೆಯೊಳಗೆ ಕರೆದೊಯ್ದರು. ಮನೆ ಮಹಡಿಯ ಮೇಲೆ ಕೂರಿಸಿ ತಿಂಡಿ ಬಗ್ಗೆ ವಿಚಾರಿಸಿ ಎಷ್ಟೇ ಹೇಳಿದರೂ ಕೇಳದೇ ತಿಂಡಿ ಕೊಟ್ಟು ಮಾತಿಗೆ ಕೂತರು. ನಮಗೆ ಆಶ್ಚರ್ಯ. ಸೈಕಾಲಜಿಸ್ಟ್‌ ಟಫ್‌ ಪರ್ಸನಾಲಿಟಿ ನಿರೀಕ್ಷಿಸಿದ್ದ ನಮಗೆ ಗೊಂದಲ, ತಬ್ಬಿಬ್ಬು.

ನನ್ನನ್ನು ಕೆಳಗೆ ಕೂರಲು ಹೇಳಿ, ತಮ್ಮನ ಜತೆಗೆ ಮಾತಿಗೆ ಹಚ್ಚಿದರು. ನಾನು ತಳ ಅಂತಸ್ತಿನ ರೂಮಿನಲ್ಲಿ ಕೂತು ಅರ್ಧ ಓದಿದ್ದ ದಾದಾಗಿರಿಯ ದಿನಗಳತ್ತ ಕಣ್ಣು ಹಾಯಿಸಿದೆ. ಏನೂ ತಲೆಗೆ ಹೋಗುತ್ತಿರಲಿಲ್ಲ. ಮೇಲಿನ ಮಾತುಗಳೂ ಕೇಳುತ್ತಿಲ್ಲ. ಸುಮ್ಮನೆ ಅಲ್ಲಿ ಇಲ್ಲಿ ಅಡ್ಡಾಡುತ್ತಾ ಮತ್ತೆ ಪುಸ್ತಕ ಹಿಡಿದೆ. ಹತ್ತು ಪುಟ ಓದಿ ಮುಗಿದಿರಬಹುದು.

ಮೇಲಿಂದ ಜೋರಾಗಿ ನಗುವ ಸದ್ದು. ತಡೆದು ಕಿವಿಕೊಟ್ಟೆ, ತಮ್ಮನದೇ ದನಿ. ಅವನನ್ನು ಆತ್ಮಹತ್ಯೆಯಿಂದ ಹೊರಗೆಳೆದು, ಸಮಾಧಾನಿಸಬೇಕು ಎಂದಷ್ಟೇ ಬಯಸ್ಸಿದ್ದ ನನಗೆ ಅವನ ಜೋರಾದ ನಗು ಕೇಳಿ ಆಶ್ಚರ್ಯ. ಒಳಗೊಳಗೇ ಸಮಾಧಾನ, ಮಂಕು ಬಡಿದಂತಾಗಿದ್ದ ಮನಸ್ಸು ತಹಬಂಧಿಗೆ ಬಂದಿತ್ತು. ಅಷ್ಟರಲ್ಲಾಗಲೇ ತಮ್ಮನ ಸ್ವರ ಏರಿತ್ತು, ಜೋರು ಜೋರಾಗಿ ಏನನ್ನೋ ವಿವರಿಸುತ್ತಿದ್ದ. ಅದೇನೆಂದು ಸ್ಪಷ್ಟವಾಗುತ್ತಿರಲಿಲ್ಲ.

ಸಧ್ಯ! ಅಂದುಕೊಂಡು ಓದನ್ನು ಮುಂದುವರಿಸಿದೆ. ಯಾಕೋ ಬೋರೆನಿಸತೊಡಗಿತು.
ಮೇಲಿಂದ ಅಸ್ಪಷ್ಟ ಮಾತು ಮುಂದುವರಿದಿತ್ತು. ಹೊರಬಂದು ರಸ್ತೆಯಲ್ಲೇ ಎರಡು ಸುತ್ತು ಹಾಕಿಬಂದೆ. ಇವರ ಮಾತು ನಿಂತಿರಲಿಲ್ಲ. ಅವರು ಮಾತಿಗೆ ತೊಡಗಿ ಆಗಲೇ ಮೂರು ಗಂಟೆಯಷ್ಟು ಹೊತ್ತಾಗಿತ್ತು.

ಅಲ್ಲೇ ಮಂಚಕ್ಕೊರಗಿದ್ದೆ. ತಮ್ಮ ಬಂದು ಎಚ್ಚರಿಸಿದಾಗಲೇ ಗೊತ್ತಾಗಿದ್ದು, ನಂಗೆ ನಿದ್ದೆ ಬಂದಿದೆ ಅಂತ. ನಗು ನಗುತ್ತಾ ಬಂದ ತಮ್ಮ, ಮೇಲೆ ಬಾ, ಅಕ್ಕ ಕರೀತಾರೆ ಅಂತಂದ. ಅವರಾಗಲೇ ಅವನಿಗೆ ಅಕ್ಕ ಆಗಿದ್ದರು, ಜತೆಗೆ ಬೆಸ್ಟ್‌ ಫ್ರೆಂಡೂ. ಆ ಕ್ಷಣಕ್ಕೆ ನಂಗೆ ಏನು ಹೇಳಬೇಕೋ ತಿಳಿಯಲಿಲ್ಲ. ತಮ್ಮನನ್ನು ಕರೆದುಕೊಂಡು ಹೊರಬಂದೆ. ಗೇಟಿನವರೆಗೆ ಬಂದು ಬಿಟ್ಟು ಹೋದರು.

ಅದೇ ದಿನ ರಾತ್ರಿ ಅವರಿಗೆ ಫೋನ್‌ ಮಾಡಿದಾಗ, ತಮ್ಮನ ಸಮಸ್ಯೆಯನ್ನು ವಿವರಿಸಿದರು. ತಮ್ಮನಿಗಾಗಿದ್ದು ಪ್ರೀತಿಯ ಕೊರತೆ. ಟೀಚರ್ಸ್‌ ಅವನನ್ನು ಎಷ್ಟು ಹಿಂಸಿಸಿದ್ದರೆಂದರೆ ಅವನಿಗೆ ಜೀವನವೇ ಬೇಡವಾಗುವಷ್ಟು. ಜತೆಗೆ ಮನೆಯಲ್ಲೂ ಇದೇ ಕಾರಣಕ್ಕೆ ಕಿರಿಕಿರಿ ಸುರುವಾದಾಗ ಅವನಿಗೆ ಓದಿನ ಮೇಲೇ ದ್ವೇಷ ಬಂದಿತ್ತು. ಜಗತ್ತೆಲ್ಲ ಅವನ ಶತ್ರುಗಳೇ ತುಂಬಿದಂತಾಗಿದ್ದರು. ಪ್ರತಿಭಟಿಸಲು ಬೇಕಾದ ಧೈರ್ಯವಿರಲಿಲ್ಲ. ಒಳಗೇ ನೋವು ತುಂಬಿ ಹೊರಬರಲಾಗದೇ ಅದರೊಂದಿಗೆ ಗಿಲ್ಟ್‌ ಸಹ ಸೇರಿ ಬದುಕೇ ಅಸಹನೀಯವಾಗತೊಡಗಿತ್ತು. ಆಗ ಅವನಿಗೆ ಕನಸು ಕಾಣುವ, ಭ್ರಮೆಯಲ್ಲೇ ಬದುಕುವ ಸ್ಥಿತಿ ಇಷ್ಟವಾಗತೊಡಗಿತು. ಈ ಸ್ಥಿತಿಗೆ ಎಷ್ಟರ ಮಟ್ಟಿಗೆ ಅಂಟಿಕೊಂಡ ಅಂದ್ರೆ, ಅದರಿಂದ ಹೊರಬರುವುದೂ ಸಮಸ್ಯೆಯಾಯಿತು. ಈ ಅಕ್ಕನ ಬಳಿ ತನ್ನ ನೋವನ್ನೆಲ್ಲ ಹೇಳಿ ಹಗುರಾದ ಮೇಲೆ ಅವನಿಗೂ ನಿರಾಳವೆನಿಸಿತು. ಜತೆಗೆ ಅವರ ಪ್ರೀತಿಯ ಮಾತು ಮತ್ತಷ್ಟು ಚೈತನ್ಯ ಮೂಡಿಸಿತು.

ಈಗ ಬದಲಾಗಿದಾನೆ, ತಾರೇ ಜಮೀನ್ ಪರ್‍ ನಲ್ಲಿ ಇಶಾನ್ಗೆ ಸಿಕ್ಕ ಅಮೀರ್‌ಖಾನ್‌ ಥರಾ ನನ್ನ ತಮ್ಮನಿಗೆ ಒಬ್ಬ ಹೊಸ ಅಕ್ಕ ಸಿಕ್ಕಿದ್ದಾರೆ. ಈ ಅಕ್ಕನಿಗಿಂತಲೂ ಹೆಚ್ಚು ಆ ಅಕ್ಕನನ್ನು ಕಂಡ್ರೇ ಅವನಿಗಿಷ್ಟ ಅಂದಾಗ ಸ್ವಲ್ಪ ಅಸೂಯೆಯಾಗುತ್ತದೆ. ಆದ್ರೂ ಮೊದಲು ಮೂಲೆಯಲ್ಲಿ ಕೂತು ಅಳುತ್ತಾ ರೇಗುತ್ತಾ ಇದ್ದ ತಮ್ಮನಿಗೆ ಈಗ ಹೊಳೆಯಲ್ಲಿ ಈಜೋದ್ರಿಂದ ಉದ್ದ ಆಗ್ತೀನಿ ಅನ್ನೋ ಕಾನ್ಫಿಡೆನ್ಸ್ ಬಂದಿದೆ. ಕಂಪ್ಯೂಟರ್‌ ಕ್ಲಾಸಿಗೆ ಸೇರ್‍ಕೊಂಡಿದಾನೆ. ಉಳಿದ ಟೈಂನಲ್ಲಿ ಅಪ್ಪನಿಗೆ ತೋಟದಲ್ಲಿ ಹೆಲ್ಪ್‌ ಮಾಡುತ್ತಾನೆ. ಆಗಾಗ ಹೊಸ ಅಕ್ಕನನ್ನು ಕಾಣಲು ಬೆಂಗಳೂರಿಗೆ ಬರುತ್ತಿರುತ್ತಾನೆ. ಈಗ ಅಂವ ಫೋನ್‌ ಮಾಡಿದ್ರೆ, ಅದೆಂಥಾ ತಲೆ ಹೋಗೋ ಕೆಲ್ಸ ಇದ್ರೂ ಬಿಟ್ಟು ಫೋನೆತ್ತುತ್ತೇನೆ. ಆದರೆ ಜೀವನೋತ್ಸಾಹ ತುಂಬ ಬೇಕಾದ ಶಿಕ್ಷಕರು ಜೀವ ತೆಗೆಯುವ ಸ್ಥಿತಿಗೆ ನೂಕಿದ್ದನ್ನು ಇನ್ನೂ ಜೀರ್ಣಿಸಲಾಗಿಲ್ಲ.

( ಇದನ್ನು ಬರಹ ರೂಪಕ್ಕಿಳಿಸಲು ತುಂಬ ಹೆಣಗಿದ್ದೇನೆ. ಒಂದೂವರೆ ತಿಂಗಳ ಹಿಂದೆ ಆರಂಭಿಸಿದ ಬರಹ ಇದು. ಬರವಣಿಗೆ ಅರ್ಧಕ್ಕೆ ಬರುವಾಗ ಇದು ಸರಿಯಾಗಿಲ್ಲ ಅಂತ ಅನಿಸಲು ಸುರು. ಆದ್ರೆ ಮುಗ್ಧ ಮಕ್ಕಳ ಮನಸ್ಸಿಗೆ ನೋವು ಮಾಡುವ ಶಿಕ್ಷಕರು ನಮ್ಮಲ್ಲಿ ಹೆಚ್ಚಾಗುತ್ತಿದ್ದಾರೆ, ಕಪಿಲಕ್ಕನಂತವರು ಕಡಿಮೆಯಾಗುತ್ತಿದ್ದಾರೆ ಅನ್ನುವುದು ಮಾತ್ರ ಸತ್ಯ ಅಂದುಕೊಂಡಿದ್ದೇನೆ, ಹೀಗಾಗದಿರಲಿ ಎಂಬ ತುಡಿತ ಇದ್ದೇ ಇದೆ.)

Tuesday, November 25, 2008

ನನ್ನ ಪ್ರೀತಿಯ ಕಂಗನಾ...



ಕತ್ತಲೆಯ ಪರದೆ ಸರಿದಾಗ ಕಣ್‌ ಕೋರೈಸುವ ಬೆಳಕು. ಅಲ್ಲೊಬ್ಬ ಸುಂದರಿ ಪ್ರತ್ಯಕ್ಷ. ನೀಳ ಕಾಯವನ್ನು ಬಳುಕಿಸುತ್ತಾ, ತುಂಬು ಗುಂಗುರು ಕೂದಲೊಳಗೇ ಮಾದಕ ಮುಖ ತೋರಿಸುತ್ತಾ ಮುಂದೆ ಬಂದು ಮಿಂಚು ನೋಟ ಬೀರಿ ಬೀರುತ್ತಾಳೆ. ಅಹ್‌, ಅದೆಂಥಾ ಚೂಪು, ನೇರ ದೃಷ್ಟಿ. ಕಂಗನಾ ರಾನಾವತ್ ಎಂಬ ಹುಚ್ಚು ಹುಡುಗಿ ಆ ಕ್ಷಣ ನಮ್ಮೊಳಗೆ ತುಂಬಿ ಹೋಗುತ್ತಾಳೆ. ‘ಫ್ಯಾಶನ್‌ ’ ಸಿನಿಮಾದಲ್ಲಿ ಫ್ಯಾಶನ್‌ ಪ್ರಪಂಚದ ಅಷ್ಟೂ ಅಧ್ವಾನಗಳನ್ನು ಮೈತುಂಬಿಕೊಂಡಂತೆ ಬರುವ ಪಾತ್ರ ಕಂಗನಾದು. ಚಿತ್ರದಲ್ಲಿ ಆಕೆ ಸೊನಾಲಿ. ಫ್ಯಾಶನ್‌ ಜಗತ್ತಿನ ದುರಂತಗಳಿಗೆ, ನೋವುಗಳಿಗೆ ಮುಖವಾಣಿಯಾಗುತ್ತಾ ಹೋಗುವ ಪಾತ್ರ ಆಕೆಯದು.

ಈ ಚಿತ್ರದ ನಾಯಕಿ ಮೇಘನಾ ಫ್ಯಾಶನ್‌ ಲೋಕಕ್ಕೆ ಹೆಜ್ಜೆ ಇಡುವ ಹೊತ್ತಿಗೆ, ಸೋನಾಲಿ(ಕಂಗನಾ) ಪ್ರತಿಷ್ಠಿತ ಬ್ರಾಂಡ್‌ನ ರೂಪದರ್ಶಿ. ಆ ಹೊತ್ತಿಗೆ ಈಕೆ ಬಲು ಎತ್ತರಕ್ಕೇರಿದ ಫ್ಯಾಶನ್‌ ಲೋಕದ ಅಧಿನಾಯಕಿಯಂತೆ ಅಹಂಕಾರದಿಂದ ಕನಲಿ ಮೈಮರೆಯುತ್ತಾಳೆ ಸೊನಾಲಿ. ಸದಾ ಡ್ರಕ್ಸ್‌ನಿಂದ ಅಮಲೇರಿದ ಕಣ್ಣುಗಳಲ್ಲಿ ಜಗತ್ತನ್ನು ನೋಡುತ್ತಾಳೆ.

ಇದಕ್ಕೂ ಮೊದಲಿನ ಒಂದು ದೃಶ್ಯ ಫ್ಯಾಶನ್‌ ಜಗತ್ತಿನ ಅಂತರಾಳಕ್ಕೆ ಕನ್ನಡಿ ಹಿಡಿಯುತ್ತದೆ. ಅದು ಮುಂಬಯಿನ ಪ್ರತಿಷ್ಟಿತ ಪಾರ್ಟಿ. ಅಲ್ಲಿ ಒಂದು ಕಡೆ ಪಾನ ಪಾರ್ಟಿ ರಂಗೇರುತ್ತಿದ್ದರೆ, ಇನ್ನೊಂದೆಡೆ ಮಾನಿನಿಯರ ಕೇಕೆಯೂ ಮುಗಿಲುಮುಟ್ಟುತ್ತದೆ. ದೊಡ್ಡ ಕಡಾಯಿಯಲ್ಲಿ ಕೊಳೆತ ದ್ರಾಕ್ಷಿ ತುಳಿ ತುಳಿಯುತ್ತಾ ಮಕ್ಕಳಾಟದಂತೆ ಅದರಲ್ಲಿ ಖುಷಿ ಪಡುತ್ತಿರುತ್ತಾರೆ ಈ ಮಂದಿ... ಮೂಲೆಯಲ್ಲಿ ಶೋಕಿಗೆಂದು ಕೈಯಲ್ಲಿ ವೈನ್‌ ತುಂಬಿದ ಗ್ಲಾಸ್‌ ಹಿಡಿದ ಹಿರಿಯ ಮಹಿಳೆಯೊಬ್ಬಳು ಅರ್ಥಗರ್ಭಿತವಾಗಿ ಅತ್ತ ನೋಡುತ್ತಾಳೆ. ಅದು
ಫ್ಯಾಶನ್ ಪ್ರಪಂಚವನ್ನು ಸಾಕ್ಷೀಕರಿಸುವ ಮಾರ್ಮಿಕ ದೃಶ್ಯ. ಆ ಜಗತ್ತಿನ ಮಂದಿಗೆ ತಾಜಾ ದ್ರಾಕ್ಷಿ ಬೇಡ. ಆದರೆ ದ್ರಾಕ್ಷಿಯನ್ನು ಕೊಳೆಸಿ ತುಳಿದು ವೈನ್‌ನ ರೂಪದಲ್ಲಿ ಜರಡಿಗೆ ಹಾಕಿದರೆ ಅದನ್ನು ಚಪ್ಪರಿಸಲು ಅದೆಷ್ಟು ಮಂದಿ...

ಇದನ್ನು ಸತ್ಯರೂಪದಲ್ಲಿ ಸಂಕೇತಿಸುವುದೇ ಸೊನಾಲಿ. ಜಗತ್ತೇ ತನ್ನ ಕೈಯಬುಗರಿ ಎಂದುಕೊಂಡಿದ್ದ ಸೊನಾಲಿಗೆ ಈ ಭ್ರಮೆ ಅರಿವಿಗೆ ಬರುವುದು ಕೆಲಸದಿಂದ ಹೊರತಳ್ಳಲ್ಪಟ್ಟಾಗಲೇ. ಅದುವರೆಗೆ ಕೋರೈಸುವ ಫ್ಯಾಶನ್‌ ಜಗತ್ತಿನ ಕತ್ತಲಮೂಲೆಯಲ್ಲಿ ಅವಿತಿದ್ದ ವಾಸ್ತವ ಇದ್ದಕ್ಕಿದ್ದ ಹಾಗೆ ಕಣ್ಮುಂದೆ ಬಂದಾಗ ಆಕೆ ತತ್ತರಿಸಿ ಹೋಗುತ್ತಾಳೆ. ಅವಳ ಸ್ಥಾನಕ್ಕೆ ಆ ಕಂಪೆನಿಯ ಮುಖವಾಣಿಯಾಗಿ ಬರುವವಳು ನಾಯಕಿ ಮೇಘನಾ ಮಾಥುರ್‌. ಮುಂದೆ ಈ ಸೊನಾಲಿ ದುರಂತ ನಾಯಕಿ ಅಥವಾ ಫ್ಯಾಶನ್‌ ಲೋಕದ ಕಮರಿದ ಹೂವು.

ಫ್ಯಾಶನ್‌ ಲೋಕದ ಹಲವು ದುರಂತಗಳಿಗೆ ಆಕೆ ಸಾಕ್ಷಿಯಾಗುತ್ತಾಳೆ. ಕೆಲ ವರ್ಷಗಳ ಹಿಂದೆ ಫ್ಯಾಶನ್‌ ಶೋವೊಂದರಲ್ಲಿ ಇದ್ದಕ್ಕಿದ್ದ ಹಾಗೆ ಬಟ್ಟೆ ಕಳಚಿಬಿದ್ದ ರೂಪದರ್ಶಿಯನ್ನು ಈಕೆ ಚಿತ್ರದಲ್ಲಿ ಪ್ರತಿನಿಧಿಸುತ್ತಾಳೆ. ಸುತ್ತಿ ಬರುವ ಅವಮಾನಗಳಲ್ಲಿ ದೊಡ್ಡ ಅಲೆ ಇದು. ಈ ಅಲೆ ಆಕೆಯನ್ನು ಕೊಚ್ಚಿಕೊಂಡೇ ಹೋಗುತ್ತದೆ. ಪ್ರವಾಹದ ವಿರುದ್ಧ ಈಜಲಾಗದ ಆಕೆ ಸರ್ವಸ್ವವನ್ನೂ ಕಳೆದುಕೊಂಡು ಹುಚ್ಚಿಯಾಗಿ ಬೀದಿಗೆ ಬೀಳುತ್ತಾಳೆ.
ಆಗ ಇತ್ತೀಚೆಗೆ ಮಾದಕ ವ್ಯಸನಿ ರೂಪದರ್ಶಿಯೊಬ್ಬಳು ಹುಚ್ಚಿಯಾಗಿ ಬೀದಿಯಲ್ಲಿ ಅಲೆದಾಡುತ್ತಿದ್ದ ಸುದ್ದಿಯಲ್ಲಿ ಕಥೆ ಕೇಂದ್ರೀಕೃತವಾಗುತ್ತದೆ. ಘಟನೆ, ಘಟನೆಗಳ ಮೂಲಕ ವಾಸ್ತವಕ್ಕೆ ಹತ್ತಿರವಾಗಿ, ಮನಸ್ಸಿನಾಳದಲ್ಲಿ ಊರಿ ಬಿಡುತ್ತದೆ ಈ ದೃಶ್ಯ.

ಬಹುಶಃ ಈಕೆಯ ಹಣೆಯಲ್ಲಿ ದುರಂತವೇ ಬರೆದಿರಬೇಕು. ಇದರ ನಡುವೆ ಈಕೆ ಕಳೆದುಕೊಂಡದ್ದನ್ನು ತಾನು ಮೈದುಂಬಿಕೊಳ್ಳುತ್ತಾ, ಕೊನೆಗೆ ಈಕೆಯಂತೇ ಹತಾಶೆಯ ಪ್ರಪಾತಕ್ಕೆ ಬೀಳುತ್ತಾಳೆ ಈ ಚಿತ್ರದ ನಾಯಕಿ ಮೇಘನಾ. ಆದರೆ ಒಂದು ಹಂತದಲ್ಲಿ ನಾಯಕಿ ಎಚ್ಚೆತ್ತ ಕಾರಣ ಪರಿಣಾಮ ಸ್ವಲ್ಪ ಹಗುರಾಗುತ್ತದೆ. ಬಳಿಕ ನಾಯಕಿ ತನ್ನ ಪಾಪಪ್ರಜ್ಞೆಯ ಪ್ರತಿರೂಪದಂತಿರುವ ಬಲು ಎಚ್ಚರಿಕೆಯಿಂದ ಕಾಯುತ್ತಾಳೆ.ಆದರೆ, ಹೇಳಿ ಕೇಳಿ ದುರ್ಭರ ಅಂತ್ಯ ಮೊದಲೇ ನಿರ್ಧರಿತವಾದ ಕಾರಣ ಅದಕ್ಕೆ ಪ್ರತಿಯಾಡದೇ ಶರಣಾಗಿ ಬಿಡುತ್ತಾಳೆ ಸೊನಾಲಿ.

ಮಧು ಭಂಡಾಕರ್‌ ಎಂಬ ಪ್ರತಿಭಾವಂತ ನಿರ್ದೇಶಕನ ಕೈಯಲ್ಲಿ ಅಕ್ಷರಶಃ ಸೊನಾಲಿಯೇ ಆಗಿಬಿಡುತ್ತಾಳೆ ಕಂಗನಾ. ಆ ಕೆಚ್ಚು, ವ್ಯಂಗ್ಯ, ಮಾದಕತೆ, ಕೊನೆಗೆ ದೈನ್ಯ...ಇದರ ಜತೆಗೆ ಪಾತ್ರವನ್ನು ಆವಾಹಿಸಿಕೊಂಡು ರೂಪದರ್ಶಿಗಳ ಮೂರ್ತರೂಪವೇ ಆಗಿಬಿಡುತ್ತಾಳೆ ಕಂಗನಾ. ಗುಂಗುರು ಕೂದಲಿನಡಿ ಮಿನುಗುವ ಆಕೆಯ ಬೆಕ್ಕಿನ ಕಣ್ಣು ಫ್ಯಾಶನ್‌ ಜಗತ್ತಿನ ನಗ್ನಸತ್ಯವನ್ನು ಸಾರಿ ಸಾರಿ ಹೇಳುವಂತಿದೆ.

Tuesday, November 4, 2008

ಒಂದು ಪುಟ್ಟು ಪ್ರೀತಿ

ನನಗಾಗ ತಾನೇ ಹನ್ನೆರಡು ತುಂಬಿ ಹದಿಮೂರು ಹಿಡಿದಿತ್ತು. ಮನಸ್ಸು ಮಾಯಾಜಿಂಕೆಯ ಬೆನ್ನು ಹತ್ತಿತ್ತು. ಮನೆಯಲ್ಲಿ ಅಷ್ಟು ಮುಕ್ತವಲ್ಲದ ವಾತಾವರಣ. ನನ್ನ ಕನವರಿಕೆಗಳನ್ನ ಯಾರ ಬಳಿ ತೋಡಿಕೊಳ್ಳುವುದು? ನನ್ನೊಳಗೇ ಅದುಮಿಹಿಡಿದಿದ್ದೆ. ನಾನು ಶಾಲೆಗೆ ಹೋಗುತ್ತಿದ್ದ ವಿಷ್ಣುಮೂರ್ತಿ ಬಸ್ಸಿನ ಕ್ಲೀನರ್‌, ಅವನ ಹೆಸರು ಸಾದಿಕ್‌ ಅಂತ. ಅರೆಗಡ್ಡ ಬಿಟ್ಟ ಬಿಳಿಯ ಚಂದದ ಹುಡುಗ. ಕ್ಲೀನರ್‌ ಕೆಲಸ ಮಾಡುತ್ತಲೇ ಬಸ್‌ ಡ್ರೈವಿಂಗ್‌‌‌‌ನ್ನೂ ಕಲಿಯುತ್ತಿದ್ದ.

ಬೆಳಗ್ಗೆ ಎಂಟೂ ಕಾಲಕ್ಕೆ ವಿಷ್ಣುಮೂರ್ತಿ ಬಸ್ ನಮ್ಮ ಸ್ಟಾಪ್ ಬಿಡುತ್ತಿತ್ತು. ಎಂಟು ಗಂಟೆಗೆ ಮನೆಬಿಟ್ಟು ಅರ್ಧಮೈಲು ನಡೆದು ಭರ್ತಿ ಎಂಟೂ ಕಾಲಕ್ಕೆ ಬಸ್ ಇನ್ನೇನು ಹೊರಡುತ್ತದೆ ಅನ್ನುವಾಗ, ಓಡಿಹೋಗಿ ಬಸ್‌ ಹತ್ತುತ್ತಿದ್ದೆ. ಸಾದಿಕ್‌ ಬಾಗಿಲ ಬದಿ ನಿಂತಿರುತ್ತಿದ್ದ. ನಾನು ಹತ್ತಿದ ಕೂಡಲೇ ಕಿವಿ ಹರಿದುಹೋಗುವಂತೆ ವಿಷಲ್ ಹೊಡೆಯುತ್ತಿದ್ದ. ಡ್ರೈವರ್‌ ಅವನ ಖಾಸಾ ಅಣ್ಣನೇ. ನಾನು ಹತ್ತಿ ಕೂತ ಮೇಲೆ ನನ್ನ ಸ್ಥಿತಿ ನೋಡಿ ನಗುತ್ತಾ ಬಸ್‌ ಓಡಿಸುತ್ತಿದ್ದ. ಬಾಗಿಲ ಬಳಿ ಅವನನ್ನು ದಾಟಿ ಬರುವಾಗ ಅದೇಕೋ ಒಂಥರಾ ಅನಿಸುತ್ತಿತ್ತು. ಮತ್ತೆ ಕಿಟಕಿ ಹತ್ತಿರ ಕೂತು ಆಗಾಗ ಅವನ ಮುಖ ನೋಡುತ್ತಿದ್ದೆ. ಆ ಪುಣ್ಯಾತ್ಮ ಬಾಗಿಲ ಬಳಿ ನಿಂತು ಬಸ್ಸಿನ ಗಾಳಿಗೆ ಮುಖವೊಡ್ಡಿ ಚೊಂಪೆ ಕೂದಲನ್ನು ಹಾರಿಸುತ್ತಾ ಸ್ಟೈಲ್ ಹೊಡೆಯುತ್ತಿದ್ದ. ಆತ ನನ್ನತ್ತ ನೋಡುತ್ತಿಲ್ಲ, ಅನ್ನುವುದು ತಿಳಿದು ಒಳಗೊಳಗೇ ಬೇಜಾರಾಗಿ, ‘ನಾನೆಷ್ಟು ಪಾಪ’ ಅಂತ ನನ್ನ ಬಗೆಗೇ ಮರುಕಪಡುತ್ತಿದ್ದೆ.

ನಾನೊಬ್ಬಳು ಅಂತಲ್ಲ, ನಮ್ಮ ಬಸ್ಸಿನಲ್ಲಿ ಹೋಗುವ ಎಲ್ಲಾ ಹುಡುಗಿಯರೂ ಅವನನ್ನು ಇಷ್ಟಪಡುತ್ತಿದ್ದರು. ಒಳಗೇ ಮುಚ್ಚಿಡಲಿಕ್ಕಾಗದೇ ಆಗಾಗ ಅದು ಹೊರ ಬರುತ್ತಿತ್ತು.

ಆಮೇಲೆ ಒಂದು ದಿನ ಅವನು ಈ ಬಸ್ಸಿನ ಕ್ಲೀನರ್‍ ಕೆಲಸ ಬಿಟ್ಟ. ಅದು ನನಗೆ ಗೊತ್ತಾದದ್ದು ತಡವಾಗಿ. ಅಲ್ಲಿಯವರೆಗೆ ನಾನು ಬಸ್ ಅಷ್ಟು ದೂರದಲ್ಲಿರುವಾಗಲೇ ಬಾಗಿಲ ಹತ್ತಿರ ಅವನನ್ನು ಹುಡುಕುತ್ತಿದ್ದೆ. ಆಮೇಲೆ ಗೊತ್ತಾಯಿತು ಅವನು ವಿಶಾಲ್‌ ಬಸ್ಸಿನಲ್ಲಿ ಡ್ರೈವರ್‌ ಆಗಿ ಸೇರಿಕೊಂಡ ವಿಷಯ.

ನಾನು ಕೆಲವೊಮ್ಮೆ ಸಂಜೆ ಸ್ಕೂಲ್ ಮುಗಿಸಿ ಬರುವಾಗ ಅವನ ಬಸ್ಸು ಬರುತ್ತಿತ್ತು. ಆಗಲೂ ಕದ್ದು ಕದ್ದು ಅವನನ್ನ ನೋಡುತ್ತಿದ್ದೆ. ಅವರು ಎಂದಿನಂತೆ ಚೊಂಪೆ ಕೂದಲು ಹಾರಿಸುತ್ತಾ ಫೋಸು ಕೊಡುತ್ತಿದ್ದ.
ಈಗ ಡ್ರೈವರ್‌ ಆದ ಕಾರಣ ಅವನ ಮುಖದಲ್ಲಿ ಒಂಥರಾ ಗತ್ತೂ ಕಾಣುತ್ತಿತ್ತು.

ಮುಂದೆ ಕಾಲೇಜು ಸೇರಿದ ಮೇಲೆ ನಾನು ಹಾಸ್ಟೆಲ್ ಸೇರಿದ ಕಾರಣ ನಿಧಾನಕ್ಕೆ ಅವನ ನೆನಪು ಮರೆಯಾಯಿತು.

ಬಹುಶಃ ಅದಾದ ಮೇಲೆ ಅವನು ನನಗೆ ಸಿಕ್ಕಿದ್ದು ತಿಂಗಳ ಹಿಂದೆ ಊರಿಗೆ ಹೋದಾಗ. ನೀನಾಸಂ ಶಿಬಿರದಿಂದ ಅರ್ಧಕ್ಕೇ ಹೊರನಡೆದವಳು ಸೀದಾ ಹೋದದ್ದು ಮನೆಗೆ. ಆಗ ಕಾರ್ಕಳದಲ್ಲಿ ವಿಶಾಲ್ ಬಸ್‌ ನಿಂತಿತ್ತು. ನಾನು ಅತ್ತ ನೋಡುತ್ತಾ ನಿಂತಾಗ ಬಾಯಿತುಂಬಾ ಪಾನ್‌ ತುಂಬಿಕೊಂಬಿಕೊಂಡು ಘಂ ಅನ್ನುವ ವಾಸನೆಯೊಂದಿಗೆ ಬಂದು ಜೋರಾಗಿ ಬಾಗಿಲೆಳೆದು ಬಸ್ ಸ್ಟಾರ್ಟ್‌ ಮಾಡಿದ.

ಆ ಬಸ್‌ ಕೆರ್ವಾಶೆಗೆ ಹೊರಟಿದ್ದರೂ ನಾನು ಆ ಬಸ್ಸಿಗೆ ಹತ್ತಲಿಲ್ಲ. ಬೇರೊಂದು ಬಸ್ಸಿಗೆ ಕಾಯುತ್ತಾ ಕುಳಿತೆ. ಬಸ್‌ ಹೋದ ಮೇಲೆ, ಛೇ!ಅದೇ ಬಸ್‌ ಹಿಡಿಯಬೇಕಿತ್ತು ಅಂತನಿಸಿತು. ಸ್ವಲ್ಪ ಹೊತ್ತಾದ ಮೇಲೆ ಮತ್ತೊಂದು ಬಸ್‌ ಬಂತು. ಹತ್ತಿದೆ. ಸ್ವಲ್ಪ ದೂರ ಹೋಗಿರಬೇಕಷ್ಟೇ ನಮ್ಮ ಬಸ್‌ ಅವನಿದ್ದ ಬಸ್‌ನ್ನು ಓವರ್‌ಟೇಕ್ ಮಾಡಿ ಹೋಯಿತು. ನಾನತ್ತ ತಿರುಗಿದೆ. ಆತ ಗಾಳಿಗೆ ಮುಖವೊಡ್ಡಿ ಚೊಂಪೆಗೂದಲು ಹಾರಿಸುತ್ತಾ ನನ್ನತ್ತ ಕಣ್ ಮಿಟುಕಿಸಿದ!

Tuesday, October 14, 2008

ಮಂಜಿನ ಹಾದಿಯ ಬೆತ್ತಲ ಜೀವ

ಬೆಳಗ್ಗಿನ ಆರು ಗಂಟೆಯ ಸಮಯ. ಮಲೆನಾಡು ಇನ್ನೂ ಕತ್ತಲಲ್ಲಿತ್ತು. ಹಾಸಿಗೆ ಬಿಟ್ಟೇಳಲಾಗದ ಹಸಿ ಚಳಿ. ಅಕ್ಕ ಪಕ್ಕದ ಬೆಡ್ಡಿನ ಮೇಲಿದ್ದವರು ಕನಸಿನ ಹೊದಿಕೆಯನ್ನಿನ್ನೂ ಸರಿಸಿರಲಿಲ್ಲ. ಆದರೆ ಆಗಲೇ ಹಂಡೆಯಲ್ಲಿ ಬಿಸಿ ನೀರು ಕಾಯುತ್ತಿತ್ತು. ನೀರು ಮುಖಕ್ಕೆ ಬಿದ್ದಾಗ ಅದೊಂಥರಾ ಸುಖ. ಆದರೂ ಬಿಡದ ಚಳಿಯ ಮೋಹ. ಸ್ವೆಟರನ್ನೂ ಹಾಕದೇ ಎದ್ದು ಹೊರನಡೆದೆ. ಆಗಲೇ ನಾಟಕ ಕಲಾವಿದರು ಎದ್ದು ಬೆಳಗ್ಗಿನ ರಿಹರ್ಸಲ್‌ನಲ್ಲಿ ಬೆವರಿಳಿಸುತ್ತಿದ್ದರು. ಉಳಿದಂತೆ ನೀನಾಸಂ ತಣ್ಣಗಿತ್ತು.

ಆಗಲೇ ನಸು ಬೆಳಕು. ಅಡಿಗೆ ಮನೆಯಿಂದ ಹೊರಟ ಘಮಟು ಹೊಗೆ ಮಂಜಿನೊಂದಿಗೆ ಸೇರಿ ವಿಶಿಷ್ಟ ಘಮ ಗಾಳಿಯಲ್ಲಿ ಬೆರೆತಿತ್ತು. ದಟ್ಟ ಹಬ್ಬಿದ ಮಂಜಿನಲ್ಲಿ ನಡೆದು ಹೋಗುವಾಗ ಮನಸ್ಸಿಗೆ ಸುಮ್ಮ ಸುಮ್ಮನೇ ಸಂಭ್ರಮ. ನೀನಾಸಂ ದಾಟಿ ಹೊರಬಂದು ಬೀದಿಗಿಳಿದೆ. ಟಷ್ಟರಲ್ಲಿ ನೈಟಿ ಹಾಕಿಕೊಂಡು ತಲೆಗಿಡೀ ಮಫ್ಲರ್‍ ಸುತ್ತಿಕೊಂಡು ವೈದೇಹಿ ಪ್ರತ್ಯಕ್ಷ. ವಿಪರೀತ ಮಂಜಿದೆಯಲ್ವಾ ಅಂತ ಅಮ್ಮನಂತಾ ನಗೆ ನಕ್ಕು ಮುಂದೆ ನಡೆದರು, ನಾನು ಹೂಂ ಅನ್ನಲಿಲ್ಲ. ಸುಮ್ಮನೇ ನಕ್ಕೆ. ಆಮೇಲೆ ನಾನ್ಯಾಕೆ ಹಾಗೆ ಮಾಡಿದೆ ಅಂತ ನನಗೇ ಬೈಕೊಂಡೆ.

ಹಿಮ ಅಂದ್ರೆ ಅದೆಂಥಾ ಹಿಮ, ನಮ್ಮೆದುರು ಏನು ಬರುತ್ತಿದೆ ಅಂತಾನೇ ಗೊತ್ತಾಗುತ್ತಿರಲಿಲ್ಲ. ಮಾರ್ಗದ ಮಧ್ಯೆ ಗೂಳಿಯಂತೆ ಹೋಗುತ್ತಿದ್ದ ನನಗೆ ಪಕ್ಕದಲ್ಲೇ ಸೈಕಲ್ಲೊಂದು ಮೈಗೆ ತಾಗುವಂತೆ ಹಾದುಹೋದಾಗ ಗಾಭರಿ. ಕ್ಷಣದಲ್ಲಿ ಒಂಥರಾ ಹುಚ್ಚು ಹುರುಪು, ಮಂಜಿಂದ ನೆನೆದ ಬಲೆಯೊಂದು ಮುಖಕ್ಕೆ ಅಂಟಿಕೊಂಡಿತು. ಅದನ್ನು ತೆಗೆಯುತ್ತಾ ಮುಂದೆ ನಡೆದೆ. ಅಲ್ಲೊಬ್ಬ ಹೆಣ್ಣು ಮಗಳು ಹುಲ್ಲಿನ ಹೊರೆಯನ್ನು ಸೈಕಲ್‌ ಹಿಂದೆ ಕಟ್ಟಿ ಸೈಕಲ್ ತುಳಿಯುತ್ತಾ ಬರುತ್ತಿದ್ದಳು. ನಿಜಕ್ಕೂ ಹೆಗ್ಗೋಡು ಸುಧಾರಿಸಿದೆ ಅಂದುಕೊಂಡೆ. ಯಾಕೆಂದರೆ ನಮ್ಮ ಊರಲ್ಲಿ ನಮ್ಮ ಪ್ರಾಯದ ಹುಡುಗಿಯರೂ ಸೈಕಲ್ ತುಳಿಯಲು ಹಿಂಜರಿಯುತ್ತಾರೆ. ಆದರೆ ಇಲ್ಲಿ ನಮ್ಮ ಅಮ್ಮನಷ್ಟು ಪ್ರಾಯದ ಹೆಂಗಸು ಸೈಕಲ್‌ನ್ನು ಲೀಲಾಜಾಲವಾಗಿ ತುಳಿಯುತ್ತಾ ಹೋಗುವುದನ್ನು ನೋಡಿ ಒಳಗೊಳಗೇ ಖುಷಿ.

ಡೇಲಿಯಾ, ಗುಲಾಬಿ, ಬಣ್ಣಬಣ್ಣದ ದಾಸವಾಳಗಳ ಅಂಗಳಗಳು ಕಾಣಸಿಕ್ಕವು. ಮನೆಗಳಲ್ಲಿ ಬೆಳಗಿನ ತಿಂಡಿ ತಯಾರಾಗುತ್ತಿತ್ತು. ಆಗಷ್ಟೇ ಎದ್ದ ಎಳೇ ಮಗುವೊಂದು ಮುಸು ಮುಸು ಅಳುತ್ತಾ ಅಮ್ಮನಿಂದ ಬಯಿಸಿಕೊಳ್ಳುತ್ತಿತ್ತು. ‘ ಈ ಬಾರಿ ನೀನಾಸಂಗೆ ಜನ ಕಡಿಮೆ ಅಂತೆ’ , ಹಾಲು ಕ್ಯಾನ್‌ ಕಟ್ಟಿಕೊಂಡು ಸೈಕಲ್ ಹೊಡೆಯುತ್ತಿದ್ದ ಮೂರ್‌ ನಾಲು ಜನ ತಮ್ಮ ಪಾಡಿಗೆ ಮಾತಾಡಿಕೊಳ್ಳುತ್ತಾ ಹೋಗುತ್ತಿದ್ದರು. ಅವರನ್ನು ನನ್ನನ್ನು ನೋಡಿಯೇ ಹೀಗೆ ಹೇಳಿದ್ದಿರಬಹುದಾ ಅಂದುಕೊಂಡೆ.

ನನ್ನೆದುರು ಎರಡು ದಾರಿ. ಒಂದು ಭೀಮನ ಕೋಣೆಗೆ ಹೋಗುತ್ತಿತ್ತು. ಇನ್ನೊಂದು ಕಾಡು ಹಾದಿ. ಆದದ್ದಾಗಲಿ, ಅಂತ ಕಾಡು ಹಾದಿಯಲ್ಲೇ ಹೆಜ್ಜೆ ಹಾಕಿದೆ. ಬೆಳಕು ಗಾಢವಾಗುತ್ತಿರುವಂತೇ ಮಂಜು ನಿಧಾನಕ್ಕೆ ಕರಗುತ್ತಿತ್ತು. ಮೂಗಿನಲ್ಲಿ ನಸು ನವೆ, ದೂರದಲ್ಲಿ ಮನೆಯೊಂದರಿಂದ ಹೊಗೆ ಹೋಗುತ್ತಿತ್ತು. ಆಮೇಲೆ ಅಂತಹಾ ಮನೆ ಕಾಣಲೂ ಇಲ್ಲ. ತಣ್ಣನೆಯ ಹವೆಯಲ್ಲಿ ತಲೆಗೊಂದು ಶಾಲೂ ಹಾಕದೇ ಬಂದಿದ್ದೆ. ಕಾಡಿನೊಳಗೆ ಇಳಿದಿದ್ದೇ ಚಳಿ ಚಳಿ ಸುರು. ಹಕ್ಕಿಗಳ ಅದೇನೋ ತಮಗೆ ತಾವೇ ಗುಟ್ಟು ಹೇಳಿಕೊಳ್ಳುವಂತೆ ಪಿಸಿ ಪಿಸಿ ಮಾತನಾಡುತ್ತಿದ್ದವು. ಬೆಳಗಿಂದ ಸಂಜೆಯವರೆಗೆ ಮಾತಾಡಿದ್ರೂ ನಿಮ್ದು ಮಾತಾಡಿ ಮುಗಿಯುವುದಿಲ್ಲವಲ್ಲ ಮಾರಾಯ್ರೆ ಅಂತ ಹೇಳಬೇಕು ಅನಿಸಿತು. ಯೋಗ್ಯತೆ ಇಲ್ಲದವರು ಜಾಸ್ತಿ ಮಾತಾಡಬಾರದು ಅಂದುಕೊಂಡು ಸುಮ್ಮನಾದೆ. ಮಂಗಗಳು ಗುಂಪು ಅಲ್ಲೇ ಓಡಾಡುತ್ತಿತ್ತು. ದೊಡ್ಡ ಮಂಗನ ಹೊಟ್ಟೆಯನ್ನು ಗಟ್ಟಿ ಹಿಡಿದ ಪುಟ್ಟು ಮಂಗನ ಮರಿ ಪಿಳಿ ಪಿಳಿ ಕಣ್ಣು ಬಿಡುತ್ತಿತ್ತು. ಅದನ್ನು ನೋಡಿ ಮುದ್ದುಕ್ಕಿತು. ಅದೇನೆನೆಸಿತೋ ಆ ಅಮ್ಮ ಮಂಗ ನನ್ನತ್ತಲೇ ನೋಡುತ್ತಾ ಗುರ್‍..ಅನ್ನುತ್ತಾ ಕೊಂಬೆಯಿಂದ ಕೆಳಗಿಳಿಯತೊಡಗಿತು. ಒಳಗೊಳಗೇ ಹೆದರಿಕೆಯಾಗಿ ಅಲ್ಲಿಂದ ಮೆಲ್ಲನೆ ಜಾರಿಕೊಂಡು ಹಿಂತಿರುಗಿ ನಡೆದೆ.

ಸ್ವಲ್ಪ ಮುಂದೆ ಬಂದಿರಬೇಕು. ಹಾದಿಯ ಮತ್ತೊಂದು ಬದಿಯ ಕಾಡಿನತ್ತ ತಿರುಗಿ ನೋಡಿದೆ. ಮರಗಳ ಮರೆಯಲ್ಲಿ ಯಾವುದೋ ಆಕೃತಿ ತುಸು ಅಲುಗಾಡಿದಂತೆ ಕಂಡಿತು. ಕುತೂಹಲದಿಂದ ಅತ್ತ ನಡೆದೆ. ಮರೆಯಾಗಿದ್ದ ಮರವ ಹತ್ತಿರ ಹೋಗಿ ಇಣುಕಿದಾಗ, ಆ ಕ್ಷಣ ಬಾಯಿಯ ಪಸೆಯಾರಿತ್ತು!

ವ್ಯಕ್ತಿಯೊಬ್ಬ ಬೆತ್ತಲಾಗಿ ಅಲುಗಾಡದಂತೆ ನಿಂತಿದ್ದ. ಎತ್ತಲೋ ದೃಷ್ಟಿ ನಟ್ಟಿತ್ತು. ಕಳೆದುಹೋದವನಂತೆ ಕಾಣುತ್ತಿದ್ದ. ಕಡು ಕಪ್ಪು ಬಣ್ಣದ ಎತ್ತರದ ಧಡೂತಿ ದೇಹ, ರೋಮವೇ ಮೈಯಾದಂತಾ ದೇಹ. ಒಂದು ಬದಿಯಷ್ಟೇ ಕಾಣುತ್ತಿದ್ದ ಕಾರಣ ಆತನ ಮುಖಭಾವ ಸ್ಪಷ್ಟವಾಗುತ್ತಿರಲಿಲ್ಲ. ಮೈ ಮೇಲೆ ಒಂದು ತುಣುಕೂ ಬಟ್ಟೆಯಿಲ್ಲದೆ ನಿಂತದ್ದ. ಆ ಚಳಿಯೂ ಅವನಿಗೆ ಸಹಜವೇ ಆದಂತಿತ್ತು. ಅವನೂ ತೀರಾ ಸಹಜವಾಗಿ ಮಾಮೂಲಿನಂತಿದ್ದ.

ಆತ ಪ್ರಕೃತಿಯ ಭಾಗವೇ ಆಗಿ ಹೋಗಿದ್ದ. ನಿಸರ್ಗದ ನಗ್ನತೆಯೊಳಗೆ ಸೇರಿ ಹೋಗಿದ್ದ. ಹೌದು, ಇಲ್ಲಿ ಎಲ್ಲವೂ ಬೆತ್ತಲು. ಸರ್ವವೂ ಸರಳ, ಸಹಜ. ನಾನೊಬ್ಬಳು ಇಲ್ಲಿಯವಳಲ್ಲ ಅನಿಸತೊಡಗಿತು. ಮೌನವಾಗಿ ತಿರುಗಿ ನಡೆದು ರೂಮು ಸೇರಿಕೊಂಡೆ. ಯಾಕೋ ಎಲ್ಲಾ ಅಪರಿಚಿತ ಅನಿಸತೊಡಗಿತು. ಮನೆ ಪದೇ ಪದೇ ನೆನಪಾಯಿತು. ಮರುದಿನ ಬೆಳಗ್ಗೆಯೇ ಊರಿಗೆ ಹೊರಟು ನಿಂತೆ.

Sunday, September 28, 2008

ಸ್ಪೋಟ

ನಾಯಿ ಬಾಲಕ್ಕೆ ಪಟಾಕಿ ಕಟ್ಟಿ
ಅದು ಸಿಡಿಯುವುದನ್ನೇ
ಕಾಯುವ ಪೋಲಿ ಹುಡುಗ
ತುಟಿ ಕಚ್ಚಿ ಕಿವಿ ನಿಮಿರಿಸಿ
ನಾಯಿ ಕುಂಞ ಎಂದರಚುತ್ತಾ
ಓಡುವುದನ್ನೇ ನೆನೆಸುವಾಗ
ಅದೆಂಥಾ ಮೋಜು..

ಪಟಾಕಿ ಯಾವಾಗ ಸಿಡಿದು ಬಿಡುತ್ತದೋ
ಹುಡುಗನಿಗೆ ಕ್ಷಣ ಅನಂತ
ಪಕ್ಕದ ಐಸ್‌ಕ್ಯಾಂಡಿ ಹಾರ್ನ್ ಸಹ
ಕಿವಿಗೆ ದೂರ

ಎದೆ ನಡುಗಿಸುವ ಸದ್ದಿಗೆ
ಕಿವಿ ತಯಾರು
ತುಂಟ ಕಣ್ಣಲ್ಲಿ ಇನ್ನಿಲ್ಲದ ಕಾತರ

ಆ ಕ್ಷಣ ಕಣ್ಣು ಎವೆ ಮುಚ್ಚಲಿಲ್ಲ
ಎದೆ ಬಡಿತ ಏರಿತ್ತು
ದೇಹವ್ಯಾಪಿ ಉದ್ವಿಗ್ನತೆ
ಅವನು ಅವನನ್ನೇ ಮೀರುವುದರಲ್ಲಿದ್ದ

ನಾಯಿ ನಾಲಗೆ ಚಾಚಿ
ಹುಡುಗನನ್ನು ಸಮೀಪಿಸಿತು.
ಅವನ ಕಾಲು ನೆಕ್ಕಿ ಬಾಲ ಅಲ್ಲಾಡಿಸಿತು
ಅಲ್ಲಿ ಸ್ಪೋಟವೊಂದು ಕಾದುಕುಳಿತಿತ್ತು.