`ಕ್ಯಾ ಚಾಹಿಯೆ ಬೇಟಿ?' ಪ್ರೀತಿ ಬೆರೆತ ದನಿಯೊಂದು ಪ್ರಶ್ನಿಸುತ್ತದೆ. `ರೋಟಿ, ಚಾವಲ್, ಸಬ್ಜಿ...?' ಖಾಲಿ ಹೊಟ್ಟೆ ಏನನ್ನೋ ಬಯಸುತ್ತದೆ. ಅಂಕುಡೊಂಕಾದ ಪೆಟ್ಟಿಗೆ ಬೆಂಚಿನಲ್ಲಿ `ಉಸ್ಸಬ್ಬಾ' ಅಂತ ಕೂತ ಕೂಡಲೇ ಬಿಸಿಬಿಸಿ ರೊಟ್ಟಿ ಸಬ್ಜಿ ಅನ್ನ ದಾಲ್ ಪ್ರತ್ಯಕ್ಷ. ಹೊರಗಿನ ಹಿಮಗಾಳಿಯಿಂದ ಬಚ್ಚಿಟ್ಟು, ಬೆಚ್ಚನೆಯ ಕೋಣೆಯೊಳಗೆ ಕೂತು ಬಿಸಿಬಿಸಿ ಊಟ ಮಾಡುವಾಗ, ದೋಜರ್ಿ ದಂಪತಿಗಳ ಅಕ್ಕರೆಯ ಸತ್ಕಾರ ಮನಸ್ಸನ್ನೂ ಬೆಚ್ಚಗಾಗಿಸುತ್ತದೆ.
`ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು' ಎಂದು ಹಾಡಿಕೊಳ್ಳುವುದು ಸುಲಭ. ಅದರ ಕಷ್ಟ ಅರಿತವರಿಗೇ ಗೊತ್ತು. ವರ್ಷದ ಒಂಬತ್ತು ತಿಂಗಳು ಹೆಪ್ಪುಗಟ್ಟಿಸುವ ಹಿಮ, ಉಸಿರುಗಟ್ಟಿಸುವ ಗಾಳಿ, ನಡುಗಿಸುವ ಚಳಿ. ತುಸು ಬಿಸಿಲು ಜಾಸ್ತಿ ಬಿದ್ದರೆ ಸೊಕ್ಕಿ ಹರಿವ ನದಿ ಪಕ್ಕದಲ್ಲೇ. ತಮ್ಮ ನಿಗೂಢವನ್ನು ಬಿಟ್ಟುಕೊಡದ ಹಿಮಾಲಯ ಪರ್ವತಗಳು ಸುತ್ತಲೂ. ಜನಸಂಚಾರ ಬಿಡಿ, ಕ್ರಿಮಿಕೀಟಗಳೂ ಇಲ್ಲ. ಇಂಥ ಉಸಿರುಗಟ್ಟಿಸುವ ಕಟ್ಟೇಕಾಂತದಲ್ಲಿ ಜೀವನ ಸಾಗಿಸುವ ಇವರ ಪರಿ ಬೆರಗು ಮೂಡಿಸುತ್ತದೆ.
ಹಿಮಾಲಯದ ತಪ್ಪಲಿನ ಒಂದು ಪಾಶ್ರ್ವದ ಅತೀ ಎತ್ತರದ ಹಾಗೂ ಕೊನೆಯ ವಾಹನ ನಿಲ್ದಾಣ ಸ್ಪಿತಿ ಜಿಲ್ಲೆಯಲ್ಲಿ ಬರುತ್ತದೆ. ಹಿಮಾಚಲ ಪ್ರದೇಶದ ಲಾಹೋಲ್ ಮತ್ತು ಸ್ಪಿತಿ ಒಂದೇ ಸಾಮ್ಯದ ಅವಳಿ ಜಿಲ್ಲೆಗಳು. ಸ್ಪಿತಿಯ ಕೇಂದ್ರ ಸ್ಥಾನ ಕಾಜಾ. ಕಡಿಮೆ ಜನಸಂಖ್ಯೆಯಿರುವ ಈ ಜಿಲ್ಲೆಗಳಲ್ಲಿ ಜನಜೀವನ ಕಠಿಣವಾದದ್ದು. ಹಿಮ ಕಡಿಮೆ ಇರುವ ಸಮಯದಲ್ಲಿ ಗದ್ದೆಗಳಲ್ಲಿ ಬಟಾಣಿಕಾಳು, ಗೋಧಿ ಬೆಳೆಯುತ್ತಾ, ಉಳಿದ ಸಮಯದಲ್ಲಿ ಉಣ್ಣೆ, ತುಪ್ಪಳಗಳಿಂದ ಸ್ವೆಟರ್, ಶಾಲ್ ಹೆಣೆಯುತ್ತಾ ಬದುಕು ಕಂಡುಕೊಳ್ಳುತ್ತಾರೆ.
ಮುಖ್ಯ ನಗರ ಮನಾಲಿಗೂ ಕಾಜಾಕ್ಕೂ ತಪ್ಪದ ನಂಟು. ಆದರೆ ಮನಾಲಿಯಿಂದ ಸ್ಪಿತಿ ವ್ಯಾಲಿ ನಡುವಿನ ವಾಹನ ಮಾರ್ಗ ನಾಲ್ಕು ತಿಂಗಳಷ್ಟೆ ತೆರೆದಿರುತ್ತದೆ. ವರ್ಷದ ಉಳಿದೆಲ್ಲ ಸಮಯ ಹಿಮದಿಂದ ಮುಚ್ಚಿರುತ್ತದೆ. ಮೇ ತಿಂಗಳು ಬರುತ್ತಿದ್ದಂತೆ ರೋಡ್ ರಿಪೇರಿ ಆರಂಭವಾಗುತ್ತದೆ. ಜೂನ್ ಹೊತ್ತಿಗೆ ರೋಡ್ ವಾಹನ ಓಡಾಟಕ್ಕೆ ಸಜ್ಜಾದರೂ ಪರ್ವತಗಳಿಂದ ಕುಸಿಯುವ ಮಣ್ಣು, ಹಿಮಗಡ್ಡೆಗಳು, ನದೀಪ್ರವಾಹಗಳಿಂದಾಗಿ ನಾಲ್ಕೂ ತಿಂಗಳೂ ರೋಡ್ ರಿಪೇರಿ ನಡೆಯುತ್ತಲೇ ಇರುತ್ತದೆ. ರಸ್ತೆ ತೆರೆದುಕೊಳ್ಳುತ್ತಿದ್ದಂತೇ ಇಲ್ಲಿನ ಹಳ್ಳಿಗರೂ ಪ್ರವಾಸಿಗರನ್ನು ಸ್ವಾಗತಿಸಲು ಎದುರುನೋಡುತ್ತಿರುತ್ತಾರೆ. ಇದು ಅವರಿಗೆ ಒಂದಿಷ್ಟು ಹಣ, ನೆಮ್ಮದಿ ಕೊಡುವ ಕಾಲ.
ಮನಾಲಿಯಿಂದ ಬೆಳಗಿನ ಜಾವ ಐದಕ್ಕೆ ಸರಿಯಾಗಿ ಹೊರಡುವ ಎಚ್ಆರ್ಟಿಸಿ ಬಸ್, ಕಣ್ಣಕೊನೆ ಮುಟ್ಟದ ದೈತ್ಯ ಪರ್ವತಗಳಿಗೆ ಸುತ್ತು ಹೊಡೆಯುತ್ತಾ ಸಾಗುತ್ತದೆ. ರೋಹತಾಂಗ್ ಪಾಸ್ ಸೇರಿದಂತೆ ಹಲವೆಡೆ ನೀರ್ಗಲ್ಲುಗಳು, ದೈತ್ಯಬಂಡೆಗಳು, ರಸ್ತೆ ಮೇಲೇ ಹರಿಯುವ ಝರಿ, ಅಪಾಯಕಾರಿ ತಿರುವುಗಳ ಇಕ್ಕಟ್ಟಾದ ಹಾದಿಯಲ್ಲಿ ಸಂಚರಿಸಿ ಮಧ್ಯಾಹ್ನದ ಹೊತ್ತಿಗೆ ಸರಿಯಾಗಿ ಬತಾಲ್ನಲ್ಲಿ ನಿಲ್ಲುತ್ತದೆ. ಸುತ್ತಲೂ ಮುಗಿಲೆತ್ತರ ಚಾಚಿದ ಹಿಮಾಲಯ ಪರ್ವತಶ್ರೇಣಿ. ಪಕ್ಕದಲ್ಲೇ ಹರಿವ ಚಂದ್ರಾ ನದಿ. ಮುಂದೆ ಭಾಗಾ ನದಿ ಜತೆ ಸೇರಿ ಇದು `ಚಂದ್ರಭಾಗಾ'ವಾಗುತ್ತದೆ. ಮುಚ್ಚಿದ ಕಿಟಕಿಯಿಂದಾಗಿ ಬಸ್ನಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ಹಿಮಗಾಳಿ, ಇಳಿದಾಗ ಒಂದು ಕ್ಷಣ ನಡುಗಿಸಿಬಿಡುತ್ತದೆ. ಆಗ ಆಪದ್ಬಾಂಧವನಾಗಿ ಕಾಣುವುದು `ಚಂದ್ರಾ ಧಾಬಾ'.
ಚಳಿಗಾಳಿಯಿಂದ ಕಂಗೆಟ್ಟು ಒಳಹೊಕ್ಕವರನ್ನು ಅಕ್ಕರೆಯಿಂದ ಆದರಿಸುತ್ತಾರೆ ದೋಜರ್ಿ ದಂಪತಿ. ಈ ಧಾಬಾದ ಚಂದ್ರ ದೋಜರ್ಿಮಾ ಮತ್ತು ಬೋದ್ ದೋಜರ್ಿ ಕಳೆದ ಮೂವತ್ತಾರು ವರ್ಷಗಳಿಂದ ಇಲ್ಲಿ ಸಾವಿರಾರು ಪ್ರವಾಸಿಗರನ್ನು ಸತ್ಕರಿಸಿದ್ದಾರೆ. ಇದನ್ನು ದಾಟಿದರೆ ಮುಂದೆ ಸುಮಾರು 100 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಹೊಟೇಲಾಗಲಿ, ವಸತಿ ಪ್ರದೇಶಗಳಾಗಲಿ, ಪೆಟ್ರೋಲ್ ಬಂಕ್ಗಳಾಗಲಿ ಸಿಗುವುದಿಲ್ಲ. ಹಾಗಾಗಿ ಎಲ್ಲ ಪ್ರಯಾಣಿಕರು ಇಲ್ಲಿ ಹಸಿವು, ದಾಹ ತಣಿಸಿಕೊಂಡೇ ಮುಂದೆ ಹೋಗುತ್ತಾರೆ. ದಿನಂಪ್ರತಿ ಇಲ್ಲಿ ಓಡಾಡುವ ಬಸ್ನ ಪ್ರಯಾಣಿಕರಷ್ಟೇ ಅಲ್ಲ, ಕಾಜಾಕ್ಕೆ ಹೋಗುವ ಟ್ಯಾಕ್ಸಿ, ಬೈಕ್ಗಳಲ್ಲಿ ತೆರಳುವ ಪ್ರವಾಸಿಗರು, ಸ್ಥಳೀಯ ನಿವಾಸಿಗಳು, ಚಾರಣಿಗರು ಎಲ್ಲ ಇಲ್ಲಿ ಹೊಟ್ಟೆಗೊಂದಿಷ್ಟು ಹಾಕಿಯೇ ಮುಂದೆ ಹೋಗುತ್ತಾರೆ. ಹಾಗೆ ನೋಡಿದರೆ ಇಲ್ಲಿ ಪ್ರವಾಸಿಗರನ್ನು ಸುಲಿಯಲು ಸಾಕಷ್ಟು ಅವಕಾಶವಿದೆ. ಆದರೆ ಈ ದಂಪತಿಗಳು ಇದಕ್ಕೆ ಹೊರತಾದವರು. ತಮ್ಮ ಪ್ರಾಮಾಣಿಕತೆಯಿಂದಲೇ ಪ್ರವಾಸಿಗರ ಮನ ಗೆದ್ದವರು. ದೋಜರ್ಿಯಂತೂ ಮಾತು ಮಾತಿಗೂ ಹಾಸ್ಯ ಮಾಡುತ್ತಾ, ಇಡೀ ವಾತಾವರಣಕ್ಕೇ ತಿಳಿನಗೆಯ ಸ್ಪರ್ಶ ನೀಡುತ್ತಾರೆ.
ನಗರದಿಂದ ಸಾಕಷ್ಟು ದೂರದಲ್ಲಿರುವ ಈ ಸ್ಥಳಕ್ಕೆ ಆಹಾರ ಪದಾರ್ಥದ ಸಾಗಣೆಯೇ ಹರಸಾಹಸದ ಕೆಲಸ. ಮನಾಲಿ-ಕಜಾ ರಸ್ತೆ ವಾಹನ ಓಡಾಟಕ್ಕೆ ತೆರೆದುಕೊಳ್ಳುವುದಕ್ಕೂ ಮೊದಲೇ ಇವರು ಧಾನ್ಯ, ಅಕ್ಕಿ, ಬೇಳೆ ಸಂಗ್ರಹದಲ್ಲಿ ತೊಡಗುತ್ತಾರೆ. ಬಳಿಕ ಸಾಗಾಟ. ವಾಹನ ಓಡಾಟ ಆರಂಭವಾದದ್ದೇ ತಡ ಇವರ ಧಾಬಾವೂ ತೆರೆದುಕೊಳ್ಳುತ್ತದೆ. ಜೂನ್ನಿಂದ ಅಕ್ಟೋಬರ್ 20ರವರೆಗೆ ತೆರೆದಿರುತ್ತದೆ. ಪ್ರವಾಸಿಗರ ಆತಿಥ್ಯಕ್ಕೆ ಸಿದ್ಧರಾಗಿ ಸ್ವಾಗತದ ನಗೆ ಚೆಲ್ಲುತ್ತಾರೆ ಈ ದಂಪತಿ. ದಿನವೊಂದಕ್ಕೆ ನೂರಕ್ಕಿಂತಲೂ ಅಧಿಕ ಮಂದಿಗೆ ಆಹಾರ ನೀಡಿ ಸತ್ಕರಿಸುತ್ತಾರೆ. ತಮ್ಮ ಗುಡಿಸಲಿನ ಇನ್ನೊಂದು ಪಾಶ್ರ್ವದಲ್ಲಿರುವ ಬೆಚ್ಚನೆಯ ಕೋಣೆಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನೂ ಮಾಡುತ್ತಾರೆ. ಇಲ್ಲಿ ದಿನವೊಂದಕ್ಕೆ 13 ಜನ ಉಳಿದುಕೊಳ್ಳುವಷ್ಟು ಜಾಗವಿದೆ. ಅವರಿಗೆ ಆಹಾರದಿಂದ ಹಿಡಿದು ಬಿಸಿನೀರಿನವರೆಗೆ ಎಲ್ಲ ವ್ಯವಸ್ಥೆಯನ್ನೂ ದೋಜರ್ಿ ಮಾಡಿಕೊಡುತ್ತಾರೆ.
ದೋಜರ್ಿ ಊರು ಮನಾಲಿ ಸಮೀಪದ ಹಳ್ಳಿ. ಮದುವೆಯ ಹೊಸತರಲ್ಲಿ ಹವಾಮಾನ ವೈಪರೀತ್ಯದಿಂದ ಹೊಟ್ಟೆಹೊರೆದುಕೊಳ್ಳುವುದೇ ಕಷ್ಟವಾಗಿತ್ತು. ಅತಿಯಾದ ಮಳೆಯಿಂದ ಬೆಳೆಯೂ ಕೈಕೊಟ್ಟಿತ್ತು. ಯಾಕೋ ಕೃಷಿಯಿಂದ ಮೇಲುಬೀಳುವ ಲಕ್ಷಣ ಕಾಣಿಸದಾಗ, ತಕ್ಷಣಕ್ಕೆ ಹೊಳೆದದ್ದು ಧಾಬಾ ಆರಂಭಿಸುವ ಯೋಚನೆ. ಅವರಿದ್ದ ಊರಲ್ಲಾಗಲೇ ಧಾಬಾ, ಹೊಟೇಲ್ಗಳು ಸಾಕಷ್ಟಿದ್ದವು. ಅವುಗಳೇ ನಷ್ಟದಲ್ಲಿ ನಡೆಯುತ್ತಿದ್ದವು. ಆದರೆ ಈ ಭಾಗದಿಂದ ಹಿಮಾಲಯ ಚಾರಣಕ್ಕೆ ತೆರಳುವ ಮಂದಿಗೆ ಆಗ ಮಧ್ಯದಲ್ಲೆಲ್ಲೂ ಆಹಾರ ಸಿಗುತ್ತಿರಲಿಲ್ಲ. ಕಾಜಾ, ಚಂದ್ರತಾಲ್ ಕಡೆ ಹೋಗುವ ಪ್ರಯಾಣಿಕರಿಗೂ ಇದೇ ಸಮಸ್ಯೆ. ಎಲ್ಲಕ್ಕೂ ಮಧ್ಯದಲ್ಲಿರುವ ಬತಾಲ್ನಲ್ಲಿ ಧಾಬಾ ತೆರೆದರೆ ತಮ್ಮ ಹೊಟ್ಟೆಪಾಡಿನ ಜತೆಗೆ ಯಾತ್ರಿಕರಿಗೆ ಅನುಕೂಲವಾಗಬಹುದು ಎಂಬ ಯೋಚನೆ ತಲೆಗೆ ಬಂದಿದ್ದೇ ತಡ, ದಂಪತಿಗಳು ಅದರ ಸಿದ್ಧತೆಯಲ್ಲಿ ತೊಡಗಿದರು. ಈಗಲಾದರೆ ಮೊದಲಿನಷ್ಟು ಹಿಮವಿರುವುದಿಲ್ಲ. ಅವರು ಧಾಬಾ ತೆರೆಯುವ ಹೊತ್ತಿಗೆ ಹಿಮದಿಂದ ರಕ್ಷಣೆ ಪಡೆಯುವುದೇ ದೊಡ್ಡ ಸವಾಲಾಗಿತ್ತು. ಆದರೂ ಹುಂಬ ಧೈರ್ಯದಿಂದ ಸಾಕಷ್ಟು ತಯಾರಿಯಿಲ್ಲದೇ, ಪತ್ನಿ ಚಂದ್ರಾ ಹೆಸರಿನಲ್ಲೇ ಧಾಬಾ ತೆರೆದರು. ಆರಂಭದಲ್ಲಿ ಬಹಳ ಕಷ್ಟವಾದರೂ ಬರುಬರುತ್ತಾ ದೋಜರ್ಿ ದಂಪತಿಗಳ ಆತ್ಮವಿಶ್ವಾಸ ಬೆಳೆಯಿತು.
ಚಂದ್ರ-ದೋಜರ್ಿ, ವರ್ಷದ ಐದು ತಿಂಗಳು ಬತಾಲ್ನಲ್ಲಿ ಕಳೆದು, ದಟ್ಟ ಹಿಮ ಬೀಳುವ ಸಮಯಕ್ಕೆ ಸರಿಯಾಗಿ ಊರಿಗೆ ಹಿಂತಿರುಗುತ್ತಾರೆ. ಆಗ ಸಿಗುವ ಸಮಯದಲ್ಲಿ ದೇಸಿ ಹಾರಗಳನ್ನು ತಯಾರಿಸುತ್ತಾರೆ. ಮತ್ತೂ ಸಮಯ ಸಿಕ್ಕರೆ ಇತರ ಸ್ಥಳೀಯರಂತೆ ಉಣ್ಣೆ ಶಾಲು, ಸ್ವೆಟ್ಟರ್ ಹಣೆಯುತ್ತಾರೆ. ಧಾಬಾ ತೆರೆದ ಮೇಲೆ ಹಾರಗಳನ್ನು ಪ್ರವಾಸಿಗರಿಗೆ ಮಾರುತ್ತಾರೆ.
ಕ್ಷಣ ಕ್ಷಣಕ್ಕೂ ಬದಲಾಗುವ ಹವಾಮಾನ, ಜೋರಾಗಿ ಬೀಳುವ ಮಳೆಗೆ ಕುಸಿಯುವ ಪರ್ವತದ ಮಣ್ಣು, ಕೊರೆಯುವ ತಣ್ಣನೆಯ ಗಾಳಿ... ಇಂತಹ ಹವಾಮಾನ ವೈರುಧ್ಯಗಳಿಂದ ತುಂಬಿದ ಬತಾಲ್ನಲ್ಲಿ ದಿನ ನೂಕುವುದೇ ಸವಾಲು. ಆದರೆ ವಯಸ್ಸು ಐವತ್ತು ದಾಟಿದರೂ ದೋಜರ್ಿ ದಂಪತಿಗಳ ಮನಸ್ಸು ಪರ್ವತದಷ್ಟೇ ಸ್ಥಿರ. ಚಳಿ, ಮಳೆ, ಗಾಳಿಗೆ ಅಳುಕಿದವರಲ್ಲ. ಆ ಕೊರೆಯುವ ಚಳಿಗೆ, ಹಿಮಪರ್ವತದಿಂದ ಇಳಿದು ಬರುವ ಮರಗಟ್ಟಿಸುವ ನೀರಿನಿಂದಲೇ ಅಡುಗೆ, ಪಾತ್ರೆ ತೊಳೆಯುವುದು ಮಾಡುತ್ತಾರೆ. ಎಲ್ಲವನ್ನೂ ಸಹಜವಾಗಿಯೇ ತೆಗೆದುಕೊಂಡು, ಕೆಲಸವನ್ನು ಬಹುವಾಗಿ ಪ್ರೀತಿಸುತ್ತಾರೆ. ಅಷ್ಟೆಲ್ಲ ಕಷ್ಟಪಟ್ಟರೂ ಪ್ರವಾಸಿಗರಲ್ಲಿ ಹಣಕ್ಕಾಗಿ ದುಂಬಾಲು ಬೀಳುವವರಲ್ಲ. ಸ್ವಲ್ಪ ಹಣ ಕಡಿಮೆ ಬಿದ್ದರೂ, `ಪರ್ವಾಗಿಲ್ಲ' ಅನ್ನುವ ಹಾಗೆ ನಕ್ಕು ಸುಮ್ಮನಾಗುವರು.
ಮನಾಲಿಯಿಂದ ಕಾಜಾಕ್ಕೆ ಹೋಗುವ ದಾರಿ ನಡುನಡುವೆ ಬೆರಳೆಣಿಯ ಧಾಬಾಗಳು ಕಾಣಸಿಗುತ್ತವೆ. ನೆರಿಗೆಗಟ್ಟಿದ ಮುಖದಲ್ಲಿ ಪ್ರೀತಿಯ ನಗೆ ಸೂಸುವ ಪುಟ್ಟ ಕಣ್ಣಿನ ಜನರು ಸತ್ಕರಿಸುತ್ತಾರೆ. ಮನೆಮಂದಿಯೇ ಇಲ್ಲಿ ಅಡುಗೆಯಿಂದ ಹಿಡಿದು ಕ್ಲೀನಿಂಗ್ ಕೆಲಸದವರೆಗೆ ಎಲ್ಲವನ್ನೂ ಮಾಡುತ್ತಾರೆ. ಒಬ್ಬೊಬ್ಬರದ್ದು ಒಂದೊಂದು ಕಥೆ. ಅಚಲವಾಗಿ ನಿಂತ ಹಿಮಬೆಟ್ಟಗಳೇ ಇವರಿಗೆ ಮಾದರಿ, ಬದುಕು ಎಲ್ಲವೂ...
ಚಿತ್ರ, ಲೇಖನ: ಪ್ರಿಯಾ ಕೆವರ್ಾಶೆ
ಬೆಂಗಳೂರು
(ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪ್ರಕಟ)
1 comment:
Beautiful...!!!
Post a Comment