Friday, August 29, 2008

ನಮ್ಮಪ್ಪ ತೋಟ ಮಾರ್‌ತಾರಂತೆ

ಮೊನ್ನೆ ತಾನೇ ಮನೆಗೆ ಹೋಗಿದ್ದೆ. ಬಸ್ಸಿಂದ ಸಂಕದ ಬಳಿ ಇಳಿದಿದ್ದೇ ಜೋರು ಮಳೆ . ಲಗ್ಗೇಜು, ಬಟ್ಟೆ, ನಾನು ಎಲ್ಲ ಒದ್ದೆ ಮುದ್ದೆ. ಹಾಗೇ ಮನೆಯತ್ತ ಕಾಲು ಹಾಕಿದೆ. ಅದು ಗುಡ್ಡದ ದಾರಿ. ಮಳೆ ಬಂತೆಂದರೆ, ಭೂಮಿಯೊಳಗೆ ಒರತೆಯೆದ್ದು, ನೆಲ ಒದ್ದೆಯಾಗಿರುತ್ತದೆ. ಅಷ್ಟೇ ಅಲ್ಲ, ಅದರ ಮೇಲೆ ಕಾಲಿಟ್ಟರೆ, ಕಾಲು ಹೂತುಹೋಗುತ್ತದೆ. ಮತ್ತೆ ಕಷ್ಟದಿಂದ ಕಾಲನ್ನು ಹೊರತೆಗೆದರೆ, ಚಪ್ಪಲಿ ಮಾಯ..ಅದ್ಯಾವುದೋ ಮಾಯದಲ್ಲಿ ಅದು ನೆಲದೊಳಕ್ಕೇ ಇಳಿದಿರುತ್ತದೆ. ದಿನವಿಡೀ ಮಣ್ಣೊಳಗೆ ಕೈ ಹಾಕಿದರೂ ಚಪ್ಪಲಿ ಸಿಗುವುದಿಲ್ಲ. ಶಾಲೆಗೆ ಹೋಗುತ್ತಿದ್ದಾಗ, ನಮ್ಮ ಅದೆಷ್ಟೋ ಚಪ್ಪಲಿಗಳು ಇಲ್ಲಿ ಕಳೆದುಹೋಗಿದ್ದವು. ಅದಕ್ಕೇ ಮಳೆಗಾಲ ಮುಗಿಯುವವರೆಗೆ ಅಪ್ಪ ಚಪ್ಪಲಿ ತೆಗೆದುಕೊಡುತ್ತಿರಲಿಲ್ಲ.

ಹೀಗೆ ಗಟ್ಟಿನೆಲದ ಮೇಲೇ ಕಾಲಿಡುತ್ತಾ, ಕಲ್ಲಿಂದ ಕಲ್ಲಿಗೆ ಹಾರುತ್ತಾ ಮುಂದೆ ಹೋದರೆ ಅಲ್ಲಿ ತೋಡೊಂದು (ಹಳ್ಳ) ಕೆಂಪು ನೀರಿಂದ ತುಂಬಿ ಹರಿಯುತ್ತಿತ್ತು. ಅಲ್ಲಿಯವರೆಗೆ ಹೇಗೋ ಸರ್ಕಸ್‌ ಮಾಡಿ ಚಪ್ಪಲಿ ಒದ್ದೆಯಾಗದಂತೆ ನಡೆದದ್ದೇ ಬಂತು. ಸರಿ, ಆದದ್ದಾಗಲಿ, ಅಂತ ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡು ತೋಡುದಾಟಿದೆ.


ಮುಂದೆ ಕಾಡುದಾರಿ.ಹಿಂದೆ, ಅಲ್ಲಿ ದಟ್ಟ ಕಾಡಿತ್ತು. ಈಗ ಅದು ರಬ್ಬರ್‌ಕಾಡಾಗಿ ಬದಲಾಗಿದೆ. ದೂರದ ಕೇರಳದಿಂದ ಬಂದ ಕೊಚ್ಚಿ ಕ್ರಿಶ್ಚಿಯನ್ನರು ಇಲ್ಲಿ ಖಾಲಿ ಜಾಗವನ್ನು ಕೊಂಡು ಅಲ್ಲಿ ರಬ್ಬರ್‌ ಹಾಕುವ ದಂಧೆ ಮಾಡುತ್ತಿದ್ದಾರೆ. ಇದು ಸತತ ಹತ್ತು ಹದಿನೈದು ವರ್ಷಗಳಿಂದ ನಮ್ಮೂರಲ್ಲಿ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ದುಪ್ಪಟ್ಟು ಹಣಕೊಟ್ಟು ಆಸ್ತಿ ಖರೀದಿಸುವ ಕಾರಣ ಊರವರಾರೂ ಈ ಬಗ್ಗೆ ಚಕಾರವೆತ್ತಯವುದಿಲ್ಲ. ನಮ್ಮೂರಲ್ಲಿ ನಿಧಾನವಾಗಿ ಭತ್ತದ ಗದ್ದೆಗಳು ಮಾಯವಾಗುತ್ತಿವೆ. ಅಲ್ಲೆಲ್ಲ ಅಡಿಕೆ ಗಿಡಗಳು ತಲೆಯೆತ್ತಿವೆ. ಕಾಡಿದ್ದ ಜಾಗವನ್ನೆಲ್ಲ ರಬ್ಬರ್‌ ಆಕ್ರಮಿಸಿದೆ.ಹಾಗೇ ಮುಂದೆನಡೆದೆ..ಅಲ್ಲಿ ಮತ್ತೊಂದು ತೋಡು. ಅವನು ಮೊದಲ ಬಾರಿ ನನ್ನ ಮನೆಗೆ ಬಂದಾಗ ಈ ಹಳ್ಳ ನೋಡಿ, ‘ಏಳು ಸಮುದ್ರ ದಾಟಿ ರಾಜಕುಮಾರಿಯನ್ನು ನೋಡಲು ಬಂದ ಹಾಗಾಯಿತು’ ಅಂದಿದ್ದ.

ಗೇಟಿನ ಹತ್ತಿರ ಬಂದಾಗ ಡಿಂಗ (ನಾಯಿ) ಆ ಮಳೆಯಲ್ಲೂ ಓಡಿ ಬಂದ. ಅಷ್ಟೆತ್ತರ ಹಾರಿ ಕುಣಿದು ನನ್ನ ವೇಲ್‌ ಎಳೆದುಕೊಂಡೇ ಹೋದ. ಈ ಡಿಂಗ ಪುಟಾಣಿ ಮರಿಯಾಗಿ ಮನೆಗೆ ಬಂದಿದ್ದ. ಆಗ ಅವನಿಗೆ ಬೊಗಳುವ ಹುರುಪು, ಅದೇ ಉತ್ಸಾಹದಲ್ಲಿ ಪಕ್ಕದ ಮನೆ ನಾಯಿಗೂ ಬೊಗಳಲು ಹೋಗಿ ಅದರ ಕೈಯಲ್ಲಿ ಕಚ್ಚಿಸಿಕೊಂಡಿದ್ದ. ಕಾಲು ಮುರಿದೇ ಹೋಯಿತು ಅಂದು ಕೊಂಡಿದ್ದೆವು. ಆದರೆ, ನಿಧಾನಕ್ಕೆ ಚೇತರಿಸಿಕೊಂಡ ಡಿಂಗ ತಿಂಗಳು ಕಳೆಯುವುದರೊಳಗೆ ಜಿಗಿ ಜಿಗಿದು ಓಡತೊಡಗಿದ್ದ. ಈಗ ಮುದುಕನಾಗುತ್ತಾ ಬಂದಿದ್ದಾನೆ, ಹಿಂದಿನ ಉತ್ಸಾಹ ಈಗ ಉಳಿದಿಲ್ಲ. ಆದ್ರೆ ಬಟ್ಟೆ ಎಳೆಯುವ ಕೆಟ್ಟ ಬುದ್ಧಿ ಮಾತ್ರ ಬಿಟ್ಟಿಲ್ಲ.ಮನೆಯೊಳಗೆ ಕಾಲಿಟ್ಟರೆ ಅಡಿಕೆಯ ಮಕ್ಕು(ಧೂಳು)..ಅಮ್ಮ ಪತ್ರೊಡೆಗೆ ಅಕ್ಕಿ ಅರೆಯುತ್ತಿದ್ದಳು. ಅಮ್ಮನ ಮುಖ ನೋಡಿದ್ದೇ ಒಮ್ಮೆ ರಿಫ್ರೆಶ್‌ ಆದ ಅನುಭವ. ಆದರೂ ಮನೆಗೆ ಬಂದಾಗ ಹಲವು ಬಗೆಯ ನೋವುಗಳು ಒಮ್ಮೆಗೆ ಉದ್ಭವಿಸಿ ಬಿಡುತ್ತವೆ. ಬೇರೇನಕ್ಕೂ ಅಲ್ಲ, ಅಲ್ಲಿ ನೋವು ಇಲ್ಲಿ ನೋವು ಅಂದರೆ ಅಮ್ಮನ ಕಾಳಜಿಯೂ ಜಾಸ್ತಿಯಾಗುತ್ತದೆ. ಅವಳ ಕಣ್ಣಲ್ಲಿ ವಿಚಿತ್ರ ಪ್ರೀತಿ ಇಣುಕುತ್ತದೆ. ಒಂದು ಬಗೆಯ ತುಡಿತ ಮನಸ್ಸನ್ನಾವರಿಸುತ್ತದೆ. ಕಾಲಿಗೆ ತಲೆಗೆ ಎಣ್ಣೆ ತಿಕ್ಕಿ, ಬೇಗ ಗುಣ ಆಗತ್ತೆ, ಅಂದಾಗ ನನಗೆ ಕಳ್ಳ ಖುಷಿ.
‘ ಇಲ್ಲಿಗೆ ಬಂದ ಕೂಡ್ಲೆ ಎಲ್ಲ ನೋವೂ ಶುರುವಾಗಿ ಬಿಡತ್ತೆ ಅವಳಿಗೆ ’ ತಮ್ಮನ ಮೂದಲಿಕೆ.ಅಪ್ಪ ಡೈರಿಗೆ ಹೋದವರು ಇನ್ನೂ ಬಂದಿರಲಿಲ್ಲ. ಅವರು ಬಂದಾಗ ಗಂಟೆ ಒಂಭತ್ತು. ಹಿಂದಿನ ಸೆಕ್ರೆಟರಿ ಡೈರಿಯ ಹಣ ತಿಂದ ಕಾರಣ, ಡೈರಿ ಲೆಕ್ಕ ಅಪ್ಪನ ತಲೆಗೆ ಬಿದ್ದಿತ್ತು. ಮುಗಿಯದ ತೋಟದ ಕೆಲಸದ ನಡುವೆಯೂ ದಾಕ್ಷಿಣ್ಯಕ್ಕೆ ಅಪ್ಪ ಈ ಕೆಲಸ ಒಪ್ಪಿದ್ದರು. ಮನೆಗೆ ಬಂದವರೇ ಸ್ನಾನ ಪೂಜೆ ಮುಗಿಸಿ ಮತ್ತೆ ಲೆಕ್ಕದಲ್ಲಿ ಮುಳುಗಿದ್ದರು. ರಾತ್ರಿ ತುಂಬ ಹೊತ್ತಿನವರೆಗೆ ಲೆಕ್ಕ ಮುಂದುವರಿದಿತ್ತು. ಅದರ ನಡು ನಡುವೆ ನನ್ನೊಡನೆ ಮಾತು. ಒಮ್ಮೆ,‘ ನಾನು ಈ ಜಾಗ ಮಾರ್‍ತೀನಿ’ ಅಂದರು. ಈ ಮಾತನ್ನು ಅವರು ಆವಾಗವಾಗ ಹೇಳುತ್ತಿದ್ದ ಕಾರಣ ನಾನು, ‘ ಹ್ಞುಂ’ ಅಂದು ಸುಮ್ಮನಾದೆ.

ಆದರೆ, ಅಪ್ಪ ನಿರ್ಧರಿಸಿದಂತಿತ್ತು.

‘ ಕಾರ್ಕಳದಲ್ಲಿ ಎಲ್ಲಾದರೂ ಹಿತ್ತಲು ಮನೆ ಇದೆಯಾ ಅಂತ ವಿಚಾರಿಸ್ತಾ ಇದೀನಿ. ಈ ಜಾಗ ಸೇಲಾದ ಕೂಡ್ಲೇ, ಪೇಟೆಯಲ್ಲಿ ಸಣ್ಣ ಮನೆ ಮಾಡಿ, ಜಾಗ ಮಾರಿದ ಹಣದಿಂದ ಬರುವ ಬಡ್ಡಿಯಲ್ಲಿ ಜೀವನ ಮಾಡೋದು. ’ ಅಂದರು.ನಮ್ಮದು ಮುನ್ನೂರ ಅರುವತ್ತೈದು ದಿನಗಳೂ ಸಮೃದ್ಧ ನೀರಿರುವ, ಕಾಡು ಪ್ರಾಣಿಗಳ ಕಾಟ ಬಿಟ್ಟರೆ ಅಷ್ಟೇನೂ ತೊಂದರೆ ಇಲ್ಲದ ಜಾಗ. ಆದರೆ ಇಲ್ಲಿ ಗ್ರಾಮಕ್ಕೊಂದರಂತೆ ಗೇರು ಬೀಜ (ಗೋಡಂಬಿ) ಕಾರ್ಖಾನೆಗಳು ಎದ್ದಿರುವ ಕಾರಣ ಕೂಲಿಯವರೆಲ್ಲ ಆ ಕೆಲಸಕ್ಕೇ ಹೋಗುತ್ತಿದ್ದಾರೆ. ಅಲ್ಲಿ ಕೂಲಿಯವರಿಗೆ ಅಪ್ಪ ಕೊಡುವಷ್ಟು ಸಂಬಳ ಸಿಗದಿದ್ದರೂ ಅದು ಶ್ರಮ ಬೇಡುವ ಕೆಲಸವಲ್ಲ. ಕೂತು ಗೇರು ಬೀಜದ ಸಿಪ್ಪೆ ತೆಗೆಯುವ ಕೆಲಸ. ಹಾಗಾಗಿ ಇಷ್ಟ ಪಟ್ಟು ಹೋಗುತ್ತಿದ್ದರು. ಇಲ್ಲವಾದರೆ ಅವರು ಕೆಲಸಕ್ಕೆ ಹೋಗುತ್ತಿದ್ದದ್ದು ರಬ್ಬರ್‍ ತೋಟ ಮಾಡುವ ಕೊಚ್ಚಿ ಕ್ರಿಶ್ಷಿಯನ್ನರ ಮನೆಗೆ. ಯಾಕೆಂದರೆ ಅವರು ಮಾಂಸ, ಹೆಂಡ ಕೊಡ್ತಾರೆ. ನಮ್ಮಪ್ಪ ಬ್ರಾಹ್ಮಣರಾದ ಕಾರಣ ಅದೆಲ್ಲ ಕೊಡಿಸುವುದು ಹೇಗೆ?

ಆದರೂ ಆಗಾಗ ಯಶೋಧಾ ಕೆಲಸಕ್ಕೆ ಬರುತ್ತಿರುತ್ತಾಳೆ. ಗಂಡಾಳಿಗಿಂತ ಏನೂ ಕಡಿಮೆಯಿಲ್ಲದಂತೆ ದುಡಿಯುತ್ತಿದ್ದರೂ ಅವಳಿಗೆ ಮಾತ್ರ ಕಡಿಮೆ ಸಂಬಳ. ಅವಳಿಗಿಂತ ಎಷ್ಟೋ ಕಡಿಮೆ ಕೆಲಸ ಮಾಡುವ ಗಂಡಾಳಿಗೂ ಅವಳಿಗಿಂತ ಹೆಚ್ಚು ಕೂಲಿ. ಅದು ಅವಳ ಗಮನ ಬರುತ್ತಿರಲಿಲ್ಲ ಅಂತಲ್ಲ, ಆದರೂ ಏನೂ ಮಾತಾಡದೇ ಸುಮ್ಮನಾಗುತ್ತಿದ್ದಳು.ಯಶೋದಾ ಮತ್ತು ಅಪ್ಪ ಸೇರಿಕೊಂಡು ಇಡೀ ತೋಟಕ್ಕೆ ಮದ್ದು ಬಿಡುತ್ತಾರೆ. ಹತ್ತಿರತ್ತಿರ ಹತ್ತೆಕರೆ ತೋಟಕ್ಕೆ ಮದ್ದು ಬಿಟ್ಟು ಮುಗಿಸುವಾಗ ಅಪ್ಪ ಹಿಂಡಿ ಹಿಪ್ಪೆಯಾದಂತಾಗುತ್ತಾರೆ. ಇನ್ನು ಅಡಿಕೆ ಕೊಯಿಲಿನ ಸಮಯ ಬಂತೆಂದರೆ ಆ ಕೆಲಸವನ್ನೂ ಅಪ್ಪ, ಯಶೋಧಾ ಸೇರಿಕೊಂಡೇ ಮಾಡುತ್ತಾರೆ.ಅಪ್ಪನ ಪ್ರಾಯವೀಗ ಐವತ್ತೈದರ ಹತ್ತಿರ. ಕೃಷಿಯ ಬಗೆಗೆ ಅವರಿಗೆ ಮೊದಲಿದ್ದ ಆಸಕ್ತಿ ಕುಂದಿ ಹೋಗಿದೆ. ಮನಸ್ಸು ವಿಶ್ರಾಂತಿ ಬಯಸುತ್ತಿದೆ. ಸಹಾಯ ಮಾಡೋಣವೆಂದರೆ ನಾನು ಬೆಂಗಳೂರಿನಲ್ಲಿದ್ದೇನೆ. ಕೆಲಸ ಬಿಟ್ಟು ಬರುತ್ತೇನೆಂದರೆ ಅಪ್ಪ ಕೇಳುವುದಿಲ್ಲ, ‘ ನೀನು ಇಲ್ಲಿ ಬಂದರೂ ಮಾಡುವುದು ಇಷ್ಟೇ ಇದೆ. ಸುಮ್ಮನೆ ಏನೆಲ್ಲ ತಲೆಗೆ ಹಚ್ಚಿಕೊಳ್ಳಬೇಡ. ನಾವು ಹೇಗೋ ಸುಧಾರಿಸ್ತೇವೆ’ ಅಂತಾರೆ. ತಮ್ಮ ಇನ್ನೂ ಚಿಕ್ಕವನು, ಈಗಷ್ಟೇ ಹತ್ತನೇ ಕ್ಲಾಸು ಮುಗಿಸಿ ಕಾಲೇಜು ಸೇರಿಕೊಂಡಿದ್ದಾನೆ.ಅಪ್ಪನತ್ರ ಅಷ್ಟು ಒಳ್ಳೆ ಜಾಗ ಮಾರಬೇಡ ಅಂತ ಅನ್ನೋಣ ಅನಿಸುತ್ತದೆ. ಆದರೆ, ಅದು ಹೇಗೆ?ಜಗುಲಿಯ ಕಟ್ಟೆಯೇರಿದರೆ ಕಾಣುವ ಪಶ್ಷಿಮ ಘಟ್ಟದ ಸಾಲು, ತೋಟದ ಪಕ್ಕ ಸಶಬ್ಧವಾಗಿ ಹರಿವ ಸ್ವರ್ಣೆ, ನಮ್ಮ ಬಾಲ್ಯಕ್ಕೆ ಬೆಳವಣಿಗೆಗೆ ಸಾಕ್ಷಿಯಾಗಿ ನಿಲ್ಲುವ ತೋಟ, ಎತ್ತರ ಮಹಡಿಯ ಪುಟ್ಟಮನೆ ಚಿತ್ರ ಕಣ್ಣೆದುರು ಬರುತ್ತದೆ. ಜಾಗ ಮಾರಿದರೆ ಇದೆಲ್ಲ ಬಾಲ್ಯದಂತೆ ಒಂದು ನೆನಪು ಮಾತ್ರ.

ಬೆಂಗಳೂರಿನ ಎ.ಸಿ ರೂಮಿನಲ್ಲಿ ಕೂತು ಇದೆಲ್ಲ ಬರೆಯುವ ಹೊತ್ತಿಗೆ ಅಪ್ಪ ದನದ ಕೊಟ್ಟಿಗೆ ಪಕ್ಕದ ಕೋಣೆಯಲ್ಲಿ ಕೂತು ಅಡಿಕೆ ಸುಲಿಯುತ್ತಿರುತ್ತಾರೆ. ಅಡಿಕೆ ಸಿಪ್ಪೆಯ ಮೇಲೆ ಸುತ್ತಿಕೋಂಡು ಮಲಗಿ ಬೆಚ್ಚನೆಯೊಳಗೆ ಸೇರಿ ಹೋಗಿರುತ್ತಾನೆ ಡಿಂಗ.

24 comments:

ರಾಧಾಕೃಷ್ಣ ಆನೆಗುಂಡಿ. said...

ನಾವು ಎಷ್ಟೊಂದು ಬದಲಾಗಿದ್ದೇವೆ........ ನಿಮ್ಮ ಬರಹ ನನ್ನೂರಿಗೆ ಕರೆದುಕೊಂಡು ಹೋಯಿತು

Unknown said...

nice writing. so touchy. ನನ್ನ ಮನೆ, ತೋಟ, ಅಪ್ಪ, ಅಮ್ಮ ಎಲ್ಲ ನೆನಪಾದರು.
- ಮಾನಸಿ ಭಟ್

Unknown said...

ಸರಳ, ಸುಂದರ ಬರಹ. ಹೌದು, ಇದು ಮಲೆನಾಡಿನ ಬಹುತೇಕ ಕೃಷಿಕರ ಕತೆ.
- ಗೋಪಿಕಾ ವಲ್ಲಭ

ಆಲಾಪಿನಿ said...

ನಿಜವಾಗಲೂ ಏನು ಹೇಳಬೇಕು ಗೊತ್ತಾಗ್ತಿಲ್ಲ ಕಣೆ ಪ್ರಿಯಾ ಅಪ್ಪನ ಪರಿಸ್ಥಿತಿ ನೋಡಿ. ಅವರ ನಿರ್ಧಾರ ಬದಲಾದರೆ ಚೆನ್ನ ಅಲ್ವಾ?
ಕಾಡುವ ವಿಷಯ ಸರಾಗವಾಗಿ ಮನಮುಟ್ಟುವಂತೆ ಬರೆಸಿಕೊಂಡು ಹೋಗುತ್ತದೆ ಎನ್ನುವುದಕ್ಕೆ ಈ ಬರಹ ಸಾಕ್ಷಿ ಕಣೆ.

KRISHNA said...
This comment has been removed by the author.
Jagali bhaagavata said...

ಕೆಲವು ಬರಹಗಳನ್ನ ಚೆನ್ನಾಗಿದೆ ಅನ್ಲಿಕ್ಕೆ ಹಿಂಸೆಯಾಗತ್ತೆ. ಅಂತಹುದರಲ್ಲಿ ಇದೂ ಒಂದು ಅನ್ಸತ್ತೆ. ಬರಹದಲ್ಲಿನ ಪ್ರಾಮಾಣಿಕತೆ ಇಷ್ಟ ಆಯ್ತು.

ಹರೀಶ ಮಾಂಬಾಡಿ said...

ಜಾಗ ಮಾರುವುದು ನಮ್ಮೆಲ್ಲಾ ಹಳ್ಳಿಗರ ಅನಿವಾರ್ಯ ಎನಿಸಿದೆ. ಅಪ್ಪ, ಅಮ್ಮ ಇಬ್ಬರು ಊರಲ್ಲಿ ಮಗ,ಮಗಳು ದೂರದ ಬೆಂಗಳೂರಲ್ಲಿ ಉದ್ಯೋಗ ಹುಡುಕಿಕೊಂಡು ಹೋದರೆ ಏನು ಮಾಡುವುದು? ಊರಲ್ಲೇ ಇದ್ದುದರಲ್ಲೇ ನೆಮ್ಮದಿ ಕಾಣುವವರು ವ್ಯಂಗ್ಯದ ವಸ್ತುವಾಗುತ್ತಾರೆ.. ನಮ್ಮ ಊರಿನ ಬಹುತೇಕ ಸುಂದರ ತೋಟಗಳು ಕಂಡವರ ಪಾಲಾಗುವುದು ಹೀಗೆ. ಇದನ್ನು ತಪ್ಪಿಸುವುದು ನಮ್ಮ ಕೈಯಲ್ಲಿಯೇ ಇದೆ.

KRISHNA said...

ಅಷ್ಟು ಚೆನ್ನಾಗಿರೋ ತೋಟ ಮಾರೋದು ಸುಲಭ. ಹಾಗಂತ ಮತ್ತೆ ಬೇಕು ಅನ್ನಿಸಿದ್ರೆ ಖಂಡಿತಾ ಸಿಗೋದಿಲ್ಲ. ಪೇಟೆಯ ಗಬ್ಬೆದ್ದ ವಾತಾವರಣಕ್ಕೆ ರೋಸಿ ಹೋದ ಮಂದಿ ಹಳ್ಳಿಯಲ್ಲಿ ಒಂದಿಷ್ಟು ದಿನ ಇದ್ದು ಬೇಸರ ಕಳೆದು ಬರುತ್ತಾರೆ. ಅಲ್ಲೇ ಇರೋಣ ಅನಿಸುತ್ತೆ. ಆದ್ರೆ ತೋಟದಲ್ಲಿ ದುಡಿದು ಸುಸ್ತಾದ ಜೀವವೂ, ಪೇಟೆಗೆ ಹೋಗಿ ಬದುಕೋಣ ಅಂತ ಯಾವತ್ತೂ ಹೇಳೊದಿಲ್ಲ. ಸತ್ರೆ ಇಲ್ಲೇ ಸಾಯ್ತೇವೆ ಅಂತಾರೆ. ಅದೇ ವ್ಯತ್ಯಾಸ!

ನಾವಡ said...

ಪ್ರಿಯಾ ಅವರೇ,
ಬಹಳ ಬೇಸರವಾಯಿತು. ನಮ್ಮ ಮಕ್ಕಳೆಲ್ಲಾ ತಮ್ಮೂರೆಂದು ಹೇಳಿಕೊಳ್ಳಲಾಗದಂಥ ಬೆಂಗಳೂರಿನವರ ಥರ ಆಗ್ತಾರಲ್ಲ. ಒಂದು ಬೇಸಗೆ ರಜೆಗೆಂದು ಬೇರೆ ಊರಿಗೆ ಹೋಗಲಾರದ ಸ್ಥಿತಿ. ಇದ್ದೂರೆ ನಮ್ಮದೆಂಬ ನಂಬಿಕೆಯಲ್ಲೇ ದಿನ ಕಳೆಯೋದು ಕಷ್ಟ.
ಅಂದ ಹಾಗೆ ನಾನು ತೋಟ ತೆಗೆದುಕೊಳ್ಳೋಣ ಅಂತೀದೀನಿ. ಎಲ್ಲಾದ್ರೂ ಇದ್ರೆ ಹೇಳಿ.
ನಾವಡ

jomon varghese said...

ಚೆಂದದ ಬರಹ. ಇದನ್ನೆಲ್ಲಾ ಓದುವಾಗ ನನಗೂ ನಮ್ಮೂರಿನ ನೆನಪು ಬಂತು. ಹೆಚ್ಚೂ ಕಡಿಮೆ ನಮ್ಮ ಮನೆಯೂ ನಿಮ್ಮ ಮನೆಯಿರುವ ಪರಿಸರದ ಹಾಗೆ ಇದೇ. ಮಲೆನಾಡಿನ ಕಾಡಿನಲ್ಲಿರುವ ಆ ಹೊಲ ಮನೆಯನ್ನು ಮಾರಿ ಸಿಟಿಗೆ ಹೋಗೋಣ ಅನ್ನುತ್ತಿದ್ದಾರೆ ನಮ್ಮ ಅಪ್ಪ ಕೂಡ. ಬೇಡ ಅಂತ ನಾನು. ಅಪ್ಪನ ನಿರ್ಧಾರ ಬಲವಾಗುತ್ತಿರುವಂತೆ ನನಗೆ ಏನೋ ಅಮೂಲ್ಯವಾದದ್ದೊಂದನ್ನು ಕಳೆದುಕೊಳ್ಳುತ್ತೀನೋ ಎನ್ನುವ ಅವ್ಯಕ್ತ ಬಯವಾಗುತ್ತಿದೆ. ಅಪ್ಪ ಜಾಗ ಮಾರದಿರಲಿ ಎನ್ನುವ ಆಶಯ ಮಾತ್ರ ಈಗ ಉಳಿದಿರುವುದು.

ಭಾವಗಳನ್ನು ಒಂದೆಡೆ ಕಟ್ಟಿ ನಿಲ್ಲಿಸಿದ ಲೇಖನ. ಬರೆಯುತ್ತಲಿರಿ...

ಅನಂತ said...

ಮನಮುಟ್ಟುವ ಬರಹ..
:( ಹಳ್ಳಿಯಂದರೆ ನನಗೂ ತುಂಬಾ ಇಷ್ಟ. ಚೆಂದದ ಊರು, ಸುಂದರ ಕಾಡು ಇದನ್ನೆಲ್ಲಾ ಕಳೆದುಕೊಳ್ಳೋಕೆ ಯಾರಿಗ್ತಾನೆ ಮನಸ್ಸು ಬರುತ್ತೆ ಹೇಳಿ? ಆದ್ರೆ ಅದನ್ನು ಉಳಿಸಿಕೊಳ್ಳೊಕೆ ನಾವು ಏನು ಪರಿಶ್ರಮ ಪಡ್ತಿದೀವಿ ಅನ್ನೋದೆ ಪ್ರಶ್ನೆ. ನಾವು ತಿಂಗಳಿಗೋ ವರ್ಷಕ್ಕೊ ಒಮ್ಮೆ ಹೋಗಿ ಸಂತೋಷದಿಂದ ಎರಡು ದಿವಸ ಕಳೆದು ಬರುವ ಹಳ್ಳಿಗಳನ್ನ ಬೇರೆ ಯಾರೋ ನಮಗೋಸ್ಕರ ವರ್ಷಗಟ್ಟಲೆ ಕಷ್ಟಪಟ್ಟು ದುಡಿದು ನೋಡಿಕೊಳ್ತಿರಬೇಕು ಅಂತ ಬಯಸೋದು ತಪ್ಪು ಅಲ್ವಾ? ಯೋಚಿಸಬೇಕಾದವರು ನಾವೇ.

ವಿನಾಯಕ ಕೆ.ಎಸ್ said...

ಪ್ರಿಯಾ ಅವರೇ,
ಮಲೆನಾಡಿನ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಎಕರೆಗಟ್ಟಲೇ ತೋಟ ಇದ್ದವರಿಗೆ ಕೃಷಿ ಸೊಬಗು ಬೇಡವಾಗಿದೆ. ಕಾಂಕ್ರೀಟು ಜಂಗಲ್ಲಿಗೆ ಬಂದು ಜೀತ ಮಾಡುವ ಹಂಬಲ. ನಮ್ಮಂತವರಿಗೆ ಕೃಷಿ ಬೇಡವಾದಾಗ ನಿವೃತ್ತಿ ಸಮೀಪದಲ್ಲಿರುವ ಅಪ್ಪ,ಅಮ್ಮ ಏನೂ ಮಾಡಿಯಾರು ಅಲ್ಲವಾ?

ಪ್ರಿಯಾ ಕೆರ್ವಾಶೆ said...

ಧನ್ಯವಾದ..ರಾಧಾಕೃಷ್ಣ, ಮಾನಸಿ, ಶ್ರೀದೇವಿ, ಗೋಪಿಕಾ, ಮಾಂಬಾಡಿ, ಕೃಷ್ಣ, ಜೋಮನ್‌, ಅನಂತ, ವಿನಾಯಕ..ಬದುಕು ಬದಲಾದಾಗ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟ. ನಮ್ಮದೂ ಅದೇ ಸ್ಥಿತಿ. ನಾವಡ ಸರ್‌, ನೀವು ತೋಟ ಕೊಳ್ಳೋ ವಿಷ್ಯ ಅಪ್ಪನತ್ರ ಹೇಳ್ತೀನಿ.ಜಗಲಿ ಭಾಗವತ ಅವರೇ, ನಿಮ್ಮ ಪ್ರಾಮಾಣಿಕ ಅಭಿಪ್ರಾಯ ನಂಗೂ ಇಷ್ಟ ಆಯ್ತು.ಖಂಡಿತಾ ತಿದ್ಕೊಳ್ತೀನಿ.

Jagali bhaagavata said...

ಪ್ರಿಯಾ,
ಬಹುಶಃ ನನ್ನ ಹಿಂದಿನ ಕಮೆಂಟ್ ಅಸ್ಪಷ್ಟವಾಗಿತ್ತು ಅನ್ಸತ್ತೆ, ಹಾಗಾಗಿ ನೀವದನ್ನು ಸರಿಯಾಗಿ ಗ್ರಹಿಸಲಾಗಿಲ್ಲ.

ನಿಮ್ಮ ಬರಹ ಚೆನ್ನಾಗಿದೆ. ಗಾಢವಾಗಿ ಓದಿಸಿಕೊಂಡು ಹೋಯ್ತು. ಆದರೆ, ವಿಷಾದದ ಭಾವ ಹುಟ್ಟಿಸುವ ಬರಹಗಳನ್ನು ಚೆನ್ನಾಗಿದೆ ಅನ್ನಲಿಕ್ಕೆ ಹಿಂಸೆಯಾಗತ್ತೆ.

ಈಗಲಾದ್ರೂ ಮಂಡೆಯೊಳಗೆ ಹೋಯ್ತಾ? :-)

VENU VINOD said...

ಓದಿದೆ, ಕಣ್ಣು ತೇವವಾಯ್ತು...ಅಷ್ಟೇ ಬಿಡಿ....

chetana said...

ಅಯ್ಯೋ,
ತೋಟ ಮಾರಬೇಡ ಅಂತ ಮನವೊಲಿಸಿ ಅಪ್ಪನಿಗೆ... ಪ್ಲೀಸ್..

ನನ್ನಪ್ಪ ಅಮ್ಮ ಕೂಡ ಒಂಟಿತನದಿಂದ ಬೇಸತ್ತು ಊರಲ್ಲಿನ ಮನೆಗಿನೆ ಮಾರಿ ಬೆಂಗ್ಳೂರ್ಗೆ ಬರ್ತೀವಿ ಅಂತ ಹೇಳ್ತಿರ್ತಾರೆ. ಅವರ ಸಂಕಟಕ್ಕೆ ಹೇಗೆ ಸ್ಪಂದಿಸಬೇಕೋ ಗೊತ್ತಾಗದೆ ಒದ್ದಾಡ್ತಿರ್ತೀವಿ ನಾವು.

ಬರಹ ಎದೆ ನೋಯಿಸುವಂತಿದೆ.

- ಚೇತನಾ ತೀರ್ಥಹಳ್ಳಿ

Kumara Raitha said...

ಕೈತುಂಬ ಕೃಷಿ ಕೆಲಸವಿರುವ ಹಳ್ಳಿಗಳಲೆಲ್ಲಾ ಇದೇ ಸ್ಥಿತಿ.
ನೆಲದ ನಂಟು ಕಳೆದುಕೊಳ್ಳುವುದು ಸುಲಭದ ಮಾತಲ್ಲ.ಆ ನೋವು ಅನುಭವಿಸುವವರಿಗಷ್ಟೇ ಅರಿವು.ಕೃಷಿ ಪ್ರೀತಿಯಿದ್ದು
ಕೃಷಿ ಮಾಡಲಾಗದ ಅಸಹಾಯಕತೆ.ಮುಖ್ಯ ಕಾರಣಗಳಲ್ಲಿ
ಒಂದು ಕೃಷಿಕಾರ್ಮಿಕರ ಕೊರತೆ.ಹಳ್ಳಿಗಳಲ್ಲಿಂದು ದುಡಿಯುವ
ವಯೋಮಾನದವರು ಕಾಣುತ್ತಿಲ್ಲ.ಎಲ್ಲರದೂ ನಗರಗಳತ್ತ ಮುಖ.ಅದೂ ಅನಿವಾರ್ಯವೆನ್ನೋ?ಇದಕ್ಕೆ ಪರಿಹಾರ?
ಕುಮಾರ ರೈತ

Harisha - ಹರೀಶ said...

ನಮ್ಮ ಮನೆಯಲ್ಲಿಯೂ ಇತ್ತೀಚೆಗೆ ದನ ಮಾರಿದರು.. ಅದರಿಂದ ಮನಸ್ಸಿಗೆ ಹೇಳಲಾಗದಷ್ಟು ದುಃಖ.. ಆದರೆ ಬೆಂಗಳೂರಿನಲ್ಲಿದ್ದು ಏನೂ ಮಾಡಲಾಗದ ಪರಿಸ್ಥಿತಿ.. :-(

ಸಂದೀಪ್ ಕಾಮತ್ said...

ತುಂಬಾ ಕಷ್ಟ ಇಂಥ ಪರಿಸ್ಥಿತಿಯನ್ನು ನಿಭಾಯಿಸೋದು:(
ಎಲ್ಲವನ್ನು ಬಿಟ್ಟು ಊರಿಗೆ ಹೋಗೋಣ ಅಂತ ಅನ್ನಿಸುತ್ತೆ ಆದ್ರೆ ಆಗಲ್ಲ್ವಲ್ಲ !!

ನಾವು ಬೆಂಗಳೂರಿನಲ್ಲಿರೋರಿಗೆ ಒಂದು ಚೆಂದನೆ ಆಸೆ .
ನಮ್ಮ ಊರು ನಾವು ಬಿಟ್ಟು ಬರೋವಾಗ ಹೇಗಿತ್ತೋ ಹಾಗೇ ಇರಬೇಕು ಅಂತ ! ಅದೇ ಹಸಿರು ತೋಟ,ಅದೆ ಕಂಗಳಿಸುವ ಬತ್ತದ ಗದ್ದೆ,ಅದೇ ಮಳೆಗಾಲ ನಾವು ಬೆಂಗಳೂರಿನ ಜಂಜಡಗಳಿಂದ ಬೇಸತ್ತು ಊರಿಗೆ ಹೋದಾಗ ನೆಮ್ಮದಿ ನೀಡೋ ಅಂತ ’ನಮ್ಮೂರು’.ಹೀಗಾಗಿ ಊರಲ್ಲಿ ಏನೆ ಬದಲಾವಣೆಗಳಾದ್ರೂ ಮನಸ್ಸಿಗೆ ಕಸಿವಿಸಿ ಆಗುತ್ತೆ.
ಆದ್ರೆ ಅಲ್ಲೇ ಇರೋ ಜನರಿಗೆ ಅದೊಂದು ಸಾಮಾನ್ಯ ಪ್ರಕ್ರಿಯೆ .
ಇತ್ತೀಚೆಗೆ ಊರಿಗೆ ಹೋದಾಗ ಬೀಚ್ ಗೆ ಹೋಗೋಣ ಅಂತ ಸ್ನೇಹಿತನನ್ನು ಕರೆದಾಗ ’ಏನ್ ಗೋಳಯ್ಯ ನಿಂದು ಬೀಚ್ ಬೀಚ್ ಅಂತ ಸಾಯ್ತೀಯ,ದಿನಾ ನೋಡಿ ನೋಡಿ ಬೇಜಾರು ...’ ಅಂದುಬಿಟ್ಟ.

ಮನೋರಮಾ.ಬಿ.ಎನ್ said...

manada maatige, atanakkkae olleya akshara roopa... munduvaresu...
kaledu hogilla preiya ennuva kathe heluva lekhaki..!

ಸಿಂಧು sindhu said...

ಪ್ರಿಯಾ

ಭಾಗವತರು ನನ್ನ ಅಭಿಪ್ರಾಯಕ್ಕೆ ಸ್ಪಷ್ಟ ರೂಪ ಕೊಟ್ಟಿದ್ದಾರೆ.
ಓದಿ ತಳಮಳವಾಯಿತು. ನನ್ನ ಮತ್ತು ನಿಮ್ಮ ಮಿತಿ ಬಹುಶಃ ತಳಮಳಗೊಳ್ಳುವುದಷ್ಟೇ.
ದುಡಿದು ಸೋತ, ನೆಮ್ಮದಿ ಹುಡುಕುವ ಜೀವದ ಒಳಗನ್ನ ಹೀಗೇ ಅಂತ ಬರೆದಿಡಲು ಬರುವುದಿಲ್ಲ. ಅದನ್ನು ಆದಷ್ಟು ಸಂಯಮದಿಂದ, ಮತ್ತು ಪ್ರಾಮಾಣಿಕತೆಯಿಂದ ಬರೆದಿದ್ದೀರಿ.
ಮಲೆನಾಡು ಮತ್ತು ಕೃಷಿಯನ್ನ ಉಳಿಸಲು ಮಕ್ಕಳು ಪೇಟೆಗೆ ಹೋಗದೆ ಹಳ್ಳಿಯಲ್ಲೆ ಉಳಿಯಬೇಕು ಎಂದು ಬಯಸುವುದು ಯುಟೋಪಿಯಾ ಆಗತ್ತೆ.
ಉಳಿಯಬೇಕು, ಪ್ರಕೃತಿಯ ಮಡಿಲು ತಂಪಾಗಿಡಬೇಕು ಎಂಬ ಪ್ರಾಮಾಣಿಕ ಮನಸ್ಸಿನ ಆಶಯ ಮುಂದೆ ಒಂದು ದಾರಿ ತೋರಬಹುದು ಎಂಬುದು ಸದ್ಯ ನಾನು ನನ್ನನ್ನು ಸಮಾಧಾನಿಸಲು ಕಂಡುಕೊಂಡ ದಾರಿ.

ಬರೆಯುತ್ತಿರಿ ಇನ್ನೂ ಬಹಳ ವಿಷಯಗಳನ್ನು.

ಪ್ರೀತಿಯಿಂದ
ಸಿಂಧು

ನಗೆಪ್ರಣತಿ said...

ಕೈಯಾರೆ ಕಷ್ಟ ಪಟ್ಟು ಬೆಳೆಸಿದ ತೋಟ ಹಾಳಾಗೋದು ನೋಡೋಕೆ ತುಂಬಾ ಕಷ್ಟ ಆಗುತೆ ಆದರೆ ಕೆಲಸ ಮಾಡಲು ವಯಸ್ಸು ಬಿಡುವುದಿಲ್ಲ ಪಾಪ ಮಾರದೆ ಇನ್ನೇನು ಮಾಡಲು ಸಾಧ್ಯ ? ಅವರಿಗೆ ನನ್ನ ಸಾಂತ್ವನ ತಿಳಿಸಿ . ಮತ್ತೆ ನೀವು ಹೇಳಿದ ರಬ್ಬರ್ ಮರದ ವಿಷಯ ಈಗ ಎಲ್ಲರು ಜಾಸ್ತಿ ದುಡ್ಡಿಗೆ ಜಾಗ ಮಾರುತ್ತಾರೆ ಆಮೇಲೆ ಅವರು (ಮಲಯಾಳಿಗಳು) ಹೆಚ್ಚಾಗುತ್ತಾರೆ ಅವರು ಹೆಚ್ಚಾದಂತೆಲ್ಲ ನಮ್ಮ ಅಸಹನೆ ಹೆಚ್ಚಾಗುತ್ತೆ ಮತ್ತೆ ಹೊಸದೊಂದು ಜಗಳ ಶುರುವಾಗುತ್ತೆ . ಈಗ ಕೊಲ್ಲೂರಿನ ಹತ್ತಿರ ಮುಧೂರು ಅಂತ ಒಂದು ಊರಿದೆ ಅಲ್ಲಿ ಹೆಚ್ಚು ಕಮ್ಮಿ ಅವರೇ ಆಗಿದ್ದಾರೆ ಅಲ್ಲಿ ಒಂದು ದೊಡ್ಡ ಚರ್ಚ್ ಕೂಡ ಕಟ್ಟಿದ್ದಾರಂತೆ ಅಲ್ಲಿ ಒಂದು ರೀತಿಯ ಕೇರಳದ ವಾತಾವರಣ ಇದೆ ಜಾಗ ಮಾರಿದವರು ಎಲ್ಲಿಗೋ ಹೋದರು ಅಲ್ಲಿರುವವರು ಅನುಭವಿಸಬೇಕು ಅಥವಾ ಜಾಗವನ್ನು ಇನ್ನೊಬ್ಬ ಮಲಯಾಲಿಗೆ ಮಾರಬೇಕು ಇದಕ್ಕೆಲ್ಲ ಯಾರನ್ನ ಹೊಣೆ ಮಾಡ್ಬೇಕು? ಜಾಗ ಮಾರಿ ಹೋಗುವವರ ಅಸಹಾಯಕತೆಯನ್ನ? ಕೂಡು ಕುಟುಂಬವನ್ನು ಧಿಕ್ಕರಿಸುವಂತೆ ಮಡಿದ ನಾಗರಿಕತೆಯನ್ನೇ?

aravind said...

ನಿಮ್ಮ ಮನೆ ಗಣೇಶ್ ಕಾರ್ನಿಕ್ ಮನೆ ಹತ್ತಿರವ? ನಿಮ್ಮೂರು ಮಲೆನಾಡಿನ ಗರ್ಭ ಗುಡಿ ಎಂದೆನಿಸುತ್ತದೆ..
ನಿಮ್ಮ ಲೇಖನಗಳು ತುಂಬಾ ಆಪ್ತವಾಗಿವೆ."ಬೆಟ್ಟದ ಜೀವದಂತೆ "ವಾಸಿಸುತ್ತಿರುವ ನಿಮ್ಮ ತಂದೆ, ತಾಯಿ ಊರು ಬಿಡುವುದು ದುರಂತದ ಸಂಗತಿ...
ನಿನ್ನ ಬಾಂದಳದಂತೆ ನನ್ನ ಮನವಿರಲಿ,,,,,,
ಅರವಿಂದ, ಶಿವಮೊಗ್ಗ

ವೆಂಕಟೇಶ ಭಟ್ said...

ತುಂಬಾ ಚೆನ್ನಾಗಿ ಬರದ್ದೆ ಪ್ರಿಯಾ... ಆನು ನಿಂಗಳ ಮನೆಗೆ ಬಂದ ದಿನ ನೀನು ಅಲ್ಲಿ ಇತ್ತಿದಿಲ್ಲೆ. ಆದರೂ, ಓದುತ್ತಾ ಹೋದ ಹಾಂಗೆ ನಿನ್ನ ಮನೆಗೆ ಹೋದ ಅನುಭವ ಆವುತ್ತು... ಹಾಂ... ಎನಗೂ ಇತ್ತೀಚೆಗೆ ನಿಂಗಳ ಆ ಮನೆಯಂತಾ ಜಾಗೆ ತೆಕ್ಕೊಳ್ಳಕ್ಕು ಹೇಳಿ ಕನಸು ಬತ್ತು... ಪಕ್ಕಲ್ಲೇ ಹರಿವ ಹೊಳೆ, ಮಹಡಿ ಮೇಲೆ ಒಂದು ಲೈಬ್ರೆರಿ, ಅದರ ತುಂಬಾ ಪುಸ್ತಕ, ಹಿತವಾಗಿ ಕೇಳುವ ಸಂಗೀತ, ಜೊತೆಗೆ ನಮ್ಮೂರ ಮಳೆ - ಆರಾಮವಾಗಿ ಕೂತು ಪುಸ್ತಕ ಓದಕ್ಕು ಹೇಳಿ ಕನಸು ಕಾಣುತ್ತೆ. :-) ಜಾಗೆ ಮಾರಿದ್ದು ಗೊಂತಿತ್ತಿದಿಲ್ಲೆ.