Thursday, February 12, 2009

ಸಾಹಿತ್ಯ ಜಾತ್ರಾ ವಿಶೇಷ !

ಚಿತ್ರದುರ್ಗದ ಸಾಹಿತ್ಯ ಸಮ್ಮೇಳನಕ್ಕೆ ಹೋಗಿ, ದೊಡ್ಡ ನಿಟ್ಟುಸಿರಿನೊಂದಿಗೆ ವಾಪಾಸು ಬಂದಿದ್ದೇನೆ. ಹೋಗುವಾಗ ಇದ್ದ ಉತ್ಸಾಹ ಬರುವಾಗ ಠುಸ್‌! ಒಂದು ಬಾರಿ ಸಮ್ಮೇಳನಕ್ಕೆ ಹೋದವಳು, ಸಮ್ಮೇಳನ ಮುಂದೂಡಿಕೆಯಾಗಿ ವಾಪಾಸು ಬರುವಾಗಲೇ ಅಂದುಕೊಂಡಿದ್ದೆ, ಯಾಕೋ ಎಡವಟ್ಟಾಗುತ್ತಿದೆ. ಅದು ಕೊನೆಯ ತನಕವೂ ಬೇತಾಳನ ಹಾಗೆ ಹಿಂಬಾಲಿಸುತ್ತಲೇ ಇತ್ತು.


ಮತ್ತೆ ಸಮ್ಮೇಳನ ಆರಂಭವಾದಾಗ, ಸೈಡ್‌ ಲೈಟ್ಸ್‌ ಅಂತ ಚಿತ್ರದುರ್ಗದ ವಿಶೇಷತೆಗಳನ್ನು ಸ್ಟೋರಿ ಮಾಡಬೇಕು ಅನ್ನುವ ಅಪ್ಪಣೆಯಾದ ಕಾರಣ, ಒಂದು ದಿನದ ಹಿಂದೆಯೇ ನಮ್ಮ ಸವಾರಿ ಚಿತ್ರದುರ್ಗದತ್ತ ದೌಡಾಯಿಸಿತ್ತು. ಅರ್ಧದಲ್ಲೇ ಗಾಡಿ ಕೆಟ್ಟು, ಲೈಟು ರಿಪೇರಿಯಾಗಿ ಚಿತ್ರದುರ್ಗ ತಲುಪಿದಾಗ ರಾತ್ರಿ ಎರಡು. ಹೋಗಿದ್ದೇನೋ ಹೋಗಾಯಿತು, ಮಲಗೋದೆಲ್ಲಿ? ಕೊನೆಗೂ ಮುರುಘಾ ಮಠದ ಕಡೆ ನಡೆದಾಗ, ಬಂದವರೆಲ್ಲ ಹುಡುಗರು ಅಂತ ಭಾವಿಸಿ ಒಂದು ಹಾಲ್‌ನಲ್ಲೇ ಒಂದಿಷ್ಟು ಹಾಸಿಗೆ ಹಾಕಿ ಮಲಗುವ ವ್ಯವಸ್ಥೆ ಮಾಡಿ ಮಠದೊಳಗೆಲ್ಲೋ ಹೋಗಿಬಿಟ್ಟರು.


ಆ ರಾತ್ರಿಯಲ್ಲಿ ಬೇರೆ ಯಾರನ್ನು ಕೇಳೋದು? ಕೊನೆಗೆ ನಮ್ಮ ಚಿತ್ರದುರ್ಗದ ರಿಪೋರ್ಟರ್‌ ಯಾರದೋ ಮನೆಯವರನ್ನು ಕಾಡಿ ಬೇಡಿ ಉಳಿದರ್ಧ ರಾತ್ರಿ ಕಳೆಯಲು ವ್ಯವಸ್ಥೆ ಮಾಡಿದರು. ಇನ್ನೇನು ನಿದ್ದೆ ಹತ್ತಿತು ಅನ್ನುವಷ್ಟರಲ್ಲಿ ಬೆಳಗೂ ಆಗಿತ್ತು. ಕಣ್ತೆರೆಯುವ ಮೊದಲೇ ಮೊಬೈಲ್‌ ಹೊಡೆದುಕೊಳ್ಳತೊಡಗಿತು. ಆಫೀಸ್‌ನಿಂದ ಫೋನ್‌. ಕೆರೆಮನೆ ಶಂಭು ಹೆಗಡೆ ತೀರ್‍ಕೊಂಡ್ರಂತೆ, ಅವರಿಗೆ ನೃತ್ಯ ಹೇಳಿಕೊಟ್ಟ ಮಾಯಾರಾವ್‌ ಮನೆ ಎಡ್ರೆಸ್‌ ಕೊಡಿ ಅಂತ ಆರ್ಡ್‌‌ರ್‍. ಕೊಡಲಿಕ್ಕೆ ನಂಗೆ ಗೊತ್ತಿದ್ರೆ ತಾನೇ? ಕೇಳಿ ಹೇಳ್ತೇನೆ ಅಂದೆ. ಕೂಡಲೇ ಕೆರೆಮನೆ ಶಂಭು ಹೆಗಡೆ ಫೈಲ್‌ ವಿಜುವಲ್‌ ಎಲ್ಲಿದೆ? ಅಂತ ಪ್ರಶ್ನೆ. ಅದಕ್ಕೂ ಸಮಜಾಯಿಶಿ ನೀಡಿಯಾಯಿತು. ಅಷ್ಟರಲ್ಲಿ ಮೊಬೈಲ್‌ ನೆಟ್‌ವರ್ಕ್ ಕಟ್‌ ಆಯ್ತು. ಟೆರೇಸ್‌ ಮೇಲಾದ್ರೂ ಸಿಗತ್ತಾ ಅಂತ ಹೋದ್ರೆ, ಅಲ್ಲಿ ಕಂಡ ದೃಶ್ಯ ವರ್ಣನಾತೀತ. ನಾನು ಅಲ್ಲಿ ಇಲ್ಲಿ ಓದಿಕೊಂಡಿದ್ದ ದೃಶ್ಯ ಕಣ್ಣು ಮುಂದೆಯೇ ಕಾಣಸಿಕ್ಕಿತ್ತು. ವಿಶಾಲವಾದ ಬಯಲಿನಲ್ಲಿ ಬಿಂದಿಗೆ ಹಿಡಿದ ಮಂದಿ ಅಲ್ಲಲ್ಲಿ ಕೂತು, ಅದ್ಯಾವುದೋ ಸುಖದ ಅಮಲಿನಲ್ಲಿ ಅರೆಗಣ್ಣಾಗಿದ್ದರು. ನಮಗೆ ತೀರಾ ಅಪರಿಚಿತವಾಗಿರುವ ಈ ಸನ್ನಿವೇಶವನ್ನು ಕಂಡು ಒಳಗೊಳಗೇ ನಗುತ್ತಾ ಮತ್ತೆ ಕೆಳಗೆ ಬಂದೆ.



ಆ ದಿನವಿಡೀ ಕೋಟೆ, ಚಂದವಳ್ಳಿ ತೋಟ ಶೂಟ್‌ ಮಾಡೋದ್ರಲ್ಲೇ ಕಳೆದು ಹೋಯಿತು. ಕೆಲ ರಾದ್ಧಾಂತಗಳು, ನಾಳಿನ ಕವರೇಜ್‌ ಪ್ಲಾನ್‌, ಅದು ಇದು ಅಂತ ಮಾತು ಮುಗಿಯೋ ಹೊತ್ತಿಗೆ ಗಂಟೆ ೧೨. ಹೊಟ್ಟೆಯೇನೋ ನಾಚಿಕೆ ಬಿಟ್ಟು ಚುರುಗುಟ್ಟುತ್ತಿತ್ತು. ಆದರೆ, ಅಷ್ಟೊತ್ತಿಗೆ, ಊಟಾನಾದ್ರೂ ಎಲ್ಲಿ ಸಿಗಬೇಕು? ದಾರಿಯಲ್ಲಿ ಯಾವುದೋ ಬಾರ್‌ ಆಂಡ್‌ ರೆಸ್ಟ್‌ರೆಂಟ್‌ ತೆರೆದಿತ್ತು. ನಮ್ಮ ಗ್ರೂಪ್‌ ಅಲ್ಲಿಗೆ ನುಗ್ಗಿದಾಗ ನಾನೂ ಹಿಂಬಾಲಿಸಿದೆ. ಊಟ ಮುಗಿಸಿ ನನಗೆ ಅಂತ ಬುಕ್‌ ಆಗಿರೋ ರೂಮ್‌ಗೆ ಬಂದ್ರೆ, ಆ ರೂಮನ್ನು ಆಗಲೇ ಆಕ್ರಮಿಸಿಕೊಂಡಾಗಿತ್ತು. ಜಪ್ಪಯ್ಯ ಅಂದ್ರೂ ಆ ಪುಣ್ಯಾತ್ಮ ರೂಂ ಬಿಟ್ಟು ಕೊಡ್ಲಿಲ್ಲ. ಬೇರೆ ಸ್ತ್ರೀ ಸಹೋದ್ಯೋಗಿಯೊಬ್ಬರಾದರೂ ಇದ್ದರೆ ಅವರೊಂದಿಗೆ ರೂಮು ಹಂಚಿಕೊಳ್ಳಬಹುದಿತ್ತು. ಆದರೆ, ದೇವರ ದಯದಿಂದ ಸ್ತ್ರೀ ಜೀವ ಅಂತ ಇದ್ದದ್ದು ನಾನು ಮಾತ್ರ. ಆ ಹೊತ್ತು ಮಧ್ಯ ರಾತ್ರಿ ೧.೩೦ ಗಂಟೆ. ಕೊನೆಗೆ ಹೊಟೇಲ್‌ನವರಿಗೇ ಕರುಣೆ ಉಕ್ಕಿ ಆ ರಾತ್ರಿಯ ಮಟ್ಟಿಗೆ ಒಂದು ಖಾಲಿ ರೂಂ ಸಿಕ್ಕಿತು. ಹೋಗಿ ಬಿದ್ದುಕೊಂಡೆ.


ಮತ್ತೆ ಬೆಳಗಿನ ದರ್ಶನ ಮಾಡಿಸಿದ್ದು ಅದೇ ಜಂಗಮ ದೂರವಾಣಿ. ‘ಪ್ರಿಯಾ, ಲೈನ್‌ ಹೋಲ್ಡ್‌ ಮಾಡಿದ್ದೀನಿ. ಈಗ ಫೋನೋ ಇದೆ. ರೆಡಿಯಾಗಿರು’ ಅಂದಿತು ಅತ್ತಲಿನ ದನಿ. ನಾನು ಬಾಯಿ ತೆರೆಯುವುದರೊಳಗೆ ಫೋನ್‌ ಹೋಲ್ಡ್‌ ಆಗಿತ್ತು. ಏಳು ಗಂಟೆಯ ನ್ಯೂಸ್‌ ಬುಲೆಟಿನ್‌ ಆರಂಭವಾಗಿತ್ತು. ಕೆಲವೇ ಕ್ಷಣಗಳಲ್ಲಿ ಲೈವ್‌ಗೆ ಫೋನ್‌ ಕನೆಕ್ಟ್‌ ಆಯಿತು. ನಾನು ಗಂಟಲು ಸರಿ ಮಾಡಿಕೊಳ್ಳಬೇಕೆಂದುಕೊಳ್ಳುವಾಗಲೇ ಅತ್ತಲಿಂದ ವಾರ್ತಾವಾಚಕಿ ಪ್ರಶ್ನೆ ಕೇಳಿಯಾಗಿತ್ತು, ಉಗುಳು ನುಂಗಿ, ಅದೇನೋ ಒದರಿ ಸುಮ್ಮನಾದೆ.


ಬಡ ಬಡನೆ ಹೊರಟು ನಿಂತಾಗ ಸಮ್ಮೇಳನದವರೇ ಆಯೋಜಿಸಿದ್ದ ಬಸ್‌ ಕಾಯುತ್ತಿತ್ತು. ಹತ್ತಿ ಕೂತೆ. ಬಸ್‌ ಹೊರಟಾಗ ಮತ್ತೆ ಫೋನೋ ಕನೆಕ್ಟ್. ‘ಸಮ್ಮೇಳನಕ್ಕೆ ಈಗಾಗಲೇ ಜನರ ಆಗಮನವಾಗಿದೆಯಾ? ತಿಂಡಿ ವ್ಯವಸ್ಥೆ ಹೇಗಿದೆ? ಸಾಹಿತಿಗಳ್ಯಾರಾದ್ರೂ ಮಾತಿಗೆ ಸಿಕ್ರಾ?’ ಅಂತ ಆಂಕರ್‌ ಕೇಳಿದಾಗ, ‘ದೂರದೂರಗಳ ಜನ ಈಗಾಗಲೇ ಆಗಮಿಸಿದ್ದಾರೆ. ಎಲ್ಲರಿಗೂ ತಿಂಡಿವ್ಯವಸ್ಥೆ ಇದೆ. ಕೆಲ ಸಾಹಿತಿಗಳು ಆಗಲೇ ಬಂದಿದ್ದಾರೆ’ ಅಂತಂದು ಸುಮ್ಮನಾದೆ. ಆದರೆ ಸಮ್ಮೇಳನ ನಡೆಯುವ ಕಡೆ ಹೋಗಿ ನೋಡಿದ್ರೆ, ಅಲ್ಲಿ ತಿಂಡಿ ಖಾಲಿಯಾಗಿತ್ತು, ಜನ ಸಿಟ್ಟಿಗೆದ್ದದ್ದರು. ಮತ್ತೊಂದೆಡೆ ಕಿಟ್‌ಗಾಗಿ ಹೋರಾಟ ನಡೆಯುತ್ತಿತ್ತು. ತಪ್ಪಿಯೂ ಒಬ್ಬ ಸಾಹಿತಿಯೂ ಸಮ್ಮೇಳನದತ್ತ ಮುಖಮಾಡಿರಲಿಲ್ಲ. ಮೈ ಪರಚಿಕೊಳ್ಳುವಂತಾಯಿತು. ಅಷ್ಟರಲ್ಲಿ ಮತ್ತೆ ಆಫೀಸ್‌ನಿಂದ ಫೋನ್. ಏನ್ರೀ ಅಲ್ಲೇನೋ ಗಟಾಲೆ ನಡೀತಿದೆಯಂತೆ, ನೀವ್‌ ಏನ್ರೀ ಮಾಡ್ತಿದ್ದೀರಾ? ಅಂತ ಆವಾಜ್‌. ಅವರನ್ನು ಕನ್ವಿನ್ಸ್‌ ಮಾಡುವಷ್ಟರಲ್ಲಿ ಸಾಕೋ ಸಾಕು. ಸಾಹಿತ್ಯ ಸಮ್ಮೇಳನ ಆರಂಭವಾಗುತ್ತಿರುವಂತೆ ಅಧ್ಯಕ್ಷರಿಗಿಂತ ಹೆಚ್ಚಿನ ಟೆನ್ಶನ್‌ ನಮಗೆ. ನಮಗೆ ಸಿಗದ ವಿಶ್ಯವಲ್‌ ಬೇರೆ ಚಾನೆಲ್‌ಗೆ ಸಿಕ್ಕಿಬಿಟ್ರೆ , ಅಂತ ಕ್ಷಣ ಕ್ಷಣಕ್ಕೂ ಕಾಡುವ ಆತಂಕ.


ಇನ್ನು ಲೈವ್‌ ಚಾಟ್‌(ನೇರ ಪ್ರಸಾರದಲ್ಲಿ ಮಾಹಿತಿ, ಸಂದರ್ಶನ...ಹೀಗೆ ನೇರ ಮುಖಾಮುಖಿ) ಕೊಡುವ ಸಂಭ್ರಮವೇ ಬೇರೆ. ಯಾರೋ ಗಣ್ಯ ವ್ಯಕ್ತಿಗಳನ್ನು ನಿಲ್ಲಿಸಿಕೊಂಡು ಅವರ ಜತೆ ಲೈವ್‌ನಲ್ಲಿ ಸಂದರ್ಶನ ನಡೆಸುತ್ತಿರುವಾಗಲೇ ನೆಟ್‌ವರ್ಕ್‌ ಪ್ರಾಬ್ಲಂನಿಂದ ಲೈನ್‌ ಕಟ್‌ ಆಗಿರತ್ತೆ. ಆ ವ್ಯಕ್ತಿ ಇನ್ನೂ ನೇರ ವಿಷಯಕ್ಕೇ ಬಂದಿರುವುದಿಲ್ಲ. ಆದ್ರೆ ಲೈನ್‌ ಕಟ್‌ ಆಗಿರುವುದು ಆತನ ಗಮನಕ್ಕೆ ಬಂದಿರುವುದಿಲ್ಲ. ಆ ಪುಣ್ಯಾತ್ಮರು ಹೇಳುತ್ತಲೇ ಇರುತ್ತಾರೆ. ನಾವೂ ಏನೂ ನಡೆದಿಲ್ಲ ಎಂಬಂತೆ ಅವರ ಭಾಷಣ ಕೇಳಿದಂತೆ ನಟಿಸುತ್ತಾ, ಅವರೇ ಮಾತು ಕೊನೆಗೊಳಿಸುವ ತನಕ ಕಾದು, ಅವರಿಗೊಂದು ಸಲಾಮು ಹೊಡೆದು,
ಓವರ್‌ ಟು ಸ್ಟುಡಿಯೋ ಅನ್ನುವ ಹೊತ್ತಿಗೆ ಬೆವರಿಳಿದಿರುತ್ತದೆ.


ಉಳಿದ ಹೊತ್ತಲ್ಲಿ ಗೋಷ್ಟಿಗಳನ್ನು ನೋಡಿಕೊಳ್ಳಬೇಕು, ನ್ಯೂಸ್‌, ಸ್ಟೋರಿ ಎಲ್ಲ ಕೊಡುತ್ತಾ ಅರೆಜೀವವಾಗುತ್ತದೆ, ಸ್ಥಿತಿ. ಇದೆಲ್ಲಕ್ಕಿಂತ ಉತ್ಸಾಹ ಕುಂದಿಸುವುದು ಸುಡು ಸುಡು ಬಿಸಿಲು. ಗಂಟಲಿಗೆ ತೊಟ್ಟು ನೀರು ಎರೆದುಕೊಳ್ಳೋಣ ಅಂದ್ರೆ, ಜೀವ ಹೋದ್ರೂ ಅಲ್ಲಿ ನೀರು ಸಿಗಲ್ಲ. ಮೇಲೆ ಸ್ಟಾಲ್‌ಗಳಿರುವ ಕಡೆಗೆ ಹೋಗಿ ದುಡ್ಡು ಕೊಟ್ಟು ನೀರು ಕೊಳ್ಳಬೇಕು. ಬೇರೇನಕ್ಕೋ ಅವಸರಕ್ಕಿಟ್ಟಿತೆಂದರೆ ದೇವರೇ ಗತಿ, ಯಾಕೆಂದರೆ, ಅಲ್ಲಿ ಟಾಯ್ಲೆಟ್ಟೂ ಇಲ್ಲ. ರೂಮಿಗಾದ್ರೂ ಹೋಗಿ ತೀರಿಸಿಕೊಳ್ಳೋಣ ಅಂದ್ರೆ, ಅದಕ್ಕೂ ಗತಿಯಿಲ್ಲ, ರಾತ್ರಿಯಾದರೆ ಲಗ್ಗೇಜು ಹಿಡಿದು ರೂಮಿಂದ ರೂಮಿಗೆ ಅಲೆತ.


ಅಹ್‌..ಇದು ಹೇಳಿ ಮುಗಿಯಲಿಕ್ಕಿಲ್ಲ ಬಿಡಿ, ನಾನು ರಿಪೋರ್ಟಟಿಂಗ್‌ಗೆ ಹೊರ ಜಿಲ್ಲೆಗಳಿಗೆ ಹೋಗೋದು ಇದೇ ಮೊದಲೇನಲ್ಲ, ಆದರೆ, ಈ ಅನುಭವ ಹೊಸತು. ಅನುಭವ ನಮ್ಮನ್ನು ಗಟ್ಟಿಗೊಳಿಸುತ್ತದಂತೆ, ಆದ್ರೆ, ಅಲ್ಲಿಗೆ ಹೋಗಿ ಬಂದ ನಾನಿನ್ನೂ ಚೇತರಿಸಿಕೊಂಡೇ ಇಲ್ಲ.

12 comments:

Kishore said...

Priya avre jeevanada anubhavagalanna
chenngi barithira

Nevu Kervashe avru antha gotthaitu yavudo blog mulaka nimma blog odo chance sigthu tumba chennagide

Nanu karkala dalle odddiddu Tellar nali mavana maneyinda hogtha edde...

Nimmannu nodiralubhaudu

ನಗೆಪ್ರಣತಿ said...

nalmeya priya madam
nimma baraha tumba hidisitu.
neevu yava channelnalli kelasa madodu antha heloke sadhyana?,neevu bareyuva shaili tumba ista agutte.neevu papernalli kathe bareetira?.nange sanna kathe andre tumba ista. heege bareeta iri
preeiyirali
preetiyinda shankara

ವಿ.ರಾ.ಹೆ. said...

ನೀವು ’ಉತ್ತಮ ಸಮಾಜಕ್ಕಾಗಿ’ ಕೆಲಸ ಮಾಡ್ತಾ ಇರೋದಾ?!

chanakya said...

ಪ್ರಿಯಾ..ನೀನು ಚಿತ್ರದುರ್ಗದಿಂದ ಬಂದ ಒಂದು ವಾರದ ಬಳಿಕ ಕಾರ್ಯ ನಿಮಿತ್ತ ನಾನು ದುರ್ಗಕ್ಕೆ ಹೋಗ್ಬೇಕಾಗಿ ಬಂತು. ಅಲ್ಲಿನ್ನೂ ಸಮ್ಮೇಳನದ ಸಂಭ್ರಮ ಮರೆಯಾಗಿರಲಿಲ್ಲ. ರಸ್ತೆ ಬದಿಯಲ್ಲೆಲ್ಲಾ ಸ್ವಾಗತ ಕೋರೋ ಮಹಾನ್ ನಾಯಕರ ಫ್ಲೆಕ್ಸ್ ಗಳೇ ರಾರಾಜಿಸುತಿದ್ದವು.ನಮ್ ಸಮ್ಮೇಳನ ಅನ್ನೋ ಅಭಿಮಾನದಿಂದ ಈ ಮಂದಿ ಒಂದಿಸ್ಟು ಕಾಳಜಿ ವಹಿಸಿದ್ರೆ ಗೆಳತಿ..ಗೆಳೆಯರಿಗೆ ತೊಂದ್ರೆ ಆಗ್ತಿರಲಿಲ್ಲವೇನೋ? ಏನೇ ಆಗ್ಲಿ ಪ್ರಿಯಾ ಕಾಯಕವೇ ಕಯ್ಲಾಸ ಅಲ್ವಾ..ಹೇಳೋದನ್ನ ನೇರವಾಗಿ ದಿಟ್ಟತನದಿಂದ ನಿರಂತರವಾಗಿ ಹೇಳ್ತಿರು..??

Anonymous said...

nice write-up

ರಾಧಾಕೃಷ್ಣ ಆನೆಗುಂಡಿ. said...

ನಾನು ಸಮ್ಮೇಳನಕ್ಕೆ ಬಂದಿದ್ದೆ. ಆದರೆ ನಿಮ್ಮಂತೆ on duty ಬಂದಿಲ್ಲ ಅನ್ನುವ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದೆ. ಪುಸ್ತಕದ ಅಂಗಡಿ ಧೂಳು ಮಗ ಧೂಳು ಆಗಿತ್ತು.

ಇನ್ನು ಊಟದ ವ್ಯವಸ್ಥೆ ಅಯ್ಯೋ.........

ಆದರೂ ಇಂತಹ ಸಂಕಷ್ಟದಲ್ಲೂ ಕೆಲಸ ಮಾಡೋದು ಥ್ರಿಲ್ ನೀಡುತ್ತೆ.

ಹೊರಗಣವನು said...

hi priya,
durgada kastagalu chennagive. bt sahityada tuoch kodbodittu.
reporter pade kasta. adarallu mahila reporter padu kannige kattuvante barediddiri

ನಗೆಪ್ರಣತಿ said...
This comment has been removed by a blog administrator.
www.kumararaitha.com said...

ಘಟನೆಗಳನ್ನು ನೀವು ಬರಹದ ಕ್ಯಾನ್ವಾಸಿನಲ್ಲಿ ಹಿಡಿದಿಡುವ ಪರಿ ಸೊಗಸು.ಚಿತ್ರದುರ್ಗದಿಂದ ನೀವು ಮಾಡಿದ ವರದಿಗಳನ್ನು ನೋಡಿದೆ.ಲೈವ್ ನಲ್ಲಿ ಎಲ್ಲಿಯೂ ತಡವರಿಸದೇ ಮಾತನಾಡಿದಿರಿ

ಮನದ ಮಾತು... said...

priya its nice writing. now i am seeing the impact. get well soon. take care

Anonymous said...

ನಮಸ್ತೆ.. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ...

ವಂದೇ,
- ಶಮ, ನಂದಿಬೆಟ್ಟ

ವನಿತಾ / Vanitha said...

he he..idella namge hosatu.bari TV yalli finals nodi maatra gottu..chennagi barediddeeri:-)