Friday, November 30, 2012

ನಾಟ್ಕ ಮಾಡ್ತಾರೆ- ಥಿಯೇಟರ್ನಲ್ಲಿ ಯಂಗ್ ಸ್ಟಾರ್ಸ್

                             


ಕಣ್ಬಿಟ್ಟರೆ ಅದೇ ಜಗತ್ತು, ಅದೇ ಬದುಕು, ಎಂದಿನಂತೆ ತನ್ನ ಪಾತ್ರವೂ ಹಾಗೇ ಏರಿಳಿತವಿಲ್ಲದೇ ಸಾಗುತ್ತದೆ. ಜಾಸ್ತಿಯೆಂದರೆ ವೀಡಿಯೋ ಗೇಮ್, ಫ್ರೆಂಡ್ಸ್, ಮಾಲ್, ಸಿನಿಮಾ ಅಷ್ಟೆ. ಟೆನ್ಶನ್, ವಕರ್್ಲೋಡ್, ಎಕ್ಸಾಂ, ಪ್ರಮೋಶನ್ ಅನ್ನುವ ಕಿರಿಕಿರಿ ಇದರಿಂದ ಕೊಂಚ ದೂರಾದಂತೆ ಅನಿಸಿದರೂ ಸಂಪೂರ್ಣ ರಿಲೀಫ್? ಉಫ್, ಅದು ಈ ಜನ್ಮದಲ್ಲಿ ಸಾಧ್ಯವಾಗಲ್ಲ ಅನಿಸಿ, ಮನಸ್ಸು ಮತ್ತಷ್ಟು ಉದ್ವಿಗ್ನವಾಗುತ್ತದೆ. ಯಾಕೋ ಇದೆಲ್ಲದರಿಂದ ಕ್ಷಣಕಾಲವಾದರೂ ಹೊರಬರಬೇಕೆಂದು ಹಳೇ ಗೆಳೆಯನ ಬೆನ್ನು ಹತ್ತಿಹೊರಟಾಗ ಅಲ್ಲಿ ಹಳೇ ನೆನಪುಗಳ ಫಲಕು. ಶಾಲೆ- ಓದಲಾರದೇ ಮತ್ತೊಬ್ಬ ಓದುವುದನ್ನು ನೋಡಲಾಗದೇ ಓದಿದ್ದು, ಓಡುವಾಗ ಬಿದ್ದು ಮಂಡಿ ಒಡೆದಾಗ ಮಿಸ್ ಹಾಕಿದ ಟಿಂಚರ್ನ ಉರಿಗೆ ಜೀವ ಹೋದಂತಾಗಿದ್ದು, ಸ್ಕೂಲ್ ಡೇಗೆ ಕನ್ನಡ ಮೇಷ್ಟ್ರು ನಾಟಕ ಮಾಡಿಸಿದ್ದು, ಅಲ್ಲಿ ತನಗೆ ಸಿಕ್ಕ ದುರ್ಯೋಧನನ ಪಾತ್ರ, ಡೈಲಾಗ್ ನಡುವೆಯೇ ಪ್ರೇಕ್ಷಕರ ನಡುವೆ ಕುಳಿತ ಅಮ್ಮನನ್ನು ಹುಡುಕಿದ್ದು ..ಹೀಗೆ. ನೆನಪುಗಳಿಂದ ಈಚೆ ಬಂದರೆ ಅದೇ ವರ್ತಮಾನ. ಹಳೆಯದೆಲ್ಲ ಮುಗಿದುಹೋದ ಮಂಕು.
     
`ನಿಂಗೆ ನಾಟಕದಲ್ಲಿ ಅಂದಿನ ಇಂಟ್ರೆಸ್ಟ್ ಈಗ್ಲೂ ಇದೆಯಾ?' ಗೆಳೆಯ ಕೇಳಿದರೆ ಪೆಕರನಂತೆ ಅವನ ಮುಖ ನೋಡಿದ. ಈಗಿನ ಬದುಕಿಗೂ ನಾಟಕಕ್ಕೂ ಎತ್ತಲಿನ ಸಂಬಂಧ. ಬೆಳಗಾದರೆ ತಲೆತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಇಪ್ಪತ್ತೈದರ ಪ್ರಾಯದಲ್ಲೇ ಮುರುಟಿ ಹೋಗಿರುವ ಮನಸ್ಸು. ಇದೆಲ್ಲದರಿಂದ ತೀವ್ರ ಬದಲಾವಣೆ ಬೇಕನಿಸಿದ ಕ್ಷಣ,`ಯಾವುದಾದ್ರೂ ನಾಟಕಕ್ಕೆ ಹೋಗೋಣ ಬಾರೋ' ಅಂದ. ಗೆಳೆಯನ ಮನಸ್ಥಿತಿಯೂ ಇವನಿಗಿಂತ ಹೊರತಾದದ್ದಲ್ಲ. ಅವನೂ ಇವನ ನಾಟಕದಲ್ಲಿ ಅಭಿಮನ್ಯು ಪಾಟರ್ು ಮಾಡಿದವ ತಾನೇ. ಆಧುನಿಕ ಥಿಯೇಟರ್ ಒಳಗೆ ಅಡಿಯಿಟ್ಟರು. ಅಲ್ಲಿ ಯಾವುದೋ ಹವ್ಯಾಸಿ ನಾಟಕ. ಏನೇನೋ ನಿರೀಕ್ಷೆಯಲ್ಲಿ ಬಂದಿದ್ದ ಗೆಳೆಯರಲ್ಲಿ ಗೊಂದಲ. ಮೊದಲರ್ಧವಂತೂ ಏನೂ ಅರ್ಥವಾಗಲಿಲ್ಲ. ಎದ್ದುಹೋಗಬೇಕೆಂದುಕೊಂಡವರು ಯಾವುದೋ ಎಳೆತಕ್ಕೊಳಗಾದವರಂತೆ ಕುಳಿತರು. ನಿಧಾನಕ್ಕೆ ನಾಟಕ ಮನಸ್ಸಿಗಿಳಿಯತೊಡಗಿತು. ಹಾಗೇ ಕತ್ತಲಲ್ಲಿ ಕೂತು ಒಂದೂವರೆ ಗಂಟೆ ನಾಟಕ ನೋಡಿ ಮುಗಿಸಿದರು. ಬೇರೆ ಜಗತ್ತಿಗೆ ಹೋಗಿಬಂದಂತನಿಸಿತು. ಥಿಯೇಟರ್ನಿಂದ ಹೊರಬಂದರೂ ನಾಟಕದ ಮೂಡ್ನಿಂದ ಹೊರಬರಲಾಗಲಿಲ್ಲ. ಮತ್ತೆ ಥಿಯೇಟರ್ ಭೇಟಿ ಜಾಸ್ತಿಯಾಯಿತು. ಇವರೊಂದಿಗೆ ಉಳಿದ ಗೆಳೆಯರೂ ಜೊತೆಯಾದರು. ಕೊನೆಗೆ ಇವರದೇ ಟೀಂ ಹುಟ್ಟಿಕೊಂಡಿತು.

 ರಂಗಭೂಮಿಯಿಂದ ಸಂಪೂರ್ಣ ಹೊರಗಿದ್ದ ಒಂದು ಪಂಗಡ ನಾಟಕಕ್ಕೆ ಹತ್ತಿರವಾದ ಬಗೆಯಿದು. ಅದೊಂದು ಕಾಲವಿತ್ತು. ಯುವಜನತೆಗೆ ಹಳ್ಳಿಯ ಏಕತಾನತೆಯ ಬದುಕು ಅನಿವಾರ್ಯವಾಗಿತ್ತು. ಆಗಾಗ ಊರಿಗೆ ಬರುತ್ತಿದ್ದ ಕಂಪೆನಿ ನಾಟಕಗಳು, ಟೆಂಟ್ ಸಿನಿಮಾಗಳಷ್ಟೇ ಮನರಂಜನಾ ಮಾಧ್ಯಮವಾಗಿತ್ತು. ವರ್ಷಕ್ಕೊಮ್ಮೆ ಊರಲ್ಲಿ ನಡೆಯುವ ನಾಟಕದಲ್ಲಿ ಪುಟ್ಟ ಪಾತ್ರ ಮಾಡಿದರೂ ಧನ್ಯತಾಭಾವ. ಈಗ ಹಾಗಲ್ಲ. ಯುವಕರ ಮುಂದೆ ಮನರಂಜನೆಗೆಂದೇ ನೂರಾರು ಆಪ್ಶನ್ಗಳಿವೆ. ಕಂಪ್ಯೂಟರ್ ಎಂಬ ಮಹಾನ್ ಮಾಂತ್ರಿಕನ ಮಂತ್ರದಂಡದಡಿ ಬಂಧಿಗಳಾಗದವರಿಲ್ಲ. ಮಾಲ್, ಮಲ್ಟಿಫ್ಲೆಕ್, ಮ್ಯಾಕ್ಡೊನಾಲ್ಡ್, ಪಿಜ್ಜಾ ಹಟ್ ಅಂತ ಟೈಂಪಾಸ್ಗೆ ನೂರಾರು ತಾಣಗಳು. ಆದರೂ ವೀಕೆಂಡ್ಗಳಲ್ಲಿ ಹಳ್ಳಿ ಕಡೆಗೆ, ಹಸಿರಿನ ಕಡೆಗೆ ಮುಖಮಾಡುವ ಮಂದಿ. ಆಹ್! ಇದೆಂಥಾ ಕಾಂಟ್ರಿಡಿಕ್ಷನ್. ರಂಗಭೂಮಿಗೆ ಯುವಕರ ದಂಡು ಲಗ್ಗೆ ಇಟ್ಟಿರುವುದೂ ಇಂತಹದ್ದೇ ಸನ್ನಿವೇಶದಲ್ಲಿ.

ಹತ್ತು ವರ್ಷದ ಹಿಂದಿಗಿಂತ ಇಂದಿನ ರಂಗಭೂಮಿಯ ಹರಿವು ಹೆಚ್ಚು ತೀವ್ರವಾಗಿದೆ. ಹವ್ಯಾಸಿ ರಂಗಭೂಮಿಯಂತೂ ಹೊಸತನದಿಂದ ಸಮೃದ್ಧವಾಗಿದೆ. ಯುವಕರು ಥಿಯೇಟರ್ನಲ್ಲಿ ಸಕ್ರಿಯರಾಗಿದ್ದಾರೆ. ಅವರದೇ ತಂಡಗಳು ಹುಟ್ಟಿಕೊಂಡಿವೆ.
`ಪ್ರಸಂಗ'`ರಂಗಸೌರಭ'`ರೂಪಾಂತರ'ದಂತಹ ತಂಡಗಳಲ್ಲಿ ಹೆಚ್ಚಿನವರೆಲ್ಲ ಹೊಸಬರೇ ಆದರೆ, `ರಂಗ ನಿರಂತರ' ದಂತಹ ಹಳೆಯ ತಂಡಗಳಲ್ಲೂ 30ಕ್ಕಿಂತ ಕಡಿಮೆ ವಯೋಮಾನದವರೇ ಮುಕ್ಕಾಲು ಪಾಲಿನಷ್ಟಿದ್ದಾರೆ. ಅವರಿಗೆ ಮಾಲ್, ಶಾಪಿಂಗ್ನಲ್ಲಿ ಸಿಗದ ಮನಶ್ಶಾಂತಿ ಇಲ್ಲಿ ಸಿಗುತ್ತದೆ. ಪಾತ್ರಗಳಲ್ಲಿ ತನ್ಮಯರಾಗುತ್ತಾ, ಅದನ್ನು ತಮ್ಮೊಳಗೆ ಆವಾಹಿಸಿಕೊಂಡು ತಾವೇ ಪಾತ್ರವಾಗುತ್ತಾ, ಕೆಲವೊಮ್ಮೆ ಪಾತ್ರದ ಹೊರನಿಂತು ಅದರ ಆಳ ಅಗಲ ಅರಿತು ಅಭಿನಯಿಸುವ ಚತುರತೆ ಇವರಲ್ಲಿದೆ.

ಸಾಮಾನ್ಯವಾಗಿ ರಂಗತಂಡವೊಂದು ತನ್ನ ಪ್ರಯೋಗವನ್ನು ಆರಂಭಿಸುವ ಮೊದಲು ಕೆಲವು ಹಂತಗಳಿರುತ್ತವೆ. ಆರಂಭದಲ್ಲಿ ಯುವಜನರಿಗಾಗಿಯೇ ತರಬೇತಿ ಶಿಬಿರ ನಡೆಸುತ್ತದೆ. ತಜ್ಞರು ರಂಗದ ವಿವಿಧ ಪಟ್ಟುಗಳನ್ನು ಕಲಿಸುತ್ತಾರೆ. ಅಳುಕು, ಹಿಂಜರಿಕೆಗಳನ್ನು ದೂರಮಾಡುವ ಆಟ, ಕಸರತ್ತುಗಳಿರುತ್ತವೆ. ಯುವತಿಯರ ಪ್ರತಿಭೆ ಹೊರತೆಗೆಯುವ ಕೆಲಸ ಇಲ್ಲಾಗುತ್ತದೆ. ಒಂದು ರೀತಿಯ ಪರ್ಸನಾಲಿಟಿ ಡೆವಲಂಪ್ಮೆಂಟ್ ಶಿಬಿರವೂ ಹೌದು. ತರಬೇತಿ ಪಕ್ಕಾ ಆದ ಬಳಿಕ `ಸ್ಕ್ರಿಪ್ಟ್ ರೀಡಿಂಗ್'. ಆ ಬಳಿಕ ಪಾತ್ರ ಹಂಚಿಕೆ, ಅಭಿನಯ..ಹೀಗೆ. ಇದು ಯುವ ಜನರನ್ನು ರಂಗಭೂಮಿಗೆ ಇನ್ನಷ್ಟು ಹತ್ತಿರವಾಗಿಸುವ ಪ್ರಕ್ರಿಯೆ. ಅಥವಾ ರಂಗಪ್ರವೇಶದ ಸಿದ್ಧತೆ. ಇದು ನಾಟಕದ ತನ್ಮಯತೆಗೂ ಸಹಕಾರಿ. ಹೀಗೆ ತರಬೇತಿ ಪಡೆಯುವ ಮಂದಿ ಪಾತ್ರಗಳನ್ನು ಮಾಡುತ್ತಾ, ಸುಪ್ತಮನಸ್ಸಿನ ಉದ್ವೇಗಗಳನ್ನು ಅರಿವಿಲ್ಲದಂತೆ ಇಲ್ಲಿ ಸೃಜನಾತ್ಮಕವಾಗಿ ಬಳಸಿಕೊಳ್ಳುತ್ತಾ ತಾವೂ ಬೆಳೆಯುತ್ತಾರೆ. ಒತ್ತಡ, ಕಿರಿಕಿರಿ, ಉದ್ವೇಗಗಳೆಲ್ಲ ಬೇರೆಯದೇ ರೂಪದಲ್ಲಿ ಹೊರಬರುತ್ತದೆ.

 ಇನ್ನು ಕೆಲಮಂದಿ ಜನಪ್ರಿಯವಾಗಿರುವ ಸೀರಿಯಲ್ಗಳಿಗೆ ಹೋಗುವ ಉದ್ದೇಶಕ್ಕೂ ರಂಗಭೂಮಿಯನ್ನು ಮೆಟ್ಟಿಲಾಗಿಸಿಕೊಳ್ಳುವುದುಂಟು. ನಾಟಕದಲ್ಲಿ ನಟನೆಯ ಪಾಠ ಕಲಿತು ಸೀರಿಯಲ್ ಲೋಕದಲ್ಲಿ ಮಿಂಚುವ ಕನಸು ಇವರದು. ಸಿನಿಮಾ ಹುಚ್ಚಿರುವವರೂ ಇಲ್ಲಿಗೆ ಬರುವುದುಂಟು. ಆದರೆ ಇಂಥವರು ರಂಗಭೂಮಿಯಲ್ಲಿ ಸ್ಥಿರವಾಗಿ ನಿಲ್ಲುತ್ತಾರೆಂದು ನಂಬುವ ಹಾಗಿಲ್ಲ.
ಇನ್ನು ಫ್ರೆಂಡ್ಸ್ ಬಲವಂತಕ್ಕೆಂದು ಥಿಯೇಟರ್ಗೆ ಬಂದವರು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ರಂಗಭೂಮಿಯವರೇ ಆಗಿಹೋಗಿದ್ದಾರೆ. ಕರೆತಂದ ಗೆಳೆಯರು ರಂಗಬಿಟ್ಟು ಹೋದರೂ ಇವರು ರಂಗಭೂಮಿಗೆ ಅಂಟಿಕೊಂಡೇ ಇದ್ದಾರೆ. ಈ ಪ್ರಪಂಚಕ್ಕೆ ಕಾಲಿಟ್ಟ ಮೇಲಿಂದ ಇವರ ಅಳುಕು ಹಿಂಜರಿಕೆ ಜಾಗದಲ್ಲಿ ಆತ್ಮವಿಶ್ವಾಸದ ಛಾಪು ಮಾಡಿದೆ. ಮೊದಲೆಲ್ಲ ಸ್ಟೇಜ್ ಹತ್ತಿದರೆ ಕೈಕಾಲು ನಡುಗಿ ಬಾಯಿಪಸೆ ಆರಿದಂತಾಗಿ ತಡವರಿಸುತ್ತಿದ್ದವರು ಈಗ ಎಷ್ಟು ಪ್ರೇಕ್ಷಕರಿದ್ದರೂ ನಿಭರ್ಿಡೆಯಿಂದ ಮಾತಾಡಬಲ್ಲರು. ಸಿಟ್ಟು, ಉದ್ವೇಗ ಹೊತ್ತುಕೊಂಡೇ ಮನೆಗೆ ಹಿಂತಿರುಗುತ್ತಿದ್ದವರು ಈಗ ಖುಷಿಖುಷಿಯಿಂದ ನಗುತ್ತಾ ಹೋಗುತ್ತಾರೆ. ಈ ಬೆಳವಣಿಗೆ ಮನೆಯವರಿಗೂ ಅಚ್ಚರಿ ತಂದಿದೆ.

****************
ಬೈಟ್ :
ಭರತ್ ದಿವಾಕರ್ - ಯುವ ರಂಗಕಮರ್ಿ, `ಒಪೇರಾಹೌಸ್' ನಾಟಕ ನಿದರ್ೇಶಕ
ಈಗ ರಂಗಭೂಮಿ ಹೊಸಬರಿಂದಲೇ ತುಂಬಿ ಹೋಗಿದೆ. ನಮ್ಮ `ರಂಗಸೌರಭ' ತಂಡದಲ್ಲಿ ಶೇ.95ರಷ್ಟು ಮಂದಿ 25ರ ಕೆಳಗಿನವರು. ಇವರಿಗೆ ಅಭಿನಯ ಕಲಿಸುವುದು ಸುಲಭ. ಫೇಸ್ಬುಕ್ನಂತಹ ತಾಣಗಳಲ್ಲಿ ರಂಗಕ್ಕೆ ಸಂಬಂಧಪಟ್ಟ ವಿಷಯ ಹಾಕಿದರೆ ಸಾಕು, ನೆಟ್ವಕರ್ಿಂಗ್ ತನ್ನಿಂದ ತಾನೇ ಬೆಳೆಯತ್ತೆ. ನಾಟಕ ಪ್ರದರ್ಶನಕ್ಕೆ ಮೊದಲಿನ ಹಾಗೆ ಕಲಾಕ್ಷೇತ್ರಕ್ಕೇ ಜೋತುಬೀಳಬೇಕಿಲ್ಲ. ರಂಗಶಂಕರ, ಕೆ.ಎಚ್. ಕಲಾಸೌಧ ಸೇರಿದಂತೆ ಹತ್ತಾರು ಕಡೆ ಥಿಯೇಟರ್ ಆಕ್ಟಿವಿಟಿಗೆ ಅವಕಾಶ ಸಿಗುತ್ತದೆ. ಮೊದಲಿದ್ದ ರಿಸ್ಟ್ರಿಕ್ಟೆಡ್ ಆಡಿಯನ್ಸ್ ಈಗಿಲ್ಲ. ಎಲ್ಲ ವರ್ಗದ ಜನರೂ ನಾಟಕಕ್ಕೆ ಬರುತ್ತಾರೆ. ಇದರಿಂದ ಆಥರ್ಿಕವಾಗಿಯೂ ರಂಗಭೂಮಿ ಬೆಳೆಯುವುದು ಸಾಧ್ಯವಾಗಿದೆ.

ಪನ್ನಗ ವಿಠಲ್ - ನಾಟಕ, ಕಿರುತೆರೆ ಕಲಾವಿದೆ
ನನಗೆ ಸೀರಿಯಲ್ ಫೀಲ್ಡ್ನಲ್ಲಿ ಮೊದಲಿಂದಲೂ ಆಸಕ್ತಿ ಇತ್ತು. ಅಭಿನಯ ಕಲಿಯಲಿಕ್ಕೆಂದು ಥಿಯೇಟರ್ಗೆ ಬಂದೆ. ಇಲ್ಲಿ ಬಂದ ಮೇಲೆ ಬೇರೆಯದೇ ಲೋಕಕ್ಕೆ ಬಂದಂತಾಯ್ತು. ಟ್ರೈನಿಂಗ್ ನಿಂದ ಹಿಡಿದು ನಾಟಕ ಪ್ರದರ್ಶನದವರೆಗಿನ ಹಂತ ನನಗೊಂದು ಹೊಸ ವ್ಯಕ್ತಿತ್ವ ಕೊಟ್ಟಿತು. ರಂಗಭೂಮಿಗೆ ದೊಡ್ಡ ಸಲಾಂ .

ಶ್ರೀಪಾದ - ಯುವ ರಂಗಕಲಾವಿದ, ವೃತ್ತಿಯಲ್ಲಿ ಮೆಡಿಕಲ್ ರೆಪ್
ನಾನು ಥಿಯೇಟರ್ಗೆ ಮೊದಲ ಎಂಟ್ರಿ ಕೊಟ್ಟಿದ್ದು ಗೆಳೆಯರ ಮೂಲಕ. ಈಗ ಎಷ್ಟೇ ಕೆಲಸದ ಒತ್ತಡವಿದ್ದರೂ ಅದನ್ನು ಬದಿಗಿಟ್ಟು ರಂಗಕ್ರಿಯೆಯಲ್ಲಿ ಮಗ್ನನಾಗುತ್ತೇನೆ. ಇಲ್ಲಿ ಬಂದ ಮೇಲೆ ಹೊರಹೋಗುವುದೇ ಕಷ್ಟ. ಮತ್ತೊಂದು ವಿಷ್ಯ ಅಂದ್ರೆ ಇದು ನಾವು ಕಷ್ಟ ಪಟ್ಟು ಮಾಡೋದಲ್ಲ. ಇಷ್ಟಪಟ್ಟು ಮಾಡೋದು. ಇಲ್ಲಿ ದುಡ್ಡು ಬರಲ್ಲ. ನಾಟಕದಿಂದ ಹೊಟ್ಟೆಹೊರೆಯೋದು ಕನಸಿನ ಮಾತು. ಆದರೆ ಇಲ್ಲಿ ಸಿಗೋ ಖುಷಿ, ನೆಮ್ಮದಿ ನಂಗೆ ಬೇರೆಲ್ಲೂ ಸಿಕ್ಕಿಲ್ಲ.

(`ವಿಜಯವಾಣಿ' ನವೆಂಬರ್ 28ರ `ಮಸ್ತ್' ಪುರವಣಿಯಲ್ಲಿ ಪ್ರಕಟ)

No comments: